Astrology: ಈ 4 ರಾಶಿಯವರು ಇನ್ನೊಬ್ಬರ ಮೇಲೆ ಸವಾರಿ ಮಾಡುವುದರಲ್ಲಿ ನಿಸ್ಸೀಮರು
ಈ ನಾಲ್ಕು ರಾಶಿಯ ಜನರು ಇತರರ ಮೇಲೆ ಹತೋಟಿ ಸಾಧಿಸುವುದಕ್ಕೆ ಯತ್ನಿಸುತ್ತಾರೆ. ಅದು ಹೇಗೆ ಮತ್ತು ಯಾಕೆ ಎಂಬುದರ ವಿವರ ಇಲ್ಲಿದೆ.
ಇನ್ನೊಬ್ಬರ ಅಭಿಪ್ರಾಯಗಳ ಮೇಲೆ ಸವಾರಿ ಮಾಡುವುದು, ಇದು ಹೀಗೆ ಮಾಡಿ ಎಂದು ದಬಾವಣೆ ಮಾಡುವುದು ಎಲ್ಲರ ಸ್ವಭಾವವಲ್ಲ. ಆದರೆ ಕೆಲವು ರಾಶಿಯವರ ಸ್ವಭಾವ ಹೇಗಿರುತ್ತದೆ ಅಂದರೆ, ಇನ್ನೊಬ್ಬರ ಮೇಲೆ ಹತೋಟಿ ಸಾಧಿಸಲು ಯತ್ನಿಸುತ್ತಾರೆ. ತಮಗೆ ಸರಿ ಎನಿಸಿದ್ದೇ ಇತರರಿಗೂ ಅನಿಸಬೇಕು ಎಂಬುದು ಇವರ ಧೋರಣೆ ಎನ್ನುವಂತೆ ಇರುತ್ತದೆ. ಈ ಕಾರಣಕ್ಕೆ ಇತರರ ಪಾಲಿಗೆ ಅಯ್ಯೋ, ಈ ಅಸಾಮಿ ಚೊರೆ ಎಂದೆನಿಸಿಕೊಳ್ಳಬೇಕಾಗುತ್ತದೆ. ಈ ನಾಲ್ಕು ರಾಶಿಯ ಪೈಕಿ ನಿಮ್ಮದೇನಾದರೂ ಆಗಿದ್ದಲ್ಲಿ, ಈಗ ವಿವರಣೆ ನೀಡಿದ ಸ್ವಭಾವದ ಕೆಲವಂಶ ಆದರೂ ನಿಮ್ಮದೂ ಆಗಿರಬಹುದು. ಇತರರಿಗೆ ಬೇಸರ ಆಗುವ ಮುಂಚೆ ತಿದ್ದುಕೊಳ್ಳುವ ಅವಕಾಶ ಸಿಕ್ಕರೆ ಬದಲಾಗುವುದು ಉತ್ತಮ. ಯಾವುದು ಆ ನಾಲ್ಕು ರಾಶಿ ಎಂಬುದರ ಬಗ್ಗೆ ತಿಳಿಯುವುದಕ್ಕೆ ಮುಂದೆ ಓದಿ.
ಮೇಷ ಇವರ ರಾಶ್ಯಾಧಿಪತಿ ಕುಜ. ಜನರನ್ನು ಮೇಯಿಸುವುದಕ್ಕೆ ಹೇಳಿ ಮಾಡಿಸಿದಂಥ ವ್ಯಕ್ತಿಗಳು. ಕೂಗಾಡುತ್ತಾ, ಕಿರುಚಾಡುತ್ತಾ ಕೆಲಸ ಆಗುತ್ತಿದೆ ಅಥವಾ ಎಲ್ಲ ಕೆಲಸ ಆಗುತ್ತಿದ್ದರೂ ಕೂಗಾಟ-ಕಿರುಚಾಟ ನಡೆಯುತ್ತಿದೆ ಎಂದಾದಲ್ಲಿ ಅಲ್ಲಿ ಮೇಷ ರಾಶಿಯವರು ಇದ್ದಾರೆ ಅಂತಲೇ ಅರ್ಥ. ಆದರೆ ಇವರಿಗೆ ಯಾರನ್ನು ಹೇಗೆ ಸಂಭಾಳಿಸಬೇಕು ಅನ್ನೋದು ಗೊತ್ತು. ಇದರ ಜತೆಗೆ ಎಲ್ಲ ಕೆಲಸಕ್ಕೂ ತಮ್ಮದೇ ಮೆಥಡಾಲಜಿ ತಂದು, ಅದನ್ನೇ ಅನುಸರಿಸುವಂತೆ ಮಾಡುತ್ತಾರೆ. ಲಾಭ- ನಷ್ಟದ ಮುಖ ಕೂಡ ನೋಡುವುದಿಲ್ಲ. ಆ ಕಾರಣಕ್ಕೆ ಮೇಷ ರಾಶಿಯವರಿಗೆ ಇನ್ನೊಬ್ಬರ ಆಜ್ಞೆ- ಅಪ್ಪಣೆಯಂತೆ ಕೆಲಸ ಮಾಡುವುದು ಅಸಾಧ್ಯ ಹಾಗೂ ಅಸಹನೀಯ.
ಸಿಂಹ ಬಾಸಿಸಂ ಅನ್ನೋದಿಕ್ಕೆ ಪರ್ಯಾಯ ಅರ್ಥ ಅಂದರೆ ಸಿಂಹ ರಾಶಿಯವರು. ಬಾಸ್ ಅನ್ನಿಸಿಕೊಳ್ಳುವುದಕ್ಕೆ ಸಿಕ್ಕಾಪಟ್ಟೆ ಶ್ರಮ ಹಾಕುತ್ತಾರೆ. ಕೆಲಸ ಸಿಗುತ್ತಿಲ್ಲ ಅಂತ ಬೇಸರ ಕೂಡ ಮಾಡಿಕೊಳ್ಳುವುದಿಲ್ಲ. ಇವರು ಸ್ವಾತಂತ್ರ್ಯಪ್ರಿಯರಷ್ಟೇ ಅಲ್ಲದೆ ಇನ್ನೊಬ್ಬರು ತಮ್ಮ ಮಾತನ್ನು ಕೇಳುತ್ತಿದ್ದಾರೆ ಎಂಬುದನ್ನು ಎಂಜಾಯ್ ಮಾಡುತ್ತಾರೆ. ಹೊಗಳಿಕೆ ಸಹ ಇವರ ಪಾಲಿನ ದೌರ್ಬಲ್ಯ. ಮಾಡುವ ಕೆಲಸ ಸರಿಯೋ ತಪ್ಪೋ ಯಾರಾದರೂ ವಿಶ್ಲೇಷಣೆ, ವಿಮರ್ಶೆ ಮಾಡಿಬಿಟ್ಟರೆ ಸಟಕ್ಕನೆ ಸಿಟ್ಟಿಗೇಳುತ್ತಾರೆ. ಇನ್ನೊಬ್ಬರು ಹೇಳುವ ಮಾತನ್ನು ಕೇಳಬೇಕಾಗುತ್ತದೆ ಎಂಬ ಕಾರಣಕ್ಕೇ ತಮ್ಮ ಕ್ರಿಯೇಟಿವಿಟಿಯನ್ನೆಲ್ಲ ಬಳಸಿ, ಎತ್ತರಕ್ಕೆ ತಲುಪಿಕೊಂಡು ಬಿಡುತ್ತಾರೆ ಅಥವಾ ಸ್ವಂತ ಉದ್ಯಮ ಆರಂಭಿಸಿ ಬಿಡುತ್ತಾರೆ.
ಕನ್ಯಾ ಊರವರ ಮದುವೆಗೆಲ್ಲ ತನ್ನದೇ ಪೌರೋಹಿತ್ಯ ಎನ್ನುವ ಜಾಯಮಾನದವರು ಕನ್ಯಾ ರಾಶಿಯವರು. ಎಲ್ಲವೂ ಅಚ್ಚುಕಟ್ಟಾಗಿ ಇರಬೇಕು. ತಮ್ಮ ಮನಸ್ಸಿಗೆ ಬಂದಂತೆಯೇ ನಡೆಯಬೇಕು. ಯಾರ ಕೈ ಕೆಳಗೂ ಕೆಲಸ ಮಾಡಲು ಇಷ್ಟಪಡದ ಜನರು ಇವರು. ಈ ಕನ್ಯಾರಾಶಿಯವರು ಅದೆಷ್ಟು ಅಚ್ಚುಕಟ್ಟಾದ ಕೆಲಸ ಮಾಡುತ್ತಾರೋ ಅದರಲ್ಲೇ ಮೈ ಮರೆತು ಡೆಡ್ಲೈನ್ಗಳನ್ನು ಮೀರುತ್ತಾರೆ. ಆದರೆ ಎಲ್ಲಕ್ಕೂ ಇತರರ ಮೇಲೆ ತಪ್ಪು ಹೊರಿಸುತ್ತಾರೆ. ಹಾಗಂತ ಕೆಲಸದ ವಿಚಾರಕ್ಕೆ ಬಂದರೆ ಇವರು ದೈತ್ಯರಿದ್ದಂತೆ. ಹಗಲು- ರಾತ್ರಿ ಕೆಲಸ ಮಾಡುತ್ತಾರೆ. ಆದರೂ ಡೆಡ್ಲೈನ್ ಮೀರಿ, ಇತರರ ಮೇಲೆ ಸಿಟ್ಟಾಗುತ್ತಾರೆ, ಆರೋಪ ಮಾಡುತ್ತಾರೆ.
ವೃಶ್ಚಿಕ ಈ ರಾಶಿಯವರ ಜತೆ ಇರುವುದು, ಕೆಲಸ ಮಾಡುವುದು ಭಾರೀ ಸವಾಲಿನ ಕೆಲಸ. ಯಾವಾಗ, ಏನನ್ನು ಬಯಸುತ್ತಾರೆ ಎಂಬುದನ್ನು ನಿರೀಕ್ಷೆ ಮಾಡುವುದೇ ಕಷ್ಟ. ತಮಗೆ ಇಷ್ಟವಾದ ವ್ಯಕ್ತಿಗಳ ಎಂಥ ತಪ್ಪನ್ನಾದರೂ ಕ್ಷಮಿಸಬಲ್ಲರು. ಆದರೆ ಇವರಿಗೆ ಇಷ್ಟವಾಗಲಿಲ್ಲ ಅಂದರೆ ಮೊಸರಲ್ಲಾದರೂ ಕಲ್ಲನ್ನು ಹುಡುಕುವಂಥವರು. ಜತೆಗಿರುವವರ ನಿಷ್ಠೆ- ಪ್ರಾಮಾಣಿಕತೆ ಕುರಿತು ಅನುಮಾನ ಮೂಡಿದಲ್ಲಿ ಆ ವ್ಯಕ್ತಿಗಳ ಪರಿಸ್ಥಿತಿ ಇನ್ಯಾರಿಗೂ ಬೇಡ ಎನ್ನುವಂತೆ ಮಾಡಿಬಿಡುತ್ತಾರೆ. ಇವರ ಕ್ರೌರ್ಯದ ಪರಾಕಾಷ್ಠೆ ಭೀಕರವಾಗಿರುತ್ತದೆ. ಆದ್ದರಿಂದ ಎಚ್ಚರಿಕೆ ಅತ್ಯಗತ್ಯ.
ಇದನ್ನೂ ಓದಿ: Astrology: ಈ ನಾಲ್ಕು ರಾಶಿಯವರಿಗೆ ಜೀವನದಲ್ಲಿ ಯಶಸ್ಸು ಸಿಗುವುದು ಬಹಳ ತಡ, ಏಕೆ ಗೊತ್ತೆ?
ಇದನ್ನೂ ಓದಿ: Marriage Astrology: ವಿಚಿತ್ರ ಕಾರಣಗಳಿಂದಾಗಿ ಈ 5 ರಾಶಿಯವರು ಮದುವೆ ಆಗದೆ ಉಳಿದು ಬಿಡುವ ಸಾಧ್ಯತೆ ಹೆಚ್ಚು!
(These 4 Zodiac People Will Dominate On Others Know The Reasons Why)