Ear Pain: ಕಿವಿ ನೋವು ಕಾಣಿಸಿಕೊಂಡರೆ ಈ ತಪ್ಪುಗಳನ್ನು ಮಾಡಬೇಡಿ
ಯಾವ ಮುನ್ನೆಚ್ಚರಿಕೆಯೂ ಇಲ್ಲದೆ ಈ ರೀತಿಯ ಕಿವಿ ನೋವಿನ ಸಮಸ್ಯೆಗಳಿಗೆ ಮನೆ ಮದ್ದಿನ ಮೊರೆ ಹೋಗುವುದು ತುಂಬಾ ಅಪಾಯಕಾರಿ. ಅದರಲ್ಲೂ ಅನೇಕರು ಪರಿಹಾರವಾಗಿ ಮನೆಮದ್ದುಗಳಾದ ಬಾಮ್, ಮೊಸರು, ಉಪ್ಪು ನೀರು, ಸಾಬೂನು ನೀರು ಮತ್ತು ಬೆಳ್ಳುಳ್ಳಿಯನ್ನು ಬಳಸುತ್ತಾರೆ. ಆದರೆ ಇದರಿಂದಾಗಿ ಕಿವಿಯಲ್ಲಿ ರಕ್ತಸ್ತ್ರಾವ ಉಂಟಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಫ್ಲೂ ರೀತಿಯ ಆರೋಗ್ಯ ಸಮಸ್ಯೆಗಳು ಕಂಡುಬರುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಅನೇಕ ರೋಗಿಗಳಲ್ಲಿ ಕಾಣಬರುವ ವಿವಿಧ ರೋಗಲಕ್ಷಣಗಳು ಜನರ ನಿದ್ದೆಗೆಡಿಸಿದೆ. ಶೀತ, ನೆಗಡಿ ಸಂಬಂಧಿತ ಅನಾರೋಗ್ಯ ಸಮಸ್ಯೆಗಳು ಜನರನ್ನು ಹೆಚ್ಚಾಗಿ ಬಾಧಿಸುತ್ತಿದ್ದು, ಅದರಲ್ಲೂ ಕಿವಿ ನೋವಿಗೆ ಸಂಬಧಿಸಿದಂತಹ ಪ್ರಕರಣಗಳು ನಗರದಲ್ಲಿ ಹೆಚ್ಚು ಕಂಡುಬರುತ್ತಿದೆ ಎಂದು ವೈದ್ಯರು ಹೇಳುತ್ತಾರೆ. ಅದಲ್ಲದೆ ಈ ಸಮಸ್ಯೆಗಳಿಗೆ ಬಹುತೇಕ ಮಂದಿ ಮನೆಮದ್ದುಗಳ ಮೊರೆ ಹೋಗುತ್ತಾರೆ. ಅದರ ಪರಿಣಾಮವಾಗಿ ಸೋಂಕು ಉಲ್ಬಣಗೊಳ್ಳುವುದು, ಗಂಟಲಿಗೆ ಸಂಬಂಧಿತ ಸಮಸ್ಯೆಗಳು ಮತ್ತು ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತಿವೆ. ಚಳಿಗಾಲದಲ್ಲಿ ಎದುರಾಗುವ ಈ ಸಮಸ್ಯೆಗಳ ಕುರಿತಾಗಿ ಕಿಂಡರ್ ಆಸ್ಪತ್ರೆಯ ಹಿರಿಯ ಇಎನ್‌ಟಿ ತಜ್ಞ ವೈದ್ಯೆ ಡಾ. ಸುನಿತಾ ಮಾಧವನ್ ಅವರು ಮಹತ್ವದ ಮಾಹಿತಿಗಳನ್ನ ಹೊರಹಾಕಿದ್ದಾರೆ.
“ಯಾವ ಮುನ್ನೆಚ್ಚರಿಕೆಯೂ ಇಲ್ಲದೆ ಈ ರೀತಿಯ ಕಿವಿ ನೋವಿನ ಸಮಸ್ಯೆಗಳಿಗೆ ಮನೆ ಮದ್ದಿನ ಮೊರೆ ಹೋಗುವುದು ತುಂಬಾ ಅಪಾಯಕಾರಿ. ಅದರಲ್ಲೂ ಅನೇಕರು ಪರಿಹಾರವಾಗಿ ಮನೆಮದ್ದುಗಳಾದ ಬಾಮ್, ಮೊಸರು, ಉಪ್ಪು ನೀರು, ಸಾಬೂನು ನೀರು ಮತ್ತು ಬೆಳ್ಳುಳ್ಳಿಯನ್ನು ಬಳಸುತ್ತಾರೆ. ಆದರೆ ಇದರಿಂದಾಗಿ ಕಿವಿಯಲ್ಲಿ ರಕ್ತಸ್ತ್ರಾವ ಉಂಟಾಗುತ್ತದೆ. ಉದಾಹರಣೆಗೆ ಸೈನಟಿಸ್ ಮತ್ತು ಕಿವಿ ನೋವಿನಿಂದ ಬಳಲುತ್ತಿದ್ದ 10 ವರ್ಷದ ಮಗುವಿನ ಕಿವಿಗೆ ಲವಣಯುಕ್ತ ನೀರನ್ನು ಹಾಕಲಾಗಿತ್ತು. ಆದರೆ ಇದರಿಂದ ತೀವ್ರವಾದ ಸೈನಸೈಟಿಸ್ ಸಮಸ್ಯೆ ಕಾಣಿಸಿಕೊಂಡಿತು. ಅಲ್ಲದೆ ಇಂತಹ ಸ್ವಯಂ ಚಿಕಿತ್ಸಾ ವಿಧಾನದಿಂದ ಕಿವಿಯ ಒಳ ಪದರಗಳಿಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಮನೆಮದ್ದುಗಳ ಬಳಕೆ ನಿಜಕ್ಕೂ ಸೂಕ್ತವಲ್ಲ. ಕಿವಿ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರೆ ಕೂಡಲೇ ಇಎನ್‌ಟಿ ತಜ್ಞರನ್ನು ಭೇಟಿಯಾಗುವುದು ಅತ್ಯುತ್ತಮ ಪರಿಹಾರ”, ಎನ್ನುತ್ತಾರೆ ಡಾ ಸುನಿತಾ.
ಒಣ ತಂಪಾದ ಗಾಳಿ, ಒಳಾಂಗಣ ಚಟುವಟಿಕೆಗಳು ಮತ್ತು ಜನಸಂದಣಿಯಿಂದಾಗಿ ಸೋಂಕುಗಳ ಹರಡುವಿಕೆಯಿಂದಲೂ ಕಿವಿ ನೋವಿನ ಸಮಸ್ಯೆಯು ಕಾಣಿಸಿಕೊಳ್ಳಬಹುದು. ಇದರಿಂದಾಗಿ ಅಡೆನೊಟಾನ್ಸಿಲಿಟಿಸ್, ಡಯಾಬಿಟಿಸ್, ಅಲರ್ಜಿ, ಅಸ್ತಮಾ, ಬ್ರಾಂಕೈಟಿಸ್, ಥೈರಾಯ್ಡ್ ಮತ್ತು ಇತರೆ ದೀರ್ಘಕಾಲದ ಕಾಯಿಲೆಗಳನ್ನು ಹೊಂದಿರುವವರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎನ್ನುತ್ತಾರೆ ವೈದ್ಯರು. ಈ ಸಮಸ್ಯೆಯ ರೋಗಲಕ್ಷಣಗಳು ಸಾಮಾನ್ಯವಾಗಿ ಮೂಗು ಸೋರುವಿಕೆ, ಮೂಗು ಕಟ್ಟುವಿಕೆ, ಸೀನು, ಕೆಮ್ಮು, ಗಂಟಲು ನೋವು, ತಲೆನೋವು, ಆಯಾಸ, ಧ್ವನಿಯಲ್ಲಿ ಬದಲಾವಣೆ, ಕಿವಿ ನೋವು ಮತ್ತು ಕೆಲವೊಮ್ಮೆ ಮೂಗಿನಿಂದ ರಕ್ತಸ್ತಾçವಗೊಳ್ಳುವ ಮೂಲಕವೂ ಕಂಡುಬರುತ್ತದೆ. ಕೆಲವರಲ್ಲಿ ಈ ರೀತಿಯ ಸಮಸ್ಯೆಗಳು ಬಹುಬೇಗ ಮಾಯವಾಗುತ್ತವೆ. ಆದರೆ ಇನ್ನೂ ಕೆಲವರಲ್ಲಿ ಸೈನಟಿಸ್, ಕಿವಿ ಸೋಂಕು ಮತ್ತು ಬ್ರಾಂಕೈಟಿಸ್, ಅಸ್ತಮಾ, ಅಡೆನೊಟಾನ್ಸಿಲೈಟಿಸ್, ಗೊರಕೆ ಮತ್ತು ನಿದ್ರೆಯಲ್ಲಿ ಉಸಿರುಗಟ್ಟುವಿಕೆಯಂತಹ ಸಮಸ್ಯೆಗಳಿಗೆ ಎಡೆಮಾಡಿಕೊಡುವುದನ್ನು ಕಾಣಬಹುದು.
ಡಾ. ಸುನಿತಾ ಮಾಧವನ್ ಹಂಚಿಕೊಂಡಿರುವ ಅಂಕಿಅಂಶಗಳ ಪ್ರಕಾರ, ನವೆಂಬರ್ 1 ರಿಂದ ಡಿಸೆಂಬರ್ 15,2023ರ ವರೆಗಿನ ಈ 45 ದಿನಗಳ ಅವಧಿಯಲ್ಲಿ ಆಸ್ಪತ್ರೆಗೆ ದಾಖಲಾದವರಲ್ಲಿ ಶೇ.60ರಷ್ಟು ರೋಗಿಗಳು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ತಿಳಿಸಿದ್ದಾರೆ. ಈ ಪೈಕಿ 60 ರೋಗಿಗಳಲ್ಲಿ ಕಿವಿ ನೋವಿನ ಲಕ್ಷಣ, 60 ಶೀತ ರೋಗಲಕ್ಷಣ, 30 ಗಂಟಲಿಗೆ ಸಂಬಂಧಿಸಿದ ಸೋಂಕಿನ ಸಮಸ್ಯೆ, 8 ಬ್ರಾಂಕೈಟಿಸ್, 19 ತೀವ್ರವಾದ ಸೈನಟಿಸ್, 5 ಅಡೆನೊಡಿಟಿಸ್, 4 ಮೂಗು ಸೋರುವಿಕೆ ಮತ್ತು 5 ರೋಗಿಗಳು ಅತಿಯಾದ ಅಸ್ತಮಾ ಸಮಸ್ಯೆಗೆ ಒಳಗಾಗಿದ್ದರು ಎಂದು ವಿವರಿಸಿದ್ದಾರೆ.
ಇದನ್ನೂ ಓದಿ: ನಿಮ್ಮ ವೇಗದ ಜೀವನಶೈಲಿಯಿಂದ ಹೃದಯದ ಮೇಲೆ ಒತ್ತಡ ಉಂಟಾಗುತ್ತಿರುವ ಲಕ್ಷಣಗಳಿವು
ಈ ಸಮಸ್ಯೆಯ ಕುರಿತಾಗಿ ಮಾತನಾಡಿರುವ ಅವರು, ತೀವ್ರವಾದ ತಲೆ ನೋವು, ಮುಖದ ನೋವು, ಮುಖದ ಊತ, ತೀವ್ರವಾದ ಗಂಟಲು ನೋವು ಮತ್ತು ಜ್ವರದಿಂದ ಬಳಲುತ್ತಿರುವವರು ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಒಳಿತು. ಅಲ್ಲದೆ ಈ ರೀತಿಯ ಸಮಸ್ಯೆಯನ್ನು ಹೊಂದಿರುವವರು ಧೂಮಪಾನ ಬಿಡುವುದು ಉತ್ತಮ. ಅಲ್ಲದೆ ರೋಗಿಗಳಲ್ಲಿ ಕಂಡುಬರುವ ರೋಗಲಕ್ಷಣಗಳ ಆಧಾರದ ಮೇಲೆ ಚಿಕಿತ್ಸೆ ನೀಡಲಾಗುವುದು ಎನ್ನುತ್ತಾರೆ ವೈದ್ಯರು.
ಈ ಸಮಸ್ಯೆಗಳ ಪರಿಹಾರ ಕುರಿತಾಗಿ ಮಾತನಾಡಿರುವ ಡಾ ಸುನೀತಾ, “ಶೀತ, ಕೆಮ್ಮು ಕಾಣಿಸಿಕೊಂಡ ಕೂಡಲೇ ಮಾಸ್ಕ್ ಧರಿಸಿ, ಮಧುಮೇಹಿಗಳು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನ ಕಾಪಾಡಿಕೊಳ್ಳಿ, ಅಸ್ತಮಾ ಮತ್ತು ಅಲರ್ಜಿಯಿಂದ ಬಳಲುತ್ತಿರುವವರು ಗಾಳಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಿ ಮತ್ತು ಶೀತ ಲಕ್ಷಣಗಳು ಕಂಡುಬಂದಲ್ಲಿ ವೈದ್ಯರನ್ನು ಸಂಪರ್ಕಿಸಿ ಎಂದು ಅವರು ಸಲಹೆ ನೀಡಿದ್ದಾರೆ. ಅಲ್ಲದೆ ರೋಗವನ್ನು ತಡೆಗಟ್ಟಲು ತಾಜಾ ಹಣ್ಣು ಮತ್ತು ತರಕಾರಿ ಸೇವನೆ, ಶ್ವಾಸಕ್ಕೆ ಸಂಬಂಧಿಸಿದ ಸೋಂಕು ಹೊಂದಿರುವ ಸಮಯದಲ್ಲಿ ಭಾರೀ ವ್ಯಾಯಾಮದಿಂದ ದೂರವಿರುವುದು ಮತ್ತು ವಿಮಾನ ಪ್ರಯಾಣ ಮಾಡದಿರುವುದು ಒಳಿತು. ಕಿವಿ, ಮುಖ ನೋವು ಮತ್ತು ಊತ ಕಾಣಿಸಿಕೊಂಡಲ್ಲಿ ಕೂಡಲೇ ಇಎನ್‌ಟಿ ತಜ್ಞರನ್ನು ಭೇಟಿ ಮಾಡಿ ಎಂಬ ಎಚ್ಚರಿಕೆ ನೀಡುತ್ತಾರೆ ವೈದ್ಯೆ ಸುನಿತಾ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: