ಸಾಡೇ ಸಾತ್ ಶನಿ ಎಂದರೇನು? ಏಪ್ರಿಲ್ 28ಕ್ಕೆ ಈ ರಾಶಿಗೆ ಶನಿ ಪ್ರವೇಶ
Sade Sati Shani: ಈ ವರ್ಷ ಶನಿಯು ಕುಂಭರಾಶಿಗೆ ಎಪ್ರಿಲ್ 28 ಕ್ಕೆ ಪ್ರವೇಶಿಸುತ್ತಾನೆ. ಆಗ ಮೀನ ರಾಶಿಯವರಿಗೆ ಸಾಡೇ ಸಾತ್ ಆರಂಭ, ಕುಂಭದವರಿಗೆ ಜನ್ಮ, ಮಕರದವರಿಗೆ ದ್ವಿತೀಯ ಶನಿಯಾಗುತ್ತದೆ.
ಅದೊಂದು ಲೆಕ್ಕಾಚಾರದ ಭಾಷೆಯಷ್ಟೆ. ಶನಿಯು ಒಂದು ರಾಶಿಯಲ್ಲಿ ಎರಡುವರೆ ವರ್ಷ ಅಂದರೆ 30 ತಿಂಗಳು ಇರುತ್ತಾನೆ. ಜನ್ಮ ರಾಶಿಗೆ ವ್ಯಯ, ಜನ್ಮ, ದ್ವಿತೀಯ ( 12, 1, 2) ಒಟ್ಟು ಏಳುವರೆ ವರ್ಷ ಈ ಭಾವಗಳಲ್ಲಿ ಅವನ ಸಂಚಾರ. ತಿಳಿಯದವರು ನಿಮಗೆ ಸಾಡೇಸಾತ್ ಶನಿ ವಕ್ಕರಿಸಿದೆ. ಬಹಳ ಕಷ್ಟ ಮಹರಾಯರೆ. ಮೃತ್ಯುಂಜಯ ಹೋಮ ಪ್ರತೀವರ್ಷ ಮಾಡಿಸಿ, ಶನಿ ಶಾಂತಿ ಮಾಡಿಸಿ. ಇಲ್ಲಾಂದ್ರೆ ವಿವಾಹ ವಯಸ್ಸಿನವರಿಗೆ ಮದುವೆಯೇ ಆಗಲ್ಲ. ವ್ಯವಹಾರ ಎಲ್ಲ ಸೋಲಿನಲ್ಲೇ ಅನುಭವಿಸಬೇಕಾದೀತು ಎಂದು ಹೆದರಿಸಬಹುದು. ಅಥವಾ ಹೆದರಿಸುವವರೂ ಇದ್ದಾರೆ. ಶನಿಯ ರೀತಿಯಲ್ಲೇ ಇತರ ಗ್ರಹರೂ ಸಂಚರಿಸುತ್ತಾರೆ. ಕಾಲಾವಧಿ ವೆತ್ಯಾಸ ಇರುತ್ತೆ. ಈ ವರ್ಷ ಶನಿಯು ಕುಂಭರಾಶಿಗೆ ಎಪ್ರಿಲ್ 28 ಕ್ಕೆ ಪ್ರವೇಶಿಸುತ್ತಾನೆ. ಆಗ ಮೀನ ರಾಶಿಯವರಿಗೆ ಸಾಡೇ ಸಾತ್ ಆರಂಭ, ಕುಂಭದವರಿಗೆ ಜನ್ಮ, ಮಕರದವರಿಗೆ ದ್ವಿತೀಯ ಶನಿಯಾಗುತ್ತದೆ. ಸಾಡೇ ಸಾತ್ ಹಿಡಿಯಿತೋ ಅಲ್ಲಿಗೆ ಮುಗಿಯಿತು ಅನ್ನೋ ಮಟ್ಟಕ್ಕೆ ಕೆಲ ಜ್ಯೋತಿಷಿಗಳು ಹೆದರಿಸೋದಿದೆ. ಬನ್ನಿ ಈ ಏಳುವರೆ ವರ್ಷದಲ್ಲಿ ಭಾವ ಫಲ ಹೇಗಿದೆ ನೋಡೋಣ. ವ್ಯಯದ ಶನಿಯು ಅಧಿಕ ಖರ್ಚು ಮಾಡಿಸಿಯಾನು. ಜನ್ಮದ ಶನಿಯು ಆರೋಗ್ಯದ ಮೇಲೆ ಪ್ರಭಾವ ಬೀರುತ್ತಾನೆ. ದ್ವಿತೀಯದ ಶನಿಯು ಸುಖ ನಾಶ ಮಾಡುತ್ತಾನೆ ಎಂದು ಜ್ಯೋತಿಷಿಕ ಪರಿಭಾಷೆಯು ತಿಳಿಸಿದೆ.
ಒಂದು ಬೆಳೆ ಬಿತ್ತುವಾಗ, ಅದನ್ನು ಬೆಳೆಸುವಾಗ ಅಧಿಕ ಖರ್ಚು ಇರಲ್ವಾ? ನಂತರ ರೋಗ ಬಾಧೆ ಬಾರದಂತೆ ತಡೆಯಲೇ ಬೇಕಲ್ವಾ? ಇನ್ನು ಇದೆರಡನ್ನೂ ಮಾಡುವಾಗ ನೀವು ಆರಾಮದಲ್ಲಿ ಇರಲು ಸಾಧ್ಯವೇ. ಸ್ವಲ್ಪ ಸುಖ ನಾಶವಾಗಬಹುದು. ಅದು ಬಿಟ್ಟರೆ ಸರ್ವ ನಾಶ, ಗತಿಗೋತ್ರ ಇಲ್ಲದವರಾಗೋದು ಎಂಬುದೆಲ್ಲ ಅದನ್ನು ವೈಭವೀಕರಿಸೋದಷ್ಟೆ. ಮೋದಿಯವರು ಪ್ರಧಾನ ಮಂತ್ರಿಯಾಗುವಾಗ ಇದೇ ಸಾಡೇ ಸಾತ್. ಯಡ್ಯೂರಪ್ಪನವರಿಗೂ ಹೀಗೇ ಇತ್ತು. ಸಿದ್ಧರಾಮಯ್ಯನವರಿಗೂ ಹೀಗೇ ಇತ್ತು. ಸರ್ವಸ್ವ ಕಳೆದುಕೊಂಡರೇ. ನನಗೂ ( ಧನುರಾಶಿ) ಇದೇ ಸಾಡೇಸಾತ್ ಇತ್ತು) ಯಾರು ಗೋಚರ ಫಲಕ್ಕೆ ತಕ್ಕಂತೆ ನಡೆದುಕೊಳ್ಳೋದಿಲ್ವೋ ಆಗ ಯಾವ ಉತ್ತಮ ಫಲದ ಗೋಚರ ಸ್ಥಿತಿಯಾದರೂ ಅಪಾಯವೆ. ಗೋಚರ ಎಂದರೆ ವಾತಾವರಣ.
ಅವರವರ ಧಾರಣಾ ಶಕ್ತಿಗನುಗುಣವಾಗಿ, ಅವರವರ ಮನೋ ಸಾಮರ್ಥ್ಯಕ್ಕೆ ಅನುಗುಣವಾಗಿ ಫಲ ಸಿಗುತ್ತದೆ. ಯಾವಾಗ ಇದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತೇವೆಯೋ ಆಗ ಉತ್ತಮ ಗೋಚರವಾದರೂ ಅಪಾಯವೆ. ಹಾಗಾಗಿ ಸಾಡೇ ಸಾತ್ ಅಪಾಯ ತರುವಂತದ್ದು ಎಂಬುದನ್ನು ನಾನು ಒಪ್ಪೋದಿಲ್ಲ. ಜಾತಕದ ಶನಿಯ ಸ್ಥಿತಿಗೆ ಗೋಚರದ ಶನಿಯು ಚತುರ್ಥ,ಅಷ್ಟಮದಲ್ಲಿ ಸಂಚರಿಸುವಾಗ ವಿವೇಚನೆ ಇಲ್ಲದವರಿಗೆ ಅಪವಾದ,ಮರಣ ಸಮಾನ ಯೋಗ ತರುತ್ತಾನೆ.ಅದೇ ರೀತಿ ರಾಶಿಗೆ ಅಷ್ಟಮದ ಶನಿಯೂ ಮರಣ ಸಮಾನ ಯೋಗ ತರುತ್ತಾನೆ.ಅಲ್ಲದೆ ಜನನ ಲಗ್ನಕ್ಕೂ ಅಷ್ಟಮ ಶನಿಯು ಅನನುಕೂಲವೆ.
ಮರಣವನ್ನು ಜೈಸುವ ಮಾರ್ಗ ತಿಳಿಯದವರಿಗೆ ಮರಣವೇ ಗತಿ.ಮರಣ ಎಂದರೆ ಸಾಯಬೇಕು ಎಂಬುದೇ ಆಗಬೇಕಾಗಿಲ್ಲ. ವ್ಯವಹಾರದಲ್ಲಿ ವಿಪರೀತ ನಷ್ಟ ಬರೋದು, ಸಾಲ ಬಾಧೆ ತಡೆಯಲಾರದೆ ಆಸ್ತಿ ಮಾರಾಟವಾಗುವ ಪ್ರಸಂಗ. ಅವಘಡಗಳಿಂದ ಆಸ್ಪತ್ರೆ ಸೇರೋದು ಇವೆಲ್ಲವೂ ಮರಣ ಸಮಾನವೆ. ಹಾಗಾಗಿ ನಾವು ಮೊದಲಾಗಿ ಇಂತಹ ಗೋಚರದ ಸಮಯದಲ್ಲಿ ವಿವೇಚನೆ,ಆಲೋಚನೆಗಾಗಿ ತಜ್ಞರ ಸಲಹೆ ಪಡೆಯೋದು,ಅದಕ್ಕೆ ತಕ್ಕಂತೆ ನಡೆದುಕೊಂಡರೆ ಅಪಾಯ ಇರುವುದಿಲ್ಲ. ಸಣ್ಣ ಉದಾಹರಣೆಯೊಂದಿಗೆ ಮುಗಿಸುತ್ತೇನೆ. ಒಬ್ಬನಿಗೆ ಇದೇ ಸಾಡೇಸಾತ್ ಸಮಯದಲ್ಲಿ ಎದೆ ನೋವು ಬರುತ್ತದೆ.
ತಕ್ಷಣ ಆಸ್ಪತ್ರೆಗೆ ಓಡುತ್ತಾನೆ.ಹೋಗುವಾಗ ವಿಪರೀತ ಟೆನ್ಶನ್ ಉದ್ವೇಗದಲ್ಲೇ ಹೋಗುತ್ತಾನೆ.ವೈದ್ಯರ ಉಪಕರಣಗಳು ಹೃದಯ ಸಂಬಂಧ ಕಾಯಿಲೆ ತೋರಿಸುತ್ತದೆ.ಕೊನೆಗೆ ಸರ್ಜರಿ ಮುಂತಾದುವುದಕ್ಕೆ ಹೋಗ್ತಾನೆ.ಅಂತಹ ಸಂದರ್ಭದಲ್ಲಿ 2nd,3rd opinion ಪಡೆಯಲೇ ಬೇಕು.ಅಥವಾ ಜ್ಯೋತಿಷ್ಯರಲ್ಲಿಗೇ ಹೋಗ್ತಾನೆ ಅಂತ ಇಟ್ಟುಕೊಳ್ಳೋಣ.ಅವರು ನಿನಗೆ ಮಾಟ ಮಂತ್ರ ಆಗ್ಯದೆ ಎಂದು ಹೇಳಿದರೆ ಅದರ ಪರಿಹಾರಕ್ಕೆ ಹೋಗುವ ಮುನ್ನ ಮೇಲೆ ಹೇಳಿದಂತೆ ಬೇರೊಂದು ಜ್ಯೋತಿಷ್ಯರ ಸಲಹೆ ಪಡೆದೇ ಮುಂದುವರಿದರೆ ಪರಿಹಾರ ಸೌಖ್ಯ ಇರುತ್ತದೆ. ದೇಹ ನಮ್ಮದು.ವ್ಯವಹಾರ ನಮ್ಮದು.ಅದರಲ್ಲಿ ಒಂದೆರಡು ತಜ್ಞರ ಸಲಹೆ ಪಡೆಯೋದರಲ್ಲಿ ತಪ್ಪೇನಿದೆ? ಮೊದಲು ವಿವೇಚನೆ,ವಿವೇಕ ಇದ್ದಾಗ ದಾರಿಯೂ ಸುಗಮವಾದೀತು.