ಹಾಸನ: ಸ್ಲೀಪರ್ ಬಸ್ ಭಸ್ಮವಾದ್ರೂ 36 ಪ್ರಯಾಣಿಕರು ಪಾರಾಗಿದ್ಹೇಗೆ? ನಿರ್ವಾಹಕ ಹೇಳಿದ್ದೇನು ನೋಡಿ
ಹಾಸನದ ಶಾಂತಿಗ್ರಾಮ ಬಳಿ ಟೈರ್ ಸ್ಫೋಟಗೊಂಡು ಖಾಸಗಿ ಸ್ಲೀಪರ್ ಬಸ್ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಉಡುಪಿಯ ಮಣಿಪಾಲದಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್‌ನಲ್ಲಿದ್ದ 36 ಪ್ರಯಾಣಿಕರನ್ನು ಚಾಲಕ ಸಮಯಪ್ರಜ್ಞೆಯಿಂದ ಕ್ಷಣಾರ್ಧದಲ್ಲಿ ರಕ್ಷಿಸಿದ್ದಾರೆ. ಭಾರೀ ಆಸ್ತಿ ನಷ್ಟವಾಗಿದ್ದರೂ, ಯಾವುದೇ ಜೀವಹಾನಿ ಸಂಭವಿಸಿಲ್ಲ. ಸಾರಿಗೆ ಇಲಾಖೆ ಅಧಿಕಾರಿಗಳು ಘಟನೆಯ ತನಿಖೆ ನಡೆಸುತ್ತಿದ್ದಾರೆ.
ಹಾಸನ, ಮೇ 16: ಉಡುಪಿಯ ಮಣಿಪಾಲದಿಂದ ಮಂಗಳೂರು ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಸ್ಲೀಪರ್ ಎಸಿ ಬಸ್‌ಗೆ ಹಾಸನದ ಶಾಂತಿಗ್ರಾಮ ಸಮೀಪ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಬಸ್ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಆದಾಗ್ಯೂ, ಚಾಲಕನ ಸಮಯಪ್ರಜ್ಞೆಯಿಂದ 36 ಪ್ರಯಾಣಿಕರು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ. ಘಟನೆ ಬಗ್ಗೆ ನಿರ್ವಾಹಕ ‘ಟಿವಿ9’ ಜತೆ ಮಾತನಾಡಿದ್ದು, ಆ ಕ್ಷಣದಲ್ಲಿ ಜನರನ್ನು ಹೇಗೆ ಬಚಾವ್ ಮಾಡಿದ್ದು ಎಂಬುದನ್ನು ವಿವರಿಸಿದ್ದಾರೆ.
ತಡರಾತ್ರಿ 2:30ರ ಸುಮಾರಿಗೆ ಬಸ್‌ನ ಹಿಂಬದಿ ಟೈರ್ ಸ್ಫೋಟಗೊಂಡ ನಂತರ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಚಾಲಕ ಬಸ್ ನಿಲ್ಲಿಸಿ, ನಿದ್ರೆಯಲ್ಲಿದ್ದ ಪ್ರಯಾಣಿಕರನ್ನು ಎಚ್ಚರಿಸಿ ಸುರಕ್ಷಿತವಾಗಿ ಕೆಳಗೆ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ. 18 ಮಹಿಳೆಯರು ಮತ್ತು ಮೂವರು ಮಕ್ಕಳೂ ಸೇರಿದಂತೆ ಒಟ್ಟು 36 ಪ್ರಯಾಣಿಕರು ಈ ಬಸ್‌ನಲ್ಲಿ ಇದ್ದರು. ಬೆಂಕಿ ಅನಾಹುತದಿಂದ ಪ್ರಯಾಣಿಕರ ಮೊಬೈಲ್ ಮತ್ತು ಲಗೇಜ್‌ಗಳು ಸುಟ್ಟುಹೋಗಿವೆ ಎಂದು ಅವರು ತಿಳಿಸಿದ್ದಾರೆ. ಸಾರಿಗೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಘಟನೆಗೆ ನಿಖರ ಕಾರಣವನ್ನು ಪತ್ತೆಹಚ್ಚಲು ತನಿಖೆ ಕೈಗೊಂಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

