AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Leo Ugadi Horoscope 2025: ಸಿಂಹ ರಾಶಿಯವರ ವಿಶ್ವಾವಸು ಸಂವತ್ಸರ ಯುಗಾದಿ ವರ್ಷ ಭವಿಷ್ಯದ ಫಲಾಫಲ ಇಲ್ಲಿದೆ

ಸಿಂಹ ರಾಶಿ ಯುಗಾದಿ ವರ್ಷ ಭವಿಷ್ಯ 2025: ಯುಗಾದಿ ವಿಶ್ವಾವಸು ಸಂವತ್ಸರದ ಆರಂಭವನ್ನು ಸೂಚಿಸುತ್ತದೆ. ಸಿಂಹ ರಾಶಿಯವರಿಗೆ ಗುರು ಗ್ರಹದ 11ನೇ ಮತ್ತು 12ನೇ ಮನೆ ಸಂಚಾರ ಹಣಕಾಸಿನ ಲಾಭ ಮತ್ತು ವೆಚ್ಚಗಳನ್ನು ತೋರಿಸುತ್ತದೆ. ರಾಹು-ಕೇತು ಸಂಚಾರದಿಂದ ಸಂಬಂಧಗಳಲ್ಲಿ ಸಮಸ್ಯೆಗಳು, ಮಾನಸಿಕ ಒತ್ತಡ ಉಂಟಾಗಬಹುದು. ನವಗ್ರಹ ಹೋಮ, ಶನಿ ಆರಾಧನೆ ಪರಿಹಾರಕ್ರಮಗಳಾಗಿ ಸೂಚಿಸಲಾಗಿದೆ.

Leo Ugadi Horoscope 2025: ಸಿಂಹ ರಾಶಿಯವರ ವಿಶ್ವಾವಸು ಸಂವತ್ಸರ ಯುಗಾದಿ ವರ್ಷ ಭವಿಷ್ಯದ ಫಲಾಫಲ ಇಲ್ಲಿದೆ
Leo Ugadi Horoscope 2025
ಸ್ವಾತಿ ಎನ್​ಕೆ
| Updated By: ಅಕ್ಷತಾ ವರ್ಕಾಡಿ|

Updated on:Mar 30, 2025 | 5:35 PM

Share

2025ರ ಮಾರ್ಚ್ 30ರ ಭಾನುವಾರದಂದು ಚಾಂದ್ರಮಾನ ಯುಗಾದಿ. ಅಂದಿನಿಂದ ವಿಶ್ವಾವಸು ಸಂವತ್ಸರದ ಆರಂಭವಾಗುತ್ತದೆ. ಈ ಸಂವತ್ಸರದಲ್ಲಿ ಮೇಷದಿಂದ ಮೀನದ ತನಕ ಹನ್ನೆರಡು ರಾಶಿಗಳವರಿಗೆ ಶುಭಾಶುಭ ಫಲಗಳು ಏನಿವೆ ಎಂಬುದರ ವಿವರ ಇಲ್ಲಿದೆ. ಇದಕ್ಕಾಗಿ ಶನಿ, ಗುರು, ರಾಹು- ಕೇತು ಗ್ರಹಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಇದು ಗ್ರಹ ಗೋಚಾರದಲ್ಲಿ ತಿಳಿಸುವ ಭವಿಷ್ಯ. ವೈಯಕ್ತಿಕ ಜಾತಕದಲ್ಲಿನ ಗ್ರಹ ಸ್ಥಿತಿ ಹಾಗೂ ದಶಾಭುಕ್ತಿ ಇತ್ಯಾದಿ ವಿಚಾರಗಳನ್ನು ಸಹ ಪರಾಂಬರಿಸಬೇಕು. ಆದರೆ ಗೋಚಾರ ರೀತಿಯಾಗಿ ಗ್ರಹಗಳು ಬೀರುವಂಥ ಪ್ರಭಾವವು ಇದ್ದೇ ಇರುತ್ತದೆ.

ಈ ಸಂವತ್ಸರದ ಗ್ರಹಸ್ಥಿತಿಗಳು ಹೀಗಿವೆ: ಮಾರ್ಚ್ ಇಪ್ಪತ್ತೊಂಬತ್ತನೇ ತಾರೀಕಿನಂದು ಶನಿ ಗ್ರಹ ಮೀನ ರಾಶಿ ಪ್ರವೇಶ ಮಾಡುತ್ತದೆ. ಮೇ 14ಕ್ಕೆ ಗುರು ಗ್ರಹವು ಮಿಥುನ ರಾಶಿಯನ್ನು ಪ್ರವೇಶಿಸುತ್ತದೆ. ಇನ್ನು ಮೇ ಹದಿನೆಂಟನೇ ತಾರೀಕಿನಂದು ರಾಹು ಗ್ರಹವು ಕುಂಭ ರಾಶಿಯಲ್ಲೂ ಹಾಗೂ ಕೇತು ಗ್ರಹವು ಸಿಂಹ ರಾಶಿಯಲ್ಲೂ ಸಂಚರಿಸುತ್ತದೆ. ಗುರು ಗ್ರಹ ಅಕ್ಟೋಬರ್ 18ನೇ ತಾರೀಕಿನಂದು ಕರ್ಕಾಟಕ ರಾಶಿಯನ್ನು ಪ್ರವೇಶಿಸಿ, ಡಿಸೆಂಬರ್ 5ನೇ ತಾರೀಕಿನಂದು ಮತ್ತೆ ಮಿಥುನ ರಾಶಿಯಲ್ಲಿ ಸಂಚರಿಸುತ್ತಾ ಸಂವತ್ಸರ ಪರ್ಯಂತವಾಗಿ ಅದೇ ರಾಶಿಯಲ್ಲಿ ಇರುತ್ತದೆ.

ಸಿಂಹ ರಾಶಿಯವರ ಯುಗಾದಿ ವರ್ಷ ಭವಿಷ್ಯ:

ಶನಿ (ಎಂಟನೇ ಮನೆ ಸಂಚಾರ):

ನಾನಾ ರೀತಿಯಲ್ಲಿ ಅವಮಾನಗಳನ್ನು ಎದುರಿಸಬೇಕಾಗುತ್ತದೆ. ಅದರಲ್ಲೂ ಸಂಗಾತಿಯಿಂದ, ಅವರ ಸಂಬಂಧಿಕರಿಂದ ವಿಪರೀತ ಅವಮಾನಗಳು ಆಗುತ್ತವೆ. ಹೊಟ್ಟೆ, ನರ, ಜೀರ್ಣಾಂಗ ವ್ಯವಸ್ಥೆ, ಬೆನ್ನು, ಕಾಲಿನ ಮೀನಖಂಡಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳು ಬಹಳ ಆತಂಕವನ್ನು ನೀಡುತ್ತವೆ. ನೀವಾಗಿಯೇ ಶತ್ರುಗಳನ್ನು ಹುಟ್ಟು ಹಾಕಿಕೊಳ್ಳುತ್ತೀರಿ. ವಿವಾಹ ವಯಸ್ಕರಾಗಿ ಮದುವೆಗಾಗಿ ಪ್ರಯತ್ನ ಪಡುತ್ತಿರುವವರಿಗೆ ನಾನಾ ರೀತಿಯ ಅಡೆತಡೆಗಳು ಎದುರಾಗುತ್ತವೆ. ಇನ್ನು ನಿಶ್ಚಿತಾರ್ಥವಾದ ನಂತರದಲ್ಲಿ ಮದುವೆ ಮುರಿದು ಬೀಳುವ ಸಾಧ್ಯತೆಗಳಿವೆ. ವ್ಯಾಪಾರ- ವ್ಯವಹಾರಗಳನ್ನು ಮಾಡುತ್ತಿರುವವರು, ಈಗ ಮನೆ ಕಟ್ಟಿಸುತ್ತಿರುವವರು, ಸೈಟು ಖರೀದಿ ಮಾಡಬೇಕು ಎಂದಿರುವವರು ಬಜೆಟ್ ಮೇಲೆ ಹಿಡಿತ ಇಟ್ಟುಕೊಳ್ಳಿ. ವಿಪರೀತ ಸಾಲ ಮಾಡುವುದಕ್ಕೆ ಹೋಗಬೇಡಿ. ಯಾವುದೇ ಕಾರಣಕ್ಕೂ ಉದ್ಯೋಗ ಬಿಡಬೇಡಿ. ಒಂದು ಕೆಲಸ ಕಳೆದುಕೊಂಡಲ್ಲಿ ಮತ್ತೆ ಹುಡುಕಿಕೊಳ್ಳುವಲ್ಲಿ ಹೈರಾಣ ಆಗುತ್ತೀರಿ.

ಗುರು (ಹನ್ನೊಂದನೇ ಮನೆ- ಹನ್ನೆರಡನೇ ಮನೆ):

ಈ ಸಂವತ್ಸರದಲ್ಲಿ ಬಹಳ ಗೊಂದಲದಲ್ಲಿಯೇ ಕಾರು, ದ್ವಿಚಕ್ರ ವಾಹನ, ದುಬಾರಿ ಬಟ್ಟೆಗಳು ಇತ್ಯಾದಿಗಳನ್ನು ಖರೀದಿ ಮಾಡುತ್ತೀರಿ. ಮತ್ತೂ ಕೆಲವರು ಫ್ಲ್ಯಾಟ್, ಮನೆಯನ್ನು ಸಹ ಖರೀದಿಸುವ ಸಾಧ್ಯತೆಗಳಿವೆ. ನಿಮ್ಮ ತಾತ್ಕಾಲಿಕ ಆದಾಯವನ್ನೋ ನಂಬಿಕೊಂಡ ಅಥವಾ ಪಿಎಫ್- ಪಿಪಿಎಫ್, ಮ್ಯೂಚುವಲ್ ಫಂಡ್ ನಲ್ಲಿ ಮಾಡಿದ್ದ ಹೂಡಿಕೆಯನ್ನು ತೆಗೆದು ವಸ್ತುಗಳ ಖರೀದಿ ಸಲುವಾಗಿ ಖರ್ಚು ಮಾಡುವುದಕ್ಕೆ ಹೋಗಬೇಡಿ. ಈ ಒಂದು ವರ್ಷದಲ್ಲಿ ಬರುವ ಹಣವನ್ನು ಉಳಿಸಿಕೊಳ್ಳಿ. ಅಕ್ಟೋಬರ್ ನಿಂದ ಡಿಸೆಂಬರ್ ಮಧ್ಯೆ ಮಾತ್ರ ಕೆಲವು ದುಃಖದ ಸನ್ನಿವೇಶಗಳು ಎದುರಾಗಲಿವೆ.

ಇದನ್ನೂ ಓದಿ: ಕರ್ಕಾಟಕ ರಾಶಿಯವರ ವಿಶ್ವಾವಸು ಸಂವತ್ಸರ ಯುಗಾದಿ ವರ್ಷ ಭವಿಷ್ಯದ ಫಲಾಫಲ ಇಲ್ಲಿದೆ

ರಾಹು (ಏಳನೇ ಮನೆ), ಕೇತು (ಒಂದನೇ ಮನೆ):

ಪಾರ್ಟನರ್ ಷಿಪ್ ವ್ಯವಹಾರಗಳನ್ನು ಮಾಡುತ್ತಿರುವವರ ಮಧ್ಯೆ ಅಭಿಪ್ರಾಯ ಭೇದ- ಮನಸ್ತಾಪಗಳು ಕಾಡಲಿವೆ. ವಿವಾಹದ ಆಚೆಗಿನ ಸಂಬಂಧದ ಸೆಳೆತ ಕಾಡುತ್ತದೆ. ಸಂಬಂಧವೂ ಏರ್ಪಡಬಹುದು. ಇನ್ನು ನಿಮ್ಮಲ್ಲಿ ಕೆಲವು ವಿವಾಹಿತರಿಗೆ ಡೈವೋರ್ಸ್ ತನಕ ಹೋಗುವ ಯೋಗ ಇದೆ. ಜನ್ಮ ಜಾತಕದಲ್ಲಿಯೂ ಗ್ರಹ ದೋಷಗಳು ಇದ್ದಲ್ಲಿ ಡೈವೋರ್ಸ್ ಆಗಿಬಿಡುತ್ತದೆ. ಇನ್ನು ಮಾನಸಿಕ ಖಿನ್ನತೆ, ಗೊಂದಲ, ಗಾಬರಿ- ಆತಂಕಗಳು ಕಾಡುತ್ತವೆ. ಎಲ್ಲರೂ ನಿಮಗೆ ಏನೋ ಕೆಟ್ಟದ್ದನ್ನೇ ಮಾಡುತ್ತಿದ್ದಾರೆ ಎಂಬ ವಿಚಿತ್ರವಾದ ಭ್ರಮೆ ಮೂಡುತ್ತದೆ. ಇದನ್ನು ನಿಜ ಎಂದುಕೊಂಡು ಹಿತೈಷಿಗಳ ಜೊತೆಗೇ ಜಗಳ- ಕಲಹಗಳನ್ನು ಮಾಡಿಕೊಳ್ಳುತ್ತೀರಿ.

ಪರಿಹಾರ:

ನಿಮ್ಮಿಂದ ಸಾಧ್ಯವಿದ್ದಲ್ಲಿ ನವಗ್ರಹ ಹೋಮವನ್ನು ಮಾಡಿಸಿಕೊಳ್ಳಿ. ಶನಿ ಗ್ರಹದ ವಿಶೇಷ ಆರಾಧನೆ ಆಗಬೇಕು. ಇನ್ನು ಗಣಪತಿ ದೇವಾಲಯಕ್ಕೆ ನಿಮಗೆ ಸಾಧ್ಯವಾದಾಗ ಹೋಗಿಬನ್ನಿ.

ಜ್ಯೋತಿಷ್ಯಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 3:12 pm, Sat, 29 March 25