ಮುಟ್ಟು ಹೆಣ್ತನದ ಪ್ರತೀಕವಾಗಿದ್ದು, ಇದು ಪ್ರತಿ 28 ದಿನಗಳಿಗೊಮ್ಮೆ ಆಗುತ್ತದೆ. ಈ ಸಮಯದಲ್ಲಿ ಐದು ದಿನಗಳ ಕಾಲ ಮುಟ್ಟಿನ ರಕ್ತಸ್ರಾವ ಇರುತ್ತದೆ. ಸಹಿಸಲಾರದ ನೋವು, ಕಿರಿಕಿರಿ ಭಾವನೆಯೂ ಕಾಡಬಹುದು. ಈ ಸಮಯದಲ್ಲಿ ಆಕೆಯಲ್ಲಿ ದೈಹಿಕ ಹಾಗೂ ಮಾನಸಿಕ ಬದಲಾವಣೆಗಳಾಗುತ್ತದೆ. ಈ ವೇಳೆ ನೋವು ಅತಿಯಾಗಿ ಕಾಡಿದರೆ ಯಾವುದೇ ಕೆಲಸ ಮಾಡಲು ಮನಸ್ಸಾಗುವುದಿಲ್ಲ. ಹೀಗಾಗಿ ಸೇವಿಸುವ ಆಹಾರದೊಂದಿಗೆ ಸ್ವಚ್ಛತೆಯ ಕಡೆಗೂ ಹೆಚ್ಚು ಗಮನ ಹರಿಸಬೇಕು. ಒಂದು ವೇಳೆ ಸ್ವಚ್ಛತೆಗೆ ಆದ್ಯತೆ ನೀಡದಿದ್ದರೆ ಮೂತ್ರನಾಳದ ಸೋಂಕು, ತುರಿಕೆ ಹಾಗೂ ಗರ್ಭಕಂಠದ ಕ್ಯಾನ್ಸರ್ ನಂತಹ ಸಮಸ್ಯೆಗಳಿಗೆ ಕಾರಣವಾಗುವ ಸಾಧ್ಯತೆಯಿದೆ.
ಮುಟ್ಟಿನ ಅವಧಿಯಲ್ಲಿ ಸ್ಯಾನಿಟರಿ ಪ್ಯಾಡ್ ಬಳಸುತ್ತಿದ್ದಲ್ಲಿ ಪ್ರತಿ 3ರಿಂದ 5ಗಂಟೆಗಳಿಗೊಮ್ಮೆ ಬದಲಾಯಿಸುವುದು ಸೂಕ್ತ. ಬೆಳ್ಳಗೆ, ಮಧ್ಯಾಹ್ನ , ಸಂಜೆ ಮತ್ತು ರಾತ್ರಿ ಮಲಗುವ ಮುನ್ನ ಈ ಪ್ಯಾಡ್ ಗಳನ್ನು ಬದಲಾಯಿಸುವುದು ಸೂಕ್ತ. ಒಂದು ವೇಳೆ ಹೆಚ್ಚು ರಕ್ತಸ್ರಾವ ಹೊಂದಿದ್ದರೆ, ಐದರಿಂದ ಆರು ಬಾರಿ ಬದಲಾಯಿಸಬೇಕಾಗುತ್ತದೆ. ಹೆಚ್ಚು ಅವಧಿಯವರೆಗೂ ಒಂದೇ ಪ್ಯಾಡ್ ಬಳಸಿದಲ್ಲಿ ಚರ್ಮದ ಕಿರಿಕಿರಿ ಅಥವಾ ತುರಿಕೆಯಂತಹ ಸಮಸ್ಯೆಗಳು ಉಂಟಾಗಬಹುದು. ಹೀಗಾಗಿ ಈ ಸಮಯದಲ್ಲಿ ಸಾಧ್ಯವಾದಷ್ಟು ಸ್ವಚ್ಛತೆಯ ಕಡೆಗೆ ಗಮನ ಕೊಡುವುದು ಅಗತ್ಯ.
ಇದನ್ನೂ ಓದಿ: ಶವಾಸನ ಮಾಡುವುದರಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ?
ಋತುಚಕ್ರದ ಅವಧಿಯಲ್ಲಿ ಯೋನಿಯು ಸ್ವಚ್ಛತೆ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಆದರೆ ಯೋನಿಯು ಶುಚಿಗೊಳಿಸುವ ಒಳ್ಳೆಯ ಮತ್ತು ಕೆಟ್ಟ ಬ್ಯಾಕ್ಟೀರಿಯಾಗಳನ್ನು ಹೊಂದಿದೆ. ಒಂದು ವೇಳೆ ಸಾಬೂನಿನಿಂದ ಈ ಭಾಗವನ್ನು ತೊಳೆದರೆ ಒಳ್ಳೆಯ ಬ್ಯಾಕ್ಟೀರಿಯಾವು ಸಾಯುವ ಸಾಧ್ಯತೆಯಿದೆ. ಆರೋಗ್ಯದ ದೃಷ್ಟಿಯಿಂದ ಈ ಸಮಯದಲ್ಲಿ ಆದಷ್ಟು ಸೋಪಿನ ಬಳಕೆಯನ್ನು ತಪ್ಪಿಸುವುದು ಉತ್ತಮ. ಯೋನಿಯನ್ನು ಸ್ವಚ್ಛಗೊಳಿಸಲು ಬಿಸಿ ನೀರನ್ನು ಬಳಸುವುದು ಒಳ್ಳೆಯದು.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ