Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಸೆಪ್ಟೆಂಬರ್ 2ರ ದಿನಭವಿಷ್ಯ
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಸೆಪ್ಟೆಂಬರ್ 2ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಸೆಪ್ಟೆಂಬರ್ 2ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಈ ದಿನ ಒಂದು ಬಗೆಯ ಉತ್ಸಾಹ ನಿಮ್ಮಲ್ಲಿ ಇರಲಿದೆ. ನಿಮ್ಮ ದಿರಿಸು, ಒಡವೆ, ವಸ್ತುಗಳು ಪ್ರತಿಯೊಂದರಲ್ಲೂ ಬಹಳ ಒಪ್ಪ- ಓರಣವಾಗಿ ಸಿದ್ಧವಾಗಿ, ಕನಿಷ್ಠ ಪಕ್ಷ ನಿಮ್ಮ ಮನೆಯ ಹತ್ತಿರದ ಮಾಲ್ ಗಾದರೂ ಹೋಗಿಬರಲಿದ್ದೀರಿ. ಪ್ರೀತಿ- ಪ್ರೇಮದಲ್ಲಿ ಇರುವಂಥವರಿಗಂತೂ ಬಹಳ ಸಂತಸದ ದಿನ ಇದಾಗಿರಲಿದೆ. ಪ್ರೀತಿಪಾತ್ರರಾದವರು ನಿಮಗೆ ಉಡುಗೊರೆಗಳನ್ನು ಕೊಡುವ ಸಾಧ್ಯತೆ ಸಹ ಇದೆ. ಇನ್ನು ಮ್ಯೂಚುವಲ್ ಫಂಡ್, ಷೇರುಗಳು ಇಂಥದ್ದರಲ್ಲಿ ಹೂಡಿಕೆ ಮಾಡಿದ್ದವರಿಗೆ ಲಾಭ ಬರುವಂಥ ಯೋಗ ಇದೆ. ಈ ದಿನದ ದ್ವಿತೀಯಾರ್ಧದಲ್ಲಿ ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ. ಅದರಲ್ಲೂ ಪಾರ್ಟಿಯೇ ಆಗಬಹುದು ಅಥವಾ ಅಂಥದ್ದೊಂದು ಸನ್ನಿವೇಶವಂತೂ ಇರಲಿದೆ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ನಿಮ್ಮ ಮನಸ್ಸಿಗೆ ಬಹಳ ಹತ್ತಿರವಾದವರು, ಪ್ರಿಯವಾದವರನ್ನು ಭೇಟಿ ಆಗುವ, ಉತ್ತಮ ಸಮಯ ಕಳೆಯುವಂಥ ಯೋಗ ನಿಮ್ಮ ಪಾಲಿಗೆ ಇದೆ. ನಿಮ್ಮಲ್ಲಿ ಕೆಲವರು ಈ ದಿನ ಹೋಟೆಲ್, ರೆಸ್ಟೋರೆಂಟ್, ಸಿನಿಮಾ ಅಥವಾ ಯಾವುದಾದರೂ ಮನರಂಜನೆಗಾಗಿ ಹಣವನ್ನು ಖರ್ಚು ಮಾಡಲಿದ್ದೀರಿ. ತಿಂಗಳಾ ತಿಂಗಳು ಆಗುವ ಖರ್ಚುಗಳು, ಸಾಲ ಮರುಪಾವತಿ ಇತ್ಯಾದಿಗಳ ಬಗ್ಗೆ ಯೋಜನೆಗಳನ್ನು ರೂಪಿಸಿಕೊಳ್ಳಲಿದ್ದೀರಿ. ಸ್ನೇಹಿತರ ಸಹಾಯದಿಂದ ಹೊಸ ವ್ಯಾಪಾರ- ವ್ಯವಹಾರದ ಬಗ್ಗೆ ಯೋಜನೆ ರೂಪಿಸುವಂಥ ಸಾಧ್ಯತೆ ಇದೆ. ದುರ್ಗಾದೇವಿಯ ದೇವಸ್ಥಾನಕ್ಕೆ ಅಥವಾ ಮನೆಯಲ್ಲಿ ದುರ್ಗಾ ದೇವಿಯ ವಿಗ್ರಹ ಇದ್ದರೆ ಅದಕ್ಕೆ ಹೂವನ್ನು ಸಮರ್ಪಣೆ ಮಾಡಿ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ವ್ಯವಹಾರದ ವಿಚಾರವಾಗಿ ಹೂಡಿಕೆ ಮಾಡುವುದಕ್ಕೋ ಅಥವಾ ನೀವು ಈಗಾಗಲೇ ಮಾಡುತ್ತಿರುವ ವ್ಯಾಪಾರದಲ್ಲಿ ತಾವೂ ಪಾಲುದಾರರು ಆಗುವ ಉದ್ದೇಶಕ್ಕೋ ಕೆಲವರು ನಿಮ್ಮನ್ನು ಭೇಟಿ ಆಗಬಹುದು ಅಥವಾ ಫೋನ್ ಮೂಲಕ ಸಂಪರ್ಕಿಸುವ ಸಾಧ್ಯತೆಗಳಿವೆ. ಈ ವಿಚಾರದಲ್ಲಿ ಕುಟುಂಬಸ್ಥರ ಆಲೋಚನೆ ಒಂದು ಬಗೆಯಲ್ಲೂ ನಿಮ್ಮ ಚಿಂತನೆ ಇನ್ನೊಂದು ದಿಸೆಯಲ್ಲೂ ಸಾಗುವ ಕಾರಣಕ್ಕೆ ಗೊಂದಲ ಹೆಚ್ಚಾಗುತ್ತದೆ. ನಿಮ್ಮಲ್ಲಿ ಕೆಲವರಿಗೆ ಕಣ್ಣಿಗೆ ಸಂಬಂಧಿಸಿದಂತೆ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಈಗಾಗಲೇ ಇದ್ದಲ್ಲಿ ಅದು ಉಲ್ಬಣ ಆಗುವ ಅವಕಾಶಗಳಿವೆ. ಆದ್ದರಿಂದ ಕೂಡಲೇ ಸೂಕ್ತ ಔಷಧೋಪಚಾರಗಳನ್ನು ಮಾಡಿಕೊಳ್ಳುವುದು ಉತ್ತಮ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ನಿಮ್ಮ ಅನುಭವ, ಜ್ಞಾನ, ತಿಳಿವಳಿಕೆ ಏನೇನೂ ಅಲ್ಲ ಎಂಬ ರೀತಿಯಲ್ಲಿ ಮೇಲಧಿಕಾರಿಗಳ ವರ್ತನೆ ಇರಲಿದೆ. ಈ ದಿನ ಪ್ರಮುಖವಾದಂಥ ಭೇಟಿ, ಚರ್ಚೆಗಳು ಇದ್ದಲ್ಲಿ ಸಿದ್ಧತೆಯನ್ನು ಚೆನ್ನಾಗಿ ಮಾಡಿಕೊಳ್ಳಿ. ಇನ್ನು ನೀವು ಯಾರನ್ನು ಭೇಟಿ ಆಗುತ್ತೀರೋ ಅವರಿಗೆ ಹೆಚ್ಚು ಮಾತನಾಡುವುದಕ್ಕೆ ಅವಕಾಶವನ್ನು ನೀಡಿ. ಒಂದು ವೇಳೆ ಅಭಿಪ್ರಾಯ ಭೇದಗಳು ಇದ್ದಲ್ಲಿ ಅದನ್ನು ವಾಗ್ವಾದದ ಮಟ್ಟಕ್ಕೆ ತೆಗೆದುಕೊಂಡು ಹೋಗದಿರಿ. ಸೋದರ ಸಂಬಂಧಿಗಳು ನಿಮ್ಮ ಬಳಿ ನೆರವು ಕೇಳಿಕೊಂಡು ಬರುವಂಥ ಸಾಧ್ಯತೆಗಳಿವೆ. ಇನ್ನು ಮನೆ ನಿರ್ಮಾಣದಲ್ಲಿ ತೊಡಗಿರುವವರು ಬಜೆಟ್ ಕೈ ಮೀರಿ ಹೋಗುತ್ತದೆ ಎಂಬ ಕಾರಣಕ್ಕೆ ಕೆಲವು ಯೋಜನೆ- ಆಲೋಚನೆಗಳನ್ನು ಕೈ ಬಿಡಲಿದ್ದೀರಿ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ನಿಮ್ಮ ಮಾತಿನಲ್ಲಿ ಒಂದು ಬಗೆಯ ಆಕರ್ಷಣೆ ಇರುತ್ತದೆ. ಮದುವೆಗಾಗಿ ಪ್ರಯತ್ನ ಮಾಡುತ್ತಿರುವ ವಿವಾಹ ವಯಸ್ಕರಿಗೆ ಸೂಕ್ತ ಸಂಬಂಧಗಳು ದೊರೆಯುವಂಥ ಸಾಧ್ಯತೆ ಇದೆ. ಈ ಹಿಂದೆ ನೀವು ಪಟ್ಟ ಕಷ್ಟದ ಫಲವಾಗಿ ದೊರೆತ ಯಶಸ್ಸನ್ನು ಗುರುತಿಸಿ, ನಿಮಗೆ ಉದ್ಯೋಗದ ಆಫರ್ ನೀಡಬಹುದು. ಸಂಬಳದ ವಿಚಾರದಲ್ಲಿ ಗಟ್ಟಿಯಾಗಿ ನಿಲುವನ್ನು ಇಟ್ಟುಕೊಳ್ಳಿ, ಬದಲಾಯಿಸಿಕೊಳ್ಳಲು ಹೋಗದಿರಿ. ಹೊಸ ಬಟ್ಟೆ, ಶೂ, ವಾಚ್ ಮೊದಲಾದವುಗಳನ್ನು ಖರೀದಿಸುವುದಕ್ಕಾಗಿ ಹಣವನ್ನು ಖರ್ಚು ಮಾಡಲಿದ್ದೀರಿ. ಪುಷ್ಕಳವಾದ ಊಟ- ತಿಂಡಿಗಳನ್ನು ಸವಿಯುವಂಥ ಯೋಗ ನಿಮ್ಮ ಪಾಲಿಗಿದೆ. ದೇವತಾ ಕಾರ್ಯಗಳಲ್ಲಿ ಪಾಲ್ಗೊಳ್ಳಲಿದ್ದೀರಿ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಒಂದೇ ರೀತಿಯ ಕೆಲಸದಿಂದ ಬೇಸರ ಆಗುವಂಥ ಸನ್ನಿವೇಶಗಳು ಉದ್ಭವಿಸಲಿವೆ. ನಿಮ್ಮಲ್ಲಿ ಕೆಲವರಿಗೆ, ಅದರಲ್ಲೂ ಉದ್ಯೋಗಸ್ಥರಾಗಿ ಖಾಸಗಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಾ ಇರುವವರಿಗೆ ಈ ದಿನ ರಜಾ ತೆಗೆದುಕೊಂಡು ಬಿಡೋಣ ಅನ್ನಿಸಲಿದೆ. ಹಾಗೆ ರಜಾ ಹಾಕುವುದರಲ್ಲಿ ಏನೂ ತಪ್ಪಿಲ್ಲ. ಮನೆಯಲ್ಲಿ ಕುಟುಂಬಸ್ಥರ ಜತೆಗೆ ಹಳೇ ವಿಚಾರಗಳನ್ನು ಎಳೆದುಕೊಂಡು, ಮಾತಿಗೆ ಮಾತು ಬೆಳೆಸಬೇಡಿ. ಅದರಲ್ಲೂ ಮನೆಯ ಹಿರಿಯರಿಗೆ ಮನಸ್ಸಿಗೆ ನೋವಾಗುವಂಥ ಮಾತುಗಳನ್ನು ಆಡದಿರಿ. ನಿಮ್ಮ ಶಿಕ್ಷಣ, ಉದ್ಯೋಗ ಅಥವಾ ಬೇರೆ ಯಾವುದೇ ವಿಚಾರವನ್ನು ಇತರರ ಜತೆಗೆ ಹೋಲಿಸಿಕೊಂಡು, ನೀವು ಬೇಸರ ಮಾಡಿಕೊಂಡು, ಮನೆಯ ವಾತಾವರಣ ಹಾಳು ಮಾಡದಿರಿ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಈ ದಿನ ಸಿಕ್ಕಾಪಟ್ಟೆ ಸಮಜಾಯಿಷಿಗಳನ್ನು, ವಿವರಣೆಗಳನ್ನು ನೀಡಬೇಕಾಗುತ್ತದೆ. ನನ್ನ ಮಾತು ಹಾಗೂ ಧ್ವನಿಯ ಅರ್ಥ ಇದಾಗಿತ್ತು ಅಂತ ಉದ್ದೇಶವನ್ನು ಬಿಡಿಸಿ ಹೇಳುವುದರಲ್ಲಿ ಹೈರಾಣಾಗುವಂಥ ಸಾಧ್ಯತೆಗಳಿವೆ. ಆದರೆ ಕುಟುಂಬದ ಸದಸ್ಯರ ಜತೆಗೆ ಹೆಚ್ಚು ಸಮಯ ಕಳೆಯುವುದಕ್ಕೆ, ಅದರಲ್ಲೂ ಸಂಗಾತಿ ಜತೆಗೆ ಸಂತೋಷದಿಂದ ಕಳೆಯುವುದಕ್ಕೆ ಸಾಧ್ಯವಾಗುತ್ತದೆ. ಸಮಸ್ಯೆ ಅಂತಾದಲ್ಲಿ ಉದ್ಯೋಗ ಸ್ಥಳದಲ್ಲಿ ಮತ್ತು ಸ್ವಂತ ವ್ಯವಹಾರ ಮಾಡುತ್ತಿರುವವರಿಗೆ. ಹಳದಿ ಬಣ್ಣದ ಬಟ್ಟೆ ಧರಿಸುವುದರಿಂದ ನಿಮ್ಮಲ್ಲಿನ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಮತ್ತು ಮಾನಸಿಕವಾಗಿ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ಮೀರಿ ನಿಲ್ಲುವುದಕ್ಕೆ ಸಾಧ್ಯವಾಗುತ್ತದೆ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ಸಂತೆ ಹೊತ್ತಿಗೆ ಮೂರು ಮೊಳ ಎಂಬ ಮಾತಿನಂತೆ, ನೀವು ಮಾಡಿದ ಕೆಲಸದ ಗುಣಮಟ್ಟದ ಬಗ್ಗೆ ಇತರರು ಟೀಕಿಸಲಿದ್ದಾರೆ. ಅದರ ಗುಣಮಟ್ಟ ಸರಿಯಿಲ್ಲ, ಕಲಾತ್ಮಕವಾಗಿಲ್ಲ ಅಥವಾ ನಿರೀಕ್ಷೆ ಇಟ್ಟುಕೊಂಡಷ್ಟು ಚೆನ್ನಾಗಿ ಬಂದಿಲ್ಲ ಎಂಬೆಲ್ಲ ಟೀಕೆ- ವಿಮರ್ಶೆ, ಆಕ್ಷೇಪಗಳನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ಯಾರದೋ ಮೇಲಿನ ಕೋಪ ಇನ್ಯಾರದೋ ಮೇಲೆ ತೀರಿಸಿಕೊಳ್ಳುವುದಕ್ಕೆ ಪ್ರಯತ್ನಿಸಲಿದ್ದೀರಿ. ಅದರಿಂದ ಸ್ನೇಹ- ಸಂಬಂಧಕ್ಕೆ ಕುತ್ತು ಬರುವಂಥ ಸಾಧ್ಯತೆ ಇದೆ. ನಿಮಗೆ ಸಮಯ ಸಿಕ್ಕಲ್ಲಿ ಅಥವಾ ಸಮಯ ಮಾಡಿಕೊಂಡೇ ಈ ದಿನ ಹತ್ತು ನಿಮಿಷಗಳ ಕಾಲ ಧ್ಯಾನ ಮಾಡುವುದಕ್ಕೆ ಪ್ರಯತ್ನಿಸಿ. ಜತೆಗೆ ಕೆಲ ಕಾಲ ಮೌನದಿಂದ ಇರುವುದಕ್ಕೂ ಪ್ರಯತ್ನ ಮಾಡಿ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ಈ ದಿನ ನಿಮ್ಮ ವರ್ತನೆಯಲ್ಲಿ ನಿಮಗೇ ಅಚ್ಚರಿ ಆಗುವಂಥ ಬೆಳವಣಿಗೆಗಳು ಆಗಲಿವೆ. ಒಂದಿಷ್ಟು ಆಕ್ರಮಣಕಾರಿಯಾಗಿ ಆಲೋಚನೆ ಮಾಡಲಿದ್ದೀರಿ. ‘ದುಡ್ಡಿಟ್ಟು ಆ ಮೇಲೆ ಮಾತನಾಡು’ ಅನ್ನುವ ರೀತಿಯಲ್ಲಿ ಇರುತ್ತದೆ ನಿಮ್ಮ ಧ್ವನಿ. ಯಾರ ಮೇಲೂ ನಂಬಿಕೆಯಿಟ್ಟು, ವ್ಯವಹಾರ ನಡೆಸಬಹುದು ಎಂಬ ಭಾವನೆ ನಿಮ್ಮೊಳಗೆ ಮೂಡುವುದಿಲ್ಲ. ಇನ್ನು ಮುಂದೆ ಯಾವುದೇ ನಿರ್ಧಾರ ತೆಗೆದುಕೊಂಡರೂ ಸ್ವಂತವಾಗಿ, ಸ್ವತಂತ್ರವಾಗಿ ತೆಗೆದುಕೊಳ್ಳುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಸ್ವಂತ ವಾಹನ ಖರೀದಿಗಾಗಿ ಬ್ಯಾಂಕ್ ಗಳಲ್ಲಿ ಸಾಲಕ್ಕಾಗಿ ಪ್ರಯತ್ನ ಮಾಡಿರುವವರಿಗೆ ಹಣ ಮಂಜೂರಾಗುವ ಸುದ್ದಿ ದೊರೆಯಲಿದೆ.