ಗೋಡಂಬಿಯಲ್ಲಿ ವಿಟಮಿನ್ ಸಿ, ಸತು, ಮೆಗ್ನೀಷಿಯಂ, ಸೆಲೆನಿಯಮ್ ಮತ್ತು ಕಬ್ಬಿಣದ ಜೊತೆಗೆ ಇತರ ಅನೇಕ ಪೋಷಕಾಂಶಗಳಿವೆ. ಗೋಡಂಬಿ ದೇಹ ಹಾಗೂ ಕೂದಲು ಮತ್ತು ಚರ್ಮಕ್ಕೆ ತುಂಬಾ ಉಪಯುಕ್ತವಾಗಿದೆ. ಇದು ರಕ್ತಹೀನತೆಯ ಸಮಸ್ಯೆಯನ್ನು ನಿವಾರಿಸುವುದಲ್ಲದೆ ಚರ್ಮದ ಕಾಂತಿಯನ್ನು ಹೆಚ್ಚಿಸಲು ಕೂಡ ಒಳ್ಳೆಯದು. ಕೂದಲಿಗೆ ಸಹ ಪ್ರಯೋಜನಕಾರಿ. ಇಷ್ಟೇ ಅಲ್ಲದೆ ಗೋಡಂಬಿ ಇನ್ನು ಅನೇಕ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ.
ಹೃದ್ರೋಗವನ್ನು ನಿವಾರಿಸುತ್ತದೆ
ಹೃದಯದ ಆರೋಗ್ಯಕ್ಕೆ ಗೋಡಂಬಿ ತುಂಬಾ ಸಹಾಯಕಾರಿ. ಇದರಲ್ಲಿರುವ ಒಲಿಕ್ ಆಮ್ಲಗಳು, ಪೈಟೋಸ್ಟೆರಾಲ್ ಮತ್ತು ಫಿನಲಿಕ್ ಸಂಯುಕ್ತಗಳು ಹೃದಯ ಕಾಯಿಲೆಯನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಜತೆಗೆ ದೇಹಕ್ಕೆ ಅಗತ್ಯವಿರುವ ಕೊಬ್ಬು ಕೂಡಾ ಗೋಡಂಬಿ ಸೇವನೆಯಿಂದ ಸಿಗುತ್ತದೆ. ಹೃದಯ ಸ್ನಾಯುಗಳ ಬಲಗೊಳ್ಳುವಿಕೆಗೆ ಗೋಡಂಬಿ ಸೇವನೆ ಉತ್ತಮ ಮಾರ್ಗ.
ಕ್ಯಾನ್ಸರ್ ರೋಗ ಬಾರದಂತೆ ತಡೆಹಿಡಿಯುತ್ತದೆ
ಉತ್ಕರ್ಷಣ ನಿರೋಧಕ ಶಕ್ತಿಯು ಗೋಡಂಬಿಯಲ್ಲಿ ಹೆಚ್ಚಾಗಿ ಇದೆ. ಇದರಿಂದ ಕ್ಯಾನ್ಸರ್ನಂತಹ ಕಾಯಿಲೆಗಳು ಬಾರದಂತೆ ತಡೆಹಿಡಿಯಬಹುದು. ವಿಟಮಿನ್ ಇ ಅಂಶ ಹೊಂದಿರುವುದರಿಂದ ರೋಗನಿರೋಧಕ ಶಕ್ತಿಯು ಬಲಗೊಳ್ಳುತ್ತದೆ. ಮಹಿಳೆಯರು ನಿಯಮಿತವಾಗಿ ಗೋಡಂಬಿ ಸೇವನೆ ಮಾಡುವುದರಿಂದ ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದು.
ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ
ನಿಮ್ಮ ಚರ್ಮವನ್ನು ಆರೋಗ್ಯಕರವಾಗಿ ಮತ್ತು ಸುಕ್ಕುಗಳಿಂದ ಮುಕ್ತವಾಗಿಡಲು, ನೀವು ನಿಯಮಿತವಾಗಿ ಗೋಡಂಬಿಯನ್ನು ತಿನ್ನಬೇಕು. ಗೋಡಂಬಿಯಲ್ಲಿ ಮೆಗ್ನೀಶಿಯಂ, ಸೆಲೆನಿಯಮ್, ಕಬ್ಬಿಣ, ರಂಜಕ ಹಾಗೂ ಪ್ರೋಟೀನ್ ಮತ್ತು ವಿಟಮಿನ್ಗಳಂತಹ ಪೋಷಕಾಂಶಗಳು ಹೇರಳವಾಗಿವೆ. ಇವು ಚರ್ಮದ ಟೋನ್ ಹೆಚ್ಚಿಸುವುದಲ್ಲದೆ ಸುಕ್ಕುಗಳನ್ನು ತಡೆಯುತ್ತವೆ. ಗೋಡಂಬಿಯಲ್ಲಿನ ವಿಟಮಿನ್ ಸಿ ಚರ್ಮದ ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
ಉತ್ಕರ್ಷಣ ನಿರೋಧಕ ಶಕ್ತಿಯನ್ನು ಹೊಂದಿದೆ
ನರಗಳಲ್ಲಿ ಸೇರಿಕೊಳ್ಳುವ ಕ್ಯಾಲ್ಸಿಯಂನ ಅಧಿಕ ಪ್ರಮಾಣವನ್ನು ತಡೆಹಿಡಿಯಲು ಗೋಡಂಬಿ ಸೇವನೆ ಸಹಾಯಕವಾಗಿದೆ. ಅಗತ್ಯವಿರುವಷ್ಟೇ ಕ್ಯಾಲ್ಸಿಯಂ ಅಂಶವನ್ನು ದೇಹಕ್ಕೆ ಪೂರೈಕೆ ಮಾಡಲು ಸಹಾಯಕಾರಿಯಾಗಿದೆ ಹಾಗೂ ಗೋಡಂಬಿಯ ನಿಯಮಿತ ಸೇವನೆಯಿಂದ ಮೆದುಳಿನ ನರಗಳು ಶಕ್ತಿಯುತವಾಗಿ ಕೆಲಸ ಮಾಡುತ್ತದೆ. ಗೋಡಂಬಿಯಲ್ಲಿ ಉತ್ಕರ್ಷಣ ನಿರೋಧಕ ಶಕ್ತಿ ಇರುತ್ತದೆ.
ಕೂದಲು ಉದುರುವಿಕೆಯನ್ನು ತಡೆಯುತ್ತದೆ
ಉದ್ದವಾದ, ಹೊಳೆಯುವ ಕೂದಲನ್ನು ಹೊಂದಲು ಗೋಡಂಬಿಯು ನಿಮ್ಮ ಆಹಾರದ ಭಾಗವಾಗಿರಬೇಕು. ಗೋಡಂಬಿಯಲ್ಲಿ ಕಬ್ಬಿಣಾಂಶವಿದೆ. ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಗೋಡಂಬಿಯಲ್ಲಿ ಪೊಟ್ಯಾಶಿಯಂ ಮತ್ತು ಇತರ ಅಗತ್ಯ ಪೋಷಕಾಂಶಗಳು ಸಮೃದ್ಧವಾಗಿವೆ. ಇದು ಕೂದಲು ಉದುರುವುದನ್ನು ತಡೆಯುವುದಲ್ಲದೆ ಬೆಳವಣಿಗೆಗೆ ಸಹಕಾರಿ.
ರಕ್ತಹೀನತೆಯನ್ನು ತಡೆಯುತ್ತದೆ
ಗೋಡಂಬಿಯಲ್ಲಿ ಕಬ್ಬಿಣ ಮತ್ತು ಪೊಟ್ಯಾಶಿಯಂ ಅಂಶ ಹೆಚ್ಚಾಗಿರುವುದರಿಂದ ರಕ್ತದ ಉತ್ಪತ್ತಿ ಮತ್ತು ರಕ್ತದ ಚಲನೆಯು ಸರಾಗವಾಗಿ ನಡೆಯುತ್ತದೆ. ಕಬ್ಬಿಣದ ಅಂಶದ ಕೊರತೆಯು ಸಾಮಾನ್ಯವಾಗಿ ರಕ್ತ ಹೀನತೆಗೆ ಕಾರಣವಾಗಿರುವುದರಿಂದ ಗೋಡಂಬಿಯಲ್ಲಿನ ಕಬ್ಬಿಣ ಅಂಶವು ರಕ್ತಹೀನತೆಯನ್ನು ತಡೆಹಿಡಿಯಲು ಸಹಾಯಕವಾಗಿದೆ.
ಇದನ್ನೂ ಓದಿ:
Health Tips: ಅಂಗೈ ಮೇಲೆ ಅರಳುವ ಮೆಹಂದಿ ಅಂದಕ್ಕಷ್ಟೇ ಸೀಮಿತ ಅಲ್ಲ, ಇದರ ಆರೋಗ್ಯಕರ ಗುಣಗಳ ಬಗ್ಗೆ ತಿಳಿಯಿರಿ
Pumpkin Seeds: ಚೀನಿಕಾಯಿ ಬೀಜದ ಆರೋಗ್ಯಕರ ಗುಣಗಳ ಬಗ್ಗೆ ನೀವು ತಿಳಿದರೆ ಒಂದು ಬೀಜವನ್ನು ಹಾಳುಮಾಡುವುದಿಲ್ಲ