ಅಚ್ಚರಿ ಎನ್ನುವಂಥ ಬೆಳವಣಿಗೆಯೊಂದರಲ್ಲಿ ಹಮಾಸ್ನಿಂದ ನಡೆದ ದಾಳಿಯಲ್ಲಿ ಇಸ್ರೇಲ್ನಲ್ಲಿ ಭಾರೀ ಸಾವು- ನೋವು ಸಂಭವಿಸಿದೆ. ಇದಾದ ಮೇಲೆ ಭಾರೀ ಕ್ರುದ್ಧರಾಗಿ, ಯುದ್ಧ ಶುರು ಮಾಡಿರುವುದು ಹಮಾಸ್ ಇರಬಹುದು, ಆದರೆ ಇದನ್ನು ನಾವು ಮುಗಿಸುತ್ತೇವೆ, ಎಂಬ ಹೇಳಿಕೆ ನೀಡಿದ್ದಾರೆ ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು. ಅದರರ್ಥ, ಗಾಜಾಪಟ್ಟಿಯಲ್ಲಿ ಇರುವ ಹಮಾಸ್ ಅನ್ನು ಹೊಸಕಿ ಹಾಕುತ್ತೇವೆ, ನಾಮಾವಶೇಷ ಮಾಡುತ್ತೇವೆ ಎಂದಾಗುತ್ತದೆ. ಈ ನಡೆಗೆ ಅಮೆರಿಕಾ ಸೇರಿದಂತೆ ಹಲವು ದೇಶಗಳು ಇಸ್ರೇಲ್ಗೆ ಬೆಂಬಲ ಸೂಚಿಸಿವೆ. ಆದರೆ ಈ ಯುದ್ಧ ಹದಿನೈದು- ಇಪ್ಪತ್ತು ದಿನಕ್ಕಿಂತ ಹೆಚ್ಚು ನಡೆಯುವುದಿಲ್ಲ ಮತ್ತು ಹಮಾಸ್ ಅನ್ನು ನಾಮಾವಶೇಷ ಮಾಡಲು ಆಗುವುದಿಲ್ಲ. ಈಗಿನ ಯುದ್ಧದಲ್ಲಿ ಇಸ್ರೇಲ್ಗೆ ಇದು ಹಿನ್ನಡೆಯ ಲೆಕ್ಕವೇ ಎಂದು ಭವಿಷ್ಯ ನುಡಿದಿದ್ದಾರೆ ಮಹಾರಾಷ್ಟ್ರದ ಮುಂಬೈ ಮೂಲದ ಟಾರೋ ಕಾರ್ಡ್ ರೀಡರ್ ಪ್ರಕಾಶ್ ದಳವಿ.
ಅವರು ಟಿವಿ9 ಕನ್ನಡ ವೆಬ್ ಸೈಟ್ ಜತೆಗೆ ಮಾತನಾಡಿ, ಅಮೆರಿಕಾ ಸೇರಿದಂತೆ ಪಾಶ್ಚಾತ್ಯ ರಾಷ್ಟ್ರಗಳು ತಮ್ಮ ಆರ್ಥಿಕ ಹಿತಾಸಕ್ತಿಯ ಕಾರಣದಿಂದಾಗಿ ಇಸ್ರೇಲ್ ಮೇಲೆ ಒತ್ತಡ ಹೇರುತ್ತವೆ. ಆದ್ದರಿಂದ ಈ ಯುದ್ಧ ಹದಿನೈದು- ಇಪ್ಪತ್ತು ದಿನಕ್ಕಿಂತ ಹೆಚ್ಚು ಸಮಯ ಮುಂದುವರಿಯುವುದಿಲ್ಲ. ಇದು ಹಮಾಸ್ ಪಾಲಿಗೆ ಅನುಕೂಲವಾಗಿ ಮಾರ್ಪಡಲಿದೆ. ಆ ಸಂಘಟನೆಯನ್ನು ಹೇಳ ಹೆಸರಿಲ್ಲದಂತೆ ಮಾಡಬೇಕು ಎಂಬ ಇಸ್ರೇಲ್ ಪ್ರಯತ್ನ ಸಫಲ ಆಗುವುದಿಲ್ಲ. ರಷ್ಯಾ- ಉಕ್ರೇನ್ ಯುದ್ಧದಂತೆ ಇದು ಮುಂದುವರಿಯಬಹುದು ಎಂದು ಆತಂಕ ವ್ಯಕ್ತವಾಗುತ್ತಿದೆ. ಆದರೆ ಹಾಗೆ ಆಗುವುದಿಲ್ಲ. ಜತೆಯಲ್ಲಿ ಇರುವಂತೆಯೇ ಇದ್ದು, ಪಾಶ್ಚಾತ್ಯ ದೇಶಗಳು ಇಸ್ರೇಲ್ ಗೆ ವಂಚನೆ ಮಾಡಿದಂತೆಯೇ ಆಗುತ್ತದೆ ಎಂದು ದಳವಿ ಹೇಳಿದರು.
ಅಂದ ಹಾಗೆ, ಕಳೆದ ಐದು ದಿವಸದಿಂದ, ಅಂದರೆ ಇಸ್ರೇಲ್ ಮೇಲೆ ಹಮಾಸ್ ಈ ಹಿಂದೆಂದೂ ಕಾಣದ ರೀತಿಯಲ್ಲಿ ದಾಳಿ ಮಾಡಿದಾಗಿನಿಂದ ಟಾರೋ ಕಾರ್ಡ್ ರೀಡರ್ ಪ್ರಕಾಶ್ ದಳವಿ ಭಾರೀ ಸುದ್ದಿಯಲ್ಲಿದ್ದಾರೆ. ಎರಡೂವರೆ ವರ್ಷದ ಹಿಂದೆ ಅವರು ಹೇಳಿದ್ದ ಭವಿಷ್ಯ, ಯೂಟ್ಯೂಬ್ ನಲ್ಲಿ ಲಭ್ಯ ಇದ್ದು, ಆ ಬಗ್ಗೆ ಚರ್ಚೆಗಳು ಆಗುತ್ತಿವೆ.
2021ರ ಮೇ ತಿಂಗಳಿನಲ್ಲಿಯೂ ಇಸ್ರೇಲ್ನಿಂದ ಹಮಾಸ್ ಮೇಲೆ ಭಾರೀ ದಾಳಿ ನಡೆದಿತ್ತು. ಅವತ್ತಿಗೂ ಇಂದಿನ ರೀತಿಯಲ್ಲೇ, ಹಮಾಸ್ನ್ನು ಹೇಳ ಹೆಸರಿಲ್ಲದಂತೆ ಮಾಡಲಾಗುತ್ತದೆ ಎಂದು ಜಾಗತಿಕ ಸಮುದಾಯಗಳು ಅಂದುಕೊಳ್ಳುತ್ತಿದ್ದವು. ಅಂಥ ಸಮಯದಲ್ಲಿ ಪ್ರಕಾಶ್ ದಳವಿ ಅವರು ಟಾರೋ ಕಾರ್ಡ್ ರೀಡಿಂಗ್ ಮಾಡಿ, ಹಮಾಸ್ ಸಂಘಟನೆಯ ಮುಂದಿನ ಐದು ವರ್ಷಗಳು ಹೇಗಿರುತ್ತವೆ ಎಂಬ ಬಗ್ಗೆ ಭವಿಷ್ಯ ನುಡಿದಿದ್ದರು.
ಇದನ್ನೂ ಓದಿ: ಆಪರೇಷನ್ ಅಜಯ್: ಇಸ್ರೇಲ್ನಿಂದ ಭಾರತಕ್ಕೆ ಬರಲಿದ್ದಾರೆ 230 ಭಾರತೀಯರು
ಹಮಾಸ್ ಮತ್ತೆ ಬಲವಾಗಿ ಹಿಂತಿರುಗುತ್ತದೆ. ಇರಾನ್ ಅಲ್ಲದೇ ಬೇರೆ ಶಕ್ತಿಯೊಂದರ ಸಹಾಯದೊಂದಿಗೆ ಇಸ್ರೇಲ್ ವಿರುದ್ಧ ಮತ್ತೆ ಹಮಾಸ್ ದಾಳಿ ಸಂಘಟಿಸುತ್ತದೆ. ಅದಕ್ಕೆ ಬೇಕಾದ ಎಲ್ಲ ಸಿದ್ಧತೆಯನ್ನು ಮಾಡಿಕೊಳ್ಳಲಿದೆ. ನೇಪಥ್ಯದಲ್ಲಿ ಹಮಾಸ್ ಗೆ ಸಹಾಯ ಮಾಡುವುದಕ್ಕೆ ಶಕ್ತಿಯೊಂದು ನಿಲ್ಲಲಿದೆ ಎಂದು ಅವರು ಹೇಳಿದ್ದರು. ಅವತ್ತಿಗೆ ಈ ಭವಿಷ್ಯವನ್ನು ಎಷ್ಟು ಮಂದಿ ಗಂಭೀರವಾಗಿ ಪರಿಗಣಿಸಿದ್ದರೋ ತಿಳಿಯದು. ಆದರೆ ದಳವಿ ಅವರು ಟಾರೋ ಕಾರ್ಡ್ ರೀಡಿಂಗ್ ಮಾಡಿ ಹೇಳಿದಂತೆಯೇ ಆಗಿದೆ.
ನಾನು ಐದು ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಟಾರೋ ಕಾರ್ಡ್ ರೀಡಿಂಗ್ ಮಾಡುವುದಿಲ್ಲ. ಈಗ ಸಹ ಇಸ್ರೇಲ್ ಮೇಲೆ ಹಮಾಸ್ ದಾಳಿ ನಡೆಸಿದ ಮೇಲೆ ಟಾರೋ ಕಾರ್ಡ್ ರೀಡಿಂಗ್ ಮಾಡಿದೆ. ಅದರ ಪ್ರಕಾರ ನೋಡಿದರೆ ಇಸ್ರೇಲ್ ಹದಿನೈದು- ಇಪ್ಪತ್ತು ದಿನಕ್ಕಿಂತ ಹೆಚ್ಚು ಸಮಯ ಯುದ್ಧ ಮುಂದುವರಿಸುವುದಕ್ಕೆ ಆಗುವುದಿಲ್ಲ. ಅಮೆರಿಕವೂ ಸೇರಿದಂತೆ ಯಾವೆಲ್ಲ ದೇಶಗಳು ಇಸ್ರೇಲ್ ಬೆನ್ನಿಗೆ ನಿಂತಿವೆಯೋ ಅವೇ ಒತ್ತಡ ಹಾಕಿ, ಯುದ್ಧವನ್ನು ನಿಲ್ಲುವಂತೆ ಮಾಡುತ್ತವೆ. ಈ ಮಧ್ಯೆ ಹಮಾಸ್ ನಾಯಕರ ಸಂವಹನಕ್ಕೆ ದಾರಿಗಳು ತೆರೆದುಕೊಳ್ಳಲಿವೆ. ಈ ಸಂಘಟನೆ ಕೊನೆಗೊಳಿಸುವುದಕ್ಕೆ ಆಗುವುದಿಲ್ಲ. ಅವರು ಮತ್ತೆ ಬರುತ್ತಾರೆ, ಯುದ್ಧ ಮಾಡುತ್ತಾರೆ, ಎಂದು ಪ್ರಕಾಶ್ ದಳವಿ ಮಾತು ಮುಗಿಸಿದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:35 pm, Thu, 12 October 23