ಚಳಿಗಾಲದಲ್ಲಿ ವಾಕಿಂಗ್ ಅಥವಾ ರನ್ನಿಂಗ್ ಮಾಡುವವರು ಈ ವಿಷಯಗಳನ್ನು ನೆನಪಿಟ್ಟುಕೊಳ್ಳಬೇಕು
ವಾಕಿಂಗ್ ಅಥವಾ ರನ್ನಿಂಗ್ ಎರಡೂ ಕೂಡ ಆರೋಗ್ಯಕ್ಕೆ ಪ್ರಯೋಜನಕಾರಿ. ಆದರೆ ಈಗ ಚಳಿಗಾಲ. ಬೆಳಗ್ಗಿನ ಸಮಯದಲ್ಲಿ ಚಳಿಯ ಜೊತೆಗೆ ತಂಪಾದ ಗಾಳಿಯೂ ಇರುತ್ತದೆ. ಹಾಗಾಗಿ ಬೆಳಗಿನ ನಡಿಗೆ ಅಥವಾ ಓಟ ಮಾಡುವ ಮೊದಲು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಹಾಗಾದರೆ ಬೆಳಿಗ್ಗೆ ಎದ್ದು ವಾಕಿಂಗ್ ಅಥವಾ ರನ್ನಿಂಗ್ ಹೋಗುವ ಮೊದಲು ಯಾವ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂಬುದನ್ನು ಡಾ. ಎಲ್.ಎಚ್. ಘೋಟೇಕರ್ ಅವರು ವಿವರವಾಗಿ ತಿಳಿಸಿದ್ದು, ಈ ಸಲಹೆಗಳನ್ನು ಪಾಲಿಸುವ ಮೂಲಕ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳಬಹುದಾಗಿದೆ. ಇಲ್ಲವಾದಲ್ಲಿ ಈ ಅಭ್ಯಾಸ ನಿಮಗೆ ಲಾಭಕ್ಕಿಂತ ಹಾನಿಯುಂಟುಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗಾದರೆ ರನ್ನಿಂಗ್ ಅಥವಾ ವಾಕಿಂಗ್ ಮಾಡುವ ಮೊದಲು ನಮ್ಮ ತಯಾರಿ ಹೇಗಿರಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಇತ್ತೀಚಿನ ದಿನಗಳಲ್ಲಿ ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಒಂದು ರೀತಿಯ ಸವಾಲಾಗಿದೆ. ಹಾಗಾಗಿ ನಮ್ಮ ದೇಹವನ್ನು ಸದೃಢವಾಗಿಟ್ಟುಕೊಂಡು ಕಾಯಿಲೆಗಳಿಂದ ದೂರವಿರಲು ರನ್ನಿಂಗ್ ಮತ್ತು ವಾಕಿಂಗ್ (Runs and Walks) ಮಾಡುವುದು ಒಳ್ಳೆಯ ಅಭ್ಯಾಸಗಳಲ್ಲಿ ಒಂದಾಗಿದೆ. ಮಾತ್ರವಲ್ಲ, ಪರಿಣಾಮಕಾರಿಯಾದ ಫಲಿತಾಂಶವನ್ನು ಪಡೆದುಕೊಳ್ಳಲು ಸಹಾಯ ಮಾಡುತ್ತದೆ. ನಿಮಗೆ ತಿಳಿದಿರಬಹುದು, ಪ್ರತಿನಿತ್ಯ ಮಾಡುವ ವ್ಯಾಯಾಮವು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ, ಹೃದಯವನ್ನು ಆರೋಗ್ಯವಾಗಿಟ್ಟುಕೊಳ್ಳಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಗಿದ್ದು ತೂಕವನ್ನು ನಿಯಂತ್ರಿಸುತ್ತದೆ. ಮಾತ್ರವಲ್ಲದೆ ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಅದರಲ್ಲಿಯೂ ಚಳಿಗಾಲದ (Winter) ಬೆಳಗಿನ ತಾಜಾ ಗಾಳಿಯಲ್ಲಿ ನಡೆಯುವುದು ಮನಸ್ಸನ್ನು ಉಲ್ಲಾಸಗೊಳಿಸುತ್ತದೆ, ಒತ್ತಡವನ್ನು ಕಡಿಮೆ ಮಾಡುತ್ತದೆ. ಹೀಗೆ, ಬೆಳಗ್ಗಿನ ಸಮಯದಲ್ಲಿ ಓಡುವುದು ಅಥವಾ ನಡೆಯುವ ಅಭ್ಯಾಸ ದೇಹವನ್ನು ಸಕ್ರಿಯವಾಗಿ ಮತ್ತು ಆರೋಗ್ಯಕರವಾಗಿಡಲು ಅತ್ಯುತ್ತಮ ಮಾರ್ಗವಾಗಿದೆ ಎಂದರೆ ತಪ್ಪಾಗಲಾರದು. ಆದರೆ ಅದಕ್ಕೂ ಮುನ್ನ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲವಾದಲ್ಲಿ ಈ ಅಭ್ಯಾಸ ನಿಮಗೆ ಲಾಭಕ್ಕಿಂತ ಹಾನಿಯುಂಟುಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗಾದರೆ ರನ್ನಿಂಗ್ ಅಥವಾ ವಾಕಿಂಗ್ ಮಾಡುವ ಮೊದಲು ನಮ್ಮ ತಯಾರಿ ಹೇಗಿರಬೇಕು, ಯಾವ ಕೆಲಸಗಳನ್ನು ಮಾಡಬಾರದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಯಾವ ರೀತಿ ಆರೋಗ್ಯಕ್ಕೆ ಹಾನಿ ಮಾಡುತ್ತದೆ?
ಸಾಮಾನ್ಯವಾಗಿ ರನ್ನಿಂಗ್ ಅಥವಾ ವಾಕಿಂಗ್ ಮಾಡುವುದು ದೇಹದಲ್ಲಿ ಹೆಚ್ಚಿದ ಆಮ್ಲಜನಕದ ಮಟ್ಟಗಳು ಆಯಾಸವನ್ನು ಕಡಿಮೆ ಮಾಡುತ್ತದೆ ಮತ್ತು ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ. ಆದರೆ ಚಳಿಗಾಲದಲ್ಲಿ, ತಾಪಮಾನದಲ್ಲಿನ ಇಳಿಕೆ ಕಂಡುಬರುವುದರಿಂದ ದೇಹದ ಉಷ್ಣತೆಯನ್ನು ಕೂಡ ಕಡಿಮೆ ಮಾಡುತ್ತದೆ, ಇದು ಸ್ನಾಯುಗಳನ್ನು ಬಿಗಿಗೊಳಿಸುತ್ತದೆ ಮತ್ತು ನೋವು, ಸೆಳೆತದಂತಹ ಅಪಾಯವನ್ನು ಹೆಚ್ಚಿಸುತ್ತದೆ. ಇಂತಹ ಸಮಯದಲ್ಲಿ ಸರಿಯಾದ ಅಭ್ಯಾಸವಿಲ್ಲದೆ ಓಡುವುದು ಅಥವಾ ನಡೆಯುವುದು ಆರೋಗ್ಯಕ್ಕೆ ಬಹಳ ಹಾನಿಕಾರಕವಾಗಿದೆ. ಹೆಚ್ಚುವರಿಯಾಗಿ, ತಂಪಾದ ಗಾಳಿ ಮತ್ತು ವಾಯುಮಾಲಿನ್ಯವು ಉಸಿರಾಟದ ತೊಂದರೆಗೆ ಕಾರಣವಾಗಬಹುದು, ಅದರಲ್ಲಿಯೂ ಉಸಿರಾಟದ ಕಾಯಿಲೆಗಳು ಅಥವಾ ಅಲರ್ಜಿ ಇರುವವರಿಗೆ ಇದು ಹೆಚ್ಚಿನ ಅಪಾಯ ಉಂಟುಮಾಡಬಹುದು. ಇದಲ್ಲದೆ, ನಿಮಗೆ ಶೀತ ಅಥವಾ ಜ್ವರ ಇದ್ದರೆ, ತಂಪಾದ ಗಾಳಿಯಲ್ಲಿ ಹೊರಗೆ ಹೋಗುವುದು ರೋಗಲಕ್ಷಣಗಳನ್ನು ಇನ್ನಷ್ಟು ಹೆಚ್ಚಿಸಬಹುದು.
ವಾಕಿಂಗ್ ಅಥವಾ ರನ್ನಿಂಗ್ ಮಾಡುವ ಮುನ್ನ ಅನುಸರಿಸಬೇಕಾದ ಸಲಹೆಗಳು:
ದೆಹಲಿ ಲೇಡಿ ಹಾರ್ಡಿಂಜ್ ಆಸ್ಪತ್ರೆಯ ಡಾ. ಎಲ್.ಎಚ್. ಘೋಟೇಕರ್ ತಿಳಿಸಿರುವ ಮಾಹಿತಿ ಪ್ರಕಾರ, ಶೀತ ಅಥವಾ ಚಳಿಯ ಪ್ರಮಾಣ ಹೆಚ್ಚಿರುವ ಸಮಯದಲ್ಲಿ ವಾಕಿಂಗ್ ಅಥವಾ ರನ್ನಿಂಗ್ ಮಾಡಲು ನಿಮ್ಮ ದೇಹದ ಉಷ್ಣತೆ ಮತ್ತು ಸ್ನಾಯುಗಳು ಹೊಂದಿಕೊಳ್ಳಬೇಕಾಗುತ್ತದೆ. ಹಾಗಾಗಿ ನೀವು ಕೆಲವು ಸಲಹೆಗಳನ್ನು ತಪ್ಪದೆ ಪಾಲಿಸಬೇಕಾಗುತ್ತದೆ. ಸಾಮಾನ್ಯವಾಗಿ ಬೆಳಗ್ಗಿನ ಸಮಯದಲ್ಲಿ ಹೊರಗೆ ಹೋಗುವ ಮೊದಲು ಹಗುರವಾದ ಬೆಚ್ಚಗಿನ ಬಟ್ಟೆಗಳನ್ನು ಧರಿಸಲು ಮರೆಯಬೇಡಿ ಮತ್ತು ತಂಪಾದ ಗಾಳಿಯಿಂದ ನಿಮ್ಮನ್ನು ನೀವು ರಕ್ಷಿಸಲು ಕಿವಿ, ತಲೆ ಮತ್ತು ಕೈಗಳಿಗೆ ಗಾಳಿ ಹೋಗದಂತೆ ಅವುಗಳನ್ನು ಮುಚ್ಚಿಕೊಳ್ಳಿ. ಗಾಳಿಯು ತುಂಬಾ ತಂಪಾಗಿದ್ದರೆ ಅಥವಾ ಮಂಜಿನಿಂದ ಕೂಡಿದ್ದರೆ, ಸ್ವಲ್ಪ ಸಮಯದ ನಂತರ, ಅಂದರೆ ಸೂರ್ಯ ಬಂದ ನಂತರ ವಾಕಿಂಗ್ ಅಥವಾ ರನ್ನಿಂಗ್ ಆರಂಭ ಮಾಡಿ.
ಇದನ್ನೂ ಓದಿ: ಬೆಳಗಿನ ದಿನಚರಿಯಲ್ಲಿ ಈ ರೂಲ್ಸ್‌ಗಳನ್ನು ಪಾಲಿಸಿದ್ರೆ ನೀವು ಫಿಟ್ ಆ್ಯಂಡ್ ಹೆಲ್ತಿಯಾಗಿರಬಹುದು
ಶೀತ, ಜ್ವರ ಅಥವಾ ಉಸಿರಾಟದ ತೊಂದರೆ ಇರುವವರು ಮನೆಯಲ್ಲಿ ಆಳವಾದ ಉಸಿರಾಟದ ವ್ಯಾಯಾಮಗಳನ್ನು ಮಾಡಬೇಕು ಅಥವಾ ವೈದ್ಯರ ಸಲಹೆಯ ಮೇರೆಗೆ ಮಾತ್ರ ಹೊರಗೆ ನಹೋಗಬೇಕು. ಮಾಲಿನ್ಯದಿಂದ ರಕ್ಷಿಸಿಕೊಳ್ಳಲು ಮಾಸ್ಕ್ ಧರಿಸುವುದು ಒಳ್ಳೆಯದು. ಜೊತೆಗೆ ವಾಕಿಂಗ್ ಅಥವಾ ರನ್ನಿಂಗ್ ಮುಗಿಸಿ ಬಂದ ನಂತರ, ಬಟ್ಟೆ ಬದಲಾಯಿಸುವ ಮೊದಲು ನಿಮ್ಮ ದೇಹವು ಸಾಮಾನ್ಯ ತಾಪಮಾನಕ್ಕೆ ಮರಳಲು ಸಮಯ ಕೊಡಿ. ಅಂದರೆ 5- 10 ನಿಮಿಷ ಕಾಲ ಏನನ್ನೂ ಮಾಡಬೇಡಿ. ಈ ಸರಳ ಮುನ್ನೆಚ್ಚರಿಕೆಗಳನ್ನು ಅನುಸರಿಸುವುದರಿಂದ ತಂಪಾದ ವಾತಾವರಣದಲ್ಲಿ ವಾಕಿಂಗ್ ಅಥವಾ ರನ್ನಿಂಗ್ ವ್ಯಾಯಾಮ ಸುರಕ್ಷಿತ ಮತ್ತು ಪ್ರಯೋಜನಕಾರಿಯಾಗಿರುವುದರಲ್ಲಿ ಸಂದೇಹವೇ ಇಲ್ಲ .
ಈ ವಿಷಯಗಳನ್ನು ಮರೆಯಬೇಡಿ:
- ತೀವ್ರ ಚಳಿ ಇದ್ದಾಗ ಖಾಲಿ ಹೊಟ್ಟೆಯಲ್ಲಿ ವಾಕಿಂಗ್ ಅಥವಾ ರನ್ನಿಂಗ್ ಮಾಡಬೇಡಿ.
- ಸೂರ್ಯ ಉದಯಿಸಿದ ನಂತರ ವ್ಯಾಯಾಮ ಮಾಡುವುದು ಉತ್ತಮ.
- ಉಸಿರಾಟದ ತೊಂದರೆ ಇರುವವರು ವಾಕಿಂಗ್ ಅಥವಾ ರನ್ನಿಂಗ್ ಮಾಡುವ ಮೊದಲು ವೈದ್ಯರನ್ನು ಸಂಪರ್ಕಿಸಬೇಕು.
- ವಾಕಿಂಗ್ ಮಾಡಿ ಬಂದ ನಂತರ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಿ.
- ನಿಮ್ಮ ದೇಹವನ್ನು ಹೈಡ್ರೇಟ್ ಆಗಿಡಲು ಸಾಕಷ್ಟು ನೀರು ಕುಡಿಯಿರಿ.
- ವ್ಯಾಯಾಮದ ನಂತರ ಪೌಷ್ಟಿಕ ಆಹಾರಗಳನ್ನು ಸೇವಿಸಲು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




