AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಮಾರ್ಚ್ 28ರ ದಿನಭವಿಷ್ಯ

ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಮಾರ್ಚ್ 28ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಮಾರ್ಚ್ 28ರ ದಿನಭವಿಷ್ಯ
ಪ್ರಾತಿನಿಧಿಕ ಚಿತ್ರImage Credit source: hindustan.com
ಗಂಗಾಧರ​ ಬ. ಸಾಬೋಜಿ
|

Updated on: Mar 28, 2023 | 5:15 AM

Share

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಮಾರ್ಚ್ 28ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ನಿಮ್ಮ ಬಗ್ಗೆ ನಿಮಗೆ ಅಪರಿಮಿತವಾದ ಆತ್ಮವಿಶ್ವಾಸ, ಭರವಸೆ ಮೂಡುವ ದಿನ ಇದು. ಯಾವುದಾದರೂ ಪ್ರಮುಖ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಸೂಕ್ತವಾದ ದಿನ ಇದು. ಎಲ್ಲರನ್ನೂ ಜತೆಗೆ ಕರೆದುಕೊಂಡು ಮುಂದಕ್ಕೆ ಸಾಗಬೇಕು ಎಂಬ ನಿಮ್ಮ ಅಪೇಕ್ಷೆಗೆ ತಕ್ಕಂತೆ ಬೆಳವಣಿಗೆಗಳನ್ನು ಕಾಣಬಹುದು. ಆದರೆ ಹಣಕಾಸು ಖರ್ಚಿನ ವಿಚಾರದಲ್ಲಿ ಲೆಕ್ಕಾಚಾರ ತಪ್ಪಬೇಡಿ. ಗ್ಯಾಜೆಟ್ ಖರೀದಿ ಮಾಡಬೇಕು ಎಂದು ಕ್ರೆಡಿಟ್ ಕಾರ್ಡ್ ಬಳಸಿ, ಖರ್ಚು ಆಗಬಹುದು, ಜಾಗ್ರತೆ ಇರಲಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ನಿಮ್ಮ ಮನಸ್ಸಿಗೆ ಮೆಚ್ಚುವಂಥ ಜೀವನ ಸಂಗಾತಿ ದೊರೆಯುವ ಅವಕಾಶ ಹೆಚ್ಚಿದೆ. ಆದರೆ ಸ್ವಲ್ಪ ಹಿನ್ನೆಲೆ, ಅಭಿರುಚಿ ಹಾಗೂ ನಿಮ್ಮ ಮನಸ್ಥಿತಿಗೆ ಹೊಂದಾಣಿಕೆ ಆಗುತ್ತಾರೆ ಎಂದು ಪೂರ್ವಾಪರ ಚಿಂತಿಸಿ, ಮುಂದಕ್ಕೆ ಹೆಜ್ಜೆ ಇಡಿ. ಹಾಲಿನ ಪದಾರ್ಥಗಳು ಸೇವನೆ ಮಾಡುವಾಗ ಎಚ್ಚರಿಕೆ ಅಗತ್ಯ. ಲಾಂಗ್ ಡ್ರೈವ್ ಹೋಗುವ ಸಾಧ್ಯತೆ ಇದೆ. ದೇಹದ ತೂಕದ ಕಡೆಗೆ ಲಕ್ಷ್ಯ ನೀಡಿ. ದೂರ ಪ್ರಯಾಣ ಮಾಡುವಾಗ ಯಾರನ್ನು ಭೇಟಿ ಮಾಡುತ್ತೀರೋ ಅವರ ಲಭ್ಯತೆ ವಿಚಾರಿಸಿಕೊಳ್ಳಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ನಿಮ್ಮ ಮನಸ್ಸಿನಲ್ಲಿ ಇಂಥವರನ್ನೇ ಮದುವೆ ಆಗಬೇಕು ಎಂದು ನಿಶ್ಚಯಿಸಿ, ಈ ದಿನ ಮನೆಯಲ್ಲಿ ವಿಷಯ ಪ್ರಸ್ತಾವ ಮಾಡಬೇಕು ಎಂದಿದ್ದಲ್ಲಿ ಸಾಧ್ಯವಾದರೆ ಬೇರೆ ದಿನಕ್ಕೆ ಮುಂದೂಡಿ. ಏಕೆಂದರೆ ನಿಮ್ಮ ಮನೆಯಲ್ಲಿ ಒಪ್ಪಿಸುವುದು ಕಷ್ಟವಾಗುತ್ತದೆ. ಇನ್ನು ವಯೋಸಹಜ ಅನಾರೋಗ್ಯ ಸಮಸ್ಯೆ ಇರುವಂಥವರು ವೈದ್ಯರನ್ನು ಬದಲಾಯಿಸಬೇಕು ಎಂದಿದಲ್ಲಿ ಸದ್ಯಕ್ಕೆ ಬೇಡ. ಇನ್ನು ಔಷಧಗಳಿಂದ ಅಲರ್ಜಿ ಕಾಡಬಹುದು.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ನೀವಿಂದು ಭ್ರಮಾಧೀನ ಸ್ಥಿತಿಯಲ್ಲಿ ಇರುತ್ತೀರಿ. ಹೀಗಾದರೆ ಹಾಗಾದರೆ ಎಂಬ ರೆಗಳಿಂದ ದೂರ ಇರಿ. ಹಗಲುಗನಸು ಬೇಡವೇ ಬೇಡ, ವಾಸ್ತವದಲ್ಲಿ ಏನು ಸಾಧ್ಯವೋ ಅದನ್ನು ಒಪ್ಪಿಕೊಳ್ಳಿ. ನಿಮ್ಮ ಭಾವನೆ, ಅಸಹಾಯಕತೆಯನ್ನು ಬಳಸಿಕೊಂಡು ಲಾಭ ಪಡೆಯುವುದಕ್ಕೆ ಹವಣಿಸುವವರಿಗೆ ಬಲಿ ಆಗಬೇಡಿ. ನಿರಂತರ ಅಧ್ಯಯನ ಅಥವಾ ಗಳಿಸಿಕೊಂಡಂಥ ಅನುಭವವು ಈ ಸಂದರ್ಭದಲ್ಲಿ ನಿಮ್ಮನ್ನು ಕಾಪಾಡಲಿದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ನಿಮ್ಮ ಚರ್ಮದ ಆರೈಕೆ ಕಡೆಗೆ ಲಕ್ಷ್ಯ ಕೊಡಿ. ಹುಳು- ಹುಪ್ಪಟದಿಂದ ಕಡಿತ, ಅಥವಾ ಯಾವುದಾದರೂ ಕ್ರೀಮ್- ಲೋಷನ್‌ನಿಂದ ಅಲರ್ಜಿ ಇಂಥವುಗಳಿಂದ ಚರ್ಮ ಸಮಸ್ಯೆ ಆಗಬಹುದು. ವಿರಾಮ ಇದೆ ಅಂತಾದರೆ ಅಧ್ಯಾತ್ಮ ಚಿಂತನೆಯ ಕೆಲವು ಆಡಿಯೋ ಅಥವಾ ವಿಡಿಯೋಗಳನ್ನು ಕೇಳಿ- ನೋಡಿ. ಸುಬ್ರಹ್ಮಣ್ಯ ಅಥವಾ ಕುಮಾರಸ್ವಾಮಿ ಚಿತ್ರವನ್ನು ನಿಮ್ಮ ಫೋನ್‌ನ ಸ್ಕ್ರೀನ್‌ಸೇವರ್ ಅಥವಾ ಡಿಪಿ ಆಗಿ ಮಾಡಿಕೊಳ್ಳಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿಯನ್ನು ವಹಿಸಿ. ಒಂದು ಕಡೆ ಪಿತ್ರಾರ್ಜಿತ ಆಸ್ತಿ ವಿಚಾರ, ಭೂಮಿಗೆ ಸಂಬಂಧಿಸಿದ ವ್ಯಾಜ್ಯ ಇತ್ಯರ್ಥ ಆಗುವ ಅವಕಾಶಗಳಂತೂ ಇದ್ದೇ ಇದೆ. ಇದರ ಜತೆಗೆ ಈಗಾಗಲೇ ಕೋರ್ಟ್- ಕಟ್ಲೆಗಳಲ್ಲಿ ಇರುವ ವ್ಯಾಜ್ಯಗಳು ಸಂಧಾನದ ಮೂಲಕ ಪರಿಹರಿಸಿಕೊಳ್ಳುವ ಮಾರ್ಗ ದೊರೆಯಲಿದೆ. ಸಂಬಂಧಿಕರು ನಿಮ್ಮ ಬಳಿ ಸಾಲ ಕೇಳಿಕೊಂಡು ಬರುವ ಸಾಧ್ಯತೆ ಇದೆ. ಇದರಿಂದ ಮನೆಯಲ್ಲಿ ಭಿನ್ನಾಭಿಪ್ರಾಯಗಳು ಮೂಡಬಹುದು.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಈ ದಿನ ಹಳೇ ದ್ವೇಷವೋ ಅಥವಾ ನಿಮ್ಮನ್ನು ಅವಮಾನಿಸಿದವರಿಗೆ ಬದಲು ಕೊಡಬೇಕು ಎಂಬ ಉಮೇದಿಯೋ ಬರುತ್ತದೆ. ಸಾಧ್ಯವಾದಷ್ಟೂ ತಪ್ಪುಗಳನ್ನು ಕಂಡೂ ಕಾಣದವರಂತೆ ಇದ್ದುಬಿಡಿ. ಇಲ್ಲದಿದ್ದಲ್ಲಿ ಬರೀ ತಪ್ಪುಗಳನ್ನು ಹೇಳೋದೇ ಆಯಿತು ಎಂದು ನಿಮ್ಮನ್ನು ಬ್ರ್ಯಾಂಡ್ ಮಾಡುವ ಅಪಾಯ ಇದೆ. ಆಂಜನೇಯ ದೇವಸ್ಥಾನಕ್ಕೆ ತೆರಳಿ, ಹತ್ತು ನಿಮಿಷ ಕೂತಿದ್ದು ಬನ್ನಿ. ವಸ್ತ್ರಾಭರಣ ಗಿಫ್ಟ್ ಆಗಿ ನೀಡಲು ಹಣ ಖರ್ಚು ಮಾಡಲಿದ್ದೀರಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಹೊಸದಾಗಿ ಕ್ರೆಡಿಟ್ ಕಾರ್ಡ್‌ಗೆ ಅಪ್ಲೈ ಮಾಡಬೇಕು ಎಂದು ಇದ್ದಲ್ಲಿ ಈ ದಿನದ ಮಟ್ಟಿಗೆ ಮುಂದೂಡಿ. ನಿಮ್ಮ ಮೊಬೈಲ್‌ನಲ್ಲಿ ಇರುವ ಡೇಟಾ ಬಗ್ಗೆ ಎಚ್ಚರಿಕೆ ವಹಿಸುವುದು ಮುಖ್ಯ. ನಿಮ್ಮ ವೈಯಕ್ತಿಕ ಡೇಟಾ, ಫೋಟೋ, ಮಾಹಿತಿಗಳನ್ನು ಯಾರೂ ಕಳುವು ಮಾಡದಂತೆ ನೋಡಿಕೊಳ್ಳಿ. ಅಪರಿಚಿತ ಮೆಸೇಜ್, ಮೇಲ್‌ಗಳನ್ನು ತೆರೆಯುವ ಮುನ್ನ, ನಿಮ್ಮ ಗ್ಯಾಜೆಟ್‌ಗಳನ್ನು ಬೇರೆಯವರಿಗೆ ಕೊಡುವವರಿದ್ದಲ್ಲಿ ಜಾಗ್ರತೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ನಿಮ್ಮ ಮನೆಗಾಗಲೀ, ನಿಮಗಾಗಲೀ ಏನು ಬೇಕು ಮತ್ತು ಎಷ್ಟು ಬೇಕು ಎಂಬ ಸ್ಪಷ್ಟತೆ ಇಟ್ಟುಕೊಳ್ಳಿ. ಕೊಂಡು ತಂದ ಮೇಲೆ ಸುಮ್ಮನಿದ್ದಿದ್ದರೆ ಆಗುತ್ತಿತ್ತು ಎಂದುಕೊಂಡು ಹಳಹಳಿಸಬೇಡಿ. ಯಾರದೋ ಮೇಲಿನ ಸವಾಲಿಗೋ ಪ್ರತಿಷ್ಠೆಗೋ ಖರ್ಚು ಮಾಡುವುದಕ್ಕೆ ಹೋಗದಿರಿ. ನಿಮಗೆ ಸಮಯ ದೊರೆತಲ್ಲಿ, ನಂಬಿಕೆ ಇದ್ದಲ್ಲಿ ಹತ್ತು ನಿಮಿಷ ಪ್ರಶಾಂತವಾದ ಸ್ಥಳದಲ್ಲಿ ಓಂಕಾರ ಧ್ಯಾನ ಮಾಡಿ.

ಲೇಖನ- ಎನ್‌.ಕೆ.ಸ್ವಾತಿ