Astrology: ಅನಫಾ – ಸುನಫಾ ಯೋಗಗಳ ಬಗ್ಗೆ ನಿಮಗೆಷ್ಟು ಗೊತ್ತು? ನಿಮ್ಮ ಜಾತಕದಲ್ಲಿ ಈ ಯೋಗಗಳಿವೆಯಾ?

| Updated By: Skanda

Updated on: Aug 06, 2021 | 7:01 AM

ವೈದಿಕ ಜ್ಯೋತಿಷ್ಯದ ಪ್ರಕಾರ ಅನಫಾ ಹಾಗೂ ಸುನಫಾ ಯೋಗಗಳ ಈ ಲೇಖನದಲ್ಲಿ ವಿವರಣೆ ಇದೆ. ನಿಮ್ಮ ಜಾತಕವನ್ನು ಎದುರಿಗೆ ಇಟ್ಟುಕೊಂಡು ನೋಡಿಕೊಳ್ಳಿ.

Astrology: ಅನಫಾ - ಸುನಫಾ ಯೋಗಗಳ ಬಗ್ಗೆ ನಿಮಗೆಷ್ಟು ಗೊತ್ತು? ನಿಮ್ಮ ಜಾತಕದಲ್ಲಿ ಈ ಯೋಗಗಳಿವೆಯಾ?
ಪ್ರಾತಿನಿಧಿಕ ಚಿತ್ರ
Follow us on

ಈ ದಿನ ಎರಡು ಯೋಗಗಳ ಬಗ್ಗೆ ತಿಳಿಸಲಾಗುವುದು. ಜನ್ಮ ಜಾತಕವನ್ನು ಹತ್ತಿರದಲ್ಲಿ ಇಟ್ಟುಕೊಳ್ಳಿ. ಜ್ಯೋತಿಷ್ಯ ಪ್ರಕಾರ, ಇದನ್ನು ಸುನಫಾ ಯೋಗ ಮತ್ತು ಅನಫಾ ಯೋಗ ಎನ್ನಲಾಗುತ್ತದೆ. ಜಾತಕದಲ್ಲಿ ಚಂದ್ರನು ಬಲವಾದ ಸ್ಥಾನದಲ್ಲಿ ಇರುವವರಿಗೆ ಈ ಯೋಗಗಳು ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತವೆ. ದುರ್ಬಲ ಚಂದ್ರ ಇದ್ದಲ್ಲಿ ಈ ಯೋಗಗಳನ್ನು ತಡೆಯುತ್ತದೆ. ಯಾವುದೇ ವ್ಯಕ್ತಿ ಶುಕ್ಲ ಪಕ್ಷದ 11ನೇ ತಿಥಿ (ಏಕಾದಶಿಯಿಂದ) ಮತ್ತು ಕೃಷ್ಣ ಪಕ್ಷದ 5ನೇ ತಿಥಿ (ಪಂಚಮಿ) ನಡುವೆ ಜನಿಸಿದ್ದು, ಚಂದ್ರ 10 ರಿಂದ 20 ಡಿಗ್ರಿಗಳ ನಡುವೆ ಇದ್ದು, ಚಂದ್ರನಿಗೆ ದೋಷಪೂರಿತ ಅಥವಾ ಕ್ರೂರ ಗ್ರಹಗಳ ದೃಷ್ಟಿ ಇರಬಾರದು. ಇನ್ನು ಜಾತಕದಲ್ಲಿ ಯಾವುದೇ ದೋಷಪೂರಿತ ಮನೆಯಲ್ಲಿ ಚಂದ್ರನು ಇರಬಾರದು. -ಹೀಗೆ ಇದ್ದಲ್ಲಿ ಜಾತಕದಲ್ಲಿ ಬಲವಾದ ಚಂದ್ರ ಎಂದು ನಿರ್ಣಯ ಮಾಡಲಾಗುತ್ತದೆ.

ಸುನಫಾ ಯೋಗ
ಜನ್ಮ ಜಾತಕದಲ್ಲಿ ಚಂದ್ರ ಇರುವ ಮನೆಯಿಂದ ಮುಂದಿನ ಮನೆಯಲ್ಲಿ ಒಂದು ಗ್ರಹವಿದ್ದರೆ ಸುನಫಾ ಯೋಗವು ಸೃಷ್ಟಿ ಆಗುತ್ತದೆ. ಅದು ಆ ಜಾತಕರಿಗೆ ಸಂಪತ್ತು ಮತ್ತು ಖ್ಯಾತಿಯನ್ನು ನೀಡುತ್ತದೆ. ಆದರೆ ಚಂದ್ರನಿಂದ ಮುಂದಿನ ಮನೆಯಲ್ಲಿ ರವಿ ಗ್ರಹ ಮಾತ್ರ ಇರಬಾರದು. ಆಗ ಕೂಡ ಸುನಫಾ ಯೋಗ ರೂಪುಗೊಳ್ಳಬೇಕು ಎಂದಾದಲ್ಲಿ ರವಿ ಜತೆಗೆ ಬೇರೆ ಯಾವುದಾದರೂ ಗ್ರಹ ಇರಬೇಕು. ಜನ್ಮ ಜಾತಕದ 9ನೇ ಮನೆಯಲ್ಲಿ ಚಂದ್ರನಿದ್ದು ಮತ್ತು ರವಿಯನ್ನು ಹೊರತುಪಡಿಸಿ ಯಾವುದಾದರೂ ಗ್ರಹ 10ನೇ ಮನೆಯಲ್ಲಿ ಇದ್ದರೆ ಸುನಫಾ ಯೋಗವು ರೂಪುಗೊಳ್ಳುತ್ತದೆ.

ಸುನಫಾ ಯೋಗ ಸಾಮಾನ್ಯವಾಗಿಯೇ ಕಂಡುಬರುತ್ತದೆ. ಆದರೆ ಅವುಗಳಲ್ಲಿ ಬಹುತೇಕರು ಈ ಯೋಗದ ಶುಭ ಫಲಿತಾಂಶಗಳನ್ನು ಪಡೆಯುವುದಿಲ್ಲ. ಏಕೆಂದರೆ, ಸುನಫಾ ಯೋಗದ ಶುಭ ಫಲ ಪಡೆಯುವುದಕ್ಕೆ ಜನ್ಮ ಜಾತಕದಲ್ಲಿ ಚಂದ್ರನು ಉತ್ತಮ ಸ್ಥಾನದಲ್ಲಿರಬೇಕು ಮತ್ತು ಚಂದ್ರನಿಂದ ಮುಂದಿನ ಮನೆಯಲ್ಲಿ ಇರುವ ಗ್ರಹವೂ ಉತ್ತಮ ಸ್ಥಾನದಲ್ಲಿರಬೇಕು. ಎರಡೂ ಗ್ರಹಗಳು ಸರಿಯಾದ ಸ್ಥಾನದಲ್ಲಿ ಇಲ್ಲದಿದ್ದರೆ ಸುನಫಾ ಯೋಗವು ದುರ್ಬಲಗೊಳ್ಳುತ್ತದೆ ಮತ್ತು ಉತ್ತಮ ಫಲಿತಾಂಶಗಳನ್ನು ನೀಡಲು ಸಾಧ್ಯವಾಗಲ್ಲ. ಇದರ ಹೊರತಾಗಿ, ಜನ್ಮ ಜಾತಕದಲ್ಲಿ ಚಂದ್ರನು ಯಾವುದೇ ದೋಷಪೂರಿತ ಗ್ರಹ/ ಗ್ರಹಗಳೊಂದಿಗೆ ಸಂಯೋಗ ಆಗಬಾರದು. ಇನ್ನು ಈ ಯೋಗದ ಶಕ್ತಿ ಅಥವಾ ಸಾಮರ್ಥ್ಯವನ್ನು ಲೆಕ್ಕ ಹಾಕುವಾಗ ಆ ಜಾತಕದಲ್ಲಿ ಚಂದ್ರ ಎಲ್ಲಿ ಇದೆ ಎಂಬುದನ್ನು ಗಣನೆಗೆ ತೆಗೆದುಕೊಳ್ಳಬೇಕು. ಕರ್ಕಾಟಕ ರಾಶಿಯಲ್ಲಿ ಇರುವ ಚಂದ್ರನಿಂದ ರೂಪುಗೊಂಡ ಸುನಫಾ ಯೋಗವು ವೃಶ್ಚಿಕ ರಾಶಿಯ ಚಂದ್ರನಿಂದ ರೂಪುಗೊಂಡ ಸುನಫಾ ಯೋಗಕ್ಕಿಂತ ಹೆಚ್ಚು ಶಕ್ತಿಯುತವಾಗಿರುತ್ತದೆ.

ಅನಫಾ
ಜನ್ಮ ಜಾತಕದಲ್ಲಿ ಚಂದ್ರನ ಹಿಂದಿನ ಮನೆಯಲ್ಲಿ ಗ್ರಹ ಇದ್ದಲ್ಲಿ ಅನಫಾ ಯೋಗವು ರೂಪುಗೊಳ್ಳುತ್ತದೆ. ಅನಫಾ ಯೋಗವು ಆ ಜಾತಕರಿಗೆ ಉತ್ತಮ ಆರೋಗ್ಯ, ಖ್ಯಾತಿ ಮತ್ತು ಆಧ್ಯಾತ್ಮಿಕ ಬೆಳವಣಿಗೆ ನೀಡುತ್ತದೆ. ಸುನಫಾ ಯೋಗದಂತೆಯೇ ಚಂದ್ರನ ಹಿಂದಿನ ಮನೆಯಲ್ಲಿ ರವಿ ಇದ್ದಲ್ಲಿ ಮಾತ್ರ ಅನಫಾ ಯೋಗವು ರೂಪುಗೊಳ್ಳುವುದಿಲ್ಲ. ಅದರ ಹೊರತಾಗಿಯೂ ಜಾತಕದಲ್ಲಿ ಅನಫಾ ಯೋಗದ ಫಲ ಸಿಗಬೇಕಿದ್ದಲ್ಲಿ ರವಿಯೊಂದಿಗೆ ಬೇರೆ ಯಾವುದಾದರೂ ಗ್ರಹ ಇರಬೇಕು. ಸುನಫಾ ಯೋಗದಲ್ಲಿ ತಿಳಿಸಿದಂತೆಯೇ ಈ ಯೋಗಕ್ಕೂ ಜನ್ಮ ಜಾತಕದಲ್ಲಿನ ಚಂದ್ರ ಯಾವುದೇ ದೋಷಪೂರಿತ ಗ್ರಹ ಅಥವಾ ಗ್ರಹಗಳೊಂದಿಗೆ ಸಂಯೋಗವಾಗದಿದ್ದರೆ, ಯಾವುದೇ ದೋಷಪೂರಿತ ಗ್ರಹದ/ ಅಂಶಗಳಿಂದ ಮುಕ್ತವಾಗಿದ್ದರೆ ಮಾತ್ರ ಅನಫಾ ಯೋಗದ ಶುಭ ಫಲಗಳು ದೊರೆಯುತ್ತವೆ.

ಸುನಫಾ ಮತ್ತು ಅನಫಾ ಯೋಗಗಳ ಫಲಗಳು
ಜಾತಕದಲ್ಲಿ ಸುನಫಾ – ಅನಫಾ ಯೋಗಗಳು ಇದ್ದಲ್ಲಿ ಪ್ರಸಿದ್ಧ, ಗೌರವಾನ್ವಿತ, ಆರ್ಥಿಕವಾಗಿ ಸದೃಢ, ಕರುಣಾಮಯಿ, ಶ್ರೀಮಂತ ಮತ್ತು ಸಮುದಾಯ- ಸಂಘಟನೆ ನಾಯಕರಾಗುತ್ತಾರೆ. ಆರೋಗ್ಯ ಚೆನ್ನಾಗಿರುತ್ತದೆ, ಆಧ್ಯಾತ್ಮಿಕ ಬೆಳವಣಿಗೆ ಹಾಗೂ ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಾರೆ. ಈ ಯೋಗಗಳು ಆ ಜಾತಕರಿಗೆ ಆಯಾ ಗ್ರಹಗಳ ದಶಾ ಮತ್ತು ಅಂತರ್ದಶಾ ಸಮಯದಲ್ಲಿ ಉತ್ತಮ ಫಲಿತಾಂಶಗಳನ್ನು ನೀಡುತ್ತವೆ.

ಇದನ್ನೂ ಓದಿ: Astrology: ಈ ನಾಲ್ಕು ರಾಶಿಯವರಿಗೆ ಜೀವನದಲ್ಲಿ ಯಶಸ್ಸು ಸಿಗುವುದು ಬಹಳ ತಡ, ಏಕೆ ಗೊತ್ತೆ?

ಇದನ್ನೂ ಓದಿ: Marriage Astrology: ವಿಚಿತ್ರ ಕಾರಣಗಳಿಂದಾಗಿ ಈ 5 ರಾಶಿಯವರು ಮದುವೆ ಆಗದೆ ಉಳಿದು ಬಿಡುವ ಸಾಧ್ಯತೆ ಹೆಚ್ಚು!

(Here Is The Key Details About Anapha And Sunapha Yogas According To Vedic Astrology)

Published On - 7:01 am, Fri, 6 August 21