Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ ಮಾಸಭವಿಷ್ಯ
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ಮಾಸ ಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ ಮಾಸಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ಮಾಸ ಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ ಮಾಸಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ನಿಮ್ಮಲ್ಲಿ ಯಾರು ಮದುವೆಗಾಗಿ ಪ್ರಯತ್ನ ಮಾಡುತ್ತಿದ್ದೀರಿ ಅಂತಹವರಿಗೆ ಶುಭ ಸುದ್ದಿ ಕೇಳುವಂತಹ ಯೋಗ ಇದೆ. ಈ ಹಿಂದೆ ನೀವು ಮಾಡಿದ ಪ್ರಯತ್ನಗಳು ಈ ತಿಂಗಳಲ್ಲಿ ಫಲ ನೀಡಲಿವೆ. ನಿಮ್ಮ ಬಗ್ಗೆ ಸಣ್ಣಪುಟ್ಟ ಆಕ್ಷೇಪಗಳು ಇರುವವರು ಸಹ ಈ ತಿಂಗಳಲ್ಲಿ ನಿಮ್ಮ ಬಗ್ಗೆ ಸದಭಿಪ್ರಾಯ ಹೊಂದಲಿದ್ದಾರೆ. ನಿಮಗೆ ಹಣ ನೀಡುವುದಾಗಿ ಯಾರಾದರೂ ಮಾತು ನೀಡಿದ್ದಾರೆ ಅಂತಾದರೆ ಅದನ್ನು ನೆಚ್ಚಿಕೊಂಡು ಇನ್ನೊಬ್ಬರಿಗೆ ನೀವು ಮಾತು ನೀಡಲು ಹೋಗಬೇಡಿ. ನೀವು ಅಚಾನಕ್ ಆಗಿ ಒಪ್ಪಿಕೊಂಡ ಜವಾಬ್ದಾರಿಯನ್ನು ಅದ್ಭುತವಾಗಿ ಮಾಡಲಿದ್ದೀರಿ. ಉದ್ಯೋಗ ಸ್ಥಳದಲ್ಲಿ ನಿಮಗೆ ಸಿಗಬೇಕಾದ ಪ್ರಾಧಾನ್ಯ ಇನ್ನೂ ಹೆಚ್ಚು ಸಿಗಲಿದೆ. ನಿಮಗೆ ಬಹಳ ಆಪ್ತರಾದವರು ರಹಸ್ಯ ಎಂದು ಹೇಳಿದ ವಿಚಾರವನ್ನು ಅಪ್ಪಿತಪ್ಪಿ ಕೂಡ ಯಾರ ಜೊತೆಗೂ ಚರ್ಚಿಸಬೇಡಿ. ಮನೆಯಲ್ಲಿ ಸುಣ್ಣಬಣ್ಣ ಮಾಡಿಸಲು, ದುರಸ್ತಿ ಕಾರ್ಯಗಳನ್ನು ಮಾಡಿಸಲು ಹಣ ಖರ್ಚು ಮಾಡಲಿದ್ದೀರಿ. ಆದರೆ ಇದು ನೀವು ಅಂದುಕೊಂಡಿದ್ದಕ್ಕಿಂತ ವಿಪರೀತ ದೊಡ್ಡ ಮಟ್ಟದಲ್ಲಿ ಖರ್ಚು ತರಲಿದೆ. ನೀವು ಯಾವುದೋ ಉದ್ದೇಶಕ್ಕಾಗಿ ಉಳಿತಾಯದ ಹಣವನ್ನ ಮುರಿಸಿದ್ದರೆ ಅದನ್ನು ಇನ್ಯಾವುದೋ ಕಾರಣಕ್ಕೋಸ್ಕರ ಬಳಸಬೇಕಾಗುತ್ತದೆ. ನಿಮ್ಮಲ್ಲಿ ಕೆಲವರು ಮಕ್ಕಳ ಸಲುವಾಗಿ ಬೆಳ್ಳಿ ಒಡವೆ ಅಥವಾ ವಸ್ತುಗಳನ್ನು ಖರೀದಿ ಮಾಡಲಿದ್ದೀರಿ. ಯಾರಿಗೆ ಸಿಗರೇಟ್ ಸೇದುವ ವ್ಯಸನ ಇರುತ್ತದೆ ಅಂತಹವರಿಗೆ ಅನಾರೋಗ್ಯ ಸಮಸ್ಯೆ ಕಾಡಲಿದ್ದು, ವೈದ್ಯೋಪಚಾರ, ಔಷಧೋಪಚಾರಗಳಿಗೆ ಹೆಚ್ಚಿನ ಖರ್ಚಾಗಲಿದೆ. ನಿಧಾನಕ್ಕೆ ಮಾಡಿದರಾಯಿತು, ಗಡುವು ಇನ್ನೂ ದೂರ ಇದೆ ಅಂದುಕೊಂಡು ಕೆಲಸವನ್ನು ಯಾವುದೇ ಕಾರಣಕ್ಕೂ ಮುಂದಕ್ಕೆ ಹಾಕಬೇಡಿ. ಹಾಗೊಂದು ವೇಳೆ ಮಾಡಿದಲ್ಲಿ ನೀವು ಕೈಯಾರೆ ಹಣವನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ಸಂಗಾತಿಯ ಮನೆ, ಆಸ್ತಿ ವಿಚಾರಗಳು ನಿಮಗೆ ನಾನಾ ಬಗೆಯಲ್ಲಿ ಕಿರಿಕಿರಿ ಮಾಡಲಿದೆ. ಮೇಲ್ನೋಟಕ್ಕೆ ನಿಮ್ಮ ಮಾತನ್ನು ಕೇಳಿಸಿಕೊಳ್ಳುವವರಂತೆ, ಕೇಳುವವರಂತೆ ನಡೆದುಕೊಂಡರೂ ನಿಮ್ಮ ಬೆನ್ನ ಹಿಂದೆ ಆರೋಪಗಳು, ನಿಂದೆಗಳನ್ನು ಮಾಡುತ್ತಾರೆ. ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವಂತಹ ಉದ್ಯೋಗಿಗಳಿಗೆ ಒತ್ತಡ ಹೆಚ್ಚಾಗಿರುತ್ತದೆ. ನೀವು ಆಡುವ ಮಾತು ತಮಗೆ ತೋಚಿದಂತೆ ಅರ್ಥ ಮಾಡಿಕೊಂಡು, ಒಂದೇ ಕೆಲಸವನ್ನು ಎರಡೆರಡು ಸಲ ಮಾಡುವಂತಹ ಪರಿಸ್ಥಿತಿಯನ್ನು ತಂದಿಡಲಿದ್ದಾರೆ. ನಿಮಗೆ ಎಷ್ಟೇ ಹತ್ತಿರದ ಸ್ನೇಹಿತರು ಬಂಧುಗಳು ಸಂಬಂಧಿಕರೇ ಆದರೂ ಸಹ ಅವರ ಪರವಾಗಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ಹೋಗಬೇಡಿ. ಪುರುಷರಾದಲ್ಲಿ ಸ್ತ್ರೀಯರ ವೈಯಕ್ತಿಕ ವಿಚಾರಗಳಿಗೆ, ಸ್ತ್ರೀಯರಾದಲ್ಲಿ ಪುರುಷರ ವೈಯಕ್ತಿಕ ವಿಚಾರಗಳಿಗೆ ತಲೆ ಹಾಕದಿರುವುದು ಉತ್ತಮ. ಈ ಹಿಂದೆ ಅನುಕೂಲ ಮಾಡಿಕೊಡುವುದಾಗಿ ನೀವು ಮಾತು ಕೊಟ್ಟು, ಈಗ ಆ ಸಹಾಯವನ್ನು ಕೇಳಿಕೊಂಡು ಬಂದಾಗ ನಿಮ್ಮಿಂದ ಸಾಧ್ಯವಿಲ್ಲ ಎಂಬ ಉತ್ತರವನ್ನು ಹೇಳಿದಿರೋ ನಿಮ್ಮ ವರ್ಚಸ್ಸಿಗೆ ಧಕ್ಕೆ ಆಗುವಂತಹ ಸಾಧ್ಯತೆಗಳಿವೆ. ನಿಮ್ಮಲ್ಲಿ ಕೆಲವರಿಗೆ ಈ ತಿಂಗಳು ತೀವ್ರತರವಾದ ಜ್ವರ, ಅನಾರೋಗ್ಯ ಸಮಸ್ಯೆಗಳು ಕಾಡುವಂತಹ ಸಾಧ್ಯತೆಗಳಿವೆ. ದೂರ ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಳ್ಳುವ ಮೊದಲು ಅಥವಾ ದಿನಾಂಕ ನಿಗದಿ ಮಾಡಿಕೊಳ್ಳುವ ಮೊದಲು ನಿಮ್ಮ ದೈಹಿಕ ಪರಿಸ್ಥಿತಿ ಹೇಗಿದೆ ಎಂಬುದರ ಬಗ್ಗೆ ಒಮ್ಮೆ ಲಕ್ಷ್ಯ ಕೊಡುವುದು ಮುಖ್ಯ. ಸೈಟು ಜಮೀನು ಖರೀದಿ ಮಾಡಬೇಕು ಎಂದಿರುವವರಿಗೆ ಮನಸ್ಸಿಗೆ ಒಪ್ಪುವಂತಹದ್ದು ದೊರೆಯುವ ಅವಕಾಶಗಳು ಈ ತಿಂಗಳು ಹೆಚ್ಚಾಗಿವೆ. ಆದರೆ ಯಾವುದೇ ಮುಖ್ಯ ಕೆಲಸಗಳನ್ನು ಮುಂದಕ್ಕೆ ಹಾಕುವುದಕ್ಕೆ ಹೋಗಬೇಡಿ, ಆಲಸ್ಯ ಮಾಡುವುದಕೆ ಹೋಗಬೇಡಿ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ತೀರ್ಥಕ್ಷೇತ್ರ ಪ್ರಯಾಣ, ದೇವತಾ ಆರಾಧನೆ ಇಂಥ ಕಾರ್ಯಗಳಲ್ಲಿ ಈ ತಿಂಗಳು ಹೆಚ್ಚೆಚ್ಚು ತೊಡಗಿಸಿಕೊಳ್ಳಲಿದ್ದೀರಿ. ಉದ್ಯೋಗ ಸ್ಥಳದಲ್ಲಿ ನೀವು ನಿರ್ವಹಿಸುವ ಕಾರ್ಯವಿಧಾನ ಹಾಗೂ ಅನುಸರಿಸುವ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತವಾಗಲಿದೆ. ಮಕ್ಕಳ ಉನ್ನತಭ್ಯಾಸಕ್ಕಾಗಿ, ಅದರಲ್ಲೂ ವಿದೇಶಗಳಲ್ಲಿ ಮಕ್ಕಳನ್ನು ಓದಿಸಬೇಕು ಎಂದು ಪ್ರಯತ್ನ ಪಡುತ್ತಿದ್ದಲ್ಲಿ ಅನುಕೂಲಗಳು ಒದಗಿ ಬರಲಿವೆ. ಕಾರು ಖರೀದಿ ಮಾಡುವುದಕ್ಕೆ ಯಾರು ಬ್ಯಾಂಕ್ ಲೋನ್ ಗಾಗಿ ಈಗಾಗಲೇ ಪ್ರಯತ್ನಪಟ್ಟು ಅಡೆತಡೆಗಳು ಎದುರಾಗಿದ್ದಲ್ಲಿ ಅವುಗಳು ಈ ತಿಂಗಳು ನಿವಾರಣೆಯಾಗಲಿವೆ ಹಾಗೂ ನಿಮ್ಮ ಮನೆಗೆ ಹೊಸ ಕಾರು ಬರುವಂತಹ ಯೋಗ ಕಂಡುಬರುತ್ತಿದೆ. ಯಾರು ವೈದ್ಯಕೀಯ ಪದ್ಧತಿಗಳ ಮೂಲಕ ಸಂತಾನಕ್ಕಾಗಿ ಪ್ರಯತ್ನ ಪಡುತ್ತಿದ್ದೀರೋ ಅಂಥವರಿಗೆ ಶುಭ ಸುದ್ದಿ ಕೇಳುವಂತಹ ಯೋಗ ಇದೆ. ಕಾಂಡಿಮೆಂಟ್ಸ್, ಹೋಟೆಲ್ ಅಥವಾ ಸಿಹಿ ಪದಾರ್ಥಗಳ ಮಾರಾಟ ಮಾಡುತ್ತಿರುವಂತಹವರಿಗೆ ಆದಾಯದಲ್ಲಿ ಹೆಚ್ಚಳ ಆಗುವಂತಹ ಸಾಧ್ಯತೆಗಳಿವೆ. ಷೇರುಪೇಟೆ ಅಥವಾ ಮ್ಯೂಚುವಲ್ ಫಂಡ್ ಗಳಲ್ಲಿ ಹಣ ಹೂಡಿಕೆ ಮಾಡಿರುವಂತಹವರು ಅದರಲ್ಲಿ ದೊಡ್ಡ ಮೊತ್ತವನ್ನು ವಾಪಸ್ ತೆಗೆದುಕೊಳ್ಳುವುದರ ಬಗ್ಗೆ ಆಲೋಚನೆ ಮಾಡಲಿದ್ದೀರಿ. ನಿಮ್ಮಲ್ಲಿ ಕೆಲವರಿಗೆ ನಿದ್ರೆ ಸಮಸ್ಯೆ ಕಾಡಬಹುದು. ಏನಾದರೂ ಈ ಸಮಸ್ಯೆ ಕಾಡಿದಲ್ಲಿ ದುರ್ಗಾ ಸೂಕ್ತವನ್ನು ಇಡೀ ತಿಂಗಳು ಪ್ರತಿ ಶುಕ್ರವಾರ ಕೇಳಿಸಿಕೊಳ್ಳುವುದು ಉತ್ತಮ. ಇದೇ ಮೊದಲ ಬಾರಿಗೆ ಎಂಬಂತೆ ಮಾಡುತ್ತಿರುವ ಕೆಲಸಗಳಲ್ಲಿ ಹೆಚ್ಚಿನ ಸಮಯ ಹಾಗೂ ಗಮನವನ್ನು ತೊಡಗಿಸಬೇಕಾಗುತ್ತದೆ. ಯಾಕಾದರೂ ಈ ಕೆಲಸವನ್ನು ಒಪ್ಪಿಕೊಂಡೆನೋ ಎಂದೆನಿಸುವ ಸಾಧ್ಯತೆಗಳಿವೆ. ಕುಟುಂಬದವರ ಜೊತೆಗೂಡಿ ಕಿರು ಪ್ರವಾಸಗಳಿಗೆ ತೆರಳುವಂತಹ ಯೋಗಗಳು ಕಂಡುಬರುತ್ತಿವೆ. ಆದರೆ ಇದು ಈ ತಿಂಗಳ ಮೂರನೇ ವಾರದ ನಂತರದಲ್ಲಿ ಆಗಬಹುದು.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ತಮ್ಮ ಮಾತಿನಂತೆಯೇ ನಡೆದುಕೊಳ್ಳಬೇಕು ಎಂದು ಕೆಲವರು ನಿಮ್ಮ ಮೇಲೆ ಒತ್ತಡ ಹಾಕಲಿದ್ದಾರೆ, ಅದರಲ್ಲೂ ಉದ್ಯೋಗ ಸ್ಥಳದಲ್ಲಿ ಈ ಸಮಸ್ಯೆ ವಿಪರೀತ ಹೆಚ್ಚಾಗಬಹುದು. ರಂಗಭೂಮಿ, ಸಿನಿಮಾ ಇಂಥ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಒಂದಲ್ಲ ಒಂದು ಬಗೆಯಲ್ಲಿ ವಿವಾದ ಮೈಮೇಲೆ ಬರುವಂತಹ ಸಾಧ್ಯತೆಗಳು ಕಂಡುಬರುತ್ತವೆ. ಆದ್ದರಿಂದ ಸೋಷಿಯಲ್ ಮೀಡಿಯಾದಲ್ಲಿ ಏನು ಪೋಸ್ಟ್ ಮಾಡುತ್ತಿದ್ದೀರಿ ಮತ್ತು ಯಾವುದೇ ಮಾಧ್ಯಮಗಳಿಗೆ ನೀವು ನೀಡುವ ಸಂದರ್ಶನದಲ್ಲಿ ಏನು ಮಾತನಾಡುತ್ತಿದ್ದೀರಿ ಎಂಬುದರ ಬಗ್ಗೆ ನಿಗಾ ಇರಿಸಿಕೊಳ್ಳಿ. ಕಮಿಷನ್ ಆಧಾರದಲ್ಲಿ ಕೆಲಸ ಮಾಡುವವರಿಗೆ ಇನ್ನೇನು ಕೈಗೆ ದೊಡ್ಡ ಮೊತ್ತದ ಹಣ ಸೇರಿಯೇ ಬಿಟ್ಟಿತು ಎಂದುಕೊಳ್ಳುವ ಹೊತ್ತಿಗೆ ಕೊನೆ ಕ್ಷಣದಲ್ಲಿ ಆ ಕೆಲಸವೇ ನಿಂತು ಹೋಗಬಹುದು ಅಥವಾ ಇತರರೆಲ್ಲರೂ ಸೇರಿ ನಿಮ್ಮ ಪಾಲಿಗೆ ಬರಬೇಕಾದ ಹಣವು ಬಾರದಿರುವಂತೆ ನೋಡಿಕೊಳ್ಳಬಹುದು. ಸಂಬಂಧಿಗಳು ಅಥವಾ ಸ್ನೇಹಿತರ ಮನೆಯಲ್ಲಿ ಆಯೋಜಿಸುವಂಥ ದೇವತಾ ಕಾರ್ಯಗಳಲ್ಲಿ ಭಾಗವಹಿಸುವ ಯೋಗ ಇದೆ. ಯಾವುದಾದರೂ ಮುಖ್ಯ ಪರೀಕ್ಷೆಗಳನ್ನು ಎದುರಿಸುತ್ತಿರುವ ವಿದ್ಯಾರ್ಥಿಗಳು ಈ ತಿಂಗಳು ಹಯಗ್ರೀವ ಸ್ತೋತ್ರವನ್ನು ಪಠಣ ಅಥವಾ ಶ್ರವಣ ಮಾಡುವುದರಿಂದ ಅನುಕೂಲ ಒದಗಿ ಬರಲಿದೆ. ಕುಟುಂಬದಲ್ಲಿ ನಾನು ಹೇಳಿದ್ದೇ ಆಗಬೇಕು ಎಂಬ ಹಟವನ್ನು ಯಾವುದೇ ಕಾರಣಕ್ಕೂ ಮಾಡುವುದಕ್ಕೆ ಹೋಗಬೇಡಿ. ಮಸಾಲೆಯುಕ್ತ ಪದಾರ್ಥಗಳು ಕರಿದ ತಿನಿಸುಗಳು ಇಂಥದ್ದರ ಸೇವನೆಯಿಂದ ದೂರ ಇದ್ದಷ್ಟು ಉತ್ತಮ. ನಿಮಗೆ ಬಹಳ ಆಪ್ತರಾದ ಸ್ನೇಹಿತರು, ಸಂಬಂಧಿಗಳು ಇಂಥವರು ಆಡುವಂತಹ ಕೊಂಕಿನ ಮಾತುಗಳಿಂದ ಮನಸ್ಸಿಗೆ ಬಹಳ ಬೇಸರವಾಗಲಿದೆ. ಈ ಹಿಂದೆ ಹೂಡಿಕೆ ಮಾಡಿ ಬಹುತೇಕ ಆ ಹಣ ಬರುವುದಿಲ್ಲ ಎಂದುಕೊಂಡಿದ್ದು, ಸ್ನೇಹಿತರ ಸಹಾಯದಿಂದ ವಾಪಸ್ ಪಡೆದುಕೊಳ್ಳುವ ಮಾರ್ಗೋಪಾಯಗಳು ಗೋಚರ ಆಗಲಿವೆ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ಈ ತಿಂಗಳಲ್ಲಿ ವಿವಾಹ ವಯಸ್ಕರಾದ ಯುವಕ ಅಥವಾ ಯುವತಿಯರಿಗೆ ಮನಸ್ಸಿಗೆ ಒಪ್ಪುವಂಥ ಹುಡುಗ ಅಥವಾ ಹುಡುಗಿ ಸಿಗುವ ಸಾಧ್ಯತೆಗಳಿವೆ. ನಿಮ್ಮಲ್ಲಿ ಕೆಲವರು ಪ್ರೇಮ ನಿವೇದನೆ ಮಾಡುವ ಸಾಧ್ಯತೆಗಳು ಸಹ ಇವೆ. ಚರ್ಮಕ್ಕೆ ಸಂಬಂಧಪಟ್ಟಂತಹ ಅಲರ್ಜಿಗಳಿಂದ ಬಳಲುತ್ತಿರುವವರಿಗೆ ಸೂಕ್ತ ವೈದ್ಯೋಪಚಾರಗಳು ದೊರೆಯಲಿದೆ. ಇದರಿಂದ ಮಾನಸಿಕವಾಗಿ ನೆಮ್ಮದಿ ದೊರೆಯಲಿದೆ. ಹೆಣ್ಣು ಮಕ್ಕಳಿಗೆ ತವರು ಮನೆಯಿಂದ ದೇವತಾ ಕಾರ್ಯಗಳಿಗೆ ಅಥವಾ ಶುಭ ಕಾರ್ಯಗಳಿಗೆ ಆಹ್ವಾನ ಬರಲಿದೆ. ಯಾರು ವಕೀಲಿಕೆ ವೃತ್ತಿಯಲ್ಲಿ ಇರುತ್ತೀರೋ ಅಥವಾ ಚಾರ್ಟೆಡ್ ಅಕೌಂಟೆಂಟ್ ಗಳಾಗಿ ಕಾರ್ಯ ನಿರ್ವಹಿಸುತ್ತೀರಾ ಅಂತಹವರಿಗೆ ಹೊಸ ಕಚೇರಿಗೆ ತೆರಳುವಂಥ ಯೋಗ ಕಂಡುಬರುತ್ತಿದೆ. ಈ ತಿಂಗಳಿಗೆ ನಿಮಗಿರುವ ಪ್ರಮುಖ ಎಚ್ಚರಿಕೆ ಏನೆಂದರೆ, ಮನೆಯಲ್ಲಿರುವ ಸಾಕುಪ್ರಾಣಿಗಳ ಬಗ್ಗೆ ಬಹಳ ಜಾಗ್ರತೆಯನ್ನು ವಹಿಸಿ. ಏಕೆಂದರೆ ಅವುಗಳನ್ನ ಯಾರಾದರೂ ಕಳುವು ಮಾಡುವ ಅಥವಾ ಅವುಗಳು ಕಳೆದು ಹೋಗುವ ಸಾಧ್ಯತೆಗಳಿವೆ. ರಾಜಕಾರಣದಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಹೊಸ ಜವಾಬ್ದಾರಿಗಳು ಹೆಗಲೇರುವ ಅಥವಾ ಪದೋನ್ನತಿ ಆಗುವಂತಹ ಸಾಧ್ಯತೆಗಳಿವೆ. ಇದನ್ನು ವಹಿಸಿಕೊಳ್ಳುವುದರಿಂದ ಭವಿಷ್ಯದಲ್ಲಿ ನಿಮಗೆ ಉತ್ತಮವಾದ ಸ್ಥಾನಮಾನ, ಗೌರವ ದೊರೆಯಲಿದೆ. ಯಾರು ಅರ್ಧಕ್ಕೆ ಶಿಕ್ಷಣವನ್ನು ನಿಲ್ಲಿಸಿರುತ್ತೀರಾ ಅಂತಹವರು ಶಿಕ್ಷಣವನ್ನು ಮುಂದುವರಿಸುವುದಕ್ಕೆ ಬೇಕಾದ ಪ್ರೋತ್ಸಾಹ ಹಾಗೂ ಉತ್ತೇಜನವನ್ನು ಪಡೆಯುತ್ತೀರಿ. ಮನೆಗೆ ಎಲೆಕ್ಟ್ರಾನಿಕ್ ಅಥವಾ ಎಲೆಕ್ಟ್ರಿಕಲ್ ಗ್ಯಾಜೆಟ್ ಖರೀದಿಸಿ ತರಲಿದ್ದೀರಿ. ಇಷ್ಟು ಸಮಯ ಉದ್ಯೋಗ ಸ್ಥಳದಲ್ಲಿ ಯಾರು ನಿಮ್ಮ ಬಗ್ಗೆ ಬರೀ ಆಕ್ಷೇಪವನ್ನೇ ಮಾಡುತ್ತಿರುತ್ತಾರೋ ಅಂಥವರು ನಿಮ್ಮ ಬಳಿ ಸಹಾಯವನ್ನು ಕೇಳಿಕೊಂಡು ಬರಬೇಕಾದ ಪರಿಸ್ಥಿತಿ ಸೃಷ್ಟಿಯಾಗಲಿದೆ. ಈ ತಿಂಗಳಲ್ಲಿ ಪ್ರತಿ ಬುಧವಾರ ವಿಷ್ಣು ಸಹಸ್ರನಾಮ ಶ್ರವಣ ಅಥವಾ ಪಠಣವನ್ನು ಮಾಡಿ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಈ ತಿಂಗಳಲ್ಲಿ ವ್ಯಾಪಾರ- ವ್ಯವಹಾರ ಮಾಡುತ್ತಿರುವವರಿಗೆ ಹೊಸ ಹೂಡಿಕೆ ಮಾಡಬೇಕಾದ ಅಗತ್ಯ ಕಂಡುಬರಲಿದೆ. ಕುಟುಂಬ ವಿಚಾರಗಳಲ್ಲಿ ಹೆಚ್ಚು ಸಮಯ ಮೀಸಲಿಡಬೇಕಾದ ಅಗತ್ಯ ಕಂಡುಬರಲಿದೆ. ಔತಣ ಕೂಟಗಳಿಗೆ ಸಂಬಂಧಿಕರಿಂದ ಆಹ್ವಾನ ಬರಲಿದೆ. ಹೊಸ ವಾಹನ ಖರೀದಿ ಮಾಡುವುದಕ್ಕೆ ಹಣ ಹೊಂದಿಸುವುದಕ್ಕೆ ಪ್ರಯತ್ನ ಮಾಡಲಿದ್ದೀರಿ. ಇನ್ನೇನು ಎಲ್ಲವೂ ಮುಗಿಯಿತು ಎಂದುಕೊಂಡ ಕೆಲಸ ಇನ್ನೂ ಸ್ವಲ್ಪ ಬಾಕಿ ಉಳಿದು, ಇನ್ನಷ್ಟು ದಿನಗಳಿಗೆ ಎಳೆದುಕೊಂಡು ಹೋಗುವಂಥ ಸೂಚನೆ ನಿಮಗೆ ದೊರೆಯುತ್ತದೆ. ಇತರರ ವೈಯಕ್ತಿಕ ವಿಚಾರಗಳ ಬಗ್ಗೆ ಗುಂಪುಗೂಡಿರುವ ಕಡೆ ಮಾತನಾಡುವುದಕ್ಕೆ ಹೋಗದಿರಿ. ಸಹೋದ್ಯೋಗಿಗಳ ಜತೆಗೆ ಸಣ್ಣ- ಪುಟ್ಟ ಮನಸ್ತಾಪಗಳು ಆಗಬಹುದು. ನನ್ನದೇ ಸರಿ ಎಂದು ವಾದಿಸುತ್ತಾ ಮುಂದುವರಿಸುವುದು ಒಳ್ಳೆಯದಲ್ಲ. ಬಹಳ ಸಮಯದಿಂದ ನೀವು ಹುಡುಕಾಡುತ್ತಿದ್ದ ವ್ಯಕ್ತಿಯೋ ಅಥವಾ ವಸ್ತುವೋ ಈ ತಿಂಗಳಲ್ಲಿ ದೊರೆಯುವ ಸಾಧ್ಯತೆಗಳಿವೆ. ಅತ್ತೆ- ಮಾವ ಅಥವಾ ತಂದೆ- ತಾಯಿಯ ಕನ್ನಡಕದ ಫ್ರೇಮ್, ಶ್ರವಣ ಸಾಧನ, ಪಾದರಕ್ಷೆಗಳಿಗೆ ಹೆಚ್ಚು ವೆಚ್ಚವಾಗುವಂಥ ಸಾಧ್ಯತೆ ಇದೆ. ಇನ್ನು ರಿಯಾಯಿತಿ ದೊರೆಯುತ್ತಿದೆ ಅಂತಲೋ ಅಥವಾ ಆಫರ್ ಗಳು ಇವೆ ಎಂಬ ಕಾರಣಕ್ಕೋ ಯಾವುದಾದರೂ ಬ್ರ್ಯಾಂಡೆಡ್ ವಸ್ತುಗಳನ್ನು ಖರೀದಿಸುತ್ತಿದ್ದೀರಿ ಎಂದಾದಲ್ಲಿ ವಾರಂಟಿ ಅವಧಿಯ ಬಗ್ಗೆ ಸರಿಯಾಗಿ ವಿಚಾರಿಸಿಕೊಳ್ಳುವುದು ಮುಖ್ಯ. ದ್ವಿಚಕ್ರ ವಾಹನ ಓಡಿಸುವಂಥವರು ಸಾಧ್ಯವಾದಷ್ಟೂ ನಿಧಾನವಾಗಿ ಚಲಾಯಿಸುವುದು ಕ್ಷೇಮ. ಪ್ರೊಟೀನ್ ಸಪ್ಲಿಮೆಂಟ್ ಗಳನ್ನು ತೆಗೆದುಕೊಳ್ಳುತ್ತಿದ್ದಲ್ಲಿ ಪ್ರಮಾಣವನ್ನು ಸರಿಯಾಗಿ ಅನುಸರಿಸಿ. ಸೌಂದರ್ಯ ಕಾಳಜಿ ಹೆಚ್ಚಾಗಲಿದ್ದು, ಇದರ ಸಲುವಾಗಿ ಹೆಚ್ಚಿನ ಖರ್ಚು ಮಾಡಲಿದ್ದೀರಿ. ನೀರಿಗೆ ಸಂಬಂಧಿಸಿದ ವ್ಯವಹಾರ ಮಾಡುತ್ತಿರುವವರಿಗೆ ಲಾಭದ ಪ್ರಮಾಣವನ್ನು ಜಾಸ್ತಿ ಮಾಡಿಕೊಳ್ಳುವಂಥ ದಾರಿಗಳು ಗೋಚರ ಆಗಲಿವೆ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಆಲಸ್ಯದ ಕಾರಣಕ್ಕೆ ಕೆಲವು ಅವಕಾಶಗಳನ್ನು ಕಳೆದುಕೊಳ್ಳಲಿದ್ದೀರಿ. ಆದ್ದರಿಂದ ಯಾವುದೇ ಕೆಲಸಕ್ಕೆ ಕೊನೆ ಕ್ಷಣದ ತನಕ ಕಾಯುತ್ತಾ ಕೂರಬೇಡಿ. ವಂಚಕರಿಂದ ಭಾರೀ ಎಚ್ಚರಿಕೆಯಿಂದ ಇರಬೇಕು. ಒಂದು ನಿಮ್ಮ ವಸ್ತುವನ್ನು ಖರೀದಿಸಿ, ಹಣ ನೀಡದೆ ವಂಚನೆ ಮಾಡುವುದು ಒಂದು ಬಗೆಯಲ್ಲಾದರೆ, ಕಳಪೆ ಅಥವಾ ನಕಲಿ ವಸ್ತುಗಳನ್ನು ನಿಮಗೆ ಮಾರಾಟ ಮಾಡುವಂಥ ಸಾಧ್ಯತೆಯೂ ಇದೆ. ನಿಮ್ಮಲ್ಲಿ ಕೆಲವರು ಮನೆಯನ್ನು ಬದಲಿಸಿ, ಬೇರೆಡೆ ತೆರಳುವುದಕ್ಕೆ ಆಲೋಚನೆ ಮಾಡಲಿದ್ದೀರಿ. ಸೆಕೆಂಡ್ ಹ್ಯಾಂಡ್ ವಾಹನಗಳ ಡೀಲರ್ ಗಳು, ಮನೆ- ಸೈಟುಗಳ ದಲ್ಲಾಳಿಗಳಿಗೆ ಆದಾಯ ಹೆಚ್ಚಾಗಲಿದೆ. ಈಗಾಗಲೇ ಕೆಲಸ ಆರಂಭಿಸಿ, ಒಂದು ಹಂತ ತಲುಪಿದ ನಂತರ ಯಾಕೋ ಮುಂದುವರಿಯುತ್ತಿಲ್ಲ ಎಂದಾಗಿದ್ದಲ್ಲಿ ಅಂಥ ಕೆಲಸಗಳು ತಿಂಗಳ ಕೊನೆ ಹತ್ತು ದಿನಗಳಲ್ಲಿ ವೇಗ ಪಡೆದುಕೊಳ್ಳಲಿದೆ. ಖಾಸಗಿ ಕಂಪನಿಗಳಲ್ಲಿ ಆಯಕಟ್ಟಿನ ಸ್ಥಾನದಲ್ಲಿ ಇರುವವರು ಹಾಗೂ ತಂಡಗಳನ್ನು ಮುನ್ನಡೆಸುತ್ತಿರುವಂಥವರು ಯಾವುದೇ ಭರವಸೆ ನೀಡುವ ಮುನ್ನ ಈಡೇರಿಸುವುದಕ್ಕೆ ಸಾಧ್ಯವಾ ಅಳೆದು ನೋಡಿ. ಏಕೆಂದರೆ, ಯಾರನ್ನಾದರೂ ಕೆಲಸಕ್ಕೆ ತೆಗೆದುಕೊಳ್ಳಬೇಕು ಅಥವಾ ಕೆಲಸ ಬಿಡುತ್ತಿದ್ದೇನೆ ಎಂದವರನ್ನು ನಿಮ್ಮಲ್ಲಿಯೇ ಉಳಿಸಿಕೊಳ್ಳಬೇಕು ಎಂಬ ಪ್ರಯತ್ನದಲ್ಲಿ ನೀಡುವ ಮಾತಿನಿಂದ ವರ್ಚಸ್ಸಿಗೆ ಹಾನಿ ಮಾಡಿಕೊಳ್ಳಬಹುದು. ಆದ್ದರಿಂದ ಜಾಗ್ರತೆ ವಹಿಸಬೇಕು. ದೀರ್ಘ ಕಾಲದಿಂದ ಬಾರದೆ ಬಾಕಿ ಉಳಿದಿದ್ದ ಹಣ ನಿಮ್ಮ ಕೈ ಸೇರುವಂಥ ಅವಕಾಶಗಳಿವೆ. ಇದಕ್ಕೆ ಸಂಬಂಧಿಸಿದಂಥ ಹಳೇ ಕಡತ, ಕಾಗದ- ಪತ್ರಗಳನ್ನು ಸರಿಯಾಗಿ ಹುಡುಕಿ ಇಟ್ಟುಕೊಳ್ಳಿ, ಹಾಗೆ ಮಾಡುವುದರಿಂದ ಅನುಕೂಲ ಆಗಲಿದೆ. ಅನಿರೀಕ್ಷಿತವಾಗಿ ದೂರ ಪ್ರಯಾಣಗಳನ್ನು ಕೈಗೊಳ್ಳಬೇಕಾಗಬಹುದು. ಆದ್ದರಿಂದ ಅಗತ್ಯ ಇರುವ ಎಲ್ಲ ವಸ್ತುಗಳನ್ನು ಸಿದ್ಧ ಮಾಡಿಟ್ಟುಕೊಂಡಿದ್ದೀರಾ ಎಂಬುದನ್ನು ಪರೀಕ್ಷೆ ಮಾಡಿಟ್ಟುಕೊಂಡಲ್ಲಿ ಉತ್ತಮ. ಇತರರ ವೈಯಕ್ತಿಕ ವಿಚಾರಗಳಿಗೆ ನಿಮ್ಮಿಂದ ಸಲಹೆ ಕೇಳಿಕೊಂಡು ಬಂದಲ್ಲಿ ಏನಾದರೂ ಕಾರಣ ನೀಡಿ, ಏನೂ ಅಭಿಪ್ರಾಯ ನೀಡದಂತೆ ಇದ್ದುಬಿಡುವುದು ಒಳ್ಳೆಯದು.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ನಿಮ್ಮ ಕೆಲಸಗಳು ವೇಗವನ್ನು ಪಡೆದುಕೊಳ್ಳಲಿವೆ. ನಿರ್ಧಾರ ಮಾಡಿಕೊಂಡು, ಎಲ್ಲ ವಿಚಾರಗಳಲ್ಲೂ ಬಿಗಿ ಪಟ್ಟನ್ನು ಹಾಕಲಿದ್ದೀರಿ. ನಿಮ್ಮ ತಂತ್ರಗಾರಿಕೆ, ಆಲೋಚನೆಗಳು ಫಲ ನೀಡಲಿವೆ. ಆನ್ ಲೈನ್ ವ್ಯವಹಾರಗಳಲ್ಲಿ ತೊಡಗಿರುವವರು, ಯೂ ಟ್ಯೂಬರ್ ಗಳು, ಟ್ಯಾಟೂ ಹಾಕುವಂಥವರು, ಮನೆಗಳಿಗೆ ತೆರಳಿ ಸೌಂದರ್ಯ ವರ್ಧಕಕ್ಕೆ ಬೇಕಾದ ಸೇವೆಗಳನ್ನು ನೀಡುವಂಥವರು ಇವರಿಗೆಲ್ಲ ಆದಾಯದಲ್ಲಿ ಏರಿಕೆ ಆಗಲಿದೆ. ವೃತ್ತಿನಿರತರಾಗಿದ್ದಲ್ಲಿ ಸ್ವಂತ ಕಚೇರಿ ಮಾಡುವ ಬಗ್ಗೆ ಗಂಭೀರವಾದ ಆಲೋಚನೆ ಮಾಡಲಿದ್ದೀರಿ. ಎಲೆಕ್ಟ್ರಿಕಲ್ ವಾಹನವನ್ನೋ ಅಥವಾ ಗೃಹಬಳಕೆ ವಸ್ತುಗಳನ್ನೋ ಖರೀದಿಸುವುದಕ್ಕೆ ಹಣಕಾಸನ್ನು ಹೊಂದಾಣಿಕೆ ಮಾಡಿಕೊಳ್ಳಲಿದ್ದೀರಿ. ಒಂದು ವೇಳೆ ಖರೀದಿಯ ಉದ್ದೇಶವೇ ಇಲ್ಲದಿದ್ದರೂ ಆಫರ್ ಗಳು ಇದೆ ಎಂಬ ಕಾರಣಕ್ಕೆ ಕೊಂಡುಕೊಳ್ಳುವ ಸಾಧ್ಯತೆಗಳಿವೆ. ಆದಾಯದಲ್ಲಿ ಹೆಚ್ಚಳ ಆಗುವುದಕ್ಕೆ ಮಾರ್ಗ ಗೋಚರ ಆಗಲಿದೆ. ಬಹಳ ಸಮಯದಿಂದ ಕಾಡುತ್ತಿದ್ದ ದೈಹಿಕ ಬಾಧೆಗಳು ನಿವಾರಣೆ ಆಗುವುದಕ್ಕೆ ಸೂಕ್ತ ವೈದ್ಯೋಪಚಾರಗಳು ದೊರೆಯಲಿವೆ. ಮದುವೆಗಾಗಿ ಪ್ರಯತ್ನ ಮಾಡುತ್ತಿರುವವರಿಗೆ ಸೂಕ್ತ ಸಂಬಂಧಗಳು ದೊರೆಯಲಿವೆ. ಉದ್ಯೋಗ ಬದಲಾವಣೆಗೆ ಪ್ರಯತ್ನ ಮಾಡುತ್ತಿರುವವರಿಗೆ ಸ್ನೇಹಿತರ ಮೂಲಕವಾಗಿ ಅವಕಾಶಗಳ ಬಗ್ಗೆ ಮಾಹಿತಿ ದೊರೆಯಲಿದೆ. ನೀವು ಬರಲಾರದು ಎಂದುಕೊಂಡಿದ್ದ ಹಣವೊಂದು ಕೈ ಸೇರುವ ಸಾಧ್ಯತೆಗಳಿವೆ. ಸಂಪೂರ್ಣವಾಗಿ ಬರುತ್ತದೆ ಅಂತಲ್ಲದಿದ್ದರೂ ಸ್ವಲ್ಪವಾದರೂ ದೊರೆಯಬಹುದು. ಪ್ರಭಾವಿಗಳ ಶಿಫಾರಸು ನಿಮ್ಮ ಪಾಲಿಗೆ ದೊರೆಯಲಿದೆ. ಕ್ರೀಡಾ ಕ್ಷೇತ್ರದಲ್ಲಿ ಇದ್ದು, ಪ್ರಾಯೋಜಕರಿಗಾಗಿ ಹುಡುಕಾಟ ನಡೆಸುತ್ತಿದ್ದಲ್ಲಿ ಅದು ದೊರೆಯುವ ಅವಕಾಶಗಳು ಹೆಚ್ಚಿದೆ. ಸಾಲ ಹೆಚ್ಚಾಗಿದ್ದು ಅಥವಾ ತುರ್ತಾಗಿ ಸಾಲದ ಹಣ ಹಿಂತಿರುಗಿಸಬೇಕಾದವರಿಗೆ ಅದು ನಿವಾರಣೆ ಮಾಡಿಕೊಳ್ಳಲು ಸೂಕ್ತ ಮಾರ್ಗೋಪಾಯಗಳು ದೊರೆಯಲಿವೆ. ಮಕ್ಕಳ ಭವಿಷ್ಯಕ್ಕಾಗಿ ಹೆಚ್ಚು ಹಣವನ್ನು ಮೀಸಲಿಡಬೇಕಾಗುತ್ತದೆ ಎಂಬ ಸುಳಿವು ದೊರೆಯಲಿದೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ಬ್ಯಾಂಕ್ ಗಳಿಂದ ಸಾಲಕ್ಕಾಗಿ ಪ್ರಯತ್ನ ಮಾಡುತ್ತಿದ್ದಲ್ಲಿ ದಾಖಲೆ ಪತ್ರಗಳನ್ನು ಹೊಂದಿಸಿಕೊಳ್ಳುವ ಪ್ರಕ್ರಿಯೆ ವೇಗವನ್ನು ಪಡೆದುಕೊಳ್ಳಲಿದೆ. ನಿಮ್ಮ ಪರವಾಗಿ ಕೆಲವರು ಶಿಫಾರಸು ಸಹ ಮಾಡುವ ಸಾಧ್ಯತೆಗಳಿವೆ. ನಿಂತ ನೀರಿನಂತಾಗಿದೆ ಜೀವನ ಅಂದುಕೊಳ್ಳುತ್ತಿದ್ದಲ್ಲಿ ದೊಡ್ಡ ಬದಲಾವಣೆಯನ್ನು ನಿರೀಕ್ಷೆ ಮಾಡಬಹುದಾಗಿದೆ. ಈ ಹಿಂದೆ ನೀವು ಬಹಳ ಆಸಕ್ತಿ ವಹಿಸಿ ಮಾಡಿದ್ದ ಕೆಲಸದ ಕಾರಣಕ್ಕೆ ಈಗ ಗೌರವ, ಮನ್ನಣೆ ಅಥವಾ ಹೊಸ ಜವಾಬ್ದಾರಿಯೊಂದು ಹುದ್ದೆಯ ಸಹಿತವಾಗಿ ದೊರೆಯುವಂತಹ ಅವಕಾಶಗಳಿವೆ. ಒಂದು ವೇಳೆ ಕುಟುಂಬದೊಳಗೆ ಆಸ್ತಿ ಪಾಲು ಮಾಡುವ ಬಗ್ಗೆ ಚರ್ಚೆ ನಡೆಯುತ್ತಾ ಇದ್ದಲ್ಲಿ ಹಾಗೂ ಆ ಬಗ್ಗೆ ನಿಮ್ಮನ್ನು ಅಭಿಪ್ರಾಯ ಹೇಳುವಂತೆ ಕೇಳಿಕೊಂಡ ಪಕ್ಷದಲ್ಲಿ ಮನಸ್ಸಿನಲ್ಲಿರುವ ಸಂಗತಿಯನ್ನೆಲ್ಲ ಹೇಳಿಕೊಳ್ಳದೆ ಸಾಧ್ಯವಾದಷ್ಟೂ ಮೌನವಾಗಿರುವುದಕ್ಕೆ ಪ್ರಯತ್ನಿಸಿ. ನಿಮ್ಮ ವಿರುದ್ಧ ಹಗೆ ಅಥವಾ ಶತ್ರುತ್ವ ಸಾಧಿಸುವುದಕ್ಕೆ ಪ್ರಯತ್ನಿಸಿದವರು ನಾನಾ ರೀತಿಯಲ್ಲಿ ಸಮಸ್ಯೆಗಳಿಗೆ ಸಿಲುಕಿಕೊಳ್ಳಲಿದ್ದಾರೆ. ಪ್ರೀತಿ- ಪ್ರೇಮದಲ್ಲಿ ಇರುವವರಿಗೆ ಪ್ರೇಮ ಸಂಬಂಧವೇ ಮುರಿದುಬೀಳುವ ಮಟ್ಟದ ತನಕ ಹೋಗಬಹುದು. ಇನ್ನೇನು ಎಲ್ಲ ಕೆಲಸ ಮುಗಿದೇ ಹೋಯಿತು, ಕೈಗೆ ಹಣ ಬಂದೇ ಬಿಟ್ಟಿತು ಎಂದುಕೊಂಡು ಬೇರೆಯವರಿಗೆ ಮಾತು ಕೊಟ್ಟಿದ್ದಲ್ಲಿ ಆ ಹಣ ಬಾರದೇ ಹೋಗಿ ಅವಮಾನದ ಪಾಲಾಗುವಂತಹ ಸಾಧ್ಯತೆ ಇದೆ. ಸಿನಿಮಾ ರಂಗದಲ್ಲಿ ಇರುವವರು, ಷೇರು ಮಾರುಕಟ್ಟೆಯಲ್ಲಿ ಕಾರ್ಯ ನಿರ್ವಹಿಸುವವರು, ಹಣಕಾಸು ಸಲಹೆಗಾರರಾಗಿ ಕೆಲಸ ಮಾಡುತ್ತಿರುವವರು, ಬ್ಯೂಟಿ ಪಾರ್ಲರ್ ನಡೆಸುತ್ತಿರುವವರು ವೃತ್ತಿಗೆ ಸಂಬಂಧಿಸಿದಂತೆ ವಿಸ್ತರಣೆಗೆ ಆಲೋಚನೆ ಮಾಡಲಿದ್ದೀರಿ. ಕುಟುಂಬ ವ್ಯವಹಾರ ನಡೆಸುತ್ತಾ ಇರುವವರು ಹೂಡಿಕೆಗಾಗಿ ಸಾಲ ಮಾಡುವಂಥ ಯೋಗ ಇದೆ. ವಿವಾಹದ ಆಚೆಗಿನ ಸಂಬಂಧಗಳ ಕಡೆಗಿನ ಸೆಳೆತ ಬಂದಲ್ಲಿ ನಿಯಂತ್ರಣ ಮಾಡಿಕೊಳ್ಳುವುದು ಬಹಳ ಮುಖ್ಯ. ರಾಜಕಾರಣದಲ್ಲಿ ಇರುವವರಿಗೆ ಗುಂಪುಗಾರಿಕೆ ಮಾಡುತ್ತಿದ್ದೀರಿ ಎಂದು ಆರೋಪಗಳು ಬರಬಹುದು.