ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಅಕ್ಟೋಬರ್ 10ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಒಳಿತನ್ನು ಬಯಸುವವರು ಯಾರು ಅಥವಾ ಕೆಡುಕನ್ನು ಬಯಸುವವರು ಯಾರು ಎಂದು ತಿಳಿಯಲಾರದಂತಹ ಗೊಂದಲದ ಸನ್ನಿವೇಶದಲ್ಲಿ ಈ ದಿನ ನೀವು ಇರಲಿದ್ದೀರಿ. ಸುಖಾ ಸುಮ್ಮನೆ ಯಾರೊಂದಿಗೂ ವಾದ- ವಾಗ್ವಾದಕ್ಕೆ ಇಳಿಯಬೇಡಿ. ನಮ್ಮಿಬ್ಬರಲ್ಲಿ ಯಾರದು ಸರಿ ಎಂಬುದನ್ನು ಸಾಬೀತು ಮಾಡಲೇಬೇಕು ಎಂಬ ರೀತಿಯ ಹಟ ಯಾವುದೇ ಕಾರಣಕ್ಕೂ ಬೇಡ. ಮುಖ್ಯ ವಿಷಯಗಳನ್ನು ಸಾಧ್ಯವಾದಷ್ಟೂ ಮೌಖಿಕವಾಗಿ ಹೇಳುವುದಕ್ಕಿಂತ ಲಿಖಿತವಾಗಿ ಹೇಳುವುದು ಉತ್ತಮ. ಮೇಲಧಿಕಾರಿಗಳು ಅಥವಾ ಸರ್ಕಾರದ ಆಯಕಟ್ಟಿನ ಹುದ್ದೆಯಲ್ಲಿ ಇರುವವರ ಜೊತೆಗೆ ವ್ಯವಹರಿಸುತ್ತಿದ್ದೀರಿ ಎಂದಾದಲ್ಲಿ ದಾಖಲೆಗಳನ್ನು ಜೊತೆಯಲ್ಲಿ ಇಟ್ಟುಕೊಳ್ಳಿ.
ಊಟ ತಿಂಡಿ ವಿಚಾರದಲ್ಲಿಯೇ ಮನೆಯಲ್ಲಿ ಒಂದು ಬಗೆಯ ಗೊಂದಲದ ವಾತಾವರಣ ಸೃಷ್ಟಿಯಾಗಲಿದೆ. ಇದೇ ಕಾರಣಕ್ಕೆ ಒಂದು ವೇಳೆ ಬೇಸರ ಅಥವಾ ಮನಸ್ತಾಪ ಉಂಟಾದಲ್ಲಿ ಕೂಗಾಡುವುದಕ್ಕೆ, ಕಿರುಚಾಡುವುದಕ್ಕೆ ಹೋಗಬೇಡಿ. ನೀವು ಬಹಳ ಶ್ರಮಪಟ್ಟು ತಂದಿದ್ದ ವಸ್ತು ಒಂದನ್ನು ಇತರರು ಬಹಳ ತುಚ್ಛವಾಗಿ ಕಾಣುತ್ತಿದ್ದಾರೆ ಎಂದು ನಿಮಗೆ ಅನಿಸಲಿದೆ. ನಿಮ್ಮ ಕೈಕೆಳಗೆ ಕೆಲಸ ಮಾಡುವಂಥವರು ಮೊದಲಿನಂತೆ ಗೌರವ ನೀಡುತ್ತಿಲ್ಲ ಅಂತಲೂ ಅನಿಸಲಿದೆ. ನೆನಪಿಡಿ, ಇದು ಈ ದಿನದ ಅನ್ನಿಸಿಕೆ ಮಾತ್ರ. ಇದನ್ನೇ ನೆಪವಾಗಿಟ್ಟುಕೊಂಡು ಗಂಭೀರವಾದ ಕ್ರಮಗಳನ್ನೇನಾದರೂ ತೆಗೆದುಕೊಂಡರೆ ಆ ನಂತರ ಪರಿತಪಿಸುವಂತಾಗುತ್ತದೆ. ಮಾತು ಬಲ್ಲವನಿಗೆ ಜಗಳವಿಲ್ಲ ಎಂಬುದನ್ನು ಈ ದಿನ ಚೆನ್ನಾಗಿ ನೆನಪಿಟ್ಟುಕೊಳ್ಳಿ.
ಸೈಟು ಖರೀದಿಗೋ ಮನೆ ಕಟ್ಟುವುದಕ್ಕೋ ಸಾಲಕ್ಕಾಗಿ ಪ್ರಯತ್ನ ಪಡುತ್ತಿದ್ದೀರಿ ಎಂದಾದಲ್ಲಿ ಈ ದಿನ ಬಹಳ ಒಳ್ಳೆಯ ಬೆಳವಣಿಗೆಗಳು ಆಗಲಿವೆ. ಮುಖ್ಯವಾಗಿ ಹಣಕಾಸಿನ ಅಡ್ಡಿ, ಆತಂಕಗಳು ದೂರ ಆಗಲಿವೆ. ಇಷ್ಟು ಸಮಯ ನಿಮ್ಮಲ್ಲಿ ಇದ್ದ ಆತ್ಮವಿಶ್ವಾಸದ ಕೊರತೆ ದೂರ ಆಗಲಿದೆ. ಸ್ವಂತ ವ್ಯಾಪಾರ, ವ್ಯವಹಾರ ಆರಂಭ ಮಾಡಬೇಕು ಅಂದುಕೊಳ್ಳುತ್ತಾ ಇರುವವರಿಗೆ ಸ್ನೇಹಿತರಿಂದ, ಸಂಬಂಧಿಗಳಿಂದ ದೊಡ್ಡ ಮಟ್ಟದಲ್ಲಿ ನೆರವು ಒದಗಿ ಬರಲಿದೆ. ನಿಮ್ಮನ್ನು ಹೇಗಾದರೂ ಮಾಡಿ ದಿಕ್ಕು ತಪ್ಪಿಸಬೇಕು ಎಂದು ಪ್ರಯತ್ನ ಮಾಡುತ್ತಿರುವವರು ತಾವೇ ಸಂಕಷ್ಟದಲ್ಲಿ ಸಿಲುಕಿಕೊಳ್ಳಲಿದ್ದಾರೆ. ನಿಮ್ಮ ಸ್ನೇಹಿತರ ವಲಯದಲ್ಲಿ ಯಾರಿಗೆ ಬಹಳ ಎಚ್ಚರಿಕೆಯಿಂದ ಇರಿ ಎಂದು ನೀವು ಹೇಳಿರುತ್ತೀರೋ ಅವರಿಗೆ ನಿಮ್ಮ ಮಾತಿನಂತೆ ಬೆಳವಣಿಗೆಗಳಾಗಿ, ನಿಮ್ಮ ಕಡೆಗೆ ಬೆರಗಿನಿಂದ ನೋಡಲಿದ್ದಾರೆ.
ಈ ದಿನ ನಿಮ್ಮಲ್ಲಿ ಒಂದು ಆಕರ್ಷಣಾ ಶಕ್ತಿ ಇರಲಿದೆ. ಆ ಕಾರಣದಿಂದಾಗಿ ಎಂಥ ಕಷ್ಟದ ಕೆಲಸವನ್ನಾದರೂ ಮಾಡಿ, ಮುಗಿಸಬಲ್ಲಂತಹ ಸಾಮರ್ಥ್ಯ ನಿಮ್ಮಲ್ಲಿ ಇರಲಿದೆ. ಸಿನಿಮಾ, ರಂಗಭೂಮಿ ಇವೇ ಮೊದಲಾದ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೊಸ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ. ನಿಮ್ಮ ಜೊತೆ ಕೆಲಸ ಮಾಡುವವರು ನಿಮ್ಮನ್ನು ಒಂಟಿ ಮಾಡಿ, ಆತಂಕಕ್ಕೆ ದೂಡಬೇಕು ಎಂದು ಮಾಡುವ ಪ್ರಯತ್ನಗಳನ್ನು ನಿಮಗೆ ಸಾಧಕವಾಗಿ ಮಾಡಿಕೊಳ್ಳುವಲ್ಲಿ ಸಫಲರಾಗುತ್ತೀರಿ. ನೀವು ಬಹಳ ಸಮಯದಿಂದ ಹುಡುಕುತ್ತಿದ್ದ ವ್ಯಕ್ತಿ, ವಸ್ತು ಅಥವಾ ವಿಚಾರ ಈ ದಿನ ತಿಳಿದು ಬರಲಿದೆ. ಕಮಿಷನ್ ವ್ಯವಹಾರವನ್ನು ಮಾಡುತ್ತಿರುವವರಿಗೆ ಆದಾಯದಲ್ಲಿ ಹೆಚ್ಚಳ ಮಾಡಿಕೊಳ್ಳುವುದಕ್ಕೆ ಅವಕಾಶಗಳು ತೆರೆದುಕೊಳ್ಳಲಿವೆ.
ನೀವು ಬಹಳ ಇಷ್ಟಪಡುವಂತಹ, ಗೌರವಿಸುವಂತಹ ವ್ಯಕ್ತಿಗಳಿಂದಲೇ ಬೇಸರವಾಗುವಂತಹ ಸನ್ನಿವೇಶಗಳು ಸೃಷ್ಟಿಯಾಗಲಿವೆ. ನೀವು ಆಡದ ಮಾತುಗಳನ್ನು ಸಹ ನೀವೇ ಆಡಿದ್ದೀರಿ ಎಂದು ಅಪರಾಧಿ ಸ್ಥಾನದಲ್ಲಿ ಸ್ನೇಹಿತರೇ ನಿಲ್ಲಿಸಲಿದ್ದಾರೆ. ಹಣಕಾಸಿನ ವಿಚಾರದಲ್ಲಿ ಸಣ್ಣದಾದರೂ ಮನಸ್ತಾಪವನ್ನು ಮಾಡಿಕೊಳ್ಳಲಿದ್ದೀರಿ. ಅಗತ್ಯವೇ ಇರದಿದ್ದರೂ ವಿಲಾಸಿ ವಸ್ತುವೊಂದನ್ನು ಖರೀದಿಸಿ ಸಾಲವನ್ನು ಮಾಡಿಕೊಳ್ಳುವಂತಹ ಸನ್ನಿವೇಶ ಸೃಷ್ಟಿ ಆಗಲಿದೆ. ಇತರರ ಪ್ರೀತಿ, ಪ್ರೇಮದ ವಿಚಾರಗಳಲ್ಲಿ ಸಲಹೆ ನೀಡುವುದಕ್ಕೆ ಹೋಗಬೇಡಿ. ನೀವು ಮಾಡಿದ ಕೆಲಸದಲ್ಲಿ ಯಾರಾದರೂ ತಪ್ಪುಗಳನ್ನು ತೋರಿಸಿದಲ್ಲಿ ಅವರ ಮೇಲೆ ಹಗೆ ಸಾಧಿಸುವುದಕ್ಕೆ ಮುಂದಾಗದೆ ತಪ್ಪು ತಿದ್ದುಕೊಳ್ಳುವುದಕ್ಕೆ ಪ್ರಯತ್ನಿಸಿ.
ದೊಡ್ಡ ಸಮಸ್ಯೆ ಆಗಬಹುದು ಎಂದುಕೊಂಡಿದ್ದ ವಿಚಾರ ಅಥವಾ ವಿಷಯ ಒಂದು ನಿಮಗೆ ಸಾಧಕವಾಗಿ ಪರಿಣಮಿಸಬಹುದಾದ ಸನ್ನಿವೇಶ ಸೃಷ್ಟಿಯಾಗಲಿದೆ. ನೀವು ಮಾಡುತ್ತಿರುವುದು ಸರಿ ಎಂದು ಖಾತ್ರಿಯಾದ ಮೇಲೆ ಯಾವುದಕ್ಕೂ ಹೆದರಬೇಡಿ. ಆದರೆ ನೀವು ಇದನ್ನು ಹೀಗೆ ಮಾಡಬೇಕು ಎಂದುಕೊಂಡಿದ್ದು ಯಾಕೆ ಎಂಬುದನ್ನು ಸ್ಪಷ್ಟ ಧ್ವನಿಯಲ್ಲಿ ಹೇಳುವುದು ತುಂಬಾ ಮುಖ್ಯವಾಗುತ್ತದೆ. ನಿಮಗಿಂತ ವಯಸ್ಸಿನಲ್ಲಿ ಹಿರಿಯರು, ಅನುಭವಸ್ಥರು ಆಗಿರುವವರಿಗೆ ಕೂಡ ಹೊಳೆಯದಂತಹ ಅನೇಕ ವಿಚಾರಗಳು ಈ ದಿನ ನಿಮಗೆ ಸ್ಫುಟವಾಗಿ ಗೋಚರಿಸಲಿದೆ. ಮುಖ್ಯ ಕೆಲಸಗಳಿಗಾಗಿ ತೆರಳುವ ಮುನ್ನ ಈ ದಿನ ಭೂವರಾಹ ಸ್ವಾಮಿ ದೇವರನ್ನು ಮನಸ್ಸಿನಲ್ಲಿ ಸ್ಮರಣೆ ಮಾಡಿ ಅಥವಾ ಪೂಜಿಸಿ ಆ ನಂತರ ಹೊರಟರೆ ಉತ್ತಮ ಫಲಗಳನ್ನು ಕಾಣುತ್ತೀರಿ.
ಹಣಕಾಸಿನ ವಿಚಾರಕ್ಕೆ ಬಹಳ ಒತ್ತಡದಲ್ಲಿ ಇರುವಂಥವರಿಗೆ ಅದರಿಂದ ಹೊರಬರುವಂತಹ ಮಾರ್ಗ, ಉಪಾಯಗಳು ಗೋಚರ ಆಗಲಿವೆ. ಸ್ವಂತ ವ್ಯಾಪಾರ, ಉದ್ಯಮ ಮಾಡಿಕೊಂಡು ಇರುವವರಿಗೆ ವಿಸ್ತರಣೆಯ ಅವಕಾಶಗಳು ದೊರೆಯಲಿವೆ. ಇದಕ್ಕಾಗಿ ನಿಮ್ಮಲ್ಲಿ ಕೆಲವರು ಬ್ಯಾಂಕ್ ಗಳಲ್ಲಿ ಸಾಲಕ್ಕೆ ಪ್ರಯತ್ನ ಪಡಲಿದ್ದೀರಿ. ಇನ್ನು ನಿಮ್ಮ ಸಂಬಂಧಿಕರು ಅಥವಾ ಸ್ನೇಹಿತರು ಹಣಕಾಸಿನ ನೆರವನ್ನು ನೀಡುವ ಸಾಧ್ಯತೆಗಳು ಸಹ ಇವೆ. ನೀವು ಮರೆತೇ ಹೋದಂತಹ ಅವಕಾಶವೊಂದು ಹುಡುಕಿಕೊಂಡು ಬರುವ ಸಾಧ್ಯತೆಗಳಿವೆ. ಅದನ್ನು ಒಪ್ಪಿಕೊಳ್ಳಬೇಕೋ ಅಥವಾ ಬೇಡವೋ ಎಂಬ ಗೊಂದಲಗಳು ಏನಾದರೂ ಇದ್ದಲ್ಲಿ ಹಿರಿಯರು ಅಥವಾ ಅನುಭವಗಳ ಸಲಹೆಯನ್ನು ಪಡೆದುಕೊಳ್ಳಿ.
ಯಾರೋ ಮಾಡಿದ ತಪ್ಪಿಗೆ ನೀವು ತಲೆ ಕೊಡಬೇಕಾದಂಥ ಸನ್ನಿವೇಶ ಎದುರಾಗಲಿದೆ. ಈ ದಿನ ನೀವು ಯಾರ ಜೊತೆಗೆ ಗುರುತಿಸಿಕೊಳ್ಳುತ್ತೀರಿ ಎಂಬುದರ ಮೇಲೆ ನಿಮ್ಮ ನೆಮ್ಮದಿ ನಿರ್ಧಾರವಾಗಲಿದೆ. ಮೇಲುನೋಟಕ್ಕೆ ಒಬ್ಬ ವ್ಯಕ್ತಿ ಹೇಗೆ ಕಾಣುತ್ತಾರೆ ಎಂಬುದನ್ನೇ ಆಧಾರವಾಗಿಟ್ಟುಕೊಂಡು ನಂಬಿದರೆ ಆ ನಂತರ ಪರಿತಪಿಸುವಂತಾಗುತ್ತದೆ. ನಿಮ್ಮಲ್ಲಿ ಕೆಲವರಿಗೆ ಈ ದಿನ ರಕ್ತದೊತ್ತಡದಲ್ಲಿ ಏರುಪೇರು ಆಗಬಹುದು. ಇದರಿಂದಾಗಿ ಕಣ್ಣು ಕತ್ತಲೆ ಬರುವುದು ತಲೆಸುತ್ತಿದಂತಾಗುವುದು ಇಂಥ ಅನುಭವಗಳು ಆಗಲಿವೆ. ಎತ್ತರದ ಸ್ಥಳಗಳಲ್ಲಿ ನಿಂತು ಕೆಲಸ ಮಾಡುವಂಥವರು ಬಹಳ ಜಾಗ್ರತೆಯಿಂದ ಇರಬೇಕು. ದಿಢೀರ್ ಪ್ರಯಾಣಗಳು ಬಂದಲ್ಲಿ ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಬೇಡಿ.
ಈ ದಿನ ನಿಮಗೆ ದೊರೆಯುವಂತಹ ಅವಕಾಶವೋ ಜವಾಬ್ದಾರಿಯೋ ಒಳ್ಳೆಯದಕ್ಕೋ ಅಥವಾ ಕೆಟ್ಟದ್ದಕ್ಕೋ ಎಂಬುದನ್ನು ನಿರ್ಧರಿಸುವುದಕ್ಕೆ ಬಹಳ ಸಮಯ ಬೇಕಾಗುತ್ತದೆ. ಇತರರು ಹೇಳಿದ್ದಾರೆ, ಹಣ ನೀಡುತ್ತಾರೆ ಅಂತಲೋ ಅಥವಾ ಯಾವುದೋ ನಿರ್ದಿಷ್ಟ ಕೆಲಸದಲ್ಲಿ ಸಹಾಯ ಮಾಡಿಯೇ ಮಾಡುತ್ತಾರೆ ಅಂತ ನೆಚ್ಚಿಕೊಂಡು ಗಂಭೀರವಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಹೋಗಬೇಡಿ. ಸಹೋದ್ಯೋಗಿಗಳು ಅಥವಾ ಮೇಲಧಿಕಾರಿಗಳು ಉದ್ಯೋಗ ಸ್ಥಳದಲ್ಲಿ ಯಾವ ಕೆಲಸವನ್ನು ಒಪ್ಪಿಸುತ್ತಾರೆ ಅದನ್ನು ಶ್ರದ್ಧಾ- ಭಕ್ತಿಯಿಂದ ಮಾಡಿದಲ್ಲಿ ಒಳ್ಳೆಯ ಫಲಿತವನ್ನು ಈ ದಿನ ಕಾಣಲಿದ್ದೀರಿ. ಹೂಡಿಕೆಗೆ ಸಂಬಂಧಪಟ್ಟಂತಹ ನಿರ್ಧಾರಗಳು ಇದ್ದಲ್ಲಿ ಈ ದಿನ ಆ ಮುಂದಕ್ಕೆ ಹಾಕುವುದು ಉತ್ತಮ.
ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ