Numerology Prediction: ಸಂಖ್ಯಾಶಾಸ್ತ್ರದ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ ಮಾಸಭವಿಷ್ಯ 

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ಮಾಸ ಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ ಮಾಸಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. 

Numerology Prediction: ಸಂಖ್ಯಾಶಾಸ್ತ್ರದ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ ಮಾಸಭವಿಷ್ಯ 
ಸಂಖ್ಯಾಶಾಸ್ತ್ರ
Follow us
| Updated By: ಸುಷ್ಮಾ ಚಕ್ರೆ

Updated on: Oct 27, 2024 | 7:21 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ಮಾಸ ಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ ಮಾಸಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಕಾಲು ನೋವು ಈಗಾಗಲೇ ಇರುವವರಿಗೆ ಅದು ತೀವ್ರವಾಗಲಿದೆ. ಸ್ನೇಹಿತರೋ ಅಥವಾ ಸಂಬಂಧಿಕರೋ ಬಹಳ ನಂಬಿಕೆ ಇಟ್ಟು, ನಿಮಗೆ ವಹಿಸಿದ್ದ ಜವಾಬ್ದಾರಿಯನ್ನು ಮುಗಿಸುವುದು ಅಸಾಧ್ಯ ಎನಿಸಲಿದೆ. ನಿಮ್ಮ ಮನೆಗೆ ಯಾರು ಬಂದರು- ಯಾರು ಹೋದರು ಎಂಬ ಕಡೆಗೆ ಗಮನ ನೀಡುವುದಕ್ಕೆ ಸಾಧ್ಯವಾಗದೆ ಕುಟುಂಬಸ್ಥರ ಆಕ್ಷೇಪಕ್ಕೆ ಗುರಿಯಾಗುತ್ತೀರಿ. ನಿಮ್ಮ ಆದಾಯವನ್ನು ನೆಚ್ಚಿಕೊಂಡು, ಕುಟುಂಬ ಸದಸ್ಯರಿಗೆ ನೀಡಿದ್ದ ಮಾತಿನಂತೆ ಕೆಲವು ವಸ್ತುಗಳನ್ನು ಕೊಡಿಸುವುದಕ್ಕೆ ಸಾಧ್ಯವಾಗದೇ ಹೋಗಬಹುದು. ಈ ವಿಚಾರವನ್ನು ಮುಂದು ಮಾಡಿಕೊಂಡು, ನಿಮ್ಮ ವಿರುದ್ಧ ಆಕ್ಷೇಪಗಳನ್ನು ಹೇಳಲಿದ್ದಾರೆ. ನೀವು ಅನಿವಾರ್ಯ ಎಂಬಂತೆ ಸಾಲ ಮಾಡಿಯಾದರೂ ಕೆಲವು ವಸ್ತುಗಳನ್ನು ಖರೀದಿ ಮಾಡಲಿದ್ದೀರಿ. ನಿಮ್ಮ ಸ್ನೇಹಿತರು ಅಥವಾ ಸಂಬಂಧಿಗಳ ಕ್ರೆಡಿಟ್ ಕಾರ್ಡ್ ಬಳಸಿ, ಅದನ್ನು ಇಎಂಐಗೆ ಕನ್ವರ್ಟ್ ಮಾಡಿಸಬೇಕು ಎಂದೇನಾದರೂ ಅಂದುಕೊಂಡಲ್ಲಿ ನಿಮಗೆ ಅಗತ್ಯ ಇರುವಂಥ ವಸ್ತುಗಳನ್ನು ಮಾತ್ರ ಕೊಳ್ಳುವುದಕ್ಕೆ ಆಲೋಚಿಸಿ. ಹೇಗೂ ಇಎಂಐ ತಾನೇ ಅಂದುಕೊಂಡು ನೀವು ಈ ಹಿಂದೆ ಹೂಡಿಕೆ ಮಾಡಿದ್ದಲ್ಲಿ, ಅದರಲ್ಲೂ ಚಿನ್ನ ಅಥವಾ ಗೋಲ್ಡ್ ಇಟಿಎಫ್ ಅಥವಾ ಸವರನ್ ಗೋಲ್ಡ್ ಬಾಂಡ್ ನಲ್ಲಿ ಹೂಡಿಕೆ ಮಾಡಿದ್ದವರಿಗೆ ಉತ್ತಮ ಲಾಭ ದೊರೆಯಲಿದೆ. ಅದನ್ನು ನಗದೀಕರಿಸುವ ಬಗ್ಗೆ ಕೂಡ ಆಲೋಚನೆ ಮಾಡಲಿದ್ದೀರಿ. ರಾಜಕೀಯವಾಗಿ ಸಕ್ರಿಯವಾಗಿ ಇರುವವರಿಗೆ ಕೈಯಿಂದ ಹಣ ಖರ್ಚು ಮಾಡಲೇಬೇಕಾದ ಸನ್ನಿವೇಶ ಎದುರಾಗಲಿದೆ. ಈ ಹಿಂದೆ ನೀವು ಪಡೆದಿದ್ದ ಸಹಾಯಕ್ಕೆ ಪ್ರತ್ಯುಪಕಾರವಾಗಿ ನಿಮ್ಮಿಂದ ಇಂಥದ್ದೊಂದು ಸಹಾಯ ಆಗಬೇಕು ಎಂದು ಬಾಯಿ ಬಿಟ್ಟು ಕೇಳಲಿದ್ದಾರೆ. ಈಗ ನಿಮ್ಮಿಂದ ಸಾಧ್ಯವೋ ಅಥವಾ ಇಲ್ಲವೋ ಎಂದು ಹೇಳಿಕೊಳ್ಳುವುದಕ್ಕೆ ಸಹ ಅವಕಾಶ ಇರುವುದಿಲ್ಲ. ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ತುಂಬ ಮುಖ್ಯವಾದ ನಿರ್ಧಾರವನ್ನು ನೀವು ಮಾಡಬೇಕಾಗುತ್ತದೆ. ಈ ಹಿಂದೆ ಕೆಲ ಸಮಯದಿಂದ ತೆಗೆದುಕೊಳ್ಳದೆ ಮುಂದೆ ಹಾಕುತ್ತಾ ಬಂದಿದ್ದ ತೀರ್ಮಾನಗಳನ್ನು ಒಂದರ ಬೆನ್ನಿಗೆ ಒಂದರಂತೆ ತೆಗೆದುಕೊಳ್ಳಲಿದ್ದೀರಿ. ಮನೆಗೆಲಸ ಮಾಡುತ್ತಿರುವವರಿಗೆ ವೇತನದಲ್ಲಿ ಹೆಚ್ಚಳ ಆಗುವ ಯೋಗ ಇದೆ. ಇನ್ನೂ ನಿಮ್ಮಲ್ಲಿ ಕೆಲವರಿಗೆ ಕಡಿಮೆ ಬಾಡಿಗೆಗೆ ಮನೆ ಅಥವಾ ಬಾಡಿಗೆಯೇ ಇಲ್ಲದಂತೆ ಉಳಿದುಕೊಳ್ಳುವುದಕ್ಕೆ ಮನೆಯ ವ್ಯವಸ್ಥೆ ಆಗುವ ಯೋಗ ಇದೆ. ಮನೆ ದುರಸ್ತಿ ಅಥವಾ ಸೋಲಾರ್ ವಾಟರ್ ಹೀಟರ್ ಇದ್ದಲ್ಲಿ ಅದರ ರಿಪೇರಿ ಸಲುವಾಗಿ ಹಣವನ್ನು ಖರ್ಚು ಮಾಡಲಿದ್ದೀರಿ. ನಿಮ್ಮಲ್ಲಿ ಕೆಲವರು ಸ್ವಂತ ಬಳಕೆಗೆ ದ್ವಿಚಕ್ರ ವಾಹನವನ್ನು ಖರೀದಿಸಲಿದ್ದೀರಿ. ಅಷ್ಟು ಮಾತ್ರವಲ್ಲ, ಈಗಾಗಲೇ ವಾಹನ ಇರುವವರು ಅದರ ಎಕ್ಸ್ ಚೇಂಜ್ ಗೆ ಮುಂದಾಗಲಿದ್ದೀರಿ. ಇನ್ನು ಸ್ವಂತ ವ್ಯಾಪಾರ- ವ್ಯವಹಾರ ಮಾಡುತ್ತಿರುವವರು ಹೊಸದಾಗಿ ಪಾರ್ಟನರ್ ಗಳನ್ನು ಹುಡುಕುವುದಕ್ಕೆ ಮುಂದಾಗಲಿದ್ದೀರಿ. ಕುಟುಂಬದೊಂದಿಗೆ ಪ್ರವಾಸಕ್ಕೆ ತೆರಳಬೇಕು ಅಂದುಕೊಳ್ಳುತ್ತಿರುವವರಿಗೆ ಉದ್ದೇಶ ಈಡೇರಿ, ಮನಸ್ಸಿಗೆ ತೃಪ್ತಿಯಾಗಲಿದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಸ್ನೇಹಿತರಿಗೋ ಸಂಬಂಧಿಗಳಿಗೋ ಸಹಾಯ ಆಗುವುದಾದರೆ ಆಗಲಿ ಎಂದುಕೊಂಡು ಕೆಲವು ಕೆಲಸಗಳನ್ನು ಅಥವಾ ಜವಾಬ್ದಾರಿಗಳನ್ನು ನೀವಾಗಿಯೋ ವಹಿಸಿಕೊಳ್ಳಲು ಮುಂದಾಗಲಿದ್ದೀರಿ. ಇದನ್ನು ಯಾಕಾಗಿ ಒಪ್ಪಿಕೊಂಡೆನೋ ಎಂದು ಆಮೇಲೆ ಪರಿತಪಿಸುವಂತಾಗುತ್ತದೆ. ನೀವು ಯಾರ ಸಮರ್ಥನೆಗೆ ನಿಲ್ಲುತ್ತೀರೋ ಅವರೇ ನಿಮ್ಮ ಮೇಲೆ ಆರೋಪ ಹೊರಿಸಿ, ದೂರವಾಗುವಂಥ ಯೋಗಗಳಿವೆ. ಆದ್ದರಿಂದ ನೀವು ಯಾರ ಪರವಾಗಿ ಹಾಗೂ ಯಾಕೆ ನಿಲ್ಲುತ್ತೀರಿ ಎಂಬುದಕ್ಕೆ ಸರಿಯಾದ ಸಮರ್ಥನೆಯನ್ನು ನಿಮ್ಮ ಬಳಿ ಇರಿಸಿಕೊಳ್ಳಿ. ಅದೇ ರೀತಿ ನಿಮಗೆ ಆಪ್ತರಾಗಿದ್ದವರೇ ಆಕ್ಷೇಪ ಮಾಡುತ್ತಿದ್ದಾರೆ ಎಂದಾಕ್ಷಣ ಚಿಂತೆ ಮಾಡುವುದಕ್ಕೆ ಹೋಗಬೇಡಿ. ಸಂಬಂಧಿಗಳು ನಿಮ್ಮ ಮನೆಗೆ ಬರುವಂಥ ಯೋಗ ಇದೆ. ಈ ಸಮಯದಲ್ಲಿ ಹಣ ಇದೆಯೋ ಇಲ್ಲವೋ ಇದ್ಯಾವುದನ್ನೂ ಯೋಚಿಸುವುದಕ್ಕೆ ಸಾಧ್ಯವಿಲ್ಲದೆ ಔತಣ- ಉಪಚಾರಗಳನ್ನು ಮಾಡಬೇಕಾಗಲಿದೆ. ನಿಮ್ಮಲ್ಲಿ ಕೆಲವರು ಏಕಾಂತವನ್ನು ಬಯಸಿ, ಬೆಟ್ಟ- ಗುಡ್ಡಗಳು ಇರುವಂಥ ಪ್ರದೇಶಗಳಿಗೆ ಪ್ರವಾಸಕ್ಕೆ ತೆರಳುವಂಥ ಯೋಗ ಕಂಡುಬರುತ್ತಿದೆ. ಅಥವಾ ಈ ಹಿಂದೆಯೇ ಹಾಕಿಕೊಂಡಿದ್ದ ಪ್ರವಾಸವನ್ನೋ ಅಥವಾ ಮುಂದೆ ಯಾವಾಗಲೋ ತೆರಳಬೇಕು ಅಂದುಕೊಂಡಿದ್ದ ಪ್ರದೇಶಕ್ಕೋ ಈ ಅವಧಿಯಲ್ಲಿ ಹೋಗುವುದಕ್ಕೆ ತೀರ್ಮಾನ ಮಾಡಲಿದ್ದೀರಿ. ನಿಮ್ಮ ವೃತ್ತಿಗೆ ಅಗತ್ಯ ಇರುವಂಥ ಸಲಕರಣೆಗಳು, ಉಪಕರಣಗಳು ಇಂಥವುಗಳನ್ನು ಖರೀದಿ ಮಾಡುವುದಕ್ಕೆ ಹಣವನ್ನು ಖರ್ಚು ಮಾಡಲಿದ್ದೀರಿ. ಇನ್ನು ನಿಮ್ಮಲ್ಲಿ ಯಾರು ಈ ತನಕ ಇನ್ನೊಬ್ಬರ ಕೈ ಕೆಳಗೆ ಕೆಲಸ ಮಾಡುತ್ತಾ ಬಂದಿದ್ದೀರೋ ಅಂಥವರು ಸ್ವಂತವಾಗಿ ವ್ಯವಹಾರ ಆರಂಭಿಸುವುದಕ್ಕೆ ನಿರ್ಧಾರ ಮಾಡಲಿದ್ದೀರಿ. ಒಂದು ವೇಳೆ ಬ್ಯಾಂಕ್- ಹಣಕಾಸೇತರ ಸಂಸ್ಥೆಗಳಿಂದ ಸಾಲಕ್ಕಾಗಿ ಪ್ರಯತ್ನ ಮಾಡುತ್ತಿದ್ದಲ್ಲಿ ಈ ಅವಧಿಯಲ್ಲಿ ನಿಮಗೆ ದೊರೆಯಲಿದೆ. ಕುಟುಂಬ ಸದಸ್ಯರೊಬ್ಬರನ್ನು ನಿಮ್ಮ ವ್ಯವಹಾರಕ್ಕೆ ಜತೆಯಾಗಿ ಇರಲಿ ಎಂದು ಸೇರ್ಪಡೆ ಮಾಡಿಕೊಳ್ಳಲಿದ್ದೀರಿ. ಯಾರಿಗೆ ಮೈಗ್ರೇನ್ ನಂಥ ಸಮಸ್ಯೆಗಳು ಇರುತ್ತದೋ ಅಂಥವರು ಬಹಳ ಎಚ್ಚರಿಕೆ ವಹಿಸಬೇಕಾಗುತ್ತದೆ. ಹುಳಿತೇಗು, ಹೊಟ್ಟೆಯುಬ್ಬರ, ಎದೆಯುರಿಯಂಥ ಸಮಸ್ಯೆಗಳು ಕೂಡ ನಿಮ್ಮಲ್ಲಿ ಕೆಲವರಿಗೆ ಕಾಣಿಸಿಕೊಳ್ಳಲಿದೆ. ಪಾಸ್ ಪೋರ್ಟ್ ಅಥವಾ ವೀಸಾಗೆ ಸಂಬಂಧಿಸಿದ ಕೆಲಸ- ಕಾರ್ಯಗಳಲ್ಲಿ ತೊಡಗಿರುವವರಿಗೆ ಅದು ಸಲೀಸಾಗಿ ಆಗುವ ಎಲ್ಲ ಸಾಧ್ಯತೆಗಳಿವೆ. ಒಂದು ವೇಳೆ ಅಡೆತಡೆಗಳು ಎದುರಾದಲ್ಲಿ ಪ್ರಭಾವಿಯಾದವರೊಬ್ಬರು ನಿಮ್ಮ ನೆರವಿಗೆ ನಿಲ್ಲಲಿದ್ದಾರೆ. ಆಟೋರಿಕ್ಷಾ ಅಥವಾ ಕಾರು ಚಾಲಕರಾಗಿದ್ದಲ್ಲಿ ಬಿಡುವಿಲ್ಲದ್ಷಷ್ಟು ಕೆಲಸ- ಕಾರ್ಯಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. ಮನೆ ಅಥವಾ ಅಪಾರ್ಟ್ ಮೆಂಟ್ ಅಥವಾ ಸೈಟ್ ಖರೀದಿಗೆ ಮುಂಗಡ ನೀಡಬೇಕು ಎಂದು ಸಿದ್ಧವಾಗುತ್ತಿರುವವರು ಕಾನೂನಿಗೆ ಸಂಬಂಧಿಸಿದ ಸಂಗತಿಗಳನ್ನು ಒಂದಕ್ಕೆ ನಾಲ್ಕು ಬಾರಿಗೆ ಎಂಬಂತೆ ಪರೀಕ್ಷಿಸಿಕೊಳ್ಳುವುದು ಉತ್ತಮ. ಒಂದು ವೇಳೆ ಈಗ ಗಮನಿಸದೇ ಹೋದಲ್ಲಿ ಮುಂದೆ ಚಿಂತಿಸುವಂತೆ ಆಗುತ್ತದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ನಿರುದ್ದೇಶವಾಗಿ ನೀವಾಡಿದ ಮಾತುಗಳಿಗೆ ನಾನಾ ಬಣ್ಣ ಕಟ್ಟಿ, ನಿಂದನೆ ಮಾಡಲಾಗುತ್ತದೆ. ಆದ್ದರಿಂದ ನೀವು ಯಾವ ಸ್ಥಳದಲ್ಲಿ ಇದ್ದೀರಿ ಹಾಗೂ ಆ ಸಮಯಕ್ಕೆ ನೀವು ಆಡುವ ಮಾತಿನ ಅವಶ್ಯಕತೆ ಇದೆಯಾ ಎಂಬ ಬಗ್ಗೆ ಒಂದಕ್ಕೆ ಹತ್ತು ಬಾರಿ ಆಲೋಚಿಸುವುದು ಒಳ್ಳೆಯದು. ಈ ಹಿಂದೆ ನೀವು ಕೆಲಸ ಮಾಡಿದ ಸ್ಥಳದಿಂದ ಮತ್ತೆ ನಿಮಗೆ ಆಫರ್ ಬರಬಹುದು. ಒಳ್ಳೆಯ ಹುದ್ದೆ- ಸಂಬಳ ಹೆಚ್ಚಿಗೆ ನೀಡುವುದಾಗಿ ಹೇಳಿ ಆಹ್ವಾನ ನೀಡಬಹುದು. ಈ ವಿಚಾರದಲ್ಲಿ ನಿಮಗೆ ಗೊಂದಲ ಕಾಡಿ, ಸ್ನೇಹಿತರು- ಸಂಬಂಧಿಕರ ಸಲಹೆ- ಸೂಚನೆಗಳನ್ನು ಕೇಳುವ ಸಾಧ್ಯತೆಗಳಿವೆ. ಇದೊಂದು ಬಾರಿಗೆ ಎಂದುಕೊಂಡು ನಿಮ್ಮಲ್ಲಿ ಕೆಲವರು ಹೆಚ್ಚಿನ ಬಡ್ಡಿಗೆ ಸಾಲ ಪಡೆಯುವ ಸಾಧ್ಯತೆಗಳಿವೆ. ಹೇಗಿದ್ದರೂ ಸಾಲ ಮಾಡುತ್ತೇವೆಲ್ಲ, ಮನೆಯ ಇತರ ಖರ್ಚುಗಳನ್ನೂ ಗಮನದಲ್ಲಿಟ್ಟುಕೊಂಡು ಹೆಚ್ಚಿನ ಮೊತ್ತವನ್ನು ತೆಗೆದುಕೊಳ್ಳೋಣ ಎಂದು ಆಲೋಚಿಸುವುದಕ್ಕೆ ಹೋಗಬೇಡಿ. ಇನ್ನು ಅದೇ ರೀತಿ ನಿಮ್ಮದೇ ಹೆಸರಿನಲ್ಲಿ ತಮಗೂ ಸಾಲ ಕೊಡಿಸುವಂತೆ ಯಾರಾದರೂ ನಿಮ್ಮನ್ನು ಕೇಳಿದಲ್ಲಿ ಸುತರಾಂ ಸಾಧ್ಯವಿಲ್ಲ ಎಂಬುದನ್ನು ಎದುರಾಎದುರೇ ಹೇಳಿಬಿಡುವುದು ಉತ್ತಮ. ಅಂತ್ಯ ನಿಷ್ಠುರಕ್ಕಿಂತ ಆದಿ ನಿಷ್ಠುರ ಮೇಕು ಎಂಬುದು ನಿಮ್ಮ ಗಮನದಲ್ಲಿ ಇರಲಿ. ಮನೆ ನಿರ್ಮಾಣ ಮಾಡುತ್ತಿರುವವರಿಗೆ ಕೆಲಸ- ಕಾರ್ಯಗಳು ಸುಗಮವಾಗಿ ನೆರವೇರಲಿವೆ,. ನಿಮ್ಮಲ್ಲಿ ಪಿತ್ರಾರ್ಜಿತ ಆಸ್ತಿ ವಿಚಾರವಾಗಿ ಯಾರು ನಿರೀಕ್ಷೆಯಿಟ್ಟುಕೊಂಡು, ಪ್ರಯತ್ನ ಮಾಡುತ್ತಿರುವವರಿಗೆ ಈ ತಿಂಗಳಲ್ಲಿ ಆ ವಿಚಾರ ತಾರ್ಕಿಕ ಅಂತ್ಯ ಕಾಣುತ್ತದೆ. ಆದರೆ ಸರ್ಕಾರಕ್ಕೆ ಸಂಬಂಧಿಸಿದ ವ್ಯವಹಾರಗಳಲ್ಲಿ ನಿಧಾನ ಧೋರಣೆ ಅನುಸರಿಸುವುದರಿಂದ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸಾಧ್ಯವಾದಷ್ಟೂ ಆಗಿಂದಾಗ್ಗೆ ಕೆಲಸ- ಕಾರ್ಯಗಳನ್ನು ಮುಗಿಸಿಕೊಳ್ಳುವ ಕಡೆಗೆ ಗಮನವನ್ನು ನೀಡಿ. ಇನ್ನು ಇತರರ ವೈಯಕ್ತಿಕ ಬದುಕಿನಲ್ಲಿ ಎಂಥದ್ದೇ ಬೆಳವಣಿಗೆ ಆಗಿದ್ದರೂ ಅದರ ಬಗ್ಗೆ ಚರ್ಚೆ ಮಾಡುವುದಾಗಲೀ ಅಥವಾ ಸಾರ್ವಜನಿಕವಾಗಿ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಹಾಕುವುದಾಗಲೀ ಮಾಡಿದರೆ ವರ್ಚಸ್ಸಿಗೆ ಹಾನಿ ಮಾಡಿಕೊಳ್ಳಲಿದ್ದೀರಿ. ಇತರರ ಬಗ್ಗೆ ಸರಿಯೋ ತಪ್ಪೋ ಅದನ್ನು ನೀವು ಹೇಳುವುದರ ಅಗತ್ಯವಿಲ್ಲ. ಆನ್ ಲೈನ್ ನಲ್ಲಿ ಶಾಪಿಂಗ್ ಮಾಡುವುದು ಹೆಚ್ಚು ಅನ್ನುವಂಥವರು ಖರ್ಚಿನ ಮೇಲೆ ನಿಗಾ ಇಟ್ಟುಕೊಳ್ಳಿ. ಆಫರ್ ಇದೆ ಅಂತಲೋ ರಿಯಾಯಿತಿ ಸಿಗುತ್ತದೆ ಅಂತಲೋ ಬೇಕಿದ್ದು ಬೇಡದಿದ್ದು ಎಲ್ಲವನ್ನೂ ಖರೀದಿಸುವುದಕ್ಕೆ ಹೋಗದಿರುವುದು ಮುಖ್ಯ. ನಿಮ್ಮಲ್ಲಿ ಕೆಲವರಿಗೆ ಅಕೌಂಟ್ಸ್ ಅಥವಾ ಬೇರೆ ಇನ್ಯಾವುದಾದರೂ ವಿಚಾರಕ್ಕೆ ಬ್ಯಾಂಕ್ ನಿಂದ ನೋಟಿಸ್ ಬರುವ ಸಾಧ್ಯತೆಗಳಿವೆ. ಅದರಲ್ಲಿನ ಸಾರಾಂಶವನ್ನು ಪೂರ್ತಿಯಾಗಿ ಓದಿಕೊಂಡು, ಅರ್ಥ ಮಾಡಿಕೊಳ್ಳದೆ ಪ್ರತಿಕ್ರಿಯಿಸುವುದಕ್ಕೆ ಮುಂದಾಗಬೇಡಿ. ಸಿಟ್ಟಿನ ಭರದಲ್ಲಿ ನೀವಾಡುವ ಮಾತಿಗೆ ಆ ನಂತರ ಪರಿತಪಿಸುವಂತ ಸನ್ನಿವೇಶ ಎದುರಾಗುತ್ತದೆ. ಏನಾದರೂ ಆಗಲಿ ಪರವಾಗಿಲ್ಲ ಎಂದುಕೊಂಡು ತಿಂಗಳ ಕೊನೆಗೆ ಕೆಲವು ದಿಟ್ಟ ನಿರ್ಧಾರಗಳನ್ನು ನೀವು ತೆಗೆದುಕೊಳ್ಳಲಿದ್ದೀರಿ. ಅದರಲ್ಲೂ ಸಂಬಂಧದ ವಿಚಾರವಾಗಿ ತೆಗೆದುಕೊಳ್ಳುವ ತೀರ್ಮಾನ ಒಳ್ಳೆ ಫಲಿತವನ್ನು ನೀಡಲಿದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಮದುವೆಗಾಗಿ ಪ್ರಯತ್ನ ಮಾಡುತ್ತಿರುವವರಿಗೆ ಬಹಳ ಉತ್ತಮವಾದ ಸಮಯವಾಗಿ ಇರಲಿದೆ. ಇದೇ ವೇಳೆ ಶುಭ ಕಾರ್ಯಗಳಿಗೆ ಅಂತಲೇ ಹಣಕಾಸು ಹೊಂದಾಣಿಕೆ ಮಾಡುತ್ತಿದ್ದೀರಿ ಅಂತಾದರೆ ಅಂಥವರಿಗೆ ಹೇಗಾದರೂ ಹಣ ಹೊಂದಿಸಲು ಸಾಧ್ಯವಾಗುತ್ತದೆ. ಸಾತ್ವಿಕವಾದ ಜನರ ಪರಿಚಯ- ಸ್ನೇಹ ನಿಮಗೆ ಆಗಲಿದೆ. ಮೊದಮೊದಲಿಗೆ ಯಾವುದಕ್ಕೆ ನೀವು ಹಿಂಜರಿಕೆ ಮಾಡುತ್ತೀರೋ ಅವೆಲ್ಲ ಕರಗಲಿದೆ. ಭವಿಷ್ಯವನ್ನು ಗಮನದಲ್ಲಿ ಇಟ್ಟುಕೊಂಡು ನಿಮ್ಮಲ್ಲಿ ಕೆಲವರು ಷೇರು, ಮ್ಯೂಚುವಲ್ ಫಂಡ್ ಅಥವಾ ಸಣ್ಣ- ಪುಟ್ಟ ಉಳಿತಾಯ ಯೋಜನೆಗಳಲ್ಲಿ ಹಣ ತೊಡಗಿಸುವ ಬಗ್ಗೆ ತೀರ್ಮಾನವನ್ನು ಕೈಗೊಳ್ಳಲಿದ್ದೀರಿ. ಅಥವಾ ಈಗಾಗಲೇ ಮಾಡಿರುವ ಎಫ್.ಡಿ ಅಥವಾ ಬೇರೆ ಯಾವುದಾದರೂ ಉಳಿತಾಯದ ಮೊತ್ತವನ್ನು ತೆಗೆದು, ಅದನ್ನು ಹೂಡಿಕೆಯಾಗಿ ಪರಿವರ್ತನೆ ಮಾಡಲಿದ್ದೀರಿ. ಶುದ್ಧ ಅಂತಃಕರಣದಿಂದ ಯಾರ ಜತೆಗೆ ನೀವು ನಡೆದುಕೊಂಡಿರುತ್ತೀರೋ ಅಂಥವರು ನಿಮ್ಮ ಕಷ್ಟಕ್ಕೆ ಅಥವಾ ಅಗತ್ಯಕ್ಕೆ ಸ್ಪಂದಿಸಲಿದ್ದಾರೆ. ತಾಯಿ ಅಥವಾ ಮಾತೃ ಸಮಾನರಾದವರು ನಿಮ್ಮ ಶ್ರೇಯಸ್ಸು- ಏಳ್ಗೆಗಾಗಿ ಪೂಜೆ- ಪುನಸ್ಕಾರ ಅಥವಾ ಉಪವಾಸ ವ್ರತ ಇಂಥವುಗಳನ್ನು ಮಾಡುವಂಥ ಯೋಗ ಇದೆ. ಗುರು- ಹಿರಿಯರ ಆಶೀವಾದ ಬಲದ ಫಲವನ್ನು ನೀವು ಕಾಣಲಿದ್ದೀರಿ. ನೀವು ಅರ್ಜಿ ಹಾಕಿ, ಬಹುತೇಕ ಮರೆತುಹೋಗಿದ್ದ ಕೆಲಸ- ಕಾರ್ಯಗಳು ಚಾಲನೆ ಪಡೆದುಕೊಳ್ಳಲಿವೆ. ಖಾಸಗಿ ಸಂಸ್ಥೆಗಳನ್ನು ನಡೆಸುತ್ತಾ ಬರುತ್ತಿರುವವರಿಗೆ ಬಹು ಸಮಯದಿಂದ ನಿರೀಕ್ಷೆ ಮಾಡುತ್ತಾ ಬಂದಿದ್ದ ಸರ್ಕಾರದ ಅಥವಾ ಪ್ರತಿಷ್ಠಿತ ಸಂಸ್ಥೆಯ ಮಾನ್ಯತೆ ದೊರೆಯಲಿದೆ. ನಿಮ್ಮ ಬಳಿ ಪಾರ್ಟನರ್ ಷಿಪ್ ಕೇಳಿಕೊಂಡೋ ಅಥವಾ ಒಟ್ಟಾರೆ ವ್ಯಾಪಾರದಲ್ಲಿ ಇಂತಿಷ್ಟು ಪಾಲು ಖರೀದಿ ಮಾಡುವುದಕ್ಕೆ ಸಿದ್ಧ ಅಂತಲೋ ಕೆಲವರು ಬರಲಿದ್ದಾರೆ. ಗರ್ಭಿಣಿಯರು ಬಹಳ ಎಚ್ಚರಿಕೆಯನ್ನು ವಹಿಸಬೇಕು. ಫಾಲೋಅಪ್ ಚಿಕಿತ್ಸೆಗಳು, ಸ್ಕ್ಯಾನ್ ಮೊದಲಾದವುಗಳನ್ನು ಸಮಯಕ್ಕೆ ಸರಿಯಾಗಿ ಮಾಡಿಸುವುದು ಬಹಳ ಮುಖ್ಯವಾಗುತ್ತದೆ. ಮಗುವಿನ ಬೆಳವಣಿಗೆ, ಚಲನೆ ಇಂಥದ್ದರ ಕಡೆಗೆ ಲಕ್ಷ್ಯವನ್ನು ನೀಡಿ. ಸಾರ್ವಜನಿಕ ಸಾರಿಗೆಯಲ್ಲಿ ಸಂಚರಿಸುವಂಥವರು ನಿಮ್ಮ ಬಳಿ ಇರುವಂಥ ಬೆಲೆ ಬಾಳುವ ವಸ್ತುಗಳು, ಗ್ಯಾಜೆಟ್ ಗಳನ್ನು ಬೀಳಿಸಿಕೊಳ್ಳುವ ಅಥವಾ ಕಳೆದುಕೊಳ್ಳುವ ಸಾಧ್ಯತೆಗಳು ಇರುವುದರಿಂದ ಎಚ್ಚರಿಕೆಯಿಂದ ಇರುವುದು ಮುಖ್ಯ. ನಿಮ್ಮ ಜೊತೆಗೆ ಕೆಲಸ ಮಾಡುವ ಸಹೋದ್ಯೋಗಿಗಳು ನೀಡುವ ಸಲಹೆಗಳಿಂದ ಆರ್ಥಿಕವಾಗಿ ಅನುಕೂಲವಾಗಲಿದೆ. ಸ್ನೇಹಿತರು- ಸಂಬಂಧಿಗಳ ಮನೆಗಳಲ್ಲಿ ಆಯೋಜಿಸುವ ಶುಭ ಕಾರ್ಯಗಳಿಗೆ ನೀವು ಓಡಾಟ ನಡೆಸಲಿದ್ದೀರಿ. ಹಣಕಾಸಿನ ನೆರವು ಕೂಡ ನೀಡಬೇಕಾಗಲಿದೆ. ಹಳೇ ಸಾಲಗಳು ಕೆಲವನ್ನು ಹಿಂತಿರುಗಿಸುವುದಕ್ಕೆ ಸಾಧ್ಯವಾಗಲಿದೆ. ಇನ್ನೂ ಸಹಿಸುವುದಕ್ಕೆ ಸಾಧ್ಯವೇ ಇಲ್ಲ ಎಂದೆನಿಸುವಂಥ ಕೆಲವು ವ್ಯಕ್ತಿಗಳಿಂದ ನೀವಾಗಿಯೇ ಅಂತರ ಕಾಯ್ದುಕೊಳ್ಳಲಿದ್ದೀರಿ. ನಿಮ್ಮಲ್ಲಿ ಕೆಲವರು ನೇರಾನೇರ ಹೇಳಿಯೇ ದೂರವಾಗಲಿದ್ದೀರಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ನೀವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಸಕಾರಾತ್ಮಕ ಬೆಳವಣಿಗೆಗಳು ಆಗಲಿವೆ. ಒಂದು ವೇಳೆ ಇಲ್ಲಿಯ ತನಕ ನಿಮ್ಮ ಕೆಲವು ಕೆಲಸಗಳು ಏನು ಮಾಡಿದರೂ ತುದಿ ಮುಟ್ಟುತ್ತಿಲ್ಲ ಎಂದೆನಿಸುತ್ತಿರುವುದು ಈ ತಿಂಗಳಲ್ಲಿ ಒಂದೊಂದಾಗಿ ಮುಗಿಯುತ್ತಾ ಬರಲಿದೆ. ಮುಖ್ಯವಾಗಿ ನಿಮ್ಮ ಏಕಾಗ್ರತೆ ಒಂದೇ ಕಡೆ ಸ್ಥಿರವಾಗಿ ಅವುಗಳನ್ನು ಪೂರ್ಣಗೊಳಿಸುವುದಕ್ಕೆ ಸಹಕಾರಿ ಆಗಲಿದೆ. ಇಷ್ಟು ಸಮಯ ನಿಮಗೆ ಹಣಕಾಸಿನ ಕಾರಣಕ್ಕೋ ಅಥವಾ ಸಮಯ ಹೊಂದಾಣಿಕೆ ಆಗದೆಯೇ ಮಾಡಲಿಕ್ಕೆ ಸಾಧ್ಯವಾಗದೇ ಉಳಿದ ವೃತ್ತಿಪರವಾದ ಕೋರ್ಸ್ ಗಳು ಅಥವಾ ಉದ್ಯೋಗಕ್ಕೆ ಸಹಾಯ ಆಗುವಂತಹ ಯಾವುದಾದರೂ ತಾಂತ್ರಿಕ ಕೌಶಲ ಕಾರ್ಯಕ್ರಮಗಳಲ್ಲಿ ನೀವು ತೊಡಗಿಸಿಕೊಳ್ಳಲಿದ್ದೀರಿ. ನಿಮ್ಮಲ್ಲಿ ಯಾರು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಮಶೀನ್ ಲರ್ನಿಂಗ್, ಡೇಟಾ ಅನಲಿಟಿಕ್ಸ್ ಇಂಥ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದೀರಿ ಅಂತಹವರು ಅಲ್ಪ ಸಮಯಕ್ಕಾದರೂ ವಿದೇಶಕ್ಕೆ ತೆರಳಬೇಕಾದ ಸುಳಿವು ದೊರೆಯಲಿದೆ ಅಥವಾ ನಿಮ್ಮಲ್ಲಿ ಕೆಲವರು ಹೋಗಲೂ ಬಹುದು. ಪರ್ಫಾರ್ಮೆನ್ಸ್ ಲಿಂಕ್ಡ್ ಬೋನಸ್ ಕೂಡ ನಿರೀಕ್ಷೆ ಮಾಡಬಹುದು. ಇನ್ನು ಸಿವಿಲ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಇರುವವರು, ಮನೆ ನಿರ್ಮಾಣ ಕಾಂಟ್ರ್ಯಾಕ್ಟ್ ಗಳನ್ನು ಪಡೆಯುವಂಥವರಿಗೆ ದೊಡ್ಡ ಕಾಂಟ್ರ್ಯಾಕ್ಟ್ ದೊರೆಯುವಂಥ ಯೋಗ ಇದೆ. ಒಂದು ವೇಳೆ ಆರೇಳು ತಿಂಗಳ ಹಿಂದೆ ಒಂದು ಪ್ರಾಜೆಕ್ಟ್ ಬಗ್ಗೆ ಚರ್ಚೆ ನಡೆಸಿದ್ದಿರಿ, ಆ ನಂತರ ಅದರ ಬಗ್ಗೆ ಯಾವುದೇ ಬೆಳವಣಿಗೆ ಆಗಿರಲಿಲ್ಲ ಎಂದಿದ್ದರೂ ಸಹ ಈ ತಿಂಗಳು ಅವರು ಮತ್ತೆ ನಿಮ್ಮನ್ನು ಹುಡುಕಿಕೊಂಡು ಬರಬಹುದು. ಹೈನುಗಾರಿಕೆ ಮಾಡುತ್ತಿರುವವರು, ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿರುವವರಿಗೆ ಬಿಡುವಿಲ್ಲದಷ್ಟು ಕೆಲಸಗಳು ಮೈ ಮೇಲೆ ಬೀಳಲಿವೆ. ಯಾರು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಇದ್ದೀರಿ ಅಂಥವರು ಹೆಚ್ಚಿನ ಲಾಭ ಅಥವಾ ಆದಾಯವನ್ನು ನಿರೀಕ್ಷೆ ಮಾಡಬಹುದು. ನಿಮ್ಮ ಚರ್ಮದ ಆರೋಗ್ಯದ ಬಗ್ಗೆ ಹೆಚ್ಚಿನ ಲಕ್ಷ್ಯ ವಹಿಸಿ. ಚರ್ಮ ಸಿಪ್ಪೆ ಸಿಪ್ಪೆಯಾಗಿ ಬಿಡಿಸುವಂತೆ ಆಗುವುದು, ಚರ್ಮದ ಬಣ್ಣವೇ ಬದಲಾಗುವುದು, ಕಪ್ಪು ಬಣ್ಣಕ್ಕೆ ತಿರುಗುವುದು ಈ ರೀತಿ ಆಗಿ, ಆತಂಕಕ್ಕೆ ಕಾರಣ ಆಗಬಹುದು. ಸೂಕ್ತ ವೈದ್ಯೋಪಚಾರ ಪಡೆದುಕೊಳ್ಳುವ ಕಡೆಗೆ ಗಮನ ನೀಡಿ. ಮನೆಯಿಂದ ದೂರ ಇದ್ದುಕೊಂಡು ಓದುತ್ತಿರುವ ವಿದ್ಯಾರ್ಥಿಗಳಿಗೆ ಆಹಾರದಲ್ಲಿ ಸಮಸ್ಯೆಯಾಗಿ, ಹೊಟ್ಟೆಗೆ ಸಂಬಂಧಿಸಿದ ಅನಾರೋಗ್ಯವಾಗಿ ವ್ಯಾಸಂಗದಲ್ಲಿ ಹಿನ್ನಡೆ ಆಗಬಹುದು. ಅಥವಾ ಯಾರಿಗೆ ಪೂರ್ವಸಿದ್ಧತಾ ಪರೀಕ್ಷೆಗಳು ಅಥವಾ ಪ್ರವೇಶ ಪರೀಕ್ಷೆಗಳು ಇವೆಯೋ ಅಂಥವರಿಗೆ ಅದರಲ್ಲಿ ಹೇಳಿಕೊಳ್ಳುವಂಥ ಯಶಸ್ಸು ಸಿಗದೆ ಹೋಗಬಹುದು. ಇಂಥ ಸಂದರ್ಭದಲ್ಲಿ ಯಾರ ಜತೆಗೂ ನಿಮ್ಮನ್ನು ಹೋಲಿಕೆ ಮಾಡಿಕೊಳ್ಳಲು ಹೋಗಬೇಡಿ. ಇದು ತಾತ್ಕಾಲಿಕ ಹಿನ್ನಡೆ ಮಾತ್ರ ಆಗಿರುತ್ತದೆ. ಪೊಲೀಸ್ ಇಲಾಖೆಯಲ್ಲಿ ಇರುವಂಥ ಮಹಿಳೆಯರಿಗೆ ಕೆಲಸದಲ್ಲಿ ಒತ್ತಡ ಜಾಸ್ತಿ ಆಗಲಿದೆ. ನಿಮಗೆ ಬೇಡದ ಅಥವಾ ಹಿಂಸೆ ಎನಿಸುವಂಥ ಕೆಲವು ಜವಾಬ್ದಾರಿಗಳನ್ನು ಹೆಚ್ಚುವರಿಯಾಗಿ ನಿರ್ವಹಿಸಲೇ ಬೇಕಾದಂಥ ಅನಿವಾರ್ಯ ಸೃಷ್ಟಿ ಆಗಲಿದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಉದ್ಯೋಗದ ವಿಚಾರವೇ ಇರಬಹುದು ಅಥವಾ ಮನೆ ನಿರ್ಮಾಣ, ನವೀಕರಣ ಅಥವಾ ಮತ್ಯಾವುದೇ ಮುಖ್ಯ ಕೆಲಸ ಇರಬಹುದು, ನೀವು ಅವುಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದು ಮುಖ್ಯವಾಗುತ್ತದೆ. ಅದರಲ್ಲೂ ಈ ತಿಂಗಳು ಅದೃಷ್ಟ ನಿಮ್ಮ ಪಾಲಿಗೆ ಬಹಳ ಮುಖ್ಯವಾಗುತ್ತದೆ. ನಿಮಗೆ ಎಷ್ಟೇ ಹತ್ತಿರದವರು ಹೇಳಿದರೂ ಯಾವುದೇ ಕಾರಣಕ್ಕೂ ಹೇಳಿಕೆ ಮಾತುಗಳನ್ನು ಕೇಳಬೇಡಿ. ನಿಮ್ಮ ಮೂಲಕ ಇತರರು ತಮ್ಮ ಗುರಿ ಸಾಧನೆ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಾರೆ. ನಿಮ್ಮ ಹೆಸರು, ವರ್ಚಸ್ಸು ದುರುಪಯೋಗ ಆಗದಂತೆ ನೋಡಿಕೊಳ್ಳಿ. ನಿಮ್ಮ ಕೆಲಸ ಆಗಬೇಕು ಎಂಬ ಕಾರಣಕ್ಕೆ ಕೆಲವು ರಾಜೀ ಮಾಡಿಕೊಳ್ಳಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ನಿಮ್ಮದು ಎಂಬಂಥ ವಸ್ತುಗಳ ಬಗ್ಗೆ ಜಾಗ್ರತೆಯಿಂದ ಇರಬೇಕು. ನೀವಾಗಿಯೇ ಮಾತು ಕೊಟ್ಟು ಅಸಾಧ್ಯ ಎನಿಸುವಂಥ ಜವಾಬ್ದಾರಿಗಳನ್ನು ಮೈ ಮೇಲೆ ಎಳೆದುಕೊಳ್ಳದಿರಿ. ನಿಮ್ಮಲ್ಲಿ ಕೆಲವರಿಗೆ ಸಾಂಸಾರಿಕ ವಿಚಾರದಲ್ಲಿ ಚಿಂತೆ ಕಾಡಬಹುದು. ಹಾಗಂತ ಅದರ ಬಗ್ಗೆ ತಲೆ ಕೆಡಿಸಿಕೊಂಡು, ಉಳಿದಿದ್ದರ ಬಗ್ಗೆ ನಿರ್ಲಕ್ಷ್ಯವನ್ನು ಮಾಡಬೇಡಿ. ಅದರಲ್ಲೂ ತಿಂಡಿ, ಊಟ, ನಿದ್ರೆಯನ್ನು ಸರಿಯಾದ ಸಮಯಕ್ಕೆ ಮಾಡುವುದರ ಕಡೆಗೆ ಲಕ್ಷ್ಯ ನೀಡಿ. ನಿಮ್ಮಲ್ಲಿ ಯಾರು ಕಾನೂನು ವಿಚಾರಕ್ಕೆ ಸಂಬಂಧಿಸಿದ ಕೋರ್ಸ್ ಮಾಡುತ್ತಿರುವ ವಿದ್ಯಾರ್ಥಿಗಳು ಇದ್ದೀರೋ ಅಂಥವರಿಗೆ ಈ ತಿಂಗಳು ಉತ್ತಮ ಸಮಯವಾಗಿದೆ. ದ್ವಿಚಕ್ರ ವಾಹನ ಅಥವಾ ಕಾರು ಖರೀದಿಸುವ ಯೋಗಬಿದೆ. ಯಾರು ಗುತ್ತಿಗೆದಾರರಿಗಿದ್ದೀರಿ, ಸರ್ಕಾರಿ ಟೆಂಡರ್ ಗಳನ್ನು ತೆಗೆದುಕೊಂಡು ಕೆಲಸ ಮಾಡಿಸುವಂಥವರು ಇದ್ದೀರಿ ಅಂಥವರಿಗೆ ಒತ್ತಡದ ಸನ್ನಿವೇಶ ಎದುರಾಗಲಿದೆ. ರಂಗಭೂಮಿ, ಸ್ಟ್ಯಾಂಡ್ ಅಪ್ ಕಾಮಿಡಿ, ಸಿನಿಮಾ ರಂಗದಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೊಸ ಪ್ರಾಜೆಕ್ಟ್ ಗಳು ಹುಡುಕಿಕೊಂಡು ಬರುವ ಸಾಧ್ಯತೆಗಳಿವೆ. ನಿಮ್ಮ ಆದಾಯದಲ್ಲಿ ದಿಢೀರನೇ ಹೆಚ್ಚಳ ಆಗಲಿದೆ. ಆದರೆ ನಂಬಿಕೊಂಡು ಹೊಸದಾಗಿ ಯಾವುದೇ ಸಾಲ ತೆಗೆದುಕೊಳ್ಳುವುದೋ ಅಥವಾ ಹಣಕಾಸಿನ ಜವಾಬ್ದಾರಿಯನ್ನು ಮೈ ಮೇಲೆ ಹಾಕಿಕೊಳ್ಳುವುದೋ ಮಾಡಬೇಡಿ. ಸ್ವಂತ ವಿಚಾರದಲ್ಲಿ ಯಾರಾದರೂ ಸಲಹೆ ನೀಡಿದಲ್ಲಿ ಅದನ್ನು ಸರಿಯಾಗಿ ಕೇಳಿಸಿಕೊಳ್ಳಿ. ಹಾಗೂ ಅದನ್ನು ಹೇಗೆ ಅಳವಡಿಸಿಕೊಳ್ಳಬೇಕು ಎಂಬ ಬಗ್ಗೆ ಸರಿಯಾದ ಯೋಜನೆ ರೂಪಿಸುವುದು ಮುಖ್ಯ. ಮದುವೆಗಾಗಿ ಪ್ರಯತ್ನ ಮಾಡುತ್ತಿದ್ದೀರಿ ಅಂತಾದಲ್ಲಿ ಇದರಿಂದ ನಿಮಗೆ ಅನುಕೂಲ ಆಗಲಿದೆ. ರಿಯಲ್ ಎಸ್ಟೇಟ್ ಉದ್ದೇಶದಿಂದ ಜಮೀನು- ಆಸ್ತಿ ವ್ಯವಹಾರಗಳಲ್ಲಿ ತೊಡಗಿರುವವರಿಗೆ ಲಾಭದ ಪ್ರಮಾಣ ಜಾಸ್ತಿ ಆಗಲಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವಂಥ ಉದ್ಯೋಗಿಗಳಿಗೆ ಭವಿಷ್ಯದಲ್ಲಿ ದೊರೆಯಬಹುದಾದ ದೊಡ್ಡ ಜವಾಬ್ದಾರಿ ಬಗ್ಗೆ ಸುಳಿವು ದೊರೆಯಲಿದೆ. ಇನ್ನು ವೇತನ ಹೆಚ್ಚಳದ ಬಗ್ಗೆ ಸುಳಿವು ಸಹ ದೊರೆಯಲಿದೆ. ನಿಮ್ಮಲ್ಲಿ ಕೆಲವರು ಬೆಳ್ಳಿ ತಟ್ಟೆ, ಲೋಟ ಹೀಗೆ ಮೊದಲಾದ ಬೆಳ್ಳಿಯ ವಸ್ತುಗಳನ್ನು ಖರೀದಿ ಮಾಡುವಂತಹ ಯೋಗ ಇದೆ. ಇನ್ನು ಯಾರು ತಮ್ಮ ಮಕ್ಕಳಿಗಾಗಿ ವಿವಾಹ ಪ್ರಯತ್ನಗಳನ್ನು ಮಾಡುತ್ತಿದ್ದಲ್ಲಿ ಅಂಥವರಿಗೆ ಸೂಕ್ತ ಸಂಬಂಧಗಳು ಹುಡುಕಿಕೊಂಡು ಬರಲಿವೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಆದಾಯದ ವಿಚಾರದಲ್ಲಿ ಒಂದು ವೇಳೆ ಆತಂಕ ಕಾಡುತ್ತಿದ್ದಲ್ಲಿ ಅದು ನಿವಾರಣೆ ಆಗುವಂಥ ಸಮಯ ಇದಾಗಿರುತ್ತದೆ. ಏಕೆಂದರೆ ಒಂದಕ್ಕಿಂತ ಹೆಚ್ಚು ಮೂಲಗಳಿಂದ ಹಣದ ಹರಿವು ಆಗುವುದಕ್ಕೆ ಶುರುವಾಗುತ್ತದೆ. ಇನ್ನು ನಿಮ್ಮಲ್ಲಿ ಯಾರು ಕ್ಯಾಟರಿಂಗ್ ವ್ಯವಹಾರವನ್ನು ಮಾಡುತ್ತಿರುವಿರೋ ಅಂಥವರಿಗೆ ಈ ತಿಂಗಳು ಆದಾಯದ ಪ್ರಮಾಣದಲ್ಲಿ ಜಾಸ್ತಿ ಆಗಲಿದೆ. ಪಿತ್ರಾರ್ಜಿತ ಆಸ್ತಿ ವಿಚಾರಗಳಲ್ಲಿ ಏನಾದರೂ ವ್ಯಾಜ್ಯಗಳು ಇದ್ದಲ್ಲಿ ಅದನ್ನು ನಿವಾರಿಸಿಕೊಳ್ಳುವ ಮಾರ್ಗಗಳು ಗೋಚರ ಆಗಲಿವೆ. ನಿಮ್ಮ ಸ್ನೇಹಿತರಯ ತರುವಂಥ ಆಫರ್ ಗಳನ್ನು ಗಂಭೀರವಾಗಿ ಪರಿಗಣಿಸಿ. ನಿಮಗೆ ಲಾಭ ಆಗುತ್ತದೆ ಎಂಬ ಖಾತ್ರಿ ಇದ್ದರಂತೂ ಧೈರ್ಯವಾಗಿ ಅದರಲ್ಲಿ ಮುಂದುವರಿಯಬಹುದು. ಇನ್ನು ನೀವು ಗಮನಿಸಬೇಕಾದದ್ದು ಏನೆಂದರೆ, ಮನೆಗೆ ಸಂಬಂಧಿಸಿದಂತೆ ನೀವು ತೆಗೆದುಕೊಳ್ಳುವ ತೀರ್ಮಾನಗಳಿಂದ ತಂದೆ ತಾಯಿಗೆ ಬೇಸರ ಆಗಬಹುದು. ಆದ್ದರಿಂದ ಯಾವುದೇ ಅಂತಿಮ ತೀರ್ಮಾನ ಎಂದು ತೆಗೆದುಕೊಳ್ಳುವ ಮುನ್ನ ಅವರೊಂದಿಗೆ ಚರ್ಚಿಸಿ, ಆ ನಂತರ ಮುಂದುವರಿಯಿರಿ. ಸ್ಕೂಟರ್ ಅಥವಾ ಕಾರು ಖರೀದಿ ಮಾಡಬೇಕು ಎಂದಿರುವವರಿಗೆ ಹಣಕಾಸಿನ ಹೊಂದಾಣಿಕೆ ಆಗಲಿದೆ. ಬಾಡಿಗೆ ಮನೆಗಳಿಂದ ಆದಾಯ ಪಡೆಯುತ್ತಿರುವವರು ಆ ಮನೆಗಳ ದುರಸ್ತಿ, ಸುಣ್ಣ- ಬಣ್ಣ ಮಾಡಿಸುವುದಕ್ಕಾಗಿ ಸಂಬಂಧಪಟ್ಟವರನ್ನು ಕರೆಸಿ ಅಥವಾ ಫೋನ್ ಮೂಲಕ ಮಾತುಕತೆ ಆಡಲಿದ್ದೀರಿ. ಇನ್ನು ಯಾರು ಸ್ವಂತ ವ್ಯವಹಾರ ಅಥವಾ ಸ್ವಂತ ಉದ್ಯೋಗ ಮಾಡಿಕೊಂಡಿದ್ದೀರೋ ಅಂತಹವರಿಗೆ ಆದಾಯದ ಮೂಲಗಳು ಜಾಸ್ತಿ ಆಗುವ ಸೂಚನೆಗಳು ಕಂಡು ಬರಲಿವೆ. ವಿದೇಶದಲ್ಲಿ ಉನ್ನತ ವ್ಯಾಸಂಗ ಪಡೆಯಬೇಕು ಹಾಗೂ ವಿದೇಶದಲ್ಲಿ ಉದ್ಯೋಗಕ್ಕಾಗಿ ಎಂದು ಪ್ರಯತ್ನ ಮಾಡುತ್ತಿರುವವರಿಗೆ ಈ ತನಕ ಏನಾದರೂ ಅಡೆತಡೆಗಳು ಕಾಡುತ್ತಿದ್ದಲ್ಲಿ ಅವು ನಿವಾರಣೆಯಾಗಲಿವೆ. ಹೊಸ ದ್ವಿಚಕ್ರ ವಾಹನಗಳ ಮಾರಾಟ ಅಥವಾ ಸೆಕೆಂಡ್ ವಾಹನಗಳ ಮಾರಾಟ ಇಂಥದ್ದನ್ನು ಮಾಡುತ್ತಿರುವವರಿಗೆ ಹೊಸದಾಗಿ ಬಂಡವಾಳವನ್ನು ಹೂಡಿ, ವ್ಯವಹಾರವನ್ನು ಇನ್ನಷ್ಟು ವಿಸ್ತರಣೆ ಮಾಡಿಕೊಳ್ಳಬೇಕು ಎಂಬ ಆಲೋಚನೆ ಮೂಡಲಿದೆ. ಇದಕ್ಕೆ ಪೂರಕವಾಗಿ ಬೇಕಾದಂಥ ಸ್ಥಳ, ಹಣಕಾಸಿನ ವ್ಯವಸ್ಥೆ ಆಗಲಿದ್ದು, ಮನಸ್ಸಿಗೆ ಸಮಾಧಾನ ಆಗಲಿದೆ. ನಿಮ್ಮಲ್ಲಿ ಯಾರು ಸಂತಾನ ನಿರೀಕ್ಷೆಯಲ್ಲಿ ಪ್ರಯತ್ನ ಮಾಡುತ್ತಿದ್ದೀರಿ ಅಂಥವರಿಗೆ ಶುಭ ಸುದ್ದಿ ಕೇಳಿ ಬರಲಿದೆ. ಈ ತಿಂಗಳು ನಿಮ್ಮ ಪಾಲಿಗೆ ಎಚ್ಚರಿಕೆ ಏನೆಂದರೆ, ಇತರರ ವೈಯಕ್ತಿಕ ವಿಚಾರಗಳಲ್ಲಿ ತಲೆ ಹಾಕುವುದಕ್ಕೆ ಹೋಗಬೇಡಿ. ಅವರಾಗಿಯೇ ಬಂದು ನಿಮ್ಮನ್ನು ಸಲಹೆ ನೀಡುವಂತೆ ಕೇಳಿಕೊಂಡರೂ ಯಾವುದೇ ಅಭಿಪ್ರಾಯ ಹೇಳದೆ ಸುಮ್ಮನಿರುವುದು ಉತ್ತಮ. ನೀವು ಇತರರಿಗೆ ಈ ಹಿಂದೆ ನೀಡಿದ್ದ ಸಲಹೆಯಿಂದ ತುಂಬಾ ದೊಡ್ಡ ಮಟ್ಟದ ಅನುಕೂಲ, ಲಾಭ ಆಗಲಿದೆ. ಆ ಉಪಕಾರ ಸ್ಮರಣೆ ಎಂಬಂತೆ ನಿಮಗೆ ಏನಾದರೂ ನೆರವು ನೀಡಬೇಕು ಎಂದು ಅಂದುಕೊಳ್ಳುವ ಅವಕಾಶಗಳಿವೆ. ನಿಮಗೆ ಸಿಗಬೇಕಾದ ಯಶಸ್ಸಿನ ಪಾಲು ಇತರರಿಗೆ ಸಂದಾಯ ಆಗಲಿದೆ. ಭೂಮಿ ಖರೀದಿ- ಮಾರಾಟಕ್ಕೆ ಸಂಬಂಧಪಟ್ಟ ವ್ಯವಹಾರಗಳಲ್ಲಿ ತೊಡಗಿಕೊಂಡಿರುವವರು ರಹಸ್ಯಗಳನ್ನು ಕಾಪಾಡಿಕೊಳ್ಳಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಸಮಯ ಕಳೆಯಲಿ ಅಂತಲೋ ಅಥವಾ ಹವ್ಯಾಸ ಹಾಗೇ ಬಿಟ್ಟು ಹೋಗಬಾರದು ಎಂಬ ಕಾರಣಕ್ಕೋ ನೀವು ತುಂಬ ಸಣ್ಣದಾಗಿ ಆರಂಭಿಸಿದ ಯೋಜನೆ ಅಥವಾ ಆಲೋಚನೆ ಅಥವಾ ಒಂದು ಪ್ರಾಜೆಕ್ಟ್ ತುಂಬಾ ದೊಡ್ಡ ಮಟ್ಟದಲ್ಲಿ ಯಶಸ್ಸು ತಂದು ಕೊಡಲಿದೆ. ನೀವು ಬಹಳ ಸಮಯದಿಂದ ಅಂದುಕೊಳ್ಳುತ್ತಿದ್ದ ರೀತಿಯಲ್ಲಿ ಮನೆಗೆ ದೊಡ್ಡ ಅಳತೆಯ ಟಿವಿ, ಹೋಂ ಥಿಯೇಟರ್, ಪ್ರೊಜೆಕ್ಟರ್, ಫ್ರಿಡ್ಜ್ ಅಥವಾ ವಾಷಿಂಗ್ ಮಷೀನ್ ಖರೀದಿ ಮಾಡುವಂತಹ ಯೋಗ ಇದೆ. ನಿಮ್ಮ ಪರಿಚಿತರು ಅಥವಾ ಸ್ನೇಹಿತರ ಮೂಲಕವಾಗಿ ಆಫರ್ ಗಳು ದೊರೆಯುವ ಅವಕಾಶಗಳು ಸಹ ಕಂಡುಬರುತ್ತಿವೆ. ಮಕ್ಕಳ ಭವಿಷ್ಯವನ್ನೇ ಗಮನದಲ್ಲಿ ಇಟ್ಟುಕೊಂಡು, ಶಿಕ್ಷಣ, ಮದುವೆ ಮೊದಲಾದ ಕಾರಣಗಳ ಸಲುವಾಗಿ ಸೈಟು ಅಥವಾ ಕಟ್ಟಿರುವ ಮನೆಯನ್ನು ಖರೀದಿ ಮಾಡುವುದಕ್ಕೆ ಆಲೋಚನೆ ಮಾಡಲಿದ್ದೀರಿ. ಇದಕ್ಕಾಗಿ ನಿಮ್ಮಲ್ಲಿ ಕೆಲವರು ಬ್ಯಾಂಕ್ ಅಥವಾ ನೀವು ಉದ್ಯೋಗ ಮಾಡುತ್ತಿರುವ ಸ್ಥಳದಲ್ಲಿಯೇ ಸ್ವಲ್ಪ ಮಟ್ಟಿಗೆ ಸಾಲ ಮಾಡುವ ಸಾಧ್ಯತೆ ಸಹ ಇದೆ. ನಿಮಗೆ ಬರಬೇಕಾದ ಹಳೆ ಸಾಲ ಬಾಕಿ ಇದ್ದಲ್ಲಿ ಈ ತಿಂಗಳು ಗಟ್ಟಿಯಾಗಿ ಪ್ರಯತ್ನಿಸಿ. ಸ್ವಂತ ಉದ್ಯೋಗ ಮಾಡುತ್ತಿರುವವರಿಗೆ ನೀವು ಈ ಹಿಂದೆ ಮಾಡಿದ ಕೆಲಸವನ್ನು ಮೆಚ್ಚಿಕೊಂಡು, ಕೆಲವರು ಈಗ ಹೊಸದಾಗಿ ಮತ್ತೆ ಕೆಲಸವನ್ನು ವಹಿಸುವ ಯೋಗ ಕಂಡುಬರುತ್ತಿದೆ. ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಮೊದಲಿಗೆ ಮಾತನಾಡಿಕೊಂಡು ಬಿಡುವುದು ಉತ್ತಮ. ಇಲ್ಲದಿದ್ದರೆ ಆ ನಂತರ ಕಡಿಮೆ ಹಣ ಬಂತು ಎಂದು ಪರಿತಪಿಸುವಂತೆ ಆಗುತ್ತದೆ, ನೆನಪಿನಲ್ಲಿಡಿ. ಮನೆ ದೇವರ ಆರಾಧನೆಗಾಗಿ ನಿಮ್ಮ ಹಣ, ಸಮಯ, ವಸ್ತುಗಳು, ಸ್ಥಳ ಸದ್ವಿನಿಯೋಗ ಆಗುವಂಥ ಯೋಗ ಇದೆ. ನೀವಾಯಿತು ನಿಮ್ಮ ಕೆಲಸ ಆಯಿತು ಎಂಬಂತೆಯೇ ಇದ್ದರೂ ಹೆಸರು ಗಳಿಸುವಂಥ ಯೋಗ ಇದೆ. ಸ್ವಭಾವತಃ ತುಂಬ ಸಾಧುವಾಗಿರುವವರು ಸಹ ಈ ತಿಂಗಳ ದ್ವಿತೀಯಾರ್ಧದಲ್ಲಿ ಸ್ವಲ್ಪ ಮಟ್ಟಿಗಾದರೂ ಧ್ವನಿ ಎತ್ತರಿಸಿ ಮಾತನಾಡಬೇಕಾದೀತು. ಯಾರು ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೀರಿ, ಅದರಲ್ಲೂ ಎಲೆಕ್ಟ್ರಾನಿಕ್ ಅಥವಾ ಡಿಜಿಟಲ್ ಮೀಡಿಯಾದಲ್ಲಿ ಇದ್ದೀರಿ ಅಂಥವರಿಗೆ ಸನ್ಮಾನ- ಕೀರ್ತಿ ಪಡೆಯುವಂಥ ಯೋಗ ಇದೆ. ಇನ್ನು ನಿಮ್ಮ ಪ್ರೀತಿಪಾತ್ರರ ಜತೆಗೆ ಉತ್ತಮವಾದ ಸಮಯ ಕಳೆಯುವಂಥ ಯೋಗ ಇದೆ. ಬ್ಯಾಂಕಿಂಗ್ ಕೆಲಸಗಳು ಆಗಬೇಕಿದ್ದಲ್ಲಿ ಅದು ಪೂರ್ಣಗೊಳಿಸುವಂಥ ಸಾಧ್ಯತೆಗಳಿವೆ. ಹಳೇ ಪ್ರೇಮ ಪ್ರಕರಣಗಳು ಮತ್ತೆ ಜೀವ ಪಡೆದುಕೊಳ್ಳಬಹುದು. ಅಭಿಪ್ರಾಯ ಭೇದದಿಂದ ಏನಾದರೂ ದೂರವಾಗಿರುವ ಪ್ರೇಮಿಗಳು ಇದ್ದಲ್ಲಿ ಮತ್ತೆ ಒಂದಾಗುವಂಥ ಯೋಗ ಇದೆ. ಇನ್ನು ವಿವಾಹಿತ ಸ್ತ್ರೀಯರಿಗೆ ತವರು ಮನೆಗೆ ಭೇಟಿ ನೀಡುವಂಥ ಯೋಗ ಇದ್ದು, ಅಣ್ಣನಿಂದ ಉಡುಗೊರೆಗಳನ್ನು ಪಡೆಯುವಂಥ ಸಾಧ್ಯತೆ ಇದೆ. ನಿಮ್ಮ ಮನಸ್ಸಿನಲ್ಲಿ ಬಹಳ ಸಮಯದಿಂದ ಕಾಡುತ್ತಿದ್ದ ಸಂದೇಹ ಅನುಮಾನಗಳು ಬಗೆಹರಿಯಲಿವೆ. ರಾಜಕೀಯ ಕ್ಷೇತ್ರದಲ್ಲಿ ಇದ್ದಲ್ಲಿ ನಿಮ್ಮ ಯಶಸ್ಸು ಧೈರ್ಯದ ಮೇಲೆ ನಿರ್ಧಾರವಾಗುತ್ತದೆ. ಸ್ವಲ್ಪ ಮಟ್ಟಿಗೆ ರಿಸ್ಕ್ ಇದೆ ಎಂದಾದರೂ ನಿಮ್ಮ ಕ್ಷೇತ್ರದ ಸವಾಲನ್ನು ಸ್ವೀಕರಿಸಿ, ಹೆದರದೆ ಮುಂದುವರಿದಲ್ಲಿ ಗೆಲುವು ನಿಮ್ಮದಾಗಲಿದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಹಳೇ ಮನಸ್ತಾಪ, ಅಭಿಪ್ರಾಯ ಭೇದಗಳು ದೂರವಾಗುವಂಥ ಸಮಯವಿದು. ಇನ್ನು ಯಾರು ಖಾಸಗಿ ಕಂಪನಿಗಳಲ್ಲಿ ಉದ್ಯೋಗಿಗಳಾಗಿದ್ದೀರಿ, ಅಂಥವರು ಉದ್ಯೋಗ ಬದಲಾವಣೆಗಾಗಿ ಪ್ರಯತ್ನ ಮಾಡುತ್ತಿದ್ದಲ್ಲಿ ಉತ್ತಮ ಫಲಿತಾಂಶವನ್ನು ನಿರೀಕ್ಷೆ ಮಾಡಬಹುದು. ಇದೇ ವೇಳೆ ಮನೆಯಲ್ಲಿ ಸಕಾರಾತ್ಮಕವಾದ ವಾತಾವರಣ ಇರಲಿದೆ. ಸಾಮಾಜಿಕವಾಗಿ ನಿಮಗೆ ಸಿಗಬೇಕಾದ ಮನ್ನಣೆ ದೊರೆತು, ನಿಮ್ಮಲ್ಲಿ ಒಂದು ಸಾಧನೆ ಮಾಡಿದಂಥ ಸಮಾಧನ ಇರಲಿದೆ. ಇನ್ನು ದಿಢೀರನೇ ನೀವು ಅಂದುಕೊಂಡಂತೆಯೇ ಹಲವು ಬದಲಾವಣೆಗಳು, ಬೆಳವಣಿಗೆಗಳು ಕಂಡುಬರಲಿವೆ. ಕೋರ್ಟ್ ವ್ಯಾಜ್ಯಗಳು ನಡೆಯುತ್ತಿದ್ದಲ್ಲಿ ಕೆಲವರಿಗೆ ರಾಜೀ- ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವುದಕ್ಕೆ ಅವಕಾಶಗಳು ದೊರೆಯಲಿವೆ. ಹೆಣ್ಣುಮಕ್ಕಳಿಗೆ ತವರು ಮನೆಯಿಂದ ಕೆಲವು ಅನುಕೂಲಗಳು ದೊರೆಯುವ ಸಾಧ್ಯತೆ ಇದೆ. ನಿಮ್ಮ ಜವಾಬ್ದಾರಿಗಳನ್ನು ಸಮಯಕ್ಕೆ ಮುಗಿಸಿದ್ದೀರಾ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ. ಸ್ವಂತ ವ್ಯವಹಾರ ಮಾಡುತ್ತಿರುವವರು ವ್ಯಾಪಾರ ವಿಸ್ತರಣೆಗಾಗಿ ಯೋಜನೆಯನ್ನು ರೂಪಿಸಲಿದ್ದೀರಿ. ಇದಕ್ಕಾಗಿ ಸಾಲ ಪಡೆಯುವುದರ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಎಲ್ಲ ಕೆಲಸವನ್ನು ಒಬ್ಬರೇ ಮಾಡುವುದಕ್ಕೆ ಹೊರಡಬೇಡಿ. ಇತರರ ಸಹಾಯದ ಅಗತ್ಯ ಕಂಡುಬಂದಲ್ಲಿ ಪಡೆದುಕೊಳ್ಳಿ. ಯಾರಿಗೆ ಕಾಲು ನೋವಿನ ಸಮಸ್ಯೆ ಈಗಾಗಲೇ ಅನುಭವಿಸುತ್ತಿದ್ದಲ್ಲಿ ಅದು ಉಲ್ಬಣ ಆಗುವಂತಹ ಸಾಧ್ಯತೆಗಳಿವೆ. ಆ ಬಗ್ಗೆ ಎಚ್ಚರಿಕೆಯನ್ನು ತೆಗೆದುಕೊಳ್ಳಿ. ಯಾರು ಸರ್ಕಾರಿ ಉದ್ಯೋಗಿಗಳು ಇದ್ದೀರಿ ಅಂಥವರು ಆರಂಭಿಸಿದ ಕೆಲಸಗಳು ಸಲೀಸಾಗಿ ಮುಗಿಯುವುದಕ್ಕೆ ಬೇಕಾದ ವೇದಿಕೆ ಸಿದ್ಧವಾಗಲಿದೆ. ಯಾರು ಸ್ವಂತ ಉದ್ಯಮ ಅಥವಾ ವ್ಯವಹಾರವನ್ನು ಆರಂಭಿಸಬೇಕು ಎಂದಿದ್ದೀರಿ ಅಂಥವರಿಗೆ ಸ್ನೇಹಿತರ ಬಳಿ ನಿಮಗೆ ಬೇಕಾದ ಪದಾರ್ಥಗಳು ಇದೆ ಎಂದು ಗೊತ್ತಾದಲ್ಲಿ, ಅವರಿಂದ ಸಹಾಯ ಕೂಡ ದೊರೆಯಬಹುದು ಎಂದಾದಲ್ಲಿ ಕೇಳಿ ಪಡೆದುಕೊಳ್ಳುವುದಕ್ಕೆ ಸಂಕೋಚ ಪಡದಿರಿ. ಯಾರು ಮ್ಯಾನೇಜರ್ ಅಥವಾ ಅದಕ್ಕಿಂತ ಮೇಲಿನ ಹಂತದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದೀರಿ ಅಂಥವರರಿಗೆ ಅನಿರೀಕ್ಷಿತವಾಗಿ ಉದ್ಯೋಗ ಸ್ಥಳದಲ್ಲಿ ಹೊಸ ಜವಾಬ್ದಾರಿಗಳನ್ನು ವಹಿಸುವಂಥ ಸಾಧ್ಯತೆ ಇದೆ. ಹೀಗಾಗುವುದರಿಂದ ನಿಮ್ಮ ಆರೋಗ್ಯದ ಮೇಲೆ ಗಮನ ತೆಗೆದುಕೊಳ್ಳುವುದು ಸ್ವಲ್ಪ ಮಟ್ಟಿಗೆ ಕಷ್ಟ ಎನಿಸಬಹುದು. ಆದರೆ ನೀವು ಹಾಕುವ ಶ್ರಮಕ್ಕೆ ತಕ್ಕಂಥ ಪ್ರತಿಫಲ ಖಂಡಿತಾ ದೊರೆಯಲಿದೆ. ಪೌರೋಹಿತ್ಯ, ಜ್ಯೋತಿಷ ಅಥವಾ ದೇವಾಲಯದ ಪಾರುಪತ್ಯೆ ವಹಿಸಿಕೊಂಡಂಥವರಿಗೆ ದೇವತಾ ಕಾರ್ಯಗಳಿಗೆ ಆಹ್ವಾನ ಬರುವಂಥ ಯೋಗ ಇದ್ದು, ಬಂಧುಗಳು ಹಾಗೂ ಸ್ನೇಹಿತರ ಜತೆಗೂಡಿ ರುಚಿಕಟ್ಟಾದ ಊಟ- ತಿಂಡಿಗಳನ್ನು ಸವಿಯುವಂಥ ಯೋಗ ಇದೆ. ಮಹಿಳೆಯರು ತಾವು ಮಾಡಿದ ಉಳಿತಾಯದ ಹಣವನ್ನು ತೆಗೆದುಕೊಂಡು, ಹೊಸ ವಸ್ತ್ರಾಭರಣಗಳನ್ನು ಸಹ ಖರೀದಿಸುವ ಸಾಧ್ಯತೆ ಇದೆ.

ಲೇಖನ- ಎನ್.ಕೆ. ಸ್ವಾತಿ

ಕರುವನ್ನು ಇಡಿಯಾಗಿ ನುಂಗಿದ ಹೆಬ್ಬಾವು; ಶಾಕಿಂಗ್ ವಿಡಿಯೋ ವೈರಲ್
ಕರುವನ್ನು ಇಡಿಯಾಗಿ ನುಂಗಿದ ಹೆಬ್ಬಾವು; ಶಾಕಿಂಗ್ ವಿಡಿಯೋ ವೈರಲ್
ಬಿಗ್ ಬಾಸ್​ನಲ್ಲಿ ಹನುಮಂತ ಸ್ಪರ್ಧಿಯೇ ಅಲ್ಲ? ಹಾಗಾದ್ರೆ ಮತ್ತಿನ್ನೇನು?
ಬಿಗ್ ಬಾಸ್​ನಲ್ಲಿ ಹನುಮಂತ ಸ್ಪರ್ಧಿಯೇ ಅಲ್ಲ? ಹಾಗಾದ್ರೆ ಮತ್ತಿನ್ನೇನು?
ಹರಿದ್ವಾರದ ಬೆಟ್ಟದಲ್ಲಿ ರೀಲ್ಸ್ ಮಾಡುವಾಗ ಆಳದ ಕಂದಕಕ್ಕೆ ಬಿದ್ದ ಮಹಿಳೆ
ಹರಿದ್ವಾರದ ಬೆಟ್ಟದಲ್ಲಿ ರೀಲ್ಸ್ ಮಾಡುವಾಗ ಆಳದ ಕಂದಕಕ್ಕೆ ಬಿದ್ದ ಮಹಿಳೆ
ಹನುಮಂತನ ಕಂಡ್ರೆ ಯೋಗರಾಜ್​ ಭಟ್​ಗೆ ವಿಶೇಷ ಪ್ರೀತಿ
ಹನುಮಂತನ ಕಂಡ್ರೆ ಯೋಗರಾಜ್​ ಭಟ್​ಗೆ ವಿಶೇಷ ಪ್ರೀತಿ
ಸಮನ್ವಯ ಸಭೆಯಲ್ಲಿ ಕಾಮರಾಡರೀ ಪ್ರದರ್ಶಿಸಿದ ವಿಜಯೇಂದ್ರ ಮತ್ತು ನಿಖಿಲ್
ಸಮನ್ವಯ ಸಭೆಯಲ್ಲಿ ಕಾಮರಾಡರೀ ಪ್ರದರ್ಶಿಸಿದ ವಿಜಯೇಂದ್ರ ಮತ್ತು ನಿಖಿಲ್
ಬಿಜೆಪಿ ಕಚೇರಿಗೆ ಬಂದ ನಿಖಿಲ್ ಕುಮಾರಸ್ವಾಮಿಗೆ ಸಿಕ್ಕಿತು ಅದ್ದೂರಿ ಸ್ವಾಗತ
ಬಿಜೆಪಿ ಕಚೇರಿಗೆ ಬಂದ ನಿಖಿಲ್ ಕುಮಾರಸ್ವಾಮಿಗೆ ಸಿಕ್ಕಿತು ಅದ್ದೂರಿ ಸ್ವಾಗತ
ಶಿಗ್ಗಾವಿ ಚುನಾವಣೆಯಲ್ಲಿ ಲಿಂಗಾಯತರು ಕಾಂಗ್ರೆಸ್​ಗೆ​ ಮತ ನೀಡುತ್ತಾರೆ: ಸಚಿವ
ಶಿಗ್ಗಾವಿ ಚುನಾವಣೆಯಲ್ಲಿ ಲಿಂಗಾಯತರು ಕಾಂಗ್ರೆಸ್​ಗೆ​ ಮತ ನೀಡುತ್ತಾರೆ: ಸಚಿವ
ಯೋಗೇಶ್ವರ್ ಸ್ಪರ್ಧಿಯಾದರೂ ಶಿವಕುಮಾರ್ ಹೆಸರಲ್ಲಿ ಮತಯಾಚನೆ: ಸುರೇಶ್
ಯೋಗೇಶ್ವರ್ ಸ್ಪರ್ಧಿಯಾದರೂ ಶಿವಕುಮಾರ್ ಹೆಸರಲ್ಲಿ ಮತಯಾಚನೆ: ಸುರೇಶ್
ಯೋಗರಾಜ್ ಭಟ್ ಎದುರು ಅನಾವರಣವಾಯಿತು ಹನುಮಂತನ ನಿಜವಾದ ಬಣ್ಣ
ಯೋಗರಾಜ್ ಭಟ್ ಎದುರು ಅನಾವರಣವಾಯಿತು ಹನುಮಂತನ ನಿಜವಾದ ಬಣ್ಣ
ಬಿಜೆಪಿ ಜೊತೆ ಮೈತ್ರಿ ಬೆಳಸುವಂತೆ ಕುಮಾರಸ್ವಾಮಿಗೆ ಹೇಳಿದ್ದೇ ನಾನು: ಸಿಪಿವೈ
ಬಿಜೆಪಿ ಜೊತೆ ಮೈತ್ರಿ ಬೆಳಸುವಂತೆ ಕುಮಾರಸ್ವಾಮಿಗೆ ಹೇಳಿದ್ದೇ ನಾನು: ಸಿಪಿವೈ