Numerology Number 7: ಯಾವುದೇ ತಿಂಗಳ 7, 16, 25ರಂದು ಹುಟ್ಟಿದವರ ಬಗ್ಗೆ ಸಂಖ್ಯಾಶಾಸ್ತ್ರದಲ್ಲಿ ಏನು ಹೇಳಲಾಗಿದೆ ಗೊತ್ತೆ?
Numerology: ಯಾವುದೇ ತಿಂಗಳಿನ 7, 16, 25ನೇ ತಾರೀಕಿನಂದು ಹುಟ್ಟಿದವರ ಸ್ವಭಾವ ಹೇಗಿರುತ್ತದೆ ಗೊತ್ತೆ? ಇಲ್ಲಿದೆ ಆಸಕ್ತಿಕರವಾದ ಸಂಗತಿಗಳು.
ಸ್ವಲ್ಪ ವಿಚಿತ್ರ ಎನಿಸಿದರೂ ಆಸಕ್ತಿಕರ ಹಾಗೂ ಎಚ್ಚರಿಕೆಯಿಂದ ಇರಬೇಕಾದ ಸಂಖ್ಯಾಶಾಸ್ತ್ರದ ವಿಚಾರವನ್ನು ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಒಂದು ನಿರ್ದಿಷ್ಟ ಸಂಖ್ಯೆಯ ಬಗ್ಗೆ ಮಾತ್ರ ವಿವರಣೆಗಳು ಇರುತ್ತವೆ. ಯಾವುದು ಆ ಸಂಖ್ಯೆ ಅಂತೀರಾ? ಅದು ಸಂಖ್ಯೆ 7. ಯಾವುದೇ ತಿಂಗಳಿನ 7, 16, 25ನೇ ತಾರೀಕಿನಿಂದ ಹುಟ್ಟಿದವರ ಜನ್ಮಸಂಖ್ಯೆ 7 ಆಗುತ್ತದೆ. ಈ ಸಂಖ್ಯೆಯವರ ಅಧಿಪತಿ ಕೇತು ಗ್ರಹ. ಬಹಳ ನಿಗೂಢವಾದ ವ್ಯಕ್ತಿಗಳಿವರು. ತಮ್ಮ ವಯಸ್ಸಿಗೆ ಮೀರಿದ ಪ್ರಬುದ್ಧತೆ ಇವರಿಗೆ ಇರುತ್ತದೆ. ಅಧ್ಯಾತ್ಮದ ಕಡೆಗೆ ಹೆಚ್ಚು ಒಲವು ಇರುತ್ತದೆ. ಸೇವಾ ಮನೋಭಾವ ಇರುತ್ತದೆ. ಇವೆಲ್ಲದರ ಜತೆಗೆ ವೈರಾಗ್ಯ ಕೂಡ ಇರುತ್ತದೆ.
ಈ ದಿನದಲ್ಲಿ ಹುಟ್ಟಿದ ಮಕ್ಕಳ ತಂದೆ- ತಾಯಂದಿರು ಇವರಿಗೆ ಬಹಳ ಸಣ್ಣ ವಯಸ್ಸಿನಿಂದಲೇ ಪ್ರೀತಿಯಿಂದ ಸಲುಹಬೇಕು. ಮದುವೆ, ಮಕ್ಕಳು, ಬಂಧು- ಬಳಗ, ಸ್ನೇಹಿತರ ಮಧ್ಯ ಕಾಲ ಕಳೆಯುವಂತೆ ಮಾಡಬೇಕು. ಜನ ಹೆಚ್ಚಿಗೆ ಇರುವ ಕಡೆಗೆ ಇರಲು ಬಯಸದ ಈ ಏಳರ ವ್ಯಕ್ತಿಗಳನ್ನು ಮನಸ್ಸು ಬಿಚ್ಚಿ ಮಾತನಾಡುವಂತೆ ಮಾಡುವಂತೆ ಬಹಳ ಕಷ್ಟದ ಕೆಲಸ. ಇವರಿಗೇನು ಬೇಕು, ಹೇಗಿರಬೇಕು ಅನ್ನೋದನ್ನ ಎದುರಿನವರು ಕಂಡುಕೊಳ್ಳಬೇಕೇ ಹೊರತು ಇವರೇನನ್ನೂ ಹೇಳಲಾರರು. ಪ್ರೀತಿ- ಪ್ರೇಮದ ವಿಚಾರದಲ್ಲೂ ಹಾಗೇ.
ಮನಸ್ಸಿನೊಳಗಿನ ಗುಟ್ಟನ್ನು ಸುಲಭವಾಗಿ ಬಿಟ್ಟುಕೊಡದ ಕಾರಣಕ್ಕಾಗಿಯೇ ಇವರಿಗೆ ಪ್ರೇಮ ವೈಫಲ್ಯ ಇರುತ್ತದೆ. ಇನ್ನು ಇತರರಿಂದ ವಿಪರೀತ ನಿಷ್ಠೆಯನ್ನು ಬಯಸುವ ಈ ಸಂಖ್ಯೆಯವರು, ಸುಲಭಕ್ಕೆ ಯಾರಿಗೂ ಹತ್ತಿರ ಆಗುವವರಲ್ಲ. ಆದರೆ ಒಮ್ಮೆ ಹಚ್ಚಿಕೊಂಡರೆ ಮುಗಿಯಿತು, ಆ ಒಬ್ಬ ವ್ಯಕ್ತಿಯೇ ಇವರ ಪಾಲಿಗೆ ಜಗತ್ತಾಗಿರುತ್ತಾರೆ. ಸಾಧ್ಯವಾದಷ್ಟೂ ನಿರಾಶೆ ಭಾವನೆಯನ್ನು ಇವರು ಕಡಿಮೆ ಮಾಡಿಕೊಳ್ಳಬೇಕು. ಎಲ್ಲರ ಬಗ್ಗೆಯೂ ಸ್ನೇಹ, ವಿಶ್ವಾಸ ಇಟ್ಟುಕೊಂಡು, ತಮ್ಮ ಜವಾಬ್ದಾರಿಯನ್ನು ಇತರರಿಗೂ ಹಂಚಿ, ಕೆಲಸ ಮಾಡಿಸಿಕೊಂಡರೆ ಒತ್ತಡ ಕಡಿಮೆ ಮಾಡಿಕೊಳ್ಳಬಹುದು.
ಇನ್ನು ಏಳರ ಸಂಖ್ಯೆಯವರಿಗೆ ಹೆಚ್ಚಿನ ಪಕ್ಷ ಸಾಂಸಾರಿಕವಾಗಿ ನೆಮ್ಮದಿ ಸಿಕ್ಕುವುದು ಕಷ್ಟ. ಕೆಲವರು ಮದುವೆಯಾದರೂ ಸಂಸಾರಕ್ಕೆ ಅಷ್ಟೇನೂ ಅಂಟಿಕೊಳ್ಳದೆ ಉಳಿದುಬಿಡುತ್ತಾರೆ. ಮತ್ತೆ ಕೆಲವರು ಮದುವೆಯೇ ಆಗದೆ ಉಳಿದುಬಿಡುತ್ತಾರೆ. ಏಕಾಂತವನ್ನು ಹೆಚ್ಚು ಇಷ್ಟಪಡುವ ಕಾರಣ ಕೂಡ ಅದರ ಹಿಂದೆ ಇರುತ್ತದೆ. 7ನೇ ದಿನಾಂಕದಲ್ಲಿ ಹುಟ್ಟಿದವರ ಮೇಲೆ ಕೇತುವಿನ ಪೂರ್ಣ ಪ್ರಭಾವವನ್ನು ಕಾಣಬಹುದಾದರೆ, 16ನೇ ತಾರೀಕಿನಂದು ಹುಟ್ಟಿದವರ ಮೇಲೆ ಸೂರ್ಯ, ಶುಕ್ರ ಹಾಗೂ ಕೇತುವಿನ ಪ್ರಭಾವ ಮತ್ತು 25ನೇ ತಾರೀಕಿನಂದು ಹುಟ್ಟಿದವರಿಗೆ ಚಂದ್ರ, ಬುಧ ಹಾಗೂ ಕೇತು ಈ ಮೂರೂ ಗ್ರಹದ ಪ್ರಭಾವ ಇರುತ್ತದೆ.
ಈ ಮೂರು ತಾರೀಕಿನಂದು ಹುಟ್ಟಿದವರ ಸ್ವಭಾವಗಳಲ್ಲಿ ವ್ಯತ್ಯಾಸಗಳನ್ನು ಕಾಣಬಹುದು. ಆದರೆ ಕೇತುವಿನ ಪೂರ್ಣ ಪ್ರಭಾವವು 7ನೇ ತಾರೀಕಿನಂದು ಹುಟ್ಟಿದವರ ಮೇಲೆ ಇರುತ್ತದೆ. ಇವರ ಅತಿದೊಡ್ಡ ಸಾಮರ್ಥ್ಯ ಏನೆಂದರೆ ಏಕಾಗ್ರತೆ, ತಾದಾತ್ಮ್ಯ, ಕೆಲಸದಲ್ಲಿ ತೊಡಗಿಕೊಳ್ಳುವ ರೀತಿ. ಒಂದು ಕೆಲಸ ಅಂದರೆ ಅದರಲ್ಲೇ ಮುಳುಗಿ ಹೋಗುತ್ತಾರೆ. ತಮ್ಮ ಅಕ್ಕಪಕ್ಕ ಏನಾಗುತ್ತಿದೆ ಎಂಬುದು ಸಹ ಗೊತ್ತಾಗುವುದಿಲ್ಲ. ಈ ದಿನಾಂಕದಲ್ಲಿ ಹುಟ್ಟಿದವರು ಕಲೆ, ಮಾಧ್ಯಮ, ಸಿನಿಮಾ, ಸಂಶೋಧನೆ, ಚಿತ್ರಕಲೆ, ನಿಗೂಢ ವಿದ್ಯೆಗಳು ಇಂಥದ್ದರಲ್ಲಿ ತಮ್ಮನ್ನು ತೊಡಗಿಸಿಕೊಂಡು, ತುಂಬ ದೊಡ್ಡ ಹೆಸರು ಮಾಡುತ್ತಾರೆ. ಆದರೆ ಮೊದಲೇ ಹೇಳಿದಂತೆ ಸಾಂಸಾರಿಕವಾಗಿ ಇವರು ಯಶಸ್ಸು ಪಡೆಯುವುದು ಕಷ್ಟ.
ಇದನ್ನೂ ಓದಿ: Numerology Predictions: 1ರಿಂದ 9ರ ಸಂಖ್ಯೆಗೆ ಯಾವ ದಿನದಲ್ಲಿ ಹುಟ್ಟಿದರೆ ಯಾವ ಗ್ರಹದ ಪ್ರಭಾವ? ಹೇಗಿರುತ್ತದೆ ಸ್ವಭಾವ?
ಇದನ್ನೂ ಓದಿ: Gemstones: ರಾಶಿಗೆ ಅನುಗುಣವಾಗಿ ಅದೃಷ್ಟರತ್ನ; ಜನ್ಮರಾಶಿಗೆ ಅನುಗುಣವಾಗಿ ಯಾವ ರತ್ನ ದಾರಣೆ ಉತ್ತಮ?
(Numerology number 7 behavior, nature and career other details)