ಜುಲೈ ನಂತರ ವಕ್ರ ಶನಿ ಪ್ರಭಾವದಿಂದ ಭಾರತ- ಪಾಕಿಸ್ತಾನ ಮಧ್ಯೆ ತೀವ್ರ ಬಿಕ್ಕಟ್ಟು
ಎಂಟು ವರ್ಷದ ಹಿಂದೆ ಪ್ರಕಾಶ್ ಅಮ್ಮಣ್ಣಾಯ ಅವರು ಗುಜರಾತ್ ವಿಧಾನಸಭಾ ಚುನಾವಣೆ ಫಲಿತಾಂಶ ಬರುವ ದಿನದ ಬೆಳಗ್ಗೆ ಹೇಳಿದ್ದ ಭವಿಷ್ಯ ಕರಾರುವಾಕ್ ಆಗಿ ನಡೆದಿತ್ತು. ಅದರ ನಂತರದಲ್ಲಿ ಅವರು ನುಡಿದ ಹಲವು ಭವಿಷ್ಯಗಳು, ಅದರಲ್ಲೂ ಮಳೆ- ಹವಾಮಾನ ವೈಪರೀತ್ಯ, ಭೂಕಂಪನ, ಸುನಾಮಿ, ರಾಜಕೀಯ ಬೆಳವಣಿಗೆಗಳ ಭವಿಷ್ಯ ನಿಜವಾಗಿದೆ. ಇದೀಗ ಈ ವರ್ಷದ ಜುಲೈ ನಂತರ ವಕ್ರ ಶನಿಯ ಪ್ರಭಾವದಿಂದ ಭಾರತ- ಪಾಕಿಸ್ತಾನದ ಮಧ್ಯೆ ಉದ್ವಿಗ್ನತೆ ಮತ್ತೂ ಹೆಚ್ಚಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಆ ಬಗ್ಗೆ ವಿವರ ಇಲ್ಲಿದೆ.

ಭಾರತ- ಪಾಕಿಸ್ತಾನದ (India Pakistan Conflict) ಮಧ್ಯೆ ಪಹಲ್ಗಾಂ ಭಯೋತ್ಪಾದಕ (Pahalgam Terror Attack) ದಾಳಿಯ ಪ್ರಕರಣ ಮುಗಿದ ಅಧ್ಯಾಯ ಎಂಬ ಅಭಿಪ್ರಾಯ ದೊಡ್ಡ ಸಂಖ್ಯೆಯ ಜನರಲ್ಲಿದೆ. ಆದರೆ ಜ್ಯೋತಿಷ್ಯ ರೀತಿಯಾಗಿ ಹೇಳಬೇಕು ಅಂದರೆ ಬೇರೆಯದೇ ಪರಿಸ್ಥಿತಿ ಇದೆ. ಅದನ್ನು ವಿವರಿಸುವ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡಲಾಗಿದೆ. ಅದಕ್ಕೂ ಮುನ್ನ ಈ ಹಿಂದಿನ ಜ್ಯೋತಿಷ್ಯ ವಿಶ್ಲೇಷಣೆಯನ್ನು ನೆನಪಿಸಿ, ಮುಂದಕ್ಕೆ ಸಾಗುತ್ತೇನೆ. ರವಿ ಗ್ರಹದಿಂದ ಎಂಬತ್ತು ಡಿಗ್ರಿ ಅಂತರದಲ್ಲಿ ಕುಜ ಗ್ರಹ ಬಂದಾಗ ಅದು ಭೂಕಂಪ ಲಗ್ನವಾಗುತ್ತದೆ. ಇದರಿಂದಾಗಿ ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತವೆ, ಯುದ್ಧ, ಯುದ್ಧದಂಥ ಸನ್ನಿವೇಶ ಸೃಷ್ಟಿಯಾಗುತ್ತದೆ ಎಂಬುದನ್ನು ಈ ಹಿಂದೆ ಎಚ್ಚರಿಕೆ ರೂಪದಲ್ಲಿ ಹೇಳಿದ್ದೆ. ಕೆಲವು ಘಟನೆಗಳು ಭವಿಷ್ಯ ನುಡಿದಂತೆಯೇ ಆಯಿತು ಎಂದು ಹೇಳಿ ಹೆಚ್ಚುಗಾರಿಕೆ ಅನ್ನಿಸಿಕೊಳ್ಳುವ ಇಚ್ಛೆ ಎಳ್ಳಷ್ಟೂ ಇಲ್ಲ. ಆದರೆ ಅಂಥ ಘಟನೆಗಳು ನಡೆದು, ಅದರಿಂದ ಸಾವು- ನೋವುಗಳು ಸಂಭವಿಸಿತಲ್ಲ ಎಂಬ ಮನೋವ್ಯಥೆ ಸಹಜವಾಗಿ ಕಾಡುತ್ತದೆ.
ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ಜಾತಕ ವಿಶ್ಲೇಷಣೆ
ಕಳೆದ ವರ್ಷ ನರೇಂದ್ರ ಮೋದಿ ಅವರ ಜನ್ಮ ಜಾತಕ ವಿಶ್ಲೇಷಣೆ ಸಂದರ್ಭದಲ್ಲಿಯೂ ಸಿಂಹ ರಾಶಿ ಸ್ಥಿತ ಶನಿ ಗ್ರಹದಿಂದ ಏನೇನು ಸಮಸ್ಯೆ ಆಗಬಹುದು ಎಂಬ ಬಗ್ಗೆ ಸುಳಿವನ್ನು ನೀಡಲಾಗಿತ್ತು. ಅದರ ಬಗ್ಗೆ ಇರುವ ಲೇಖನವನ್ನು ಟಿವಿ9 ಕನ್ನಡ ವೆಬ್ ಸೈಟ್ ನಲ್ಲಿಯೇ ನೋಡಬಹುದು.
ಭಾರತ ಹಾಗೂ ಪಾಕಿಸ್ತಾನ ಸಂಘರ್ಷದ ಸೂಚನೆ:
ಶನಿಯ ಮೀನ ರಾಶಿಯಲ್ಲಿ ಸಂಚರಿಸುವುದರ ಕಾಲದ ಫಲ ಕೂಡ ಸಂಘರ್ಷವನ್ನೇ ಸೂಚಿಸುತ್ತದೆ. ಕನ್ಯಾ ರಾಶಿಯಲ್ಲಿ ಕುಜ ಸಂಚಾರ ಮಾಡುವಾಗ ಮೀನ ರಾಶಿಯಲ್ಲಿನ ಶನಿಯ ದೃಷ್ಟಿ ಇರುತ್ತದೆ. ಭಾರತ ಹಾಗೂ ಪಾಕಿಸ್ತಾನ ಎರಡೂ ದೇಶಗಳಿಗೂ ಅದು ನಿರ್ಣಾಯಕವಾದ ಸಮಯವಾಗುತ್ತದೆ. ಯಾಕೆಂದರೆ ಕುಜನ ಹಾಗೂ ಶನಿ ಗ್ರಹಗಳು ಪರಸ್ಪರ ಸಪ್ತಮ ಸ್ಥಾನದಿಂದ ಪೂರ್ಣ ದೃಷ್ಟಿಯಲ್ಲಿ ವೀಕ್ಷಣೆ ಮಾಡುತ್ತವೆ. ಅದರಲ್ಲೂ ಜುಲೈ ತಿಂಗಳಿನಿಂದ ಶನಿ ಗ್ರಹ ವಕ್ರ ಗತಿಯಲ್ಲಿ ಸಂಚರಿಸುವುದರಿಂದ ಫಲ ಮತ್ತೂ ತೀಕ್ಷ್ಣವಾಗಿರುತ್ತದೆ. ಎರಡೂ ದೇಶಗಳು ಸ್ವಾತಂತ್ರ್ಯ ಪಡೆದ ಸಮಯದಲ್ಲಿ ಶನಿ ಗ್ರಹ ಕರ್ಕಾಟಕ ರಾಶಿಯಲ್ಲಿತ್ತು. ಮಂದಸ್ಯ ಮಂದಾಷ್ಟಮ. ಅಂದರೆ ಸ್ವಾತಂತ್ರ್ಯ ಪಡೆಯುವಾಗ ಕರ್ಕಾಟಕ ರಾಶಿಯಲ್ಲಿ ಇಪ್ಪತ್ತು ಡಿಗ್ರಿಯಲ್ಲಿದ್ದ ಶನಿಗೆ ಇನ್ನೂರಾ ನಲವತ್ತು ಡಿಗ್ರಿಗೆ, ಮೀನ ರಾಶಿಯ ಆರಂಭದ ಇಪ್ಪತ್ತು ಡಿಗ್ರಿಯಲ್ಲಿ “ಮಂದ” ಸಂಚಾರ ಮಾಡುವಾಗ ಪೂರ್ಣವಾದ ಫಲ ನೀಡುವ ಕಾಲವಾಗಿರುತ್ತದೆ.
ಧರ್ಮ, ಧರ್ಮ ಗುರುಗಳು, ಆರ್ಥಿಕತೆ, ಮೋಕ್ಷ ಇವೆಲ್ಲವನ್ನೂ ಕಾಲಪುರುಷನ ಹನ್ನೆರಡನೇ ಮನೆಯಾದ ಮೀನ ರಾಶಿಯಿಂದ ಚಿಂತನೆ ಮಾಡಬೇಕಾಗುತ್ತದೆ. ಅಲ್ಲಿಗೆ ಶನಿ ಗ್ರಹ- ಧರ್ಮಕ್ಕೆ ಅಧಿಪತಿಯಾದ ಗ್ರಹದ ಸಂಚಾರ ಮಾಡುವುದು ಧರ್ಮ ಕಲಹ – ಯುದ್ಧವನ್ನು ಮುನ್ಸೂಚನೆಯಾಗಿ ನೀಡುತ್ತದೆ. ಈ ವರ್ಷದ ಡಿಸೆಂಬರ್ ಬರುವ ತನಕ ಪರಿಸ್ಥಿತಿ ಶಾಂತವಾಗುವುದಿಲ್ಲ. ಸದ್ಯಕ್ಕೆ ನಾವು ನೋಡುತ್ತಿರುವುದು ತಾತ್ಕಾಲಿಕವಾದ ಶಾಂತ ಪರಿಸ್ಥಿತಿ ಮಾತ್ರವಾಗಿರುತ್ತದೆ. ಜುಲೈ ಹನ್ನೆರಡನೇ ತಾರೀಕಿನ ನಂತರ ಡಿಸೆಂಬರ್ ತನಕ ಉದ್ವಿಗ್ನತೆಯ ಸಮಯವಾಗಿರುತ್ತದೆ. ಈ ಹಿಂದೆಯೇ ಹೇಳಿದಂತೆ ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟು, ಆಹಾರ ಧಾನ್ಯಗಳಿಗೆ ಹಾಹಾಕಾರ ಏರ್ಪಡುತ್ತದೆ. ಅಲ್ಲಿನ ಜನರ ಸಿಟ್ಟು ಆಳುವ ಸರ್ಕಾರದ ಕಡೆಗೆ ತಿರುಗಲಿದೆ.
ರವಿ ಗ್ರಹವು ರಾಜತಾಂತ್ರಿಕತೆಯನ್ನು ಸೂಚಿಸುತ್ತದೆ. ರವಿ ಗ್ರಹದ ಸಂಚಾರವನ್ನು ನೋಡುವುದಾದರೆ, ಭಾರತ- ಪಾಕಿಸ್ತಾನದ ಮಧ್ಯದ ಉದ್ವಿಗ್ನ ಶಮನದ ಪ್ರಯತ್ನಕ್ಕೆ ವಿವಿಧ ದೇಶಗಳು ಮುಂದಾಗಲಿದ್ದು, ಈ ಬೆಳವಣಿಗೆಯಲ್ಲಿ ಎರಡು ಗುಂಪುಗಳಂತೆ ಸನ್ನಿವೇಶ ಸೃಷ್ಟಿ ಆಗಲಿದೆ. ಇದರಿಂದಾಗಿ ವ್ಯಾಪಾರ- ವಹಿವಾಟು, ಸಂಬಂಧ ಇವುಗಳನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು, ಜಾಗತಿಕ ವೇದಿಕೆಯಲ್ಲಿ ತಿಕ್ಕಾಟಗಳಿಗೆ ಸಾಕ್ಷಿಯಾಗಲಿವೆ. ತುಲಾ ರಾಶಿಗೆ ರವಿ ಗ್ರಹ ಪ್ರವೇಶ ಮಾಡಿದಾಗ, ಅಕ್ಟೋಬರ್ ಹದಿನೇಳು ಮತ್ತು ಆ ನಂತರದಲ್ಲಿ ಈ ಎಲ್ಲ ಬೆಳವಣಿಗೆಗಳನ್ನು ಕಾಣಬಹುದು. ಅಲ್ಲಿಂದ ಆಚೆಗೆ ಕರ್ಕಾಟಕದಲ್ಲಿ ಗುರು ಗ್ರಹ ಪ್ರವೇಶಿಸಿ, ಡಿಸೆಂಬರ್ ಐದನೇ ತಾರೀಕಿನ ತನಕ ಇರಲಿದ್ದು, ಬುದ್ಧಿವಂತಿಕೆ ಹಾಗೂ ರಾಜತಾಂತ್ರಿಕ ನಡೆಗಳ ಚಾತುರ್ಯವನ್ನು ಕಾಣುವಂತಾಗುತ್ತದೆ.
ಯಾವಾಗ ಶನಿಯು ಮೀನ ರಾಶಿಯಲ್ಲಿ ಇಪ್ಪತ್ತು ಡಿಗ್ರಿಯನ್ನು ದಾಟಿ ಮುಂದಕ್ಕೆ ಹೋಗುತ್ತದೋ ಅಲ್ಲಿಂದ ನಿರಾಳತೆ ಅನುಭವಕ್ಕೆ ಬರಲಿದೆ. ಅದಕ್ಕೆ ಕಾಯಬೇಕಾಗುವುದಂತೂ ಸತ್ಯ.
ಲೇಖಕ: ಪ್ರಕಾಶ್ ಅಮ್ಮಣ್ಣಾಯ, ಜ್ಯೋತಿಷಿ, ಕಾಪು (ಉಡುಪಿ ಜಿಲ್ಲೆ)
(ಇಲ್ಲಿ ವ್ಯಕ್ತವಾಗಿರುವ ಅಭಿಪ್ರಾಯ ಲೇಖಕರದೇ ಹೊರತು ಟಿವಿ9 ಕನ್ನಡ ವೆಬ್ ಸೈಟ್ ಆಗಲೀ ಅಥವಾ ಅದರ ಸೋದರ ಸಂಸ್ಥೆಗಳಾಗಲೀ ಜವಾಬ್ದಾರ ಅಲ್ಲ, ಮತ್ತು ಇದನ್ನು ಅನುಮೋದಿಸುವುದಿಲ್ಲ- ಸಂಪಾದಕರು)
Published On - 11:30 am, Mon, 26 May 25




