Numerology Prediction: ಸಂಖ್ಯಾಶಾಸ್ತ್ರದ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಫೆಬ್ರವರಿ ಮಾಸಭವಿಷ್ಯ
ನಿಮ್ಮ ಜನ್ಮಸಂಖ್ಯೆಯ ಆಧಾರದಲ್ಲಿ ಫೆಬ್ರವರಿ ಮಾಸಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಸಂಖ್ಯಾಶಾಸ್ತ್ರವು ಪ್ರತಿ ವ್ಯಕ್ತಿತ್ವದ ತಿರುಳನ್ನು ಕಂಡುಹಿಡಿಯುವುದರ ಮೇಲೆ ಒತ್ತು ನೀಡುವ ಒಂದು ಹಳೆಯ ಅಧ್ಯಯನ ಪದ್ಧತಿಯಾಗಿದೆ. ಇದು ನಿಮ್ಮ ಜೀವನದ ಉದ್ದೇಶಗಳನ್ನು ಹಾಗೂ ನೀವು ಎದುರಿಸಬಹುದಾದ ಸಮಸ್ಯೆಗಳು, ತೊಡಕುಗಳು ಮತ್ತು ಅವಕಾಶಗಳನ್ನು ಸೂಚಿಸಲು ಸಹಾಯ ಮಾಡುತ್ತದೆ.
Monthly Numerology: ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ಮಾಸ ಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ನಿಮ್ಮ ಜನ್ಮಸಂಖ್ಯೆಯ ಆಧಾರದಲ್ಲಿ ಫೆಬ್ರವರಿ ಮಾಸಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ನಿಮ್ಮಲ್ಲಿ ಯಾರು ರಿಟೈರ್ ಮೆಂಟ್ ಪ್ಲಾನಿಂಗ್ ಗಾಗಿ ಹೂಡಿಕೆಯನ್ನು ಮಾಡಬೇಕು ಎಂದಿದ್ದೀರಿ ಹಾಗೂ ಈಗಾಗಲೇ ಹೂಡಿಕೆ ಮಾಡಿದ್ದೇವೆ, ಅದರ ಪ್ರಮಾಣ ಹೆಚ್ಚಿಸಬೇಕು ಎಂದು ಆಲೋಚಿಸುತ್ತಾ ಇದ್ದೀರಿ ಅಂಥವರು ಅಂದುಕೊಂಡಿದ್ದನ್ನು ಅನುಷ್ಠಾನಕ್ಕೆ ತರುವಲ್ಲಿ ಯಶಸ್ಸು ಕಾಣಲಿದ್ದೀರಿ. ಮಕ್ಕಳ ಮದುವೆ ಸೇರಿದಂತೆ ಇತರ ಯಾವುದಾದರೂ ಶುಭ ಸಮಾರಂಭಗಳನ್ನು ಗಮನದಲ್ಲಿ ಇರಿಸಿಕೊಂಡು ಚಿನ್ನ- ಬೆಳ್ಳಿ ಅಥವಾ ಪ್ಲಾಟಿನಂ ಆಭರಣಗಳ ಖರೀದಿಯನ್ನು ಮಾಡುವುದಕ್ಕೆ ಹಣವನ್ನು ಖರ್ಚು ಮಾಡಲಿದ್ದೀರಿ. ನಿಮ್ಮ ಪ್ರೀತಿಪಾತ್ರರಿಗೆ ಸಹಾಯದ ಅಗತ್ಯ ಕಂಡುಬರಲಿದ್ದು, ಅದಕ್ಕಾಗಿ ನಿಮ್ಮ ಶ್ರಮದ ದೊಡ್ಡ ಮೊತ್ತವನ್ನೇ ನೀಡುವ ಸಾಧ್ಯತೆಗಳಿವೆ. ಇನ್ನು ಸೈಟು, ಜಮೀನು ಮನೆ ಅಥವಾ ಅಪಾರ್ಟ್ ಮೆಂಟ್ ಖರೀದಿ ಮಾಡಬೇಕು ಎಂದಿರುವವರಿಗೆ ಈ ತಿಂಗಳ ದ್ವಿತೀಯಾರ್ಧದಲ್ಲಿ ಅದರಲ್ಲೂ ಬಹುತೇಕ ನಾಲ್ಕನೇ ವಾರದ ಹೊತ್ತಿಗೆ ನಿಮ್ಮ ಮನಸ್ಸಿಗೆ ಒಪ್ಪುವಂತಹ ಮನೆ ಅಥವಾ ನೀವು ಹುಡುಕುತ್ತಿರುವ ಸ್ಥಳ ದೊರೆಯುವ ಸಾಧ್ಯತೆಗಳು ಹೆಚ್ಚಿವೆ. ಅದಕ್ಕೆ ಸಂಬಂಧಪಟ್ಟ ಬ್ಯಾಂಕಿಂಗ್ ವ್ಯವಹಾರಗಳು ತುಂಬಾ ಸಲೀಸಾಗಿ ಮುಗಿಯಲಿವೆ. ಉದ್ಯೋಗ ಸ್ಥಳದಲ್ಲಿ ಇತರರು ನಿಮ್ಮ ಸಾಮರ್ಥ್ಯ ಹಾಗೂ ಕೆಲಸ ಮುಗಿಸುವಂತಹ ಸಂಕಲ್ಪ ಇದರ ಬಗ್ಗೆ ಏನಾದರೂ ಅನುಮಾನಗಳನ್ನು ಇಟ್ಟುಕೊಂಡಿದ್ದಲ್ಲಿ ಅವರಿಗೆ ಆಶ್ಚರ್ಯ ಆಗುವ ರೀತಿಯಲ್ಲಿ ಕೆಲಸಗಳನ್ನು ಮಾಡಿ ಮುಗಿಸಲಿದ್ದೀರಿ. ನೀವೇನಾದರೂ ಸಣ್ಣ ಮಟ್ಟದ ಬಂಡವಾಳ ಹೂಡಿ, ಮಾಡಿದಂತಹ ವ್ಯಾಪಾರ, ವ್ಯವಹಾರ ಅಥವಾ ಹೂಡಿಕೆಗಳು ತುಂಬಾ ಚೆನ್ನಾಗಿ ಹಾಗೂ ನಿಮ್ಮ ನಿರೀಕ್ಷೆಗೂ ಮೀರಿದಂತಹ ರಿಟರ್ನ್ಸ್ ನೀಡಲಿವೆ. ತಂದೆ- ತಾಯಿಗಳ ತೀರ್ಥಕ್ಷೇತ್ರ ದರ್ಶನಕ್ಕಾಗಿ ದೊಡ್ಡ ಮಟ್ಟದ ಹಣವನ್ನು ಖರ್ಚು ಮಾಡುವಂತಹ ಯೋಗ ನಿಮ್ಮ ಪಾಲಿಗೆ ಒದಗಿ ಬರಲಿದೆ. ಹೀಗೆ ಮಾಡುವುದರಿಂದ ಅವರ ಆಶೀರ್ವಾದವೂ ನಿಮಗೆ ಸಿಗಲಿದೆ. ಇದಕ್ಕಾಗಿ ನಿಮ್ಮಲ್ಲಿ ಕೆಲವರು ಖರ್ಚನ್ನು ಇಎಂಐ ಆಗಿ ಕನ್ವರ್ಟ್ ಮಾಡಿಸುವ ಸಾಧ್ಯತೆ ಹೆಚ್ಚಿದೆ. ಈ ತಿಂಗಳು ನಿಮ್ಮ ಪಾಲಿಗೆ ತುಂಬಾ ಪ್ರಮುಖವಾದ ಎಚ್ಚರಿಕೆ ಏನೆಂದರೆ, ಯಾರು ಈಗಾಗಲೇ ಆಪರೇಷನ್ ಮಾಡಿಸಿಕೊಂಡಿರುತ್ತೀರೋ, ಅದು ಯಾವುದಕ್ಕೆ ಆದರೂ ಆಗಿರಬಹುದು, ಅದರ ಫಾಲೋ ಅಪ್ ಸರಿಯಾಗಿ ಮಾಡುವುದರ ಕಡೆ ಗಮನ ಕೊಡಿ. ಸಮಯ ಇಲ್ಲ ಅಂತಲೋ ಅಥವಾ ಆರೋಗ್ಯವಾಗಿದ್ದೀನಿ, ಫಾಲೋ ಅಪ್ ಮಾಡುವ ಅಗತ್ಯ ಇಲ್ಲ ಅಂತಲೋ ಅಂದುಕೊಂಡಲ್ಲಿ ಆ ನಂತರ ಪರಿತಪಿಸುವಂತಾಗುತ್ತದೆ. ಮನೆಯಲ್ಲಿ ಇರುವಂಥ ಹಳೇ ಪೀಠೋಪಕರಣಗಳು ಅಥವಾ ಇನ್ಯಾದರೂ ವಸ್ತುಗಳನ್ನು ಮಾರಾಟ ಮಾಡಬೇಕು ಎಂದುಕೊಂಡಿದ್ದಲ್ಲಿ ಅದು ಸಾಧ್ಯವಾಗಲಿದೆ. ಯುಪಿಎಸ್, ಮೈಕ್ರೋವೇವ್ ಓವನ್ ಇತ್ಯಾದಿ ವಸ್ತುಗಳನ್ನು ಮನೆಗೆ ತರಲಿದ್ದೀರಿ. ಆಫರ್ ಇದೆ ಎಂಬ ಕಾರಣಕ್ಕಾಗಿಯೇ ನಿಮ್ಮಲ್ಲಿ ಕೆಲವರು ಹಳೇ ವಸ್ತುಗಳನ್ನು ವಿನಿಮಯ ಮಾಡಿಸಲಿದ್ದೀರಿ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ಈಗಾಗಲೇ ಹೂಡಿಕೆ ಉದ್ದೇಶಕ್ಕೆ ಅಂತಲೇ ಕೊಂಡಿದ್ದಂಥ ಸೈಟು ಅಥವಾ ಖರೀದಿ ಮಾಡಿದ್ದ ಷೇರುಗಳು ಅಥವಾ ಹೂಡಿಕೆ ಮಾಡಿದ್ದ ಮ್ಯೂಚುವಲ್ ಫಂಡ್ ಗಳನ್ನು ಮಾರಾಟ ಮಾಡಿ, ಅದರ ಹಣವನ್ನು ಬೇರೆ ಕಡೆಗೆ ಹೂಡಿಕೆ ಮಾಡುವುದಕ್ಕೆ ತೀರ್ಮಾನವನ್ನು ಮಾಡಲಿದ್ದೀರಿ. ಸಂಗಾತಿ ಕಡೆಯಿಂದ ದೊಡ್ಡ ಮೊತ್ತವೊಂದು ಬಂದು, ಹಣಕಾಸಿನ ಹರಿವು ಉತ್ತಮಗೊಳ್ಳುತ್ತದೆ. ಈಗಾಗಲೇ ಕೃಷಿ ಜಮೀನು ಇದ್ದಲ್ಲಿ ಅಲ್ಲಿ ಮನೆ ನಿರ್ಮಾಣ ಮಾಡುವುದಕ್ಕೆ ಮುಂದಾಗಲಿದ್ದೀರಿ. ತಂತಿ- ಬೇಲಿ ಹಾಕುವುದು, ಸೋಲಾರ್ ಉಪಕರಣಗಳನ್ನು ಅಳವಡಿಸುವುದು ಸೇರಿದಂತೆ ಇತರ ಕೆಲಸಗಳನ್ನು ಮಾಡಿಸುವುದಕ್ಕೆ ಸಾಧ್ಯವಾಗಲಿದೆ. ಇನ್ನು ಸ್ನೇಹಿತರಿಗೆ- ಸಂಬಂಧಿಕರಿಗೆ ನಿಮ್ಮ ಅಗತ್ಯ ಹೆಚ್ಚು ಕಂಡುಬರುತ್ತದೆ. ನಿಮಗೆ ಸಮಯ ಇದೆಯೋ ಇಲ್ಲವೋ ಒಟ್ಟಿನಲ್ಲಿ ಶುಭ ಕಾರ್ಯಗಳ ಓಡಾಟಕ್ಕೆ ಹೆಚ್ಚಿನ ಸಮಯ ಮೀಸಲಿಡಬೇಕಾಗುತ್ತದೆ. ಷೇರು, ಮ್ಯೂಚುವಲ್ ಫಂಡ್ ಗಳಲ್ಲಿ ಮಾಡಿರುವಂಥ ಹೂಡಿಕೆಯನ್ನು ಹಿಂತೆಗೆದುಕೊಳ್ಳುವುದೇ ಹೌದಾದಲ್ಲಿ ನಿಯಮಾವಳಿಗಳನ್ನು ಸರಿಯಾಗಿ ಪಾಲಿಸಿದ್ದೀರಾ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ. ಇದರ ಜತೆಗೆ ಒಂದು ವೇಳೆ ಫಿಕ್ಸೆಡ್ ಡೆಪಾಸಿಟ್ ಏನಾದರೂ ಇದ್ದಲ್ಲಿ ಮುರಿಸಬೇಕಾದ ಸನ್ನಿವೇಶ ಎದುರಾಗಲಿದೆ. ತಂದೆ ಅಥವಾ ತಂದೆಗೆ ಸಮಾನರಾದವರ ಆರೋಗ್ಯದಲ್ಲಿ ವ್ಯತ್ಯಯವಾಗಿ ಗಾಬರಿ ಆಗುವಂತಾಗುತ್ತದೆ. ಈಗಾಗಲೇ ಇರುವಂಥ ಮೆಡಿಕಲ್ ಇನ್ಷೂರೆನ್ಸ್ ಮೊತ್ತವನ್ನು ಜಾಸ್ತಿ ಮಾಡಿಸಲಿದ್ದೀರಿ. ಇನ್ನು ಯಾರು ಕಾಲು ಅಥವಾ ನರಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿದ್ದೀರೋ ಅಂಥವರಿಗೆ ಅನಾರೋಗ್ಯ ಸಮಸ್ಯೆ ಉಲ್ಬಣ ಆಗಬಹುದು. ಆದ್ದರಿಂದ ನಿಮ್ಮ ಓಡಾಟ, ಕೆಲಸ- ಕಾರ್ಯಗಳ ಮಧ್ಯೆ ಯಾವುದೇ ಕಾರಣಕ್ಕೂ ಆಹಾರ ಪಥ್ಯದಲ್ಲಿ ನಿರ್ಲಕ್ಷ್ಯ ಮಾಡಬೇಡಿ. ನಿಮ್ಮಲ್ಲಿ ಕೆಲವರಿಗೆ ಈಗಿರುವ ಹುದ್ದೆಗಿಂತ ಮೇಲ್ಮಟ್ಟದ ಹುದ್ದೆಗೆ ಪ್ರತಿಷ್ಠಿತ ಸಂಸ್ಥೆಗಳಿಂದ ಕರೆ ಬರಬಹುದು ಅಥವಾ ಈಗ ಕೆಲಸ ಮಾಡುತ್ತಿರುವ ಕಡೆಯೇ ಪದೋನ್ನತಿ ಆಗಬಹುದು. ನಿಮ್ಮ ಕೈ ಕೆಳಗೆ ಕೆಲಸ ಮಾಡುವವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ. ಸಣ್ಣ- ಪುಟ್ಟ ತಪ್ಪುಗಳಾದಲ್ಲಿ ಕೂಗಾಟ- ಕಿರುಚಾಟ ಮಾಡಲಿಕ್ಕೆ ಹೋಗಬೇಡಿ. ಸೋದರ ಸಂಬಂಧಿಗಳು ಪಿತ್ರಾರ್ಜಿತ ಆಸ್ತಿ ವಿಚಾರವಾಗಿ ಮಾತುಕತೆ ನಡೆಸುವುದಕ್ಕೆ ಮುಂದಾಗಬಹುದು. ಚರ್ಚೆಯಲ್ಲಿ ಭಾವನಾತ್ಮಕ ಸಂಗತಿಗಳು ಹೆಚ್ಚಿರಲಿವೆ. ಆದರೆ ಈ ಕಾರಣದಿಂದ ನಿರ್ಧಾರಗಳು ತಪ್ಪಾಗದಂತೆ ಎಚ್ಚರಿಕೆಯನ್ನು ವಹಿಸಿ. ಮಕ್ಕಳ ಶಿಕ್ಷಣದ ವಿಚಾರವಾಗಿ ಸಂಗಾತಿ ಜತೆಗೆ ಗಂಭೀರವಾದ ಚರ್ಚೆ ನಡೆಸಲಿದ್ದೀರಿ. ಬಹಳ ಸಮಯದಿಂದ ನೀವು ಪ್ರಯತ್ನಿಸುತ್ತಿದ್ದ ದಾಖಲೆ ಪತ್ರಗಳು ದೊರೆಯುವ ಅವಕಾಶಗಳಿವೆ. ಕೋರ್ಟ್- ಕಚೇರಿ ಅಥವಾ ಭೂಮಿಗೆ ಸಂಬಂಧಿಸಿದ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ಮುಖ್ಯವಾದ ರಾಜೀ- ಸಂಧಾನದ ಕೆಲಸಗಳಿಗೆ ಮನೆಯಿಂದ ಹೋಗುವಾಗ ಭೂ ವರಾಹ ಸ್ವಾಮಿಯನ್ನು ಮನಸ್ಸಿನಲ್ಲಿ ಸ್ಮರಿಸಿ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ವಾಸ್ತವ ನೆಲೆಗಟ್ಟಿನಲ್ಲಿ ಆಲೋಚಿಸಬೇಕು ಎಂಬುದೇನೋ ನಿಜ. ಆದರೆ ಅದರ ಫಲಿತಾಂಶ ಏನಾಗಲಿದೆ ಎಂಬುದನ್ನು ಸಹ ಮುಂಜಾಗ್ರತೆಯಿಂದ ಚಿಂತಿಸುವುದು ಬಹಳ ಮುಖ್ಯ. ನಿಮಗೇನೋ ಲೋಕಜ್ಞಾನ ಇದೆ, ಅದು ಸರಿ. ಆದರೆ ಆ ಹಿನ್ನೆಲೆಯಿಂದ ನೀವು ತೆಗೆದುಕೊಳ್ಳುವ ತೀರ್ಮಾನಗಳು ಜನರ ಮೇಲೆ ನಂಬಿಕೆ ಇಡುವುದಕ್ಕೆ ಭಯ ಪಡುವಷ್ಟು ಹೆದರಿಸಲಿದೆ. ಇನ್ನು ನಿಮ್ಮಲ್ಲಿ ಯಾರು ಸ್ವಂತ ವ್ಯವಹಾರ- ವ್ಯಾಪಾರ ಮಾಡುತ್ತಿದ್ದೀರೋ ಅಂಥವರು ಹೆಚ್ಚಿನ ರಿಸ್ಕ್ ತೆಗೆದುಕೊಳ್ಳಬೇಡಿ. ಮೇಲುನೋಟಕ್ಕೆ ಸರಿ ಎನಿಸುವಂಥ ವ್ಯಕ್ತಿಗಳ ಬಳಿ ಎಲ್ಲ ವಿಚಾರವನ್ನು ಹಂಚಿಕೊಂಡಲ್ಲಿ ಆ ನಂತರ ಪರಿತಪಿಸುವಂತಾಗುತ್ತದೆ. ನೀವು ಹೀಗೆ ಹೇಳಿದಿರಿ, ಹೀಗೆ ಅಂದುಕೊಳ್ಳುತ್ತಿದ್ದೀರಿ ಎಂಬುದನ್ನು ಅವರು ಎಲ್ಲೆಡೆಯೂ ಹೇಳಿಕೊಂಡು ಬಂದು, ನಿಮಗೆ ಮುಜುಗರ ತರುತ್ತಾರೆ. ನಿಮ್ಮಲ್ಲಿ ಅಡುಗೆ ಕಾಂಟ್ರಾಕ್ಟ್ ತೆಗೆದುಕೊಳ್ಳುವವರು ಮುಂಚಿತವಾಗಿಯೇ ಅಡ್ವಾನ್ಸ್ ಪಡೆದು, ಆ ನಂತರವೇ ಕೆಲಸವನ್ನು ಮಾಡಿಕೊಡುವುದಕ್ಕೆ ಆದ್ಯತೆಯನ್ನು ನೀಡಿ. ಒಂದು ವೇಳೆ ಹೇಗಿದ್ದರೂ ಪರಿಚಿತರು ಹೇಳಿದ್ದಾರಲ್ಲ ಅಥವಾ ನಿಮಗೆ ಕಾಂಟ್ರಾಕ್ಟ್ ನೀಡಿರುವವರೇ ಪರಿಚಿತರು ಎಂದು ಯಾವುದೇ ಅಡ್ವಾನ್ಸ್ ಪಡೆದುಕೊಳ್ಳದೆ ಕೆಲಸ ಮಾಡಿಕೊಟ್ಟಲ್ಲಿ ಆ ನಂತರ ಅದನ್ನು ವಸೂಲಿ ಮಾಡುವುದರಲ್ಲಿ ಸಾಕು ಬೇಕಾಗುತ್ತದೆ. ನಿಮಗೆ ಹೊಸದಾಗಿ ಪರಿಚಯವಾಗುವಂಥವರು ಬೆಟ್ಟಿಂಗ್, ಜೂಜು ಅಥವಾ ಇಂಥದ್ದನ್ನು ಆಡುವಂತೆ ಪುಸಲಾಯಿಸಬಹುದು. ಆರಂಭದಲ್ಲಿ ನಿಮಗೆ ಇದರಿಂದ ಲಾಭ ಸಹ ಬರಬಹುದು. ಆದರೆ ನೆನಪಿನಲ್ಲಿಡಿ, ದೀರ್ಘಾವಧಿಯಲ್ಲಿ ಇದರಿಂದಲೇ ಬಹಳ ಅವಮಾನಗಳನ್ನು ಎದುರಿಸುತ್ತೀರಿ. ಇತರರ ಕೆಲಸಗಳು ಆಗುವ ಸಲುವಾಗಿ ನೀವು ಮಾಡಿದ ಶಿಫಾರಸ್ಸಿನಿಂದ ಅನುಕೂಲ ಆಗಲಿದೆ. ರಾಜಕಾರಣಿಗಳಿಗೆ ಮಹತ್ವದ ಜವಾಬ್ದಾರಿಗಳು ಹೆಗಲೇರಲಿವೆ. ಇದೇ ವೇಳೆ ಪದೋನ್ನತಿಯನ್ನು ಸಹ ನಿರೀಕ್ಷೆ ಮಾಡಬಹುದು. ಬಹಳ ಖರ್ಚು ಮಾಡಿ, ತುಂಬ ತೊಡಗಿಸಿಕೊಂಡು ಮಾಡಿದ ಕೆಲಸದಿಂದ ಲಾಭವಾಗಲಿದೆ. ಯಾರು ಆಸ್ತಿಯನ್ನು ಅಥವಾ ಮನೆ ಅಥವಾ ಸೈಟು ಇಂಥದ್ದನ್ನು ಮಾರಾಟಕ್ಕೆ ಇಟ್ಟಿದ್ದೀರಿ ಅಂತಹವರಿಗೆ ನಿರೀಕ್ಷಿತ ಬೆಲೆ ದೊರೆಯುವಂತಹ ಅವಕಾಶಗಳು ತುಂಬಾ ಹೆಚ್ಚಾಗಿವೆ. ಪುಸ್ತಕ ಮುದ್ರಕರು ಅಥವಾ ವ್ಯಾಪಾರಿಗಳು ತಮ್ಮ ವ್ಯಾಪಾರ ಅಥವಾ ಉದ್ಯಮವನ್ನು ವಿಸ್ತರಣೆ ಮಾಡುವುದಕ್ಕೆ ಬ್ಯಾಂಕ್ ಗಳಲ್ಲಿ ಸಾಲಕ್ಕಾಗಿ ಪ್ರಯತ್ನವನ್ನು ಮಾಡಲಿದ್ದೀರಿ ಮತ್ತು ಇದರ ಸಲುವಾಗಿ ಪ್ರಭಾವಿಗಳು ನಿಮಗೆ ಅನುಕೂಲ ಮಾಡಿಕೊಡಲಿದ್ದಾರೆ. ಇನ್ನು ಸಂಗಾತಿಯ ಒಡವೆಗಳನ್ನು ಈ ಹಿಂದೆ ಅನಿವಾರ್ಯ ಸಂದರ್ಭದಲ್ಲಿ ಮಾರಾಟ ಮಾಡಿದ್ದಲ್ಲಿ ಆ ಪೈಕಿ ಸ್ವಲ್ಪ ಮಟ್ಟಿಗಾದರೂ ಒಡವೆಗಳನ್ನು ಮರು ಖರೀದಿ ಮಾಡುವುದಕ್ಕೆ ಮುಂದಾಗಲಿದ್ದೀರಿ. ಸ್ನೇಹಿತರ ಗೃಹಪ್ರವೇಶ ಅಥವಾ ಮದುವೆಯ ಕಾರ್ಯಕ್ರಮಕ್ಕಾಗಿ ಅವರಿಗೆ ಉಡುಗೊರೆಯನ್ನು ನೀಡಲು ವಸ್ತ್ರ ಅಥವಾ ಬೆಳ್ಳಿ ವಸ್ತುಗಳನ್ನು ಖರೀದಿ ಮಾಡಲಿದ್ದೀರಿ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ದೂರ ಪ್ರಯಾಣಗಳಿಗೆ ಹೆಚ್ಚಿನ ಖರ್ಚನ್ನು ಮಾಡಲಿದ್ದೀರಿ. ಬಹಳ ಹಿಂದೆ ಯಾರಿಗಾದರೂ ಮಾತನ್ನು ನೀಡಿದ್ದಲ್ಲಿ ಆ ಮಾತಿನಂತೆ ನಡೆದುಕೊಳ್ಳುವುದಕ್ಕೆ ಈ ತಿಂಗಳಲ್ಲಿ ಗಟ್ಟಿಯಾದ ಪ್ರಯತ್ನವನ್ನು ಮಾಡಲಿದ್ದೀರಿ. ಈ ಹಿಂದೆ ಒಂದು ವೇಳೆ ಜಮೀನು ಅಥವಾ ಸೈಟಿನ ವ್ಯವಹಾರ ಮಾತನಾಡಿದ್ದಿರಿ, ಆದರೆ ಅದು ನಾನಾ ಕಾರಣಗಳಿಗೆ ಅರ್ಧಕ್ಕೇ ನಿಂತು ಹೋಗಿತ್ತು ಎಂದಾಗಿದ್ದಲ್ಲಿ ಅದು ಪೂರ್ತಿ ಆಗುವುದಕ್ಕೆ ಅವಕಾಶಗಳು ಹೆಚ್ಚಿವೆ. ಯಾರನ್ನೋ ಓಲೈಸುವುದಕ್ಕೋ ಅಥವಾ ಮೆಚ್ಚಿಸುವುದಕ್ಕೋ ಮಾಡುವ ಪ್ರಯತ್ನಗಳಿಂದ ಕೆಲವು ಕೆಲಸಗಳಲ್ಲಿ ನಿಮಗೆ ಬೇಸರ ಆಗಲಿದೆ. ಅಥವಾ ಅದೇ ಸ್ವಭಾವ ನಿಮ್ಮಲ್ಲೊಂದು ವೈರಾಗ್ಯ ಮೂಡಿಸುವುದಕ್ಕೆ ಸಹ ಕಾರಣ ಆಗಲಿದೆ. ಹೀಗೆ ಹೇಳುವುದಕ್ಕೆ ಕಾರಣ ಏನೆಂದರೆ, ಕಡಿಮೆ ಬೆಲೆಗೆ ಸಿಗುತ್ತಿದೆ ಎಂಬ ಕಾರಣಕ್ಕೆ ನಿಮಗೆ ಬೇಡದಿರುವ ವಸ್ತುಗಳನ್ನು ಸಹ ಖರೀದಿಸುವುದಕ್ಕೆ ಮುಂದಾಗಲಿದ್ದೀರಿ. ಹಳೇ ಸ್ನೇಹವನ್ನು ಮುಂದು ಮಾಡಿಕೊಂಡು, ಈಗ ನಿಮಗೆ ಹತ್ತಿರವಾಗುವುದಕ್ಕೆ ಪ್ರಯತ್ನಿಸುವವರಿಂದ ಬಹಳ ಎಚ್ಚರಿಕೆಯಿಂದ ಇರಬೇಕು. ನಿಮ್ಮ ಸಂಬಂಧಿಗಳಲ್ಲಿ ಕೆಲವರು ಬಂದು ಸಾಲವನ್ನೋ ಅಥವಾ ಶಿಫಾರಸನ್ನೋ ಬಾಯಿಬಿಟ್ಟು ಕೇಳಿದಲ್ಲಿ ಏನು ಉತ್ತರ ನೀಡಬೇಕು ಎಂಬ ಬಗ್ಗೆ ಸ್ಪಷ್ಟತೆಯನ್ನು ಇಟ್ಟುಕೊಳ್ಳಿ. ಒಂದು ವೇಳೆ ಇಲ್ಲ ಎಂದು ಹೇಳಿದರೆ ಏನೆಂದುಕೊಂಡಾರು ಎಂಬ ಸಂಕೋಚವನ್ನು ಮಾಡಿಕೊಳ್ಳಬೇಡಿ. ಕುಟುಂಬಕ್ಕೆ ಸಂಬಂಧಿಸಿದಂತೆ ಇತರರು ಒಪ್ಪಿದರು ಎಂಬ ಕಾರಣಕ್ಕೆ ನಿಮಗೆ ಇಷ್ಟವಿಲ್ಲದಿದ್ದರೂ ಸಹ ಕೆಲವು ಸಂಗತಿಗಳನ್ನು ನೀವೂ ಒಪ್ಪಿಕೊಳ್ಳಬೇಕಾಗುತ್ತದೆ. ದೂರದ ಪ್ರಯಾಣಗಳನ್ನು ಯಾವುದೇ ಕಾರಣಕ್ಕೂ ದಿಢೀರ್ ಎಂದು ನಿರ್ಧಾರ ಮಾಡಿ ಹೊರಡುವುದಕ್ಕೆ ಸಿದ್ಧರಾಗಬೇಡಿ. ನಿಮ್ಮ ಹಳೆ ಅನುಭವಗಳು ಈ ತಿಂಗಳಲ್ಲಿ ಸಹಾಯಕ್ಕೆ ಬರುವುದಿಲ್ಲ. ಟೈಲ್ಸ್ ಹಾಕುವುದು, ಪ್ಲಂಬಿಂಗ್, ಮರದ ಕೆಲಸ ಮಾಡುತ್ತಿರುವವರು ಹೇಗಾದರೂ ಸರಿ, ನಾನು ಅದನ್ನು ಗಡುವಿನ ಒಳಗೆ ಮುಗಿಸಿಕೊಂಡು ಬಂದೇ ಬರುತ್ತೇನೆ ಎಂಬ ಅತಿಯಾದ ವಿಶ್ವಾಸದಿಂದ ಯಾರಿಗೂ ಮಾತು ಕೊಡುವುದಕ್ಕೆ ಹೋಗಬೇಡಿ. ಕಡಿಮೆ ಮೊತ್ತದಲ್ಲಿ ದೊರೆಯುತ್ತದೆ ಎಂಬ ಕಾರಣಕ್ಕೆ ಸೆಕೆಂಡ್ ಹ್ಯಾಂಡ್ ವಾಹನಗಳನ್ನು ಅಥವಾ ಗ್ಯಾಜೆಟ್ ಗಳನ್ನು ಖರೀದಿಸಿದಲ್ಲಿ ಆ ನಂತರ ಪರಿತಪಿಸುವಂತಾಗುತ್ತದೆ, ಹಣವನ್ನು ಕಳೆದುಕೊಂಡಂತಾಗುತ್ತದೆ. ಯಾರದೋ ಸಂಕೋಚಕ್ಕೆ ಬಿದ್ದು, ಕೆಲಸ ಮಾಡಿಕೊಡುತ್ತೇನೆ ಎಂದು ಒಪ್ಪಿಕೊಂಡುಬಿಟ್ಟಲ್ಲಿ ಆ ನಂತರ ಅದನ್ನು ಸಮಯಕ್ಕೆ ಸರಿಯಾಗಿ ಮುಗಿಸಲಿಕ್ಕೆ ಸಾಧ್ಯವಾಗದೆ ಅವಮಾನಕ್ಕೆ ಗುರಿಯಾಗುತ್ತೀರಿ. ಎಲ್ಲಿ ಹೂಂ ಎನ್ನಬೇಕು ಹಾಗೂ ಯಾರಿಗೆ ಇಲ್ಲ ಎನ್ನಬೇಕು ಎಂಬುದರ ಬಗ್ಗೆ ಸ್ಪಷ್ಟತೆ ಇಟ್ಟುಕೊಂಡಿದ್ದರೆ ಗೊಂದಲಗಳು ಉಂಟಾಗುವುದಿಲ್ಲ. ಈ ತಿಂಗಳು ಪ್ರತಿ ಶುಕ್ರವಾರ ದುರ್ಗಾದೇವಿಯ ಆರಾಧನೆಯನ್ನು ಮಾಡುವುದರಿಂದ ನಿಮ್ಮ ಬಹುತೇಕ ಕೆಲಸಗಳು ಸಲೀಸಾಗಿ ಆಗಲಿವೆ. ಇನ್ನು ಮುಖ್ಯವಾದ ಕೆಲಸಗಳ ಮೇಲೆ ಹೋಗುವಾಗ ಬಿಳಿಯ ಸಣ್ಣ ಬಟ್ಟೆಯೊಂದನ್ನು ಬಳಿಯಲ್ಲಿ ಇಟ್ಟುಕೊಳ್ಳಿ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ನಿಮ್ಮ ಇಮೇಜ್ ವಿಚಾರವಾಗಿ ಬಹಳ ಆಲೋಚನೆಯನ್ನು ಮಾಡುತ್ತೀರಿ. ಒಂದು ವೇಳೆ ಈ ತನಕ ನಿಮ್ಮ ಬಗ್ಗೆ ಕೇಳಿಬರುವ ಆಕ್ಷೇಪಗಳು ಇದ್ದಲ್ಲಿ ಅದನ್ನು ಬಗೆಹರಿಸಿಕೊಳ್ಳಬೇಕು ಎಂದು ಆಲೋಚಿಸಲಿದ್ದೀರಿ. ಇದರದೇ ಭಾಗವಾಗಿ ಎಲ್ಲವನ್ನೂ ಕೇಳಿಸಿಕೊಳ್ಳುತ್ತಾರೆ ಎಂದು ನಿಮ್ಮ ಎದುರಿಗೆ ಇರುವವರಿಗೆ ಅನ್ನಿಸಲೇಬೇಕು ಎಂಬ ನಿಮ್ಮ ಪ್ರಯತ್ನವು ಒಂದು ಬಗೆಯ ಹಿಂಸೆಯಾಗಿ ಮಾರ್ಪಡುತ್ತದೆ. ನೀವು ಜೀವನ ಮಾಡುತ್ತಿರುವುದೇ ಇತರರಿಗಾಗಿಯೇ ಎಂಬ ಭಾವನೆ ನಿಮ್ಮನ್ನು ಒಳಗೇ ಸುಡುವುದಕ್ಕೆ ಶುರುವಾಗುತ್ತದೆ. ಸಂಬಂಧಿಕರ ಮದುವೆ ಮೊದಲಾದ ಸಮಾರಂಭಗಳಿಗೆ ನೀವು ಹೆಚ್ಚಿನ ಓಡಾಟವನ್ನು ನಡೆಸಲಿದ್ದೀರಿ. ಅದೇ ರೀತಿ ನೀವು ಮಾತುಕತೆ ಆಡುವ ಮೂಲಕ ಮದುವೆಯೊಂದು ನಿಶ್ಚಯ ಆಗುವುದಕ್ಕೆ ಕಾರಣ ಸಹ ಆಗುವ ಸಾಧ್ಯತೆ ಇದೆ. ಇನ್ನು ನಿಮ್ಮಲ್ಲಿ ಯಾರು ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೀರಿ ಅಂಥವರಿಗೆ ಉದ್ಯೋಗ ಬದಲಾವಣೆಗಾಗಿ ಅವಕಾಶಗಳು ಹುಡುಕಿಕೊಂಡು ಬರಲಿವೆ. ಈ ಬಗ್ಗೆ ಯಾವುದೇ ಗೊಂದಲವನ್ನು ಇಟ್ಟುಕೊಳ್ಳದೆ ಸೂಕ್ತ ನಿರ್ಧಾರವನ್ನು ತೆಗೆದುಕೊಂಡಲ್ಲಿ ಭವಿಷ್ಯದಲ್ಲಿ ದೊಡ್ಡ ಅನುಕೂಲ ಆಗಲಿದೆ. ನಿಮ್ಮಲ್ಲಿ ಯಾರು ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆಯನ್ನು ಮಾಡಿಕೊಂಡು ಬಂದು, ಕಳೆದ ಕೆಲವು ಸಮಯದಿಂದ ನಾನಾ ಕಾರಣಗಳಿಗೆ ನಿಲ್ಲಿಸಿಬಿಟ್ಟಿದ್ದೀರಿ ಅಂಥವರಿಗೆ ಕನಸಿನಲ್ಲಿ ಪದೇಪದೇ ಗಾಬರಿ ಬೀಳುವಂಥ ಘಟನೆ- ಸನ್ನಿವೇಶಗಳು ಬರಲಿವೆ. ಕನಸಿನಲ್ಲಿ ಹಾವು ಕಡಿದಂತೆ ಸಹ ಆಗಲಿದೆ. ಆದ್ದರಿಂದ ಬಾಕಿ ಉಳಿದಿರುವಂಥ ಮನೆಯಲ್ಲಿನ ದೇವತಾ ಕಾರ್ಯಗಳು, ಶುಭ ಕಾರ್ಯಗಳು ನಡೆಯುವುದರ ಮೂಲಕ ಮನಸ್ಸಿನಲ್ಲಿ ನೆಮ್ಮದಿ ನೆಲೆಸಲಿದೆ. ಇಷ್ಟು ಸಮಯ ನಿಮಗೆ ಹೇಳಲಿಕ್ಕೆ ಆಗದೆ ಮನಸ್ಸಿನಲ್ಲೇ ಇಟ್ಟುಕೊಂಡಿದ್ದ ವಿಚಾರವೊಂದನ್ನು ಸಂಬಂಧಪಟ್ಟವರ ಎದುರಿಗೆ ಹೇಳಲಿದ್ದೀರಿ. ಇದರಿಂದ ಒಂದು ರೀತಿ ನೆಮ್ಮದಿ ದೊರೆಯಲಿದೆ. ಯಾರು ವಿವಾಹ ವಯಸ್ಕರಾಗಿದ್ದೀರಿ ಮತ್ತು ಮದುವೆಗಾಗಿ ಪ್ರಯತ್ನ ಪಡುತ್ತಿದ್ದೀರಿ ಅಂತಹವರಿಗೆ ಸೂಕ್ತ ಸಂಬಂಧಗಳು ದೊರೆಯುವಂತಹ ಅವಕಾಶಗಳು ಹೆಚ್ಚಿವೆ. ಮ್ಯಾಟ್ರಿಮೋನಿ ವೆಬ್ ಸೈಟ್ ಮೂಲಕ ಯಾರು ಪ್ರಯತ್ನ ಪಡುತ್ತಿದ್ದೀರಿ ಅಂತಹವರಿಗೆ ಸಾಧ್ಯತೆಗಳು ಮತ್ತೂ ಹೆಚ್ಚಾಗಿವೆ. ಕುಟುಂಬದ ವ್ಯವಹಾರ ಅಥವಾ ಉದ್ಯಮವನ್ನೇ ಮುಂದುವರಿಸಿಕೊಂಡು ಬಂದಂತಹವರು ಅದರ ವಿಸ್ತರಣೆಗಾಗಿ ಬ್ಯಾಂಕ್ ಗಳಿಂದ ಸಾಲ ಪಡೆಯುವುದಕ್ಕೆ ಪ್ರಯತ್ನಿಸಲಿದ್ದೀರಿ. ಕುಟುಂಬದ ಒಳಗೆ ಒಂದೇ ಸಲಕ್ಕೆ ಅನೇಕ ಬೆಳವಣಿಗೆಗಳು ಆಗಲಿವೆ. ನಿಮ್ಮಲ್ಲಿ ಕೆಲವರು ಮನೆ ಬದಲಾಯಿಸುವುದಕ್ಕೆ ಅಥವಾ ಈಗಿರುವುದಕ್ಕಿಂತ ದೊಡ್ಡ ಮನೆಯೊಂದನ್ನು ಖರೀದಿ ಮಾಡುವುದರ ಸಲುವಾಗಿ ಹುಡುಕಾಡುವುದಕ್ಕೆ ಶುರು ಮಾಡಲಿದ್ದೀರಿ. ನೆನಪಿನಲ್ಲಿಡಿ, ಇದ್ಯಾವುದನ್ನು ಮಾಡುವುದಕ್ಕೆ ಮುನ್ನ ಕುಟುಂಬ ಸದಸ್ಯರ ಜತೆಗೆ ಚರ್ಚೆ ಮಾಡಿ. ಇಲ್ಲದಿದ್ದಲ್ಲಿ ಅಭಿಪ್ರಾಯ ಭೇದಗಳು ಬಂದು, ಮನೆಯಲ್ಲಿ ಶಾಂತಿಯಿಲ್ಲದಂತೆ ಆಗುತ್ತದೆ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಇಷ್ಟು ಸಮಯ ನಿಮ್ಮಲ್ಲಿ ಹೊಂದಾಣಿಕೆ ಮಾಡಿಕೊಂಡು ಹೋಗುವ ಹಾಗೂ ಇತರರು ತಪ್ಪು ಮಾಡಿದಲ್ಲಿ ಮಾತಿನ ಮೂಲಕ ಒಮ್ಮೆ ಎಚ್ಚರಿಕೆ ಹೇಳಿ ಮುಂದಕ್ಕೆ ಸಾಗುವ ಸ್ವಭಾವ ಏನಾದರೂ ಇದ್ದಲ್ಲಿ ಅದು ಬದಲಾವಣೆ ಆಗಲಿದೆ. ಕ್ಷಮಿಸುವಂಥ ಸ್ವಭಾವವೇ ನಿಮ್ಮಲ್ಲಿ ಕಾಣದಂತೆ ಆಗುತ್ತದೆ. ಸರಿ- ತಪ್ಪುಗಳ ವಿಚಾರದಲ್ಲಿ ಯಾರಿಗೂ ರಿಯಾಯಿತಿ ತೋರಿಸುವುದಕ್ಕೆ ಮನಸ್ಸಾಗುವುದಿಲ್ಲ. ಇದೇ ಕಾರಣಕ್ಕಾಗಿಯೇ ಈ ವ್ಯಕ್ತಿ ಇವರೇನಾ ಎಂದು ಇತರರು ಅನುಮಾನ ಪಡುವ ಮಟ್ಟಿಗೆ ಹೆಚ್ಚು ಆಕ್ರಮಣಕಾರಿಯಾಗಿ ಆಲೋಚನೆ ಮಾಡುವುದಕ್ಕೆ ಈ ತಿಂಗಳು ನೀವು ಆರಂಭ ಮಾಡಲಿದ್ದೀರಿ. ನಿಮ್ಮ ಸಲುವಾಗಿ ಏನೆಲ್ಲ ಮಾಡಬೇಕು ಎಂದು ಬಯಸುತ್ತಾ ಬಂದಿದ್ದಿರೋ ಆ ಎಲ್ಲವನ್ನೂ ಮಾಡಬೇಕು ಎಂದೆನಿಸುವುದಕ್ಕೆ ಬಲವಾಗಿ ಅನಿಸಲಿದೆ. ಅದರ ಪರಿಣಾಮ ಎಂಬಂತೆಯೇ ಹೊಸದಾಗಿ ಏಕಕಾಲಕ್ಕೆ ಹಲವು ಗ್ಯಾಜೆಟ್, ವಸ್ತುಗಳನ್ನು ಖರೀದಿ ಮಾಡಲಿದ್ದೀರಿ. ಇಎಂಐ ಆಗಿ ಕನ್ವರ್ಟ್ ಮಾಡಿಸಲಿದ್ದೀರಿ ಅಥವಾ ಕ್ರೆಡಿಟ್ ಕಾರ್ಡ್ ನಿಮ್ಮದೋ ಅಥವಾ ಇತರರದೋ ಬಳಕೆ ಮಾಡಲಿದ್ದೀರಿ. ಇದೇ ತಿಂಗಳು ನಿಮಗೆ ಬರಬೇಕಾದ ಹಣ ಅದು ಸಾಲವೇ ಇರಬಹುದು ಅಥವಾ ಈಗಾಗಲೇ ಕೆಲಸ ಮಾಡಿಯೂ ಹಣ ಬಾರದೆ ಇದ್ದ ಸಂದರ್ಭದಲ್ಲಿ ಸರಿಯಾಗಿಯೇ ಪ್ರಯತ್ನವನ್ನು ಮಾಡಿ, ಅದನ್ನು ವಸೂಲಿ ಮಾಡುವಲ್ಲಿ ಯಶಸ್ವಿಯಾಗಲಿದ್ದೀರಿ. ಆದಾಯದಲ್ಲಿ ಹೆಚ್ಚಳ ಆಗಲಿದೆ. ಇನ್ನು ನಿಮ್ಮಲ್ಲಿ ಯಾರು ಯೂಟ್ಯೂಬರ್ ಗಳು, ಸ್ಟ್ಯಾಂಡ್ ಅಪ್ ಕಾಮಿಡಿಯನ್ ಗಳು, ಮೆಜಿಷಿಯನ್ ಗಳು ಅಥವಾ ಕಲಾವಿದರು ಇದ್ದೀರಿ ಅಂಥವರಿಗೆ ದೀರ್ಘಾವಧಿಯ ಆದಾಯದಲ್ಲಿ ಹೆಚ್ಚಳ ಮಾಡಿಕೊಳ್ಳುವ ಎಲ್ಲಾ ಅವಕಾಶವು ತೆರೆದುಕೊಳ್ಳಲಿವೆ. ಯಾರು ಗೃಹ ಸಾಲದ ಟಾಪ್ ಅಪ್ ಗಾಗಿ ಪ್ರಯತ್ನ ಪಡುತ್ತಿದ್ದೀರಿ ಅಂತಹವರಿಗೆ ಒಂದು ವೇಳೆ ಇಲ್ಲಿಯ ತನಕ ಅಡೆತಡೆಗಳು ಎದುರಾಗಿದ್ದರೆ ಈ ತಿಂಗಳಲ್ಲಿ ಅದು ನಿವಾರಣೆಯಾಗಿ, ಸಾಲ ದೊರೆಯುವ ಅವಕಾಶಗಳು ಜಾಸ್ತಿ ಇವೆ. ಈ ಹಿಂದೆ ನೀವು ಯಾರಿಗೆ ಸಹಾಯ ಮಾಡಿದ್ದಿರೋ ಅಂಥವರು ಈಗ ನಿಮಗೆ ಸಹಾಯಕ್ಕೆ ಬರುವಂಥ ಅವಕಾಶಗಳು ಹೆಚ್ಚಾಗಿವೆ. ಮಾರ್ಕೆಟಿಂಗ್ ಅಥವಾ ಮಾರಾಟ ವಿಭಾಗದಲ್ಲಿ ಕೆಲಸ ಮಾಡುತ್ತಿರುವವರಿಗೆ ನಿರೀಕ್ಷಿತ ಸಮಯಕ್ಕಿಂತ ಅಥವಾ ನೀಡಿರುವ ಸಮಯಕ್ಕಿಂತ ಬಹಳ ಬೇಗ ಗುರಿ ಈಡೇರಲಿದೆ. ಈ ತಿಂಗಳು ಯಾವುದೇ ಕಾರಣಕ್ಕೂ ಹೊಸದಾಗಿ ಪರಿಚಯ ಆದವರ ಮೇಲೆ ಹೆಚ್ಚಿನ ನಂಬಿಕೆ ಇಟ್ಟು, ಅಂತರಂಗದ ವಿಷಯಗಳನ್ನು ಹಂಚಿಕೊಳ್ಳಲು ಹೋಗಬೇಡಿ. ಹೀಗೆ ಮಾಡುವುದರಿಂದ ನೀವು ಅವಮಾನಕ್ಕೆ ಗುರಿಯಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಸೋದರ ಸಂಬಂಧಿಗಳು ನಿಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕೆಲವರು ಚಾಡಿ ಹೇಳಬಹುದು, ಇಂಥ ಮಾತುಗಳನ್ನು ನಂಬುವ ಮೊದಲು ಸತ್ಯವನ್ನು ಪರಾಮರ್ಶಿಸಿ, ಆ ನಂತರ ಮುಂದಕ್ಕೆ ಹೆಜ್ಜೆ ಇಡುವುದು ಒಳ್ಳೆಯದು. ಪಿತ್ರಾರ್ಜಿತವಾಗಿ ಬಂದಂಥ ಆಸ್ತಿಯ ರಕ್ಷಣೆ ವಿಚಾರವಾಗಿ ಕೆಲವು ಕ್ರಮಗಳನ್ನು ತೆಗೆದುಕೊಳ್ಳಲಿದ್ದೀರಿ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಹಣಕಾಸಿನ ವಿಚಾರದಲ್ಲಿ ಒತ್ತಡ ಏರ್ಪಡುತ್ತದೆ. ನಿಮ್ಮ ಬಳಿ ಇರುವಂಥ ಬಜೆಟ್ ಮೀರಿದಂತೆ ಕೆಲವು ಖರ್ಚುಗಳು ತಲೆ ಎತ್ತುತ್ತವೆ. ಮೊದಮೊದಲಿಗೆ ಎಲ್ಲವೂ ಸಲೀಸು ಎಂದುಕೊಂಡ ಕೆಲಸಗಳು ನೀವು ನಿರೀಕ್ಷೆ ಮಾಡಿದ ರೀತಿಯಲ್ಲಿ ಸಲೀಸಾಗಿ ಮುಗಿಯುವುದಿಲ್ಲ ಎಂದೆನಿಸುವುದಕ್ಕೆ ಶುರುವಾಗುತ್ತದೆ. ಇನ್ನು ನಿಮ್ಮ ಬಳಿಗೆ ಏನೋ ಬರುತ್ತದೆ, ಹಾಗೆ ಬಂದಿದ್ದು ಏನು ಎಂಬುದು ತನ್ನ ಪ್ರಭಾವವನ್ನು ತೋರಿಸುವುದಕ್ಕೆ ಸಮಯ ಆಗುತ್ತದೆ. ಅದು ಅವಕಾಶ ಇರಬಹುದು ಅಥವಾ ವ್ಯಕ್ತಿಗಳ ರೂಪದಲ್ಲಿನ ಶಿಫಾರಸು ಇರಬಹುದು. ಅದು ಪ್ರಭಾವ ತೋರಲು ಸಮಯ ಆಗುತ್ತದೆ. ಇನ್ನು ನೀವು ಯಾರನ್ನು ಗುರುಗಳನ್ನಾಗಿ ಭಾವಿಸಿದ್ದೀರೋ ಅಥವಾ ಗುರು ಸಮಾನರಾಗಿ ಇದ್ದಾರೋ ಅಂತಹವರು ಹೇಳುವಂತಹ ಮಾತುಗಳನ್ನು ಗಂಭೀರವಾಗಿ ಪರಿಗಣಿಸಿ, ಅವರು ನೀಡುವಂತಹ ಸಲಹೆಗಳನ್ನು ಪಾಲಿಸಿದರೆ ಉದ್ಯೋಗ- ವೃತ್ತಿ, ವ್ಯಾಪಾರ- ಉದ್ಯಮ ಯಾವುದರಲ್ಲೇ ಆದರೂ ಉತ್ತಮವಾದಂತಹ ಫಲಿತಾಂಶವನ್ನು ಕಾಣುವುದಕ್ಕೆ ಸಾಧ್ಯವಾಗುತ್ತದೆ. ನೀವು ಬಹಳ ಸಮಯದಿಂದ ತೆರಳಬೇಕು ಎಂದುಕೊಂಡಿದ್ದ ಸ್ಥಳಕ್ಕೆ, ಹೋಟೆಲ್, ರೆಸ್ಟೋರೆಂಟ್, ರೆಸಾರ್ಟ್ ಗೆ ತೆರಳುವಂಥ ಯೋಗ ನಿಮ್ಮ ಪಾಲಿಗೆ ದೊರೆಯಲಿದೆ. ಜ್ಯೋತಿಷಿಗಳು, ಯೋಗವನ್ನು ಕಲಿಸುವಂಥವರು, ರೇಕಿ ತರಬೇತಿ ನೀಡುವವರಿಗೆ ಉತ್ತಮವಾದ ಸಮಯ ಇದಾಗಿರಲಿದೆ. ಇನ್ನು ಸಂಘ- ಸಂಸ್ಥೆ ಅಥವಾ ಸಂಘಟನೆಗಳಲ್ಲಿ ಪ್ರಮುಖವಾದಂತಹ ಹುದ್ದೆಯಲ್ಲಿ ಇರುವಂತಹವರಿಗೆ ಸನ್ಮಾನಗಳು ಆಗುವಂಥ ಯೋಗಗಳಿವೆ. ಯಾರು ತಾತ್ಕಾಲಿಕ ಕೆಲಸಗಳನ್ನು ಮಾಡುತ್ತಿದ್ದೀರಾ ಅಂತಹವರಿಗೆ ಹುದ್ದೆ ಕಾಯಂ ಆಗುವ ಹಾಗೂ ಅದೇ ವೇಳೆ ವೇತನ ಹೆಚ್ಚಾಗುವ ಮತ್ತು ಉದ್ಯೋಗ ಭದ್ರತೆ ಸಿಗುವ ಯೋಗಗಳಿವೆ. ಈ ತಿಂಗಳು ತಾಳ್ಮೆ ಮತ್ತು ಸಂಯಮ ಬಹಳ ಮುಖ್ಯವಾಗುತ್ತದೆ. ಇತರರ ಮಾತುಗಳು ಬಹಳ ಬೇಗ ನಿಮ್ಮ ಒಳಗೊಂದು ಸಿಟ್ಟನ್ನು ತಂದುಬಿಡುತ್ತದೆ. ಅದರಲ್ಲೂ ನಿಮ್ಮ ಮೇಲಧಿಕಾರಿಗಳ ಜೊತೆಗೆ ಯಾವುದೇ ಕಾರಣಕ್ಕೂ ವ್ಯಾಜ್ಯ ಅಥವಾ ವಾಗ್ವಾದಗಳನ್ನು ಮಾಡಿಕೊಳ್ಳಲು ಹೋಗಬೇಡಿ. ಊಟ- ತಿಂಡಿ ವಿಚಾರದಲ್ಲಿ ನಿಮ್ಮ ದೇಹಕ್ಕೆ ಅಪಥ್ಯವಾಗುವಂಥದ್ದು ಯಾವುದೇ ಕಾರಣಕ್ಕೂ ಸೇವಿಸಬೇಡಿ. ನಾಲಗೆ ಮೇಲೆ ನಿಯಂತ್ರಣವನ್ನು ಇಟ್ಟುಕೊಳ್ಳಿ. ನಿಮ್ಮನ್ನು ಹೊಗಳಿದರು ಅಂತಲೋ ಅಥವಾ ವಿಪರೀತ ಗೌರವದಿಂದ ನೋಡಿದರು ಎಂಬ ಕಾರಣಕ್ಕೆ ಯಾವ ವಿಚಾರವನ್ನು ಇತರರು ನಿಮ್ಮ ಬಳಿ ರಹಸ್ಯ ಎಂದು ಹೇಳಿದ್ದರೋ ಅದನ್ನು ಸಹ ಹೇಳಿಬಿಡುವ ಸಾಧ್ಯತೆಗಳಿವೆ. ಆದ್ದರಿಂದ ಈ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿ. ನಿಮ್ಮಿಂದ ಸಾಧ್ಯವಾದಲ್ಲಿ ವಿಷ್ಣು ಸಹಸ್ರನಾಮ ಪಠಣವನ್ನು ಮಾಡಿ, ಒಂದು ವೇಳೆ ಮಾಡಲಿಕ್ಕೆ ಸಾಧ್ಯವಿಲ್ಲ ಅಂತ ಆದರೆ ಕನಿಷ್ಠ ಪಕ್ಷ ಶ್ರವಣವನ್ನಾದರೂ ಮಾಡಿ, ಅಂದರೆ ಕೇಳಿಸಿಕೊಳ್ಳಿ. ಇತರರ ಸಂಸಾರದ ವಿಚಾರದಲ್ಲಿ ನಿಮ್ಮ ಅಭಿಪ್ರಾಯವನ್ನು ಹೇಳಲಿಕ್ಕೆ ಹೋಗಬೇಡಿ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ದೀರ್ಘ ಕಾಲದಿಂದ ಚಿಕಿತ್ಸೆ ಪಡೆದುಕೊಳ್ಳುತ್ತಾ ಇರುವವರಿಗೆ ಆರೋಗ್ಯದಲ್ಲಿ ಮಹತ್ತರವಾದ ಸುಧಾರಣೆ ಕಾಣಿಸಲಿದೆ. ಅದರಲ್ಲೂ ನಿಮ್ಮಲ್ಲಿ ಯಾರು ಮಾನಸಿಕ ಖಿನ್ನತೆ ಸಮಸ್ಯೆಯಿಂದ ಬಳಲುತ್ತಿದ್ದೀರೋ ಅಂಥವರು ಅದರಿಂದ ಹೊರಬರುವುದಕ್ಕೆ ಮಾರ್ಗೋಪಾಯಗಳು ದೊರೆಯಲಿವೆ. ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ಅಥವಾ ಉದ್ಯೋಗಕ್ಕೆ ಸಂಬಂಧಿಸಿದಂಥ ಪ್ರಮುಖ ಕೋರ್ಸ್ ಗಳನ್ನು ಮಾಡುವುದಕ್ಕೆ ಅಂತಲೇ ಗಂಭೀರವಾದ ಪ್ರಯತ್ನವನ್ನು ಮಾಡಲಿದ್ದೀರಿ. ಅದರ ಸಲುವಾಗಿ ನಿಮ್ಮಲ್ಲಿ ಕೆಲವರು ಕ್ರೆಡಿಟ್ ಕಾರ್ಡ್ ಬಳಸಬಹುದು ಅಥವಾ ಬ್ಯಾಂಕ್ ನಿಂದ ಸಾಲ ಪಡೆದುಕೊಳ್ಳುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ನಿಮಗೆ ತುಂಬ ಅನಿರೀಕ್ಷಿತ ಎನಿಸುವಂಥ ಕೆಲವು ಬೆಳವಣಿಗೆಗಳು ಆಗಲಿವೆ. ಅದರಲ್ಲೂ ತಿಂಗಳ ದ್ವಿತೀಯಾರ್ಧದಲ್ಲಿ ನಿಮ್ಮ ಸಹಾಯ ಕೇಳಿಕೊಂಡು ಬರುವಂಥವರ ಪ್ರಮಾಣ ಹೆಚ್ಚಾಗಲಿದೆ. ಒಂದು ವೇಳೆ ನಿಮ್ಮ ಆಪ್ತರು ಅಥವಾ ಹತ್ತಿರದ ಸ್ನೇಹಿತರು ಹಣಕಾಸಿನ ಸಹಾಯವನ್ನು ಕೇಳಿಕೊಂಡು ಬಂದಲ್ಲಿ, ನಿಮ್ಮಿಂದ ಸಾಧ್ಯವೂ ಆದರೆ ಅವರಿಗೆ ನೆರವನ್ನು ನೀಡಿ. ಆರು ತಿಂಗಳ ಒಳಗೆ ಇರುವಂಥ ಮಕ್ಕಳು ನಿಮಗೆ ಇದ್ದಲ್ಲಿ ವೈದ್ಯಕೀಯ ವೆಚ್ಚದಲ್ಲಿ ಭಾರೀ ಪ್ರಮಾಣದ ಏರಿಕೆ ಕಂಡುಬರಲಿದೆ. ಆರೋಗ್ಯ ಪರಿಸ್ಥಿತಿ ಸಹ ನಿಮ್ಮಲ್ಲಿ ಒಂದು ಬಗೆಯ ಆತಂಕವನ್ನು ತರಲಿದೆ. ದೊಡ್ಡ ಅಳತೆಯ ಟೀವಿ, ಹೋಮ್ ಥಿಯೇಟರ್, ವರ್ಚುವಲ್ ರಿಯಾಲಿಟಿ ಸೆಟ್ ಇಂಥವುಗಳ ಖರೀದಿಗಾಗಿ ಹಣವನ್ನು ಖರ್ಚು ಮಾಡಲಿದ್ದೀರಿ. ಸರ್ಕಾರದ ಪ್ರಮುಖ ಹುದ್ದೆಯಲ್ಲಿ ಇರುವಂಥವರಿಗೆ ತಾತ್ಕಾಲಿಕವಾಗಿ ಹೆಚ್ಚುವರಿಯಾದ ಜವಾಬ್ದಾರಿಯನ್ನು ನೀಡಬಹುದು. ಕೆಲಸದ ಒತ್ತಡದಲ್ಲಿ ಸಿಲುಕಿಕೊಂಡು ಕುಟುಂಬದ ವಿಚಾರಗಳ ಬಗ್ಗೆ ಹೆಚ್ಚು ನಿಗಾ ಮಾಡುವುದಕ್ಕೆ ಸಾಧ್ಯವಾಗದಿರಬಹುದು. ನಲವತ್ತು ವರ್ಷಕ್ಕಿಂತ ಹೆಚ್ಚು ವಯಸ್ಸಾದವರಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾಗಲಿದೆ. ರಕ್ತದೊತ್ತಡ, ಮಧುಮೇಹದಂಥ ಸಮಸ್ಯೆಗಳು ಇರುವವರು ಅದರ ನಿಯಂತ್ರಣಕ್ಕಾಗಿ ಹೆಚ್ಚಿನ ಪ್ರಯತ್ನ ಮಾಡಲಿದ್ದೀರಿ. ಈ ಕಾರಣಕ್ಕೆ ಜಿಮ್, ಪ್ರಾಣಾಯಾಮ, ಯೋಗ ಅಥವಾ ಧ್ಯಾನ ಕಲಿಕೆಯಂಥದ್ದಕ್ಕೆ ಸೇರಿಕೊಳ್ಳುವ ಸಾಧ್ಯತೆಗಳಿವೆ. ಸಾವಯವ ಉತ್ಪನ್ನಗಳ ಮಾರಾಟ ಮಾಡುವಂಥವರಿಗೆ ದೊಡ್ಡ ಪ್ರಮಾಣದ ಆರ್ಡರ್ ದೊರೆಯುವ ಸಾಧ್ಯತೆಗಳಿವೆ ಮತ್ತು ಒಂದೊಳ್ಳೆ ಮೊತ್ತವನ್ನು ಅಡ್ವಾನ್ಸ್ ಆಗಿ ನೀಡುವ ಅವಕಾಶಗಳು ಇವೆ. ವಕೀಲರು, ಚಾರ್ಟರ್ಡ್ ಅಕೌಂಟೆಂಟ್ ಗಳು ಅಥವಾ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿರುವವರು ಹೊಸ ಹಾಗೂ ವಿಲಾಸಿ ವಾಹನವನ್ನು ಖರೀದಿ ಮಾಡುವಂಥ ಯೋಗ ಇದೆ. ಈ ತಿಂಗಳು ನಿಮ್ಮಿಂದ ಸಾಧ್ಯವಾದಲ್ಲಿ ಯಾವುದಾದರೂ ಒಂದು ಮಂಗಳವಾರದಂದು ನರಸಿಂಹದೇವರ ಆರಾಧನೆಯನ್ನು ಅಥವಾ ಪೂಜೆಯನ್ನು ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯಲಿದೆ. ರಕ್ತದೊತ್ತಡ, ಜ್ವರದಂಥ ಆರೋಗ್ಯ ಸಮಸ್ಯೆ ಇರುವವರು ಇದನ್ನು ಕಡ್ಡಾಯವಾಗಿ ಮಾಡಿಸಕೊಳ್ಳುವುದು ಒಳ್ಳೆಯದು.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ಯಾವುದೇ ಪ್ರಾಜೆಕ್ಟ್ ಮುನ್ನಡೆಸುವಂಥವರಾಗಿದ್ದಲ್ಲಿ ಅಥವಾ ಟೀಮ್ ಲೀಡ್ ಆಗಿದ್ದಲ್ಲಿ ಅಥವಾ ಯಾವುದೇ ಕೆಲಸವನ್ನು ಪೂರ್ಣಗೊಳಿಸುವ ಜವಾಬ್ದಾರಿ ನಿಮಗೆ ವಹಿಸಿದ್ದಾರೆ ಎಂದಾದಲ್ಲಿ ಎಲ್ಲ ವಿಚಾರಗಳ ಬಗ್ಗೆಯೂ ನಿಮಗೆ ಮಾಹಿತಿ ಇರುವುದು ಒಳ್ಳೆಯದು. ನಿಮಗೆ ಸಣ್ಣ ಪುಟ್ಟ ಸಂಗತಿಗಳು ಎಂದೆನಿಸಿದರೂ ಅಡ್ಡಿಯಿಲ್ಲ, ಆದರೆ ಅದರ ಬಗ್ಗೆ ತಿಳಿದುಕೊಳ್ಳಿ ಹಾಗೂ ತೊಡಗಿಸಿಕೊಳ್ಳಿ. ಏಕೆಂದರೆ ಇತರರ ಮೇಲೆ ನಂಬಿಕೆ ಇಡುವುದು ತಪ್ಪಲ್ಲ, ಆದರೆ ನಾವು ನಂಬಿಕೆ ಇಡುತ್ತಿರುವುದು ಯಾರ ಮೇಲೆ ಹಾಗೂ ಅವರ ಟ್ರ್ಯಾಕ್ ರೆಕಾರ್ಡ್ ಹೇಗಿದೆ ಎಂಬುದು ಸಹ ಆಲೋಚನೆ ಮಾಡುವುದು ಮುಖ್ಯವಾಗುತ್ತದೆ. ಇದನ್ನು ನೀವು ನಿರ್ಲಕ್ಷ್ಯ ಮಾಡಿದಲ್ಲಿ ಇರುಳು ಕಂಡ ಬಾವಿಗೆ ಹಗಲು ಬಿದ್ದರು ಎಂಬ ಮಾತಿದೆಯಲ್ಲ ಈ ಮಾತು ಈ ಮಾಸ ನಿಮಗೆ ಅನ್ವಯಿಸಲಿದೆ. ಒಬ್ಬ ವ್ಯಕ್ತಿ ಈ ಹಿಂದೆ ತಪ್ಪು ಮಾಡಿದ್ದ ಮತ್ತು ಹಲವರಿಗೆ ಮೋಸ ಮಾಡಿದ್ದ ಎಂಬ ಸಂಗತಿ ಗೊತ್ತಿದ್ದರೂ ಸಹ ಅವನಲ್ಲಿ ಬದಲಾವಣೆಯಾಗಿದೆ ಅಂತಲೋ ಅಥವಾ ಆ ಬದಲಾವಣೆಗೆ ನೀವೇ ಕಾರಣ ಆಗಬೇಕು ಅಂತಲೋ ಮಾಡಿದ ಪ್ರಯತ್ನದಲ್ಲಿ ಸರಿಯಾಗಿಯೇ ಪೆಟ್ಟು ಬೀಳಲಿದೆ. ಆದಾಯ ಹೆಚ್ಚಳಕ್ಕಾಗಿ ಶತಾಯಗತಾಯ ಪ್ರಯತ್ನವನ್ನು ನೀವು ಮಾಡಲಿದ್ದೀರಿ. ಇನ್ನು ನಿಮ್ಮಲ್ಲಿ ಯಾರು ಉದ್ಯೋಗ ಬದಲಾವಣೆಗಾಗಿ ಪ್ರಯತ್ನ ಮಾಡುತ್ತಿದ್ದೀರಿ ಅಂಥವರಿಗೆ ಸ್ನೇಹಿತರು ಅಥವಾ ಸಂಬಂಧಿಕರಿಂದ ಬರುವಂತಹ ಸಲಹೆಯನ್ನು ಗಂಭೀರವಾಗಿ ಪರಿಗಣಿಸುವುದು ಬಹಳ ಒಳ್ಳೆಯದು. ಕಡಿಮೆ ಬಡ್ಡಿಗೆ ಸಾಲ ಸಿಗುತ್ತದೆ ಅಂತಲೋ ಅಥವಾ ದೀರ್ಘಾವಧಿಗೆ ಸಮಯ ಕೊಟ್ಟು, ಬಡ್ಡಿ ಕೇಳುವುದಿಲ್ಲ ಅಂತಲೋ ಸಾಲ ಮಾಡಿಕೊಂಡಲ್ಲಿ ಅದನ್ನು ತೀರಿಸುವುದಕ್ಕೆ ಹೈರಾಣಗುತ್ತೀರಿ. ಆದರೆ ಈ ತಿಂಗಳು ನೀವು ಸೋಷಿಯಲ್ ಸ್ಟೇಟಸ್ ಎಂಬ ಕಾರಣಕ್ಕಾಗಿಯೇ ಮನೆಗೆ ಕೆಲವು ಪೀಠೋಪಕರಣಗಳನ್ನು ಖರೀದಿಸಲಿದ್ದೀರಿ. ನಿಮ್ಮಲ್ಲಿ ಯಾರು ಈಗಾಗಲೇ ಹೊಟ್ಟೆಗೆ ಸಂಬಂಧಿಸಿದಂತೆ ಸಮಸ್ಯೆಯಿಂದ ಬಳಲುತ್ತಿದ್ದೀರೋ ಅಂಥವರು ಆಸ್ಪತ್ರೆಗಳಿಗೆ, ವೈದ್ಯಕೀಯ ಪರೀಕ್ಷೆಗಳಿಗೆ ಹೆಚ್ಚಿನ ಹಣ ಖರ್ಚಾಗುವ ಸಾಧ್ಯತೆಗಳಿವೆ. ಅದೇ ವೇಳೆ ಸರಿಯಾದ ವೈದ್ಯೋಪಚಾರ ದೊರೆಯುತ್ತಿದೆ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ. ಇದೇ ವೇಳೆ ನಿಮಗೇನಾದರೂ ಜೀರ್ಣಾಂಗದ ಸಮಸ್ಯೆ, ತಲೆನೋವು, ಬೆನ್ನುಹುರಿ ಸಮಸ್ಯೆ ಇತ್ಯಾದಿ ಅನಾರೋಗ್ಯ ಸಮಸ್ಯೆಗಳು ಕಾಡುವುದಕ್ಕೆ ಆರಂಭಿಸಿದರೆ ಯಾವುದೇ ಕಾರಣಕ್ಕೂ ಮನೆ ಮದ್ದು ಅಂತ ಮಾಡುವುದಕ್ಕೆ ಹೋಗಬೇಡಿ, ಕಡ್ಡಾಯವಾಗಿ ವೈದ್ಯರನ್ನು ಭೇಟಿ ಮಾಡಿ. ಹೊಸದಾಗಿ ವ್ಯವಹಾರ, ವ್ಯಾಪಾರ ಅಥವಾ ಉದ್ಯಮವನ್ನು ಆರಂಭಿಸಬೇಕು ಅಂದುಕೊಳ್ಳುತ್ತಿರುವವರಿಗೆ ಸ್ನೇಹಿತರು ಕೆಲವು ಸಲಹೆಗಳನ್ನು ನೀಡಲಿದ್ದಾರೆ. ಈ ಪೈಕಿ ಯಾವುದನ್ನು ಅಳವಡಿಸಿಕೊಳ್ಳಬೇಕು ಹಾಗೂ ಯಾವುದನ್ನು ಕಿವಿಯಲ್ಲಿ ಕೇಳಿ, ಅಲ್ಲಿಯೇ ಬಿಟ್ಟುಬಿಡಬೇಕು ಎಂಬುದರ ಬಗ್ಗೆ ವಿವೇಚನೆ ಮುಖ್ಯವಾಗುತ್ತದೆ. ಪ್ರೀತಿ- ಪ್ರೇಮದಲ್ಲಿದ್ದು, ಅದನ್ನು ಮನೆಯಲ್ಲಿ ಪ್ರಸ್ತಾವ ಮಾಡಬೇಕು ಎಂದಿರುವವರು ಈ ತಿಂಗಳಲ್ಲಿ ಬುಧವಾರಗಳಂದು ಮನೆಯವರಿಗೆ ತಿಳಿಸುವುದು ಉತ್ತಮ.