ರಾಶಿ ಚಕ್ರದ ಕೊನೆಯ ರಾಶಿ ಇದಾಗಿದೆ. ಈ ರಾಶಿಯ ಅಧಿಪತಿ ಗುರು. ಶುಕ್ರನು ಹೆಚ್ಚು ಫಲವನ್ನು ಕೊಡುವ ರಾಶಿಯೂ ಇದೆ. ಸದ್ಯ ಈ ರಾಶಿಯಲ್ಲಿಯೇ ರಾಹುವಿನ ಆಗಮನವಾಗಿದೆ. ಗುರುವೂ ದ್ವಿತೀಯದಿಂದ ತೃತೀಯಕ್ಕೆ ಹೋಗಲಿದ್ದಾನೆ. ಅದೂ ಶುಕ್ರನಸ್ಥಾನವೇ ಆಗಿದೆ. ಶನಿಯು ದ್ವಾದಶದಲ್ಲಿ ಇದ್ದು, ನಿಮಗೆ ಸಾಡೇ ಸಾಥ್ ನ್ನು ಉಂಟುಮಾಡಿದ್ದಾನೆ. ಹಾಗಾಗಿ ನೀವು ನಿಮ್ಮ ಹೆಜ್ಜೆಗಳನ್ನು ಜೋಪಾನವಾಗಿ ಎಚ್ಚರಿಕೆಯಿಂದ ಇಡುವ ಅಗತ್ಯವಿದೆ.
ಈ ವರ್ಷ ನಿಮಗೆ ಮಿಶ್ರಫಲವು ಸಿಗಲಿದೆ. ನಿಮ್ಮ ರಾಶಿಯಲ್ಲಿಯೇ ರಾಹುವಿರುವ ಕಾರಣ, ದೇಹ ಹಾಗೂ ಮನಸ್ಸುಗಳು ಕೆಡಲು ಅವಕಾಶಗಳು ಹೆಚ್ಚು ಇರುತ್ತವೆ. ಅಥವಾ ಸಣ್ಣ ವಿಚಾರಗಳೂ ನಿಮಗೆ ದೊಡ್ಡದಾಗಿ ಪರಿಣಮಿಸಬಹುದು. ಹಣಕಾಸಿನ ವಿಚಾರದಲ್ಲಿಯೂ ನೀವು ಚಿಂತೆಗೊಳಗಾಗುವ ಸನ್ನಿವೇಶವು ಬರಲಿದೆ.
ದ್ವಿತೀಯಾಧಿಪತಿಯಾದ ಕುಜನು ವರ್ಷಾರಂಭದಲ್ಲಿ ನವಮದಲ್ಲಿ ಇರುವನು. ಸಹೋದರಿಂದ ನಿಮಗೆ ಸಹಕಾರವು ಸಿಗಲಿದೆ. ಕುಟುಂಬವೂ ನಿಮ್ಮ ಜೊತೆಗೆ ಇರಲಿದ್ದು ಯಾವ ಕೆಲಸಕ್ಕೂ ಮುನ್ನುಗ್ಗುವಿರಿ. ಆದರೆ ಅನಂತರ ಇದು ವ್ಯತ್ಯಾಸ ಆಗಲಿದೆ. ಬೆಂಬಲ ಸಿಕ್ಕರೂ ನೀವು ಮುನ್ನಡೆಯಲು ಹಿಂಜರಿಯುವಿರಿ. ಮನಸ್ಸು ಸ್ಥೈರ್ಯವನ್ನು ಕಳೆದುಕೊಳ್ಳುವುದು.
ಪ್ರೀತಿಯಂತೆ ಕಂಡರೂ ಪ್ರೀತಿಯಾಗಿರದು. ಮೋಸ ಹೋಗುವ ಸಾಧ್ಯತೆ ಇದೆ. ಪ್ರೀತಿಯ ಹೆಸರನ್ನು ಹೇಳಿ ಸಂಪತ್ತನ್ನು ಕಳೆದುಕೊಳ್ಳಬೇಕಾಗುವುದು. ಯಾವುದಕ್ಕೂ ನಿಮ್ಮ ಪ್ರೀತಿಯ ವಿಚಾರವನ್ನು ಗೌಪ್ಯವಾಗಿ ಇಡದೇ ನಡೆಯುವ ವಿದ್ಯಮಾನಗಳನ್ನು ಆಪ್ತರ ಜೊತೆ ಹಂಚಿಕೊಳ್ಳಿ.
ಉದ್ಯೋಗ ವಿಚಾರದಲ್ಲಿ ಹೇಳುವುದಾದರೆ ಶಿಕ್ಷಣ ಕ್ಷೇತ್ರದಲ್ಲಿ ಇರುವವರಿಗೆ ವರ್ಷಾರಂಭದಲ್ಲಿ ಉತ್ತಮ ಗೌರವ ಸ್ಥಾನಮಾನಗಳು ಪ್ರಾಪ್ತವಾಗುವುದು. ಅದನ್ನು ಮುಂದುವರಿಸಿಕೊಂಡು ಹೋಗುವುದೂ ನಿಮ್ಮ ಕೈಯಲ್ಲಿದೆ. ವಿಶೇಷವಾದ ತಜ್ಞತೆ ಇರುವವರು ಹೆಚ್ಚು ಖ್ಯಾತಿಯನ್ನೂ ಆರ್ಥಿಕಬಲವನ್ನೂ ಪಡೆಯುವರು.
ಆರೋಗ್ಯದ ಆಗಾಗ ಏನಾದರೂ ಸಣ್ಣ ಸಣ್ಣ ತೊಂದರೆ, ಹೊಡೆತಗಳು ಬೀಳುತ್ತವೆ. ಇದೇ ನಿಮಗೆ ದೊಡ್ಡ ತಲೆನೋವಿನಂತೆ ಆಗಬಹುದು. ಯಾರ ಸಾಂತ್ವನವೂ ನಿಮಗೆ ಆಗಿಬಾರದು. ವ್ಯಾಯಾಮ ಧ್ಯಾನ ಇವುಗಳನ್ನು ನಿತ್ಯವೂ ಸ್ವಲ್ಪ ಮಾಡಿ.
ವಿದೇಶ ಪ್ರಯಾಣವನ್ನು ಮಾಡುವ ಅವಕಾಶ ಕಡಿಮೆ ಇದೆ. ಆದರೆ ವೃತ್ತಿಯ ಕಾರಣದಿಂದ ಬೇರೆ ಪ್ರದೇಶಗಳನ್ನು ನೋಡು ಅವಕಾಶ ಲಭ್ಯವಾಗುವುದು. ಅದೂ ವರ್ಷದ ಮಧ್ಯಾವಧಿಯ ಅನಂತರ.
ಈ ವರ್ಷ ನೀವು ಗುರುವಿನ ದರ್ಶನವನ್ನು ಆಗಾಗ ಮಾಡಿ. ಗುರುಚರಿತ್ರೆಯನ್ನು ಪಠಿಸಿ. ಗುರುಸಮಾಧಿಗೆ ವಿಶೇಷ ಪೂಜೆಯನ್ನು ಗುರುವಾರ ಅಥವಾ ಪುಷ್ಯ ನಕ್ಷತ್ರದಲ್ಲಿ ಮಾಡಿ.
-ಲೋಹಿತ ಹೆಬ್ಬಾರ್, ಇಡುವಾಣಿ
*