
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಮಾರ್ಚ್ 26ರ ಗುರುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನವ ವಿವಾಹಿತರ ಮಧ್ಯೆ ಅಭಿಪ್ರಾಯ ಭೇದಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಅದರಲ್ಲಿಯೂ ಹಣಕಾಸಿನ ವಿಚಾರಕ್ಕೆ ಸಣ್ಣದಾಗಿ ಆರಂಭವಾಗುವ ಕಲಹ ತೀರಾ ಮನಶ್ಶಾಂತಿ ಹಾಳು ಮಾಡುವ ಮಟ್ಟಕ್ಕೆ ಹೋಗಲಿದೆ. ನೀವು ಒಂದು ವೇಳೆ ಈಗಾಗಲೇ ಸಾಲವನ್ನು ಪಡೆದುಕೊಂಡಿದ್ದೀರಿ ಎಂದಾದಲ್ಲಿ ತಕ್ಷಣವೇ ಹಿಂತಿರುಗಿಸುವಂತೆ ಕೆಲವರು ಕುತ್ತಿಗೆ ಮೇಲೆ ಕುಳಿತಂತಹ ಅನುಭವ ನಿಮಗೆ ಆಗಲಿದೆ. ಇತರರನ್ನು ಓಲೈಕೆ ಮಾಡುವ ಸಲುವಾಗಿ ನಿಮ್ಮ ಕೈಯಿಂದ ಹಣ ಕಳೆದುಕೊಳ್ಳುವ ಸಾಧ್ಯತೆ ಈ ದಿನ ಕಾಣಿಸುತ್ತಿದೆ. ಮುಖ್ಯವಾದ ಕಾಗದ ಪತ್ರಗಳ ವಿಚಾರಗಳು ಇದ್ದಲ್ಲಿ ಈ ದಿನ ಸಾಧ್ಯವಾದಷ್ಟು ಮುಂದಕ್ಕೆ ಹಾಕುವುದು ಉತ್ತಮ.
ಒಂದು ವೇಳೆ ರಾಜೀ-ಸಂಧಾನ ಆಗುವಂಥ ಅಸಮಾಧಾನಗಳು ಈಗಾಗಲೇ ಇದ್ದಲ್ಲಿ ಅದನ್ನು ಬಗೆಹರಿಸಿಕೊಳ್ಳುವುದು ಉತ್ತಮ. ಆದರೆ ನಿಮ್ಮ ಹಠಮಾರಿತನ ಧೋರಣೆಯಿಂದ ಸಮಸ್ಯೆಗಳನ್ನು ಮಾಡಿಕೊಳ್ಳಲಿದ್ದೀರಿ ಎಂಬಂತೆಯೇ ಸನ್ನಿವೇಶಗಳಿವೆ. ಆದ್ದರಿಂದ ಈ ದಿನ ಕೆಲವು ಪರಿಸ್ಥಿತಿಯಲ್ಲಿ ನಾನು ಹೇಳಿದ್ದೇ ಆಗಬೇಕು ಎಂಬ ಮೊಂಡುತನ ಬೇಡ. ಹೊಸದಾಗಿ ಪರಿಚಯವಾಗುವ ವ್ಯಕ್ತಿಗಳ ಬಗ್ಗೆ ತುಂಬಾ ಎಚ್ಚರಿಕೆಯಿಂದ ಇರಬೇಕು. ಸೆಕೆಂಡ್ ಹ್ಯಾಂಡ್ ಮನೆ ನಿರ್ಮಾಣ ವಸ್ತುಗಳು, ಕುರ್ಚಿ- ಸೋಫಾ ಅಥವಾ ಬೇರೆ ಯಾವುದೇ ಆದರೂ ಈ ದಿನ ಖರೀದಿ ಮಾಡದಿರುವುದು ಉತ್ತಮ.
ಹಿಂದಿನ ನಿಮ್ಮ ಅನುಭವಗಳು ಹಾಗೂ ಘಟನಾವಳಿಗಳ ಕಾರಣದಿಂದಾಗಿ ಬಹಳಷ್ಟು ಬದಲಾವಣೆಗಳು ನಿಮ್ಮಲ್ಲಿ ಆಗಲಿದೆ. ಈ ದಿನ ಪ್ರತಿ ವಿಚಾರದಲ್ಲೂ ವಿಷಯದಲ್ಲೂ ವ್ಯವಹಾರದಲ್ಲೂ ಹಣಕಾಸಿನ ಲೆಕ್ಕಾಚಾರವನ್ನೇ ಹಾಕಲಿದ್ದೀರಿ. ಇದನ್ನು ಮಾಡುವುದರಿಂದ ನನಗೇನು ಲಾಭ ಎಂಬ ಧೋರಣೆ ಇರಲಿದೆ. ನಿಮ್ಮ ಈ ಸ್ವಭಾವ ಸ್ನೇಹಿತರು ಅಥವಾ ಸಂಬಂಧಿಕರನ್ನು ಗೊಂದಲಕ್ಕೆ ಸಿಲುಕಿಸಲಿದೆ. ನಿಮ್ಮಲ್ಲಿ ಕೆಲವರಿಗೆ ಐಷಾರಾಮಿ ಕಾರು ಖರೀದಿ ಮಾಡುವಂಥ ಯೋಗ ಇದೆ. ಕೆಲವರು ಈ ದಿನ ಅಡ್ವಾನ್ಸ್ ನೀಡಿ ಬುಕ್ ಸಹ ಮಾಡುವ ಸಾಧ್ಯತೆಗಳಿವೆ.
ವಿದೇಶಗಳಲ್ಲಿನ ಪ್ರತಿಷ್ಠಿತ ಸಂಘ- ಸಂಸ್ಥೆಗಳಿಂದ ನಿಮ್ಮಲ್ಲಿ ಕೆಲವರಿಗೆ ಸನ್ಮಾನ- ಗೌರವ ಅಥವಾ ಹಣಕಾಸಿನ ಅನುದಾನಗಳು ದೊರೆಯುವ ಮಾಹಿತಿ ದೊರೆಯಲಿದೆ. ನಿಮ್ಮ ಸ್ಥಿರಾಸ್ತಿ ಪೈಕಿ ಕೆಲವನ್ನು ಮಾಡುವುದಕ್ಕೆ ಪ್ರಯತ್ನಿಸಲಿದ್ದೀರಿ. ಪರಿಸರ ಪ್ರೇಮಿಗಳು, ಅರಣ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವವರು, ಪ್ರಾಣಿ ದಯಾ ಸಂಘಗಳಲ್ಲಿ ಇರುವಂಥವರಿಗೆ ಪ್ರಮುಖವಾದ ದಿನ ಇದಾಗಿರುತ್ತದೆ. ಅದೆಷ್ಟೇ ಸಣ್ಣ ಕೆಲಸ ಅಂತಾದರೂ ಹೆಚ್ಚಿನ ಗಮನ ಇಟ್ಟು, ಮಾಡುವುದಕ್ಕೆ ಪ್ರಯತ್ನಿಸಿ. ಇತರರ ಪ್ರಭಾವಕ್ಕೆ ನೀವು ಒಳಗಾಗುವ ಸಾಧ್ಯತೆಗಳಿವೆ.
ನೀವು ನಂಬಿಕೆ ಇಟ್ಟುಕೊಂಡ ವ್ಯಕ್ತಿಗಳಿಂದ ದೊಡ್ಡ ಮಟ್ಟದ ಸಹಾಯಗಳು ಆಗಲಿವೆ. ಕೆಲವು ಹೊಸ ಪರಿಚಯಗಳಿಂದ ಪ್ರಭಾವದ ವ್ಯಾಪ್ತಿ ವಿಸ್ತರಣೆ ಆಗುವುದಕ್ಕೂ ಅನುಕೂಲ ಒದಗಿ ಬರಲಿದೆ. ನಿಮ್ಮಲ್ಲಿ ಕೆಲವರಿಗೆ ಈ ದಿನ ಆಭರಣಗಳನ್ನು ಖರೀದಿಸುವಂತಹ ಯೋಗ ಇದೆ. ಅದರಲ್ಲೂ ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಮೊತ್ತದ ಚಿನ್ನಾಭರಣ ಅಥವಾ ವಜ್ರಾಭರಣಗಳನ್ನು ಖರೀದಿ ಮಾಡಲಿದ್ದೀರಿ. ಚಿನ್ನದ ಚೀಟಿಯನ್ನು ಕಟ್ಟುವುದಕ್ಕೆ ಆರಂಭ ಮಾಡುವ ಅಥವಾ ಈಗಾಗಲೇ ಕಟ್ಟುತ್ತಿದ್ದಲ್ಲಿ ಇನ್ನೂ ಒಂದು ಹೆಚ್ಚುವರಿಯಾಗಿ ಆರಂಭಿಸುವ ಸಾಧ್ಯತೆಗಳಿವೆ.
ಬೇರೆಯವರಿಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳುವುದು ಬಹಳ ಮುಖ್ಯವಾಗಲಿದೆ. ಇನ್ನೊಂದು ಕಡೆ ನಿಮ್ಮ ಆರ್ಥಿಕ ಪರಿಸ್ಥಿತಿ ಚಿಂತೆಗೆ ಕಾರಣವಾಗಲಿದೆ. ಆದಾಯ ಹೆಚ್ಚಳ ಮಾಡಿಕೊಳ್ಳಬೇಕು ಎಂಬ ನಿಮ್ಮ ಪ್ರಯತ್ನಗಳು ಅಂದುಕೊಂಡಂತೆ ಫಲ ನೀಡದೆ ಗೊಂದಲಕ್ಕೆ ಗುರಿಯಾಗಲಿದ್ದೀರಿ. ಇತರರು ನಿಮಗೆ ಸಹಾಯ ಮಾಡುತ್ತಾರೆ ಎಂದುಕೊಂಡು ಯಾವುದೇ ದೊಡ್ಡ ಪ್ರಾಜೆಕ್ಟ್ ಗಳನ್ನು ಕೈಗೆತ್ತಿಕೊಳ್ಳಬೇಡಿ. ಇನ್ನೂ ನಿಮ್ಮ ಕೈಗೆ ಸೇರದ ಹಣವನ್ನು ನೆಚ್ಚಿಕೊಂಡು ಯಾರಿಗೂ ಮಾತು ಕೊಡಲು ಹೋಗಬೇಡಿ. ಸಂಗಾತಿಯ ಸಲಹೆಯನ್ನು ಗಂಭೀರವಾಗಿ ತೆಗೆದುಕೊಳ್ಳಿ.
ನಿಮಗೆ ಎಷ್ಟೇ ಆಪ್ತರು ಅಥವಾ ಹತ್ತಿರದವರೇ ಆದರೂ ಇತರರ ವೈಯಕ್ತಿಕ ವಿಚಾರಗಳಿಗೆ, ಪ್ರೀತಿ- ಪ್ರೇಮದ ಸಂಗತಿಗಳಿಗೆ ನೀವು ತಲೆ ಹಾಕಲು ಹೋಗಬೇಡಿ. ಒಂದು ವೇಳೆ ಮಧ್ಯಸ್ಥರಾಗಿ ನಿಮಗೆ ಆಹ್ವಾನ ನೀಡಿದರು ಸಹ ಅದನ್ನು ಒಪ್ಪಿಕೊಳ್ಳದೇ ಇರುವುದು ಒಳ್ಳೆಯದು. ಒಂದು ವೇಳೆ ನೀವೇ ಅತ್ಯುತ್ಸಾಹದಿಂದ ಯಾವುದಾದರೂ ಇಂಥ ವಿಚಾರಗಳಲ್ಲಿ ತೊಡಗಿಕೊಂಡಿರೋ ನಿಂದೆ ಆರೋಪಗಳಿಗೆ ಗುರಿಯಾಗುವುದು ನಿಶ್ಚಿತ. ಈ ಹಿಂದೆ ಯಾವಾಗಲೂ ಮಾಡಿದ್ದ ಹೂಡಿಕೆ, ಅದರಲ್ಲೂ ಭೂಮಿಗೆ ಸಂಬಂಧಪಟ್ಟಂತಹ ಹೂಡಿಕೆ ಇದ್ದಲ್ಲಿ ಅದನ್ನು ವಾಪಸ್ ತೆಗೆದುಕೊಳ್ಳುವ ಬಗ್ಗೆ ಆಲೋಚನೆ ಮಾಡಲಿದ್ದೀರಿ.
ನಿಮ್ಮ ಬಹು ದಿನಗಳ ಕನಸು ಸಾಕಾರ ಆಗುವಂಥ ಸುಳುಹು ನಿಮಗೆ ದೊರೆಯಲಿದೆ. ಇನ್ನು ವ್ಯಾಪಾರ, ವ್ಯವಹಾರ ಅಥವಾ ಉದ್ಯಮವನ್ನು ಆರಂಭಿಸುವ ಉದ್ದೇಶದಿಂದ ಹಣಕಾಸನ್ನು ಹೊಂದಾಣಿಕೆ ಮಾಡಲು ಪ್ರಯತ್ನ ಪಡುತ್ತಿರುವವರಿಗೆ ಈ ದಿನ ಒಳ್ಳೆ ಸುದ್ದಿ ಇದೆ. ಇಷ್ಟು ಸಮಯ ಒಂದು ವೇಳೆ ಕುಟುಂಬದ ಒಳಗಿಂದ ಏನಾದರೂ ವಿರೋಧಗಳು ಬರುತ್ತಿದ್ದಲ್ಲಿ ಅದಕ್ಕೆ ಈಗ ಅವರ ಸಹಕಾರ ದೊರೆಯಲಿದೆ. ವಿದೇಶಗಳಲ್ಲಿ ಉದ್ಯೋಗಕ್ಕೋ ಅಥವಾ ವ್ಯಾಸಂಗಕ್ಕೋ ಪ್ರಯತ್ನ ಪಡುತ್ತಾ ಇರುವವರಿಗೆ ನಿರೀಕ್ಷೆಯೇ ಮಾಡದ ರೀತಿಯಲ್ಲಿ ಸಹಾಯಗಳು ದೊರೆಯಲಿವೆ.
ಈ ದಿನ ನಿಮ್ಮ ಏಕಾಗ್ರತೆ- ಗಮನವೇ ಒಂದು ಬಗೆಯಲ್ಲಿ ವಿಚಿತ್ರವಾಗಿ ಇರಲಿದೆ. ಇತರರನ್ನು ಮೆಚ್ಚಿಸುವ ಪ್ರಯತ್ನದಲ್ಲಿ ಒತ್ತಡಕ್ಕೆ ಸಿಲುಕಿಕೊಳ್ಳಲಿದ್ದೀರಿ. ನಿಮ್ಮ ಬಳಿ ಇರುವ ಹಣಕ್ಕೆ ಮಾತ್ರ ಖರ್ಚನ್ನು ಪ್ಲಾನ್ ಮಾಡುವುದು ಉತ್ತಮ. ನೆನಪಿನಲ್ಲಿ ಇರಬೇಕಾದದ್ದು ಏನೆಂದರೆ, ಅದೆಷ್ಟೇ ಸಣ್ಣ ಕೆಲಸ ಅಂತಾದರೂ ನಿರೀಕ್ಷೆ ಮಾಡಿದ್ದಕ್ಕಿಂತ ಜಾಸ್ತಿ ಖರ್ಚು ಆಗಲಿದೆ. ಮನೆಯ ದುರಸ್ತಿ, ಕಚೇರಿ ನವೀಕರಣ, ವಾಹನಗಳನ್ನು ಸರ್ವೀಸ್ ಗೆ ಬಿಡುವುದು ಇಂಥ ಯಾವುದೇ ಕೆಲಸ ಆದರೂ ಎಷ್ಟು ಖರ್ಚು ಬರಬಹುದು ಎಂಬುದನ್ನು ಮೊದಲಿಗೇ ಲೆಕ್ಕ ಹಾಕಿಟ್ಟುಕೊಳ್ಳುವುದು ಮುಖ್ಯ.
ಲೇಖನ- ಎನ್.ಕೆ.ಸ್ವಾತಿ