AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Numerology Horoscope 11th October ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಅಕ್ಟೋಬರ್ 11ರ ದಿನಭವಿಷ್ಯ

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಅಕ್ಟೋಬರ್ 11ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Horoscope 11th October ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಅಕ್ಟೋಬರ್ 11ರ ದಿನಭವಿಷ್ಯ
ಸಂಖ್ಯಾಶಾಸ್ತ್ರ
ಸ್ವಾತಿ ಎನ್​ಕೆ
| Edited By: |

Updated on: Oct 11, 2025 | 1:50 AM

Share

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಮುಂದೆ ನಡೆಯುವ ಸಂಗತಿಗಳ ಬಗ್ಗೆ ಸುಳಿವು ದೊರೆಯಲಿದೆ. ನಿಮ್ಮ ಮಾತು ಬಹಳ ಪ್ರಭಾವಿ ಆಗಿರುತ್ತದೆ. ಹಲವರು ಅದರಿಂದ ಸಹಾಯ ಪಡೆಯುವ ಅವಕಾಶಗಳಿವೆ. ರಾಜಕೀಯ ಕ್ಷೇತ್ರದಲ್ಲಿ ಇರುವಂಥವರಾದರೆ ನಿಮ್ಮ ಬೆಂಬಲಿಗರು, ಅನುಯಾಯಿಗಳು ಹಲವು ರೀತಿಯಲ್ಲಿ ಅನುಕೂಲ ಮಾಡಿಕೊಡಲಿದ್ದೀರಿ. ಅದು ಉತ್ತಮ ಹುದ್ದೆಗಳನ್ನು ಕೊಡಿಸುವುದಕ್ಕೆ ಇರಬಹುದು ಅಥವಾ ಯಾವುದಾದರೂ ಕಾಂಟ್ರಾಕ್ಟ್ ಗಳನ್ನು ಕೊಡಿಸುವುದೇ ಇರಬಹುದು. ಒಟ್ಟಿನಲ್ಲಿ ನೀವು ಶಿಫಾರಸು ಮಾಡುವ ಮೂಲಕವಾಗಿ ಸಹಾಯ ಮಾಡಲಿದ್ದೀರಿ. ನಿಮ್ಮಲ್ಲಿ ಕೆಲವರು ತುಂಬ ದೊಡ್ಡ ಪ್ರಮಾಣದ ಕೃಷಿ ಜಮೀನನ್ನು ಗುತ್ತಿಗೆಗೆ ಪಡೆಯುವ ಅಥವಾ ಖರೀದಿ ಮಾಡುವ ಯೋಗ ಇದೆ. ಶಿಸ್ತನ್ನು ಅನುಸರಿಸುವುದರಿಂದ ಆಗುವ ಪ್ರಯೋಜನಗಳು ಹಲವು ಇವೆ. ಆದ್ದರಿಂದ ಯಾವುದೇ ಕೆಲಸವನ್ನು ಆಮೇಲೆ ಮಾಡಿದರಾಯಿತು ಎಂದು ಆಲೋಚನೆ ಮಾಡಸೆ, ತಕ್ಷಣವೇ ಮಾಡಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ನಿಮ್ಮ ಮನಸ್ಸಿಗೆ ವಿರುದ್ಧವಾಗಿ ನಡೆದುಕೊಳ್ಳಬೇಕಾಗಲಿದೆ. ಯಾವ ಕೆಲಸವನ್ನು ಮಾಡಬಾರದು, ಯಾವ ವ್ಯಕ್ತಿಯ ಜತೆಗೆ ಮಾತನಾಡಬಾರದು ಎಂದುಕೊಂಡಿರುತ್ತೀರೋ ಅದೇ ಕೆಲಸವನ್ನು ಮಾಡುತ್ತೀರಿ ಹಾಗೂ ನೀವಾಗಿಯೇ ಆ ವ್ಯಕ್ತಿಯ ಜತೆಗೆ ಮಾತನಾಡುತ್ತೀರಿ. ಹಾಗಂತ ನೀವು ಮಾನಸಿಕವಾಗಿ ದುರ್ಬಲರಾದಿರಿ ಅಂತಲ್ಲ. ಯಾವುದೇ ಮನಸ್ಸಿನ ಕಹಿಯನ್ನು ಮುಂದುವರಿಸಿಕೊಂಡು ಹೋಗುವುದಕ್ಕೆ ನಿಮಗೆ ಇಷ್ಟ ಇರುವುದಿಲ್ಲ ಎಂದರ್ಥ. ಮನಸ್ತಾಪಗಳು- ಅಭಿಪ್ರಾಯ ಭೇದಗಳು ನಿವಾರಣೆ ಆಗಲಿವೆ. ತಂದೆ- ತಾಯಿಯ ಆರೋಗ್ಯ ವಿಚಾರ ಒಂದಿಷ್ಟು ಚಿಂತೆಗೆ ಕಾರಣ ಆಗಬಹುದು. ಆದರೆ ಅದಕ್ಕೆ ಸೂಕ್ತ ಪರಿಹಾರೋಪಾಯಗಳು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಈ ದಿನ ಮಿಶ್ರ ಫಲಿತಾಂಶ ದೊರೆಯಲಿದೆ. ಕೆಲವು ಬೆಳವಣಿಗೆಗಳು ನಿಮಗೆ ಪೂರಕವಾಗಿಯೂ ಮತ್ತೆ ಕೆಲವು ಬಾಧಕವಾಗಿಯೂ ಪರಿಣಮಿಸಬಹುದು.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ದೊಡ್ಡ ಮಟ್ಟದಲ್ಲಿ ಅನಿರೀಕ್ಷಿತವಾಗಿ ಸಹಾಯ ದೊರೆಯಲಿದೆ. ನಿಮ್ಮ ಒಳಿತಿಗಾಗಿ ಸ್ನೇಹಿತರು, ಸಂಬಂಧಿಗಳು ಬಹಳ ಸಹಾಯ ಮಾಡಲಿದ್ದಾರೆ. ಭವಿಷ್ಯದಲ್ಲಿ ಅತಿ ದೊಡ್ಡ ಬದಲಾವಣೆ ತರುವಂಥ ನಿರ್ಧಾರವನ್ನು ತೆಗೆದುಕೊಳ್ಳಲು ನಿಮ್ಮಲ್ಲಿ ಆತ್ಮವಿಶ್ವಾಸ ಮೂಡಲಿದೆ. ಗುರು ಸಮಾನರಾದವರು ನಿಮಗೆ ನೀಡುವಂಥ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ. ಈ ಹಿಂದೆ ನೀವು ಕೆಲಸ ಮಾಡಿದ್ದ ಸ್ಥಳದಿಂದ ಮತ್ತೆ ಕರೆ ಬರುವಂಥ ಸಾಧ್ಯತೆಗಳಿವೆ. ಅದು ಕೂಡ ಉತ್ತಮವಾದ ಸಂಬಳ ಹಾಗೂ ಹುದ್ದೆಯ ಜತೆಗೆ ಆಫರ್ ಬರಲಿದೆ. ಆದ್ದರಿಂದ ಈ ಅವಕಾಶವನ್ನು ಬೇಡ ಅನ್ನುವ ಮುಂಚೆ ಒಂದಕ್ಕೆ ನಾಲ್ಕು ಬಾರಿಗೆ ಎಂಬಂತೆ ಆಲೋಚನೆಯನ್ನು ಮಾಡುವುದು ಒಳ್ಳೆಯದು. ಸಾಕು ಪ್ರಾಣಿಗಳನ್ನು ಮನೆಗೆ ತರುವಂಥ ಯೋಗ ಈ ದಿನ ನಿಮ್ಮ ಪಾಲಿಗೆ ಇದೆ. ದಿನದ ಕೊನೆ ಹೊತ್ತಿಗೆ ಮನಸ್ಸಿಗೆ ಹೆಚ್ಚು ಸಂತೋಷ ಎನಿಸುವಂಥ ವ್ಯಕ್ತಿ ಜತೆಗೆ ಮಾತುಕತೆ ಆಡಲಿದ್ದೀರಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ದಿಢೀರನೇ ಹಣಕಾಸಿನ ಹೊಂದಾಣಿಕೆ ಮಾಡಿಕೊಳ್ಳಬೇಕಾಗಲಿದೆ. ನಿಮ್ಮ ಸ್ನೇಹಿತರಿಗೋ ಅಥವಾ ಆಪ್ತರಿಗೋ ಮಾಡಿಕೊಡಬೇಕು ಎಂದುಕೊಂಡ ವಾಹನ, ಸೈಟು ಅಥವಾ ಮನೆಯನ್ನು ನೀವೇ ಖರೀದಿ ಮಾಡುವಂಥ ಸಾಧ್ಯತೆಗಳಿವೆ. ನೀವು ಇದಕ್ಕಾಗಿ ಬಹಳ ಶ್ರಮ ಪಟ್ಟಿರುತ್ತೀರಿ. ಆದರೆ ನೀವು ಯಾರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಇಷ್ಟೆಲ್ಲ ಶ್ರಮ ಹಾಕಿರುತ್ತೀರೋ ಆ ವ್ಯಕ್ತಿಯೇ ಅದನ್ನು ಸದ್ಯಕ್ಕೆ ಬೇಡ ಎಂದು ಹೇಳುವಂಥ ಸಾಧ್ಯತೆಗಳಿವೆ. ಆದ್ದರಿಂದ ಹೀಗೆ ಮಾಡಿದರೆ ಯಾರು ಏನೆಂದುಕೊಂಡಾರು ಎಂದು ಆಲೋಚಿಸಬೇಡಿ. ನಿಮ್ಮಲ್ಲಿ ಕೆಲವರು ದೂರ ಪ್ರಯಾಣಕ್ಕಾಗಿ ಸಿದ್ಧತೆ ಮಾಡಿಕೊಳ್ಳಬಹುದು ಅಥವಾ ಹೊರಟು ಬಿಡಬಹುದು. ಇದರಿಂದ ದೀರ್ಘಾವಧಿಯಲ್ಲಿ ಬಹಳ ದೊಡ್ಡ ಮಟ್ಟದ ಅನುಕೂಲ ಇದೆ. ಆದರೆ ಹೊರಡುವ ಮುನ್ನ ಕುಟುಂಬದ ಕಡೆಯಿಂದ ಒತ್ತಡವಂತೂ ಇರುತ್ತದೆ. ಆದರೆ ಅದು ನಿಮ್ಮ ಕೆಲಸ ಯಶಸ್ವಿಯಾದ ಮೇಲೆ ಕರಗಿ ಹೋಗಲಿದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಹಳೇ ವಿಚಾರಗಳನ್ನು ಕೆದಕುವುದಕ್ಕೆ ಹೋಗಬೇಡಿ. ತಂದೆ ಅಥವಾ ತಂದೆ ಸಮಾನರ ಜತೆಗೆ ಅಭಿಪ್ರಾಯ ಭೇದಗಳು ಕಾಣಿಸಿಕೊಳ್ಳಬಹುದು. ನೀವು ಬಹಳ ಉತ್ಸಾಹದಿಂದ ಮಾಡಿದ ಕೆಲಸಗಳು, ನಿರ್ಧಾರಗಳನ್ನು ಇತರರು ಬಹಳ ಕಡಿಮೆ ಮಾಡಿ ಮಾತನಾಡುವ ಸಾಧ್ಯತೆ ಇದೆ. ಈ ಕೆಲಸದಲ್ಲಿ ನೀವು ಹಾಕಿದ ಶ್ರಮ, ತೋರಿಸಿದ ನಿಷ್ಠೆ ಗೊತ್ತಿರುವ ವ್ಯಕ್ತಿಗಳು ಸಹ ಇಂಥ ಸನ್ನಿವೇಶದಲ್ಲಿ ನಿಮ್ಮ ಬೆಂಬಲಕ್ಕೆ ಬರುವುದಿಲ್ಲ. ಇನ್ನು ಯಾರು ವೃತ್ತಿನಿರತರು ಇದ್ದೀರೋ ಅಂಥವರಿಗೆ ಒಂದು ಬಗೆಯ ನಿರಾಸಕ್ತಿ ಕಾಡಲಿದೆ. ನಿಮ್ಮಲ್ಲಿ ಕೆಲವರಿಗೆ ನಿದ್ದೆಯ ಸಮಸ್ಯೆ ಕೂಡ ಆಗಬಹುದು. ಒಂದು ವೇಳೆ ಇದು ಗಂಭೀರವಾದ ಸಮಸ್ಯೆ ಎಂದೇನಾದರೂ ಎನಿಸಿದಲ್ಲಿ ವೈದ್ಯರನ್ನು ಭೇಟಿ ಮಾಡಿ, ಸೂಕ್ತ ಔಷಧೋಪಚಾರ ಮಾಡಿಕೊಳ್ಳುವುದು ಒಳ್ಳೆಯದು. ಲೇವಾದೇವಿ ವ್ಯವಹಾರ ಮಾಡುವಂಥವರಿಗೆ ಕೆಲವು ಬೆಳವಣಿಗೆಗಳಿಂದ ಆತಂಕ ಕಾಡಲು ಆರಂಭ ಆಗುತ್ತದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಕೃತಕ ಗರ್ಭಧಾರಣೆ ವಿಧಾನದ ಮೂಲಕ ಸಂತಾನ ಅಪೇಕ್ಷಿತರಿಗೆ ಬಹಳ ಒತ್ತಡದ ದಿನ ಇದಾಗಿರುತ್ತದೆ. ದಂಪತಿ ಮಧ್ಯೆ ಯಾವುದೋ ಮೂರನೇ ವ್ಯಕ್ತಿಯ ಕಾರಣಕ್ಕೆ ವಿಪರೀತ ಮಾತಿಗೆ ಮಾತು ಬೆಳೆಯುವಂಥ ಸಾಧ್ಯತೆ ಇದೆ. ಈ ಹಿಂದೆ ಯಾವಾಗಲೋ ಆಡಿದ ಮಾತಿನ ರೆಕಾರ್ಡಿಂಗ್ ಮುಂದಿಟ್ಟುಕೊಂಡು ಜೋರು ಜಗಳಗಳಾಗಬಹುದು. ಮುಖ್ಯವಾಗಿ ನಿಮಗೆ ಗೊತ್ತಿಲ್ಲದ ಸನ್ನಿವೇಶವನ್ನು ಊಹಿಸಿಕೊಂಡು, ನೀನು ಹೇಗೆ ನನಗೆ ಗೊತ್ತಿಲ್ಲವಾ ಎಂಬ ರೀತಿಯ ಮಾತುಗಳನ್ನು ಆಡಬೇಡಿ. ಹೊಂದಾಣಿಕೆಗೆ ಅವಕಾಶ ಇರುವಂಥದ್ದನ್ನು ನಿಮ್ಮ ಮಾತಿನ ಕಾರಣದಿಂದ ಕಳೆದುಕೊಳ್ಳುವ ಸಾಧ್ಯತೆಗಳಿವೆ. ಆದ್ದರಿಂದ ಈ ದಿನ ಸಮಯ ಸಿಕ್ಕಲ್ಲಿ ಹತ್ತು ನಿಮಿಷಗಳ ಕಾಲ ಧ್ಯಾನ ಮಾಡಿ. ಯಾವುದೇ ಮುಖ್ಯ ಕೆಲಸದ ಮೇಲೆ ಮನೆಯಿಂದ ಹೊರಗೆ ಹೊರಡುವ ಮುನ್ನ ಕಾತ್ಯಾಯಿನಿ ದೇವಿಯನ್ನು ಮನಸ್ಸಿನಲ್ಲಿ ಸ್ಮರಣೆ ಮಾಡುವುದು ಒಳ್ಳೆಯದು.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಉದ್ಯೋಗ ಸ್ಥಳದಲ್ಲಿ ನಿಮ್ಮ ಕೈ ಮೇಲಾಗುತ್ತದೆ. ಯಾರು ನಿಮ್ಮ ಸಾಮರ್ಥ್ಯ, ಶಕ್ತಿ ಹಾಗೂ ಪ್ರಭಾವದ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಾ ಬಂದಿರುತ್ತಾರೋ ಅಂಥವರೇ ಬೆರಗಾಗುವಂಥ ಸಾಧನೆಗಳು ನಿಮ್ಮಿಂದ ಆಗಲಿದೆ. ಇತರರು ತಮ್ಮಿಂದ ಸಾಧ್ಯವೇ ಇಲ್ಲ ಎಂದು ಕೈ ಚೆಲ್ಲಿ, ಅಸಹಾಯಕರಾದ ಸಂದರ್ಭದಲ್ಲಿ ನೀವು ಅದನ್ನು ಯಶಸ್ವಿಯಾಗಿ ಮಾಡಲಿದ್ದೀರಿ. ಈ ದಿನ ನಿಮಗೆ ದೈವಾನುಗ್ರಹ ಸಹ ಇರಲಿದೆ. ಆದ್ದರಿಂದ ಅವಕಾಶಗಳನ್ನು ಎಷ್ಟು ಚೆನ್ನಾಗಿ ಬಳಸಿಕೊಳ್ಳಲಿದ್ದೀರಿ ಎಂಬುದು ಮುಖ್ಯವಾಗುತ್ತದೆ. ಈಗಾಗಲೇ ಹೊಸ ಉದ್ಯಮವನ್ನೋ ಅಥವಾ ವ್ಯವಹಾರವನ್ನು ಆರಂಭಿಸಿದ್ದೀರಿ, ಅದು ನಿರೀಕ್ಷಿತ ಮಟ್ಟಕ್ಕೆ ಲಾಭ ತಂದುಕೊಡುತ್ತಿಲ್ಲ ಎಂದಾದಲ್ಲಿ ಈ ದಿನ ಅದು ಲಾಭದಾಯಕವಾಗಿ ಮಾಡುವುದಕ್ಕೆ ಬೇಕಾದ ಮಾರ್ಗೋಪಾಯಗಳು ದೊರೆಯುತ್ತವೆ. ಆದ್ದರಿಂದ ಒಟ್ಟಾರೆ ಈ ದಿನ ನಿಮ್ಮ ಪಾಲಿಗೆ ಉತ್ತಮವಾಗಿರುತ್ತದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಹೆಣ್ಣುಮಕ್ಕಳು ಪ್ರೀತಿ- ಪ್ರೇಮದಲ್ಲಿ ಇದ್ದಲ್ಲಿ ಅಂಥವರಿಗೆ ಬಹಳ ಮುಖ್ಯವಾದ ದಿನ ಇದಾಗಿರುತ್ತದೆ. ಇಷ್ಟು ಸಮಯ ಯಾವುದನ್ನು ಒಪ್ಪಿಸುವುದಕ್ಕೆ ಹಾಗೂ ಯಾವ ಬಗ್ಗೆ ತೀರ್ಮಾನಿಸುವುದಕ್ಕೆ ಭಾವನಾತ್ಮಕವಾಗಿ ಬಹಳ ಕಷ್ಟ ಎಂದೆನಿಸಿರುತ್ತದೋ ಅದು ಈ ದಿನ ಸಲೀಸಾಗಿ ಮುಗಿಯಲಿದೆ. ಉದ್ಯೋಗಕ್ಕೆ ಸಂಬಂಧಿಸಿದಂತೆ ಕೋರ್ಸ್ ವೊಂದಕ್ಕೆ ಸೇರುವುದಕ್ಕೆ ತೀರ್ಮಾನ ಮಾಡುವ ಸಾಧ್ಯತೆಗಳಿವೆ. ನಿಮ್ಮಲ್ಲಿ ಉದ್ಯೋಗ ಬದಲಾವಣೆಯ ಆಸಕ್ತಿ ಕೆರಳಲಿದೆ. ಒಂದು ವೇಳೆ ಕೆಲ ತಿಂಗಳ ಹಿಂದೆ ಪ್ರಯತ್ನ ಪಟ್ಟು, ಆ ನಂತರದಲ್ಲಿ ಬೇಡ ಎಂದುಕೊಂಡು ಸುಮ್ಮನಾಗಿದ್ದವರು ಸಹ ಈ ದಿನ ಜಾಬ್ ಕನ್ಸಲ್ಟೆನ್ಸಿಗಳ ಮೂಲಕವಾಗಿ ಕೆಲಸಕ್ಕೆ ಪ್ರಯತ್ನಿಸಲಿದ್ದೀರಿ. ನೀವು ಯಾರಿಗಾದರೂ ಸಾಲ ಕೊಟ್ಟು, ಬಹಳ ಸಮಯದಿಂದ ಅದು ವಾಪಸ್ ಬಂದಿಲ್ಲ ಎಂದಾಗಿದ್ದಲ್ಲಿ ಈ ದಿನ ಪ್ರಯತ್ನಿಸಿದಲ್ಲಿ ವಸೂಲಾಗುವ ಸಾಧ್ಯತೆ ಇದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ನಿಮಗೆ ಚೆನ್ನಾಗಿ ಗೊತ್ತಿರುವಂಥ ವಿಷಯದಲ್ಲೇ ನಿಮ್ಮಿಂದ ಕೆಲವು ತಪ್ಪುಗಳು ಆಗಬಹುದು. ಮುಖ್ಯವಾಗಿ ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ಅದರಲ್ಲೂ ಉದ್ಯೋಗ ಸ್ಥಳದಲ್ಲಿ ಮೇಲಧಿಕಾರಿಗಳು ನಿಮ್ಮನ್ನು ಪ್ರಶ್ನೆ ಕೇಳಿದಲ್ಲಿ ಒಂದು ಸಲ ಪರಿಶೀಲನೆ ಮಾಡಿ, ಆ ನಂತರವೇ ಉತ್ತರವನ್ನು ಹೇಳಿ. ಕೆಲವು ಜವಾಬ್ದಾರಿಗಳನ್ನು ನಿಮಗೆ ವಹಿಸುವುದಕ್ಕೆ ಕುಟುಂಬದಲ್ಲಿ ಹಾಗೂ ಉದ್ಯೋಗ ಸ್ಥಳದಲ್ಲಿ ಕೇಳಲಿದ್ದಾರೆ. ಮೇಲು ನೋಟಕ್ಕೆ ನಿಮಗೆ “ಇಷ್ಟೇ ಅಲ್ಲವಾ” ಎಂದು ಅನಿಸಬಹುದು. ಆದರೆ ಅದನ್ನು ನಿಮ್ಮಿಂದ ಯಶಸ್ವಿಯಾಗಿ ಮಾಡಿ ಮುಗಿಸುವುದಕ್ಕೆ ಬೇಕಾದಷ್ಟು ಸಮಯ ಹಾಗೂ ಉತ್ಸಾಹ ಇದೆಯೇ ಎಂಬುದನ್ನು ಆಲೋಚಿಸಿ, ಆ ನಂತರ ಉತ್ತರವನ್ನು ನೀಡಿ. ವಜ್ರ- ಪ್ಲಾಟಿನಂ, ಚಿನ್ನ- ಬೆಳ್ಳಿ ಅಥವಾ ಯಾವುದೇ ಬೆಲೆಬಾಳುವ ವಸ್ತುಗಳ ಖರೀದಿಯನ್ನು ಒಂದು ದಿನದ ಮಟ್ಟಿಗೆ ಮುಂದೂಡಿ.

ಲೇಖನ- ಎನ್‌.ಕೆ.ಸ್ವಾತಿ