Numerology: ಯಾವುದೇ ತಿಂಗಳಿನ 2, 20, 29ನೇ ತಾರೀಕಿನಂದು ಹುಟ್ಟಿದವರ ಸ್ವಭಾವ ಹೀಗಿರುತ್ತದೆ

Numerology: ಯಾವುದೇ ತಿಂಗಳಿನ 2, 20, 29ನೇ ತಾರೀಕಿನಂದು ಹುಟ್ಟಿದವರ ಸ್ವಭಾವ ಹೀಗಿರುತ್ತದೆ
ಅಡಾಲ್ಫ್ ಹಿಟ್ಲರ್ (ಸಂಗ್ರಹ ಚಿತ್ರ)

ಯಾವುದೇ ತಿಂಗಳಿನ 2, 20, 29ನೇ ತಾರೀಕಿನಂದು ಹುಟ್ಟಿದವರ ಸ್ವಭಾವ ಹೇಗಿರುತ್ತದೆ ಎಂಬುದರ ಬಗ್ಗೆ ಆಸಕ್ತಿಕರ ಮಾಹಿತಿ ಇಲ್ಲಿದೆ. ಸಂಖ್ಯಾಶಾಸ್ತ್ರ ಸರಣಿಯ ಮುಂದುವರಿದ ಭಾಗ ಇಲ್ಲಿದೆ.

TV9kannada Web Team

| Edited By: Apurva Kumar Balegere

Jun 01, 2021 | 5:28 PM


ನ್ಯೂಮರಾಲಜಿ ಸರಣಿಯಲ್ಲಿ ಇನ್ನೊಂದು ಸಂಖ್ಯೆಯ ಬಗ್ಗೆ ಆಸಕ್ತಿಕರ ವಿಷಯವನ್ನು ಇಂದಿನ ಲೇಖನದಲ್ಲಿ ತಿಳಿಸಲಾಗುತ್ತಿದೆ. ವಿಚಿತ್ರ ಏನು ಅಂದರೆ, ಇದಕ್ಕೂ ಮುಂಚೆ ಸಂಖ್ಯೆ 7ರ ವೈಶಿಷ್ಟ್ಯದ ಬಗ್ಗೆ ಪ್ರಕಟಿಸಲಾಗಿತ್ತು. ಆ ಸಂಖ್ಯೆಗೂ ಹಾಗೂ ಇದಕ್ಕೂ ಬಲು ನಂಟು. ಯಾವುದೇ ತಿಂಗಳಿನ 2, 11 (ಇದು ಮಾಸ್ಟರ್ ನಂಬರ್ ಇಲ್ಲಿ ಸೇರಿಸಿಕೊಳ್ಳುವುದು ಅಷ್ಟು ಸಮಂಜಸ ಅಲ್ಲ), 20, 29 ಈ ದಿನಾಂಕಗಳಲ್ಲಿ ಹುಟ್ಟಿದವರ ಜನ್ಮ ಸಂಖ್ಯೆ 2 ಆಗುತ್ತದೆ. ಆದರೆ ಸಂಖ್ಯೆ 11 ಮಾತ್ರ ಮಾಸ್ಟರ್ ನಂಬರ್ ಆಗುವುದರಿಂದ ಆ ದಿನ ಹುಟ್ಟಿದವರ ಗುಣ- ಸ್ವಭಾವ, ಸಾಮರ್ಥ್ಯ ಹಾಗೂ ಮಿತಿ ಬೇರೆಯದೇ ರೀತಿಯಲ್ಲಿ ಇರುತ್ತದೆ. ಆದರೆ ಉಳಿದ ದಿನಗಳಲ್ಲಿ ಹುಟ್ಟಿದವರಿರುತ್ತಾರಲ್ಲ, ಅಂಥವರಲ್ಲಿ ವೈರುಧ್ಯಗಳನ್ನು ಗಮನಿಸಬಹುದು. ಅದು ಹೇಗೆ ಅನ್ನೋದಾದರೆ, ಅಕ್ಟೋಬರ್ 2ನೇ ತಾರೀಕಿನಂದು ಗಾಂಧೀಜಿ ಜನ್ಮದಿನ. ಇಡೀ ವಿಶ್ವಕ್ಕೆ ಶಾಂತಿಯ ಸಂದೇಶ ನೀಡಿದ, ಬದುಕಿದ ಸಂತನ ವ್ಯಕ್ತಿತ್ವದ ಮಹಾನ್ ಚೇತನ ಅವರು. ಇನ್ನು ಅಡಾಲ್ಫ್ ಹಿಟ್ಲರ್ ಎಂಬ ಕ್ರೂರ ಸರ್ವಾಧಿಕಾರಿ ಹುಟ್ಟಿದ್ದು ಏಪ್ರಿಲ್ 20ನೇ ತಾರೀಕು (2+0=2). ಮೊದಲೇ ಹೇಳಿದ ಹಾಗೆ, ಗಾಂಧೀಜಿ ಜನ್ಮ ಸಂಖ್ಯೆಯೂ 2 ಹಾಗೂ ಅಡಾಲ್ಫ್ ಹಿಟ್ಲರ್​ನದೂ 2.

ಒಬ್ಬರು ಜಗದ್ವಿಖ್ಯಾತಿ ಪಡೆದರೆ, ಮತ್ತೊಬ್ಬರು ಜಗತ್ತಲ್ಲೇ ಕುಖ್ಯಾತಿ ಪಡೆದರು. ಇಬ್ಬರಿಗೂ ಅನುಯಾಯಿಗಳಿದ್ದರು. ಈ ಲೇಖನದಲ್ಲಿ ತಿಳಿಸಬೇಕಾದದ್ದೇನೆಂದರೆ, ಈ ದಿನದಲ್ಲಿ, ಅಂದರೆ ಸಂಖ್ಯೆ 2ರಲ್ಲಿ ಜನಿಸಿದವರು ಏನನ್ನು ಬಿತ್ತಿ, ಪೋಷಿಸುತ್ತಾರೋ ಅದು ಬೆಳೆಯುತ್ತಾ ಹೋಗುತ್ತದೆ. ಈ ಸಂಖ್ಯೆಯಲ್ಲಿ ಸಂತನೊಬ್ಬನನ್ನು ಕಂಡಂತೆಯೇ, ಮಹಾನ್ ಕ್ರೂರಿಯನ್ನೂ ಕಾಣಬಹುದು. ಈ ದಿನದಲ್ಲಿ ಜನಿಸಿದವರ ಅಧಿಪತಿ ಚಂದ್ರ ಆಗಿರುತ್ತಾನೆ. ಆ ಚಂದ್ರ ಎಷ್ಟು ಪ್ರಬಲ ಅಥವಾ ದುರ್ಬಲ ಎಂಬುದರ ಆಧಾರದಲ್ಲಿ ಭವಿಷ್ಯ ನಿರ್ಧಾರ ಆಗುತ್ತದೆ. ಇನ್ನು ಎರಡು ಸಂಖ್ಯೆ ಇರುವ ಕಡೆ ಒಟ್ಟು ಮೂರು ಗ್ರಹದ ಪ್ರಭಾವ ಇರುತ್ತದೆ.

ಸಂಖ್ಯೆ 29ರಲ್ಲಿ ಚಂದ್ರ, ಕುಜ ಹಾಗೂ ಚಂದ್ರನ ಪ್ರಭಾವ ಇರುತ್ತದೆ. ಇವರ ಮನಸ್ಸಿನೊಳಗಿನ ತಾಕಲಾಟವನ್ನು ಸುಲಭಕ್ಕೆ ಹೊರ ಹಾಕಲಾರರು. ತಮ್ಮೊಳಗೆ ಸುಟ್ಟುಕೊಳ್ಳುತ್ತಾ ಇರುತ್ತಾರೆ. ಇನ್ನು 20ನೇ ತಾರೀಕಿನಂದು ಜನಿಸಿದವರಲ್ಲಿ ಏರಿಳಿತಗಳು ಹೆಚ್ಚಿರುತ್ತದೆ. ಪ್ರೇರಣೆ ಇಲ್ಲದಿದ್ದಲ್ಲಿ ಕೆಲಸ ಮುಂದುವರಿಸುವುದು ಇವರಿಗೆ ಕಷ್ಟ. ಆರಂಭದಲ್ಲಿನ ಉತ್ಸಾಹ ಅಂತ್ಯದ ತನಕ ಉಳಿಯುವುದಿಲ್ಲ ಅಥವಾ ಇವರಿಗೇ ಉಳಿಸಿಕೊಳ್ಳುವುದಕ್ಕೆ ಆಗಲ್ಲ. ಚಂದ್ರನ ಪ್ರಭಾವ ಹೆಚ್ಚಿರುವ 2ನೇ ತಾರೀಕಿನಂದು ಹುಟ್ಟಿದವರಿಗೆ ಹೆಂಗರುಳು ಇರುತ್ತದೆ. ಬೇಗನೇ ಎಲ್ಲದಕ್ಕೂ ಕರಗಿ ಹೋಗುತ್ತಾರೆ. ವೈದ್ಯಕೀಯ ಕ್ಷೇತ್ರ, ಸೇವೆ, ರಾಜಕಾರಣ ಈ ಕ್ಷೇತ್ರಗಳಲ್ಲಿ ಇವರ ಛಾಪನ್ನು ನೋಡಬಹುದು.

ಇವರು ನಂಬಿದ ಸಿದ್ಧಾಂತ ಹೇಗೆ ಇರಲಿ, ಯಾವುದೇ ಇರಲಿ ಅದಕ್ಕಾಗಿ ತಮಗೆ ವಿರುದ್ಧವಾಗುವಂತಿದ್ದರೂ ಅದರಿಂದ ಹಿಂತಿರುಗಲ್ಲ. ಈ ದಿನಾಂಕದಂದು ಹುಟ್ಟಿದ ಮಕ್ಕಳನ್ನು ಸಾಕುವುದು ತಂದೆ- ತಾಯಿಗೆ ಬಹಳ ಕಷ್ಟದ ಕೆಲಸ. ಮೂಡಿ ಸ್ವಭಾವದ ಇವರು ಸುಲಭಕ್ಕೆ ಯಾರೊಂದಿಗೂ ಬೆರೆಯುವುದಿಲ್ಲ. ಸೂಕ್ಷ್ಮ ಸಂಗತಿಗಳು ಬಹಳ ಬೇಹ ಅರ್ಥ ಮಾಡಿಕೊಳ್ಳುತ್ತಾರೆ. ಇನ್ನೂ ತಮಾಷೆಯ ಸಂಗತಿ ಏನೆಂದರೆ, ಇವರಿಗೆ ಊಟಕ್ಕೆ ಬಡಿಸುವುದು ಕೂಡ ಸವಾಲೇ ಸರಿ. ಬಾಯಿ ಬಿಟ್ಟು ಏನನ್ನೂ ಕೇಳದ ಇವರನ್ನು ಅರ್ಥ ಮಾಡಿಕೊಳ್ಳುವುದೇ ಮತ್ತೂ ಕಷ್ಟದ ಕೆಲಸ. ಇವರ ಪೈಕಿ ಬಹಳ ಮಂದಿಗೆ ತಾಯಿಯೊಂದಿಗೆ ನಂಟು ಗಾಢವಾಗಿರುತ್ತದೆ. ಅವರ ಪ್ರಭಾವವೂ ಇರುತ್ತದೆ. ತಮ್ಮ ಮನಸ್ಸಿನಲ್ಲಿನ ವಿಚಾರವನ್ನು ಯಾರ ಜತೆಗೂ ಹಂಚಿಕೊಳ್ಳದಿದ್ದಲ್ಲಿ ನಾನಾ ಬಗೆಯಲ್ಲಿ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಾರೆ.

ಇದನ್ನೂ ಓದಿ: Numerology: ಹೆಸರಲ್ಲೇನಿದೆ ಅನ್ನೋ ಮುಂಚೆ ಏನೇನೆಲ್ಲ ಇದೆ ಎಂಬುದನ್ನು ತಿಳಿಯಿರಿ

ಇದನ್ನೂ ಓದಿ: Numerology Number 7: ಯಾವುದೇ ತಿಂಗಳ 7, 16, 25ರಂದು ಹುಟ್ಟಿದವರ ಬಗ್ಗೆ ಸಂಖ್ಯಾಶಾಸ್ತ್ರದಲ್ಲಿ ಏನು ಹೇಳಲಾಗಿದೆ ಗೊತ್ತೆ?

(Nature and characteristics of people who born on 2nd, 20th and 29th of any month according to numerology)

Follow us on

Related Stories

Most Read Stories

Click on your DTH Provider to Add TV9 Kannada