ಜುಲೈ ಮೇಷ ಭವಿಷ್ಯ; ಶನಿ ಪ್ರಭಾವ, ಕೌಟುಂಬಿಕ ನೆಮ್ಮದಿ ಕೊರತೆ ಮತ್ತು ಜ್ಯೋತಿಷ್ಯ ಪರಿಹಾರಗಳು

ಜುಲೈನಲ್ಲಿ ಮೇಷ ರಾಶಿಯವರಿಗೆ ಆರ್ಥಿಕ ಏರಿಳಿತ, ಕೌಟುಂಬಿಕ ಕಲಹಗಳು, ಶನಿಯ ಪ್ರಭಾವದಿಂದ ಮಾನಸಿಕ ಆತಂಕ ಮತ್ತು ನಿದ್ರೆಯ ಕೊರತೆ ಎದುರಾಗಬಹುದು. ಮಂಗಳ, ಶನಿ, ಸೂರ್ಯ, ಗುರು ಗ್ರಹಗಳ ಸ್ಥಾನದಿಂದ ಮನೆಯ ಶಾಂತಿ, ಮಕ್ಕಳ ಆರೋಗ್ಯಕ್ಕೂ ಧಕ್ಕೆ ಉಂಟಾಗುವ ಸಾಧ್ಯತೆ ಇದೆ. ಹನುಮಾನ್ ಚಾಲೀಸಾ ಪಠಣ, ಮಾತಿನ ಮೇಲೆ ನಿಯಂತ್ರಣ ಮತ್ತು ಶಿವಾರಾಧನೆಯಿಂದ ಈ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು.

ಜುಲೈ ಮೇಷ ಭವಿಷ್ಯ; ಶನಿ ಪ್ರಭಾವ, ಕೌಟುಂಬಿಕ ನೆಮ್ಮದಿ ಕೊರತೆ ಮತ್ತು ಜ್ಯೋತಿಷ್ಯ ಪರಿಹಾರಗಳು
ಮಾಸ ಭವಿಷ್ಯ
Image Credit source: Getty Images
Edited By:

Updated on: Jul 10, 2026 | 11:42 AM

ಜುಲೈನಲ್ಲಿ ಮೇಷರಾಶಿಗೆ ಏನು ಅಶುಭಫಲವೆಂದು ಜ್ಯೋತಿಷ್ಯದ ಪ್ರಕಾರ ತಿಳಿದುಕೊಳ್ಳುವುದು ಮುಖ್ಯ. ಸುಖದಿಂದ ನೆಮ್ಮದಿ ಸಿಕ್ಕರೆ, ದುಃಖದಿಂದ ನೋವು ಬಾಧಿಸುವುದು. ಹಾಗಾಗಿ ಅಶುಭವನ್ನು ಬಾರದಂತೆ ನೋಡಿಕೊಳ್ಳಲು ತಿಂಗಳಿನ ಗೋಚರಫಲವನ್ನು ತಿಳಿಯುವುದು ಉತ್ತಮ. ಕುಜನ ಆಧಿಪತ್ಯದ ಮೇಷಕ್ಕೆ ಸಾಡೇ ಸಾಥ್ ನ ಪ್ರಭಾವವಿದೆ. ಶುಭಗ್ರಹರ ದೃಷ್ಟಿಯೂ ಸದ್ಯಕ್ಕೆ ಇಲ್ಲ. ಹಾಗಾಗಿ, ದೈವಾನುಕೂಲವೇ ಕೈ ಹಿಡಿದು ನಡೆಸುವ ಸ್ಥಿತಿಯಿದೆ. ಅಶ್ವಿನೀ, ಭರಣೀ, ಕೃತ್ತಿಕಾ ರಾಶಿಯವರಿಗೆ ಈ ತಿಂಗಳ ಫಲಗಳು ಹೀಗಿರಲಿವೆ.

​​ಆರ್ಥಿಕ ಏರಿಳಿತ ಮತ್ತು ಕಟು ನುಡಿ:

ನಿಮ್ಮ ರಾಶ್ಯಾಧಿಪತಿಯಾದ ಮಂಗಳನು ದ್ವಿತೀಯ ಭಾವವಾದ ವೃಷಭ ರಾಶಿಯಲ್ಲಿ ಇದ್ದಾನೆ. ಧನಸ್ಥಾನದಲ್ಲಿ ಮಂಗಳನ ಉಪಸ್ಥಿತಿಯು ಧನಲಾಭವನ್ನು ತಂದರೂ, ಅನಿರೀಕ್ಷಿತ ಕೌಟುಂಬಿಕ ವೆಚ್ಚಗಳನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲದೆ, ನಿಮ್ಮ ಮಾತಿನಲ್ಲಿ ತೀಕ್ಷ್ಣತೆ ಅಥವಾ ಕೋಪ ಹೆಚ್ಚಾಗುವುದರಿಂದ ಕುಟುಂಬದ ಸದಸ್ಯರೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಅಥವಾ ವಾದ, ವಿವಾದಗಳು ಉಂಟಾಗಬಹುದು.

ಶನಿಯ ಪ್ರಭಾವ:

ಶನಿ ಗ್ರಹವು ಮೀನ ರಾಶಿಯಲ್ಲಿ ವಕ್ರಿಯಾಗಿದ್ದಾನೆ. ಮೇಷ ರಾಶಿಯವರಿಗೆ ಇದು ಏಳು ವರೆ ಶನಿಯ ಮೊದಲ ಚರಣವಾಗಿರುತ್ತದೆ. ಇದರಿಂದಾಗಿ ಅನಾವಶ್ಯಕ ಪ್ರಯಾಣಗಳು, ನಿದ್ರೆಯ ಕೊರತೆ ಮತ್ತು ಮಾನಸಿಕ ಆತಂಕ ಎದುರಾಗಬಹುದು. ಕೈಗೆ ಬಂದ ಹಣವು ನೀರಿನಂತೆ ಖರ್ಚಾಗುವ ಸಾಧ್ಯತೆ ಇರುತ್ತದೆ.

​ಕೌಟುಂಬಿಕ ನೆಮ್ಮದಿಗೆ ಧಕ್ಕೆ:

ಸೂರ್ಯ ಮತ್ತು ಗುರು ಗ್ರಹಗಳು ಚತುರ್ಥ ಭಾವವಾದ ಕರ್ಕಾಟಕ ರಾಶಿಯಲ್ಲಿದ್ದಾರೆ, ಆದರೆ ಇಲ್ಲಿ ಗುರುವು ಅಸ್ತಂಗತನಾಗಿದ್ದಾನೆ. ಸುಖಸ್ಥಾನದಲ್ಲಿ ಗುರುವಿನ ಅಸ್ತಂಗತತ್ವ ಮತ್ತು ಸೂರ್ಯನ ಇರುವಿಕೆಯಿಂದಾಗಿ ಮನೆಯಲ್ಲಿ ಶಾಂತಿ-ನೆಮ್ಮದಿಯ ಕೊರತೆ ಕಂಡುಬರಬಹುದು. ತಾಯಿಯ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ. ಆಸ್ತಿ ಅಥವಾ ವಾಹನ ಖರೀದಿ ವಿಷಯಗಳಲ್ಲಿ ಅಡೆತಡೆಗಳು ಎದುರಾಗಬಹುದು.

​ಮಕ್ಕಳ ವಿಷಯದಲ್ಲಿ ಗೊಂದಲ:

ಶುಕ್ರ ಮತ್ತು ಕೇತು ಗ್ರಹಗಳು ಪಂಚಮ ಭಾವವಾದ ಸಿಂಹ ರಾಶಿಯಲ್ಲಿದ್ದಾರೆ. ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಕೊರತೆ ಕಾಡಬಹುದು. ಪ್ರೇಮ ಜೀವನದಲ್ಲಿ ತಪ್ಪು ತಿಳುವಳಿಕೆಗಳು ಮೂಡಬಹುದು ಮತ್ತು ಮಕ್ಕಳ ಆರೋಗ್ಯ ಅಥವಾ ಅವರ ನಡವಳಿಕೆಯು ನಿಮಗೆ ಚಿಂತೆ ಉಂಟುಮಾಡಬಹುದು.

​ಸಮಸ್ಯೆಗಳಿಗೆ ಪರಿಹಾರ:

ಹನುಮಾನ್ ಚಾಲೀಸಾ ಪಠಣ:

ಮೇಷ ರಾಶಿಯ ಅಧಿಪತಿ ಮಂಗಳನಾಗಿರುವುದರಿಂದ ಮತ್ತು ಶನಿಯ ವ್ಯಯ ಸ್ಥಿತಿಯಿರುವುದರಿಂದ, ಪ್ರತಿದಿನ ಅಥವಾ ಪ್ರತಿ ಶನಿವಾರ ಮತ್ತು ಮಂಗಳವಾರ ಹನುಮಾನ್ ಚಾಲೀಸಾವನ್ನು ಪಠಿಸುವುದು ಅತ್ಯಂತ ಶ್ರೇಷ್ಠ. ಇದು ಮಾನಸಿಕ ಧೈರ್ಯವನ್ನು ಹೆಚ್ಚಿಸಿ, ಶನಿ ದೋಷವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: ಶ್ರಾದ್ಧದಲ್ಲಿ ಮೊದಲು ಕಾಗೆಗೆ ಅನ್ನ ಯಾಕೆ ನೀಡುತ್ತಾರೆ? ಇದರ ಹಿಂದಿದೆ ಗರುಡ ಪುರಾಣ ಮತ್ತು ರಾಮಾಯಣದ ಕುತೂಹಲಕಾರಿ ಕಥೆ

​ಮಾತಿನ ಮೇಲೆ ನಿಯಂತ್ರಣ:

ದ್ವಿತೀಯದ ಮಂಗಳನ ನಕಾರಾತ್ಮಕ ಪ್ರಭಾವವನ್ನು ತಪ್ಪಿಸಲು ಯಾವುದೇ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ತಾಳ್ಮೆ ವಹಿಸಿ. ಅನಾವಶ್ಯಕ ವಾದಗಳಿಂದ ದೂರವಿರಿ.

​ಶಿವಾರಾಧನೆ:

ಪ್ರತಿ ಸೋಮವಾರ ಶಿವನಿಗೆ ಅಭಿಷೇಕ ಮಾಡಿಸುವುದು, ಶಿವನ ಸ್ತೋತ್ರ ಜಪಿಸುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗಿ ಮನೆಯಲ್ಲಿ ಸುಖ-ಶಾಂತಿ ನೆಲೆಸುತ್ತದೆ.

​ಸುಬ್ರಹ್ಮಣ್ಯ ಸ್ವಾಮಿ ಪೂಜೆ:

ಮಂಗಳನ ಶಾಂತಿಗಾಗಿ ಮಂಗಳವಾರದಂದು ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಮಾಡಿ, ಕೆಂಪು ಬಣ್ಣದ ಹೂವುಗಳನ್ನು ಸಮರ್ಪಿಸಿ.

ಈ ಎಲ್ಲ ಪರಿಹಾರೋಪಾಯಗಳನ್ನು ಶ್ರದ್ಧಾ ಭಕ್ತಿಯಿಂದ ಮಾಡಿ. ಧಾರ್ಮಿಕತೆ ಮತ್ತು ದೈವದಲ್ಲಿ ಭಕ್ತಿ ಶ್ರದ್ಧೆಗಳು ಎಷ್ಟು ದೃಢವಾಗಿ ಇರುತ್ತದೋ ಅಷ್ಟು ಬೇಗ ಶುಭಫಲ.

– ಲೋಹಿತ್ ಹೆಬ್ಬಾರ್

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us