
ಖಗೋಳದಲ್ಲಿ ಕ್ರಾಂತಿವೃತ್ತದ ಸಮೀಪದಲ್ಲಿ ಕುಂಕುಮದ ಬಣ್ಣದಲ್ಲಿ ಒಂದು ನಕ್ಷತ್ರ ಮಿನುಗುತ್ತಿದ್ದರೆ ಅದು ಸ್ವಾತೀ. ಇದು ನಕ್ಷತ್ರ ಚಕ್ರದ ಐದನೇ ನಕ್ಷತ್ರ. ವಾಯು ಇದರ ಅಧಿದೇವತೆ. ಇದು ಮಳೆ ನಕ್ಷತ್ರಗಳಲ್ಲಿ ಅತ್ಯಂತ ಪ್ರಸಿದ್ಧವಾದುದಾಗಿದೆ. ಸೂರ್ಯ ಈ ನಕ್ಷತ್ರವನ್ನು ಪ್ರವೇಶಿಸಿದಾಗ ಸುರಿದ ಮಳೆಯ ನೀರು ಸಮುದ್ರದ ಕಪ್ಪೆಚಿಪ್ಪಿನಲ್ಲಿ ಬಿದ್ದರೆ ಅದೇ ಮುತ್ತಾಗುತ್ತದೆ ಎನ್ನುವುದು ಕವಿಸಮಯ. ಸ್ವಾತಿಯ ಮಳೆಯಿಂದ ವರ್ಷದ ಮೊಸರನ್ನು ಮಾಡುತ್ತಾರೆ. ಹೊಸ ಮೊಸರು ತಯಾರಾಗುವುದು ಸ್ವಾತಿ ಮಳೆಯ ನೀರಿನಿಂದ ಎಂದರೆ ಅಚ್ಚರಿಯಾದೀತು. ಎಷ್ಟೋ ಕಡೆಗಳಲ್ಲಿ ಈ ಕ್ರಮ ಇನ್ನೂ ಇದೆ. ಅಂತಹ ಶ್ರೇಷ್ಠ ನಕ್ಷತ್ರ ಇದು. ದೇವಗಣಕ್ಕೆ ಸೇರಿದ ನಕ್ಷತ್ರವಿದು. ರೂ ರೇ ರೋ ತಾ ನಾಮಾಕ್ಷರಗಳನ್ನು ಇಟ್ಟುಕೊಂಡಿರುವ ಇದು ಅಂತ್ಯನಾಡಿ. ಸ್ತ್ರೀಲಿಂಗ ಹಾಗೂ ಸ್ಥಿರನಕ್ಷತ್ರ.
ದಾನಿ :
ಈ ನಕ್ಷತ್ರದವರಲ್ಲಿ ದಾನದ ಸ್ವಾಭಾವವಿದ್ದು, ತಮ್ಮ ಕೈಲಾಯದ ಸಹಕಾರವನ್ನು ಮಾಡುವರು. ಏನಿದೆಯೋ ಅದನ್ನು ಇನ್ನೊಬ್ಬರಿಗೆ ನೀಡುವ ಗುಣ ಇವರಲ್ಲಿ ಇರುವುದು.
ವ್ಯಾಪಾರಿ :
ಇದು ತುಲಾ ರಾಶಿಯಲ್ಲಿ ಪೂರ್ಣವಾಗಿ ಬರುವ ನಕ್ಷತ್ರವಾಗಿದ್ದು ತುಲಾರಾಶಿಗೆ ಹೇಳಿದ ಎಲ್ಲ ಸ್ವಭಾವವೂ ಇರುವುದು. ಅದರಲ್ಲಿ ವ್ಯಾಪಾರವೂ ಒಂದಾಗಿದ್ದು, ಕ್ರಯ ವಿಕ್ರಯಗಳ ಬಗ್ಗೆ ವಿಶೇಷ ಮಾಹಿತಿ, ಆಲೋಚನೆ, ಯೋಜನೆಗಳನ್ನು ಹಾಕಿಕೊಳ್ಳುವರು. ಲಾಭ ನಷ್ಟಗಳ ಬಗೆಗೂ ವಿವೇಚನೆ ಇರಲಿದೆ.
ಕರುಣೆ :
ಕಠೋರತೆ ಇವರಲ್ಲಿ ಇರದು. ತುಂಬ ಮೃದು ಹೃದಯ ಇವರದ್ದು. ಅನ್ಯರ ಸಂಕಟಕ್ಕೆ ಕರಗುವರು, ಸಹಾಯವನ್ನೂ ನೀಡುವರು.
ಪ್ರಿಯವಾದ ಮಾತು :
ಇವರ ಮಾತು ಪ್ರಿಯವಾಗಲಿದೆ. ಅಂದರೆ ಹೇಳಬೇಕಾದ ರೀತಿಯಲ್ಲಿ ಹೇಳಿ, ತಮ್ಮ ಕಾರ್ಯವನ್ನು ಮಾಡಿಸಿಕೊಳ್ಳುತ್ತಾರೆ ಅಥವಾ ಆಗಬೇಕಾದ ಕೆಲಸವು ಆಗಲಿದೆ.
ಧರ್ಮದ ಆಶ್ರಯ :
ಧರ್ಮವನ್ನು ಬಿಟ್ಟು ಅಧರ್ಮದ ಕಾರ್ಯವನ್ನು ಮಾಡಲು ಮನಸ್ಸು ಒಪ್ಪದು. ಒಮ್ಮತದಿಂದ ಮಾಡಿದರೂ ಪಾಪಪ್ರಜ್ಞೆ ಕಾಡುವುದು.
ವಿದಗ್ಧ :
ಕಾರ್ಯದಲ್ಲಿ ಕುಶಲತೆಯೇ ವಿದಗ್ಧತೆ. ಎಂತಹ ಕೆಲಸವನ್ನು ಬುದ್ಧಿಶಕ್ತಿಯಿಂದ ಸ್ಮಾರ್ಟ್ ಆಗಿ ಮಾಡುವ ತಜ್ಞತೆ ಇರಲಿದೆ.
ಪ್ರಿಯವಲ್ಲಭ :
ಹೆಂಡತಿಗೆ ಪ್ರೀತಿಪಾತ್ರನಾಗಿ ಇರುವನು. ಸ್ವತಂತ್ರವಾಗಿ ಮಾಡಿದರೂ ಸಂಗಾತಿಗೆ ಪ್ರಿಯವಾದುದನ್ನೇ ಮಾಡಿ ಸಂತೋಷಪಡಿಸುವನು.
ದೇವಭಕ್ತ :
ದೇವರಲ್ಲಿ ನಂಬಿಕೆ, ಶ್ರದ್ಧೆ ಇರಲಿದೆ. ದೇವತೋಪಾಸನೆ, ದೇವಾಲಯ, ಪುಣ್ಯಸ್ಥಳಗಳ ಭೇಟಿ ಪ್ರಿಯವಾಗಲಿದೆ. ಧಾರ್ಮಿಕ ಕಾರ್ಯವನ್ನು ಹೆಚ್ಚು ಮಾಡುವಿರಿ ಅಥವಾ ಪಾಲ್ಗೊಳ್ಳುವಿರಿ.
ಹೀಗೆ ಅಪರೂಪದ ನಕ್ಷತ್ರ ಈ ಸ್ವಾತಿ. ಸೃಷ್ಟಿಯ ವಿಸ್ಮಯವನ್ನು ತೆರೆಯುತ್ತ ಹೋದರೆ, ಮುಗಿದ ಒರತೆ. ಒಂದನ್ನು ಹಿಡಿದರೆ, ಅದು ಆಳಕ್ಕೆ ಸೆಳೆದು ಮತ್ತೆಲ್ಲಿಗೋ ಕೊಂಡೊಯ್ಯುತ್ತದೆ. ಇಂತಹ ಖಗೋಲಕ್ಕೆ ಏನೆಂದರೂ ಕಡಿಮೆ.
– ಲೋಹಿತ ಹೆಬ್ಬಾರ್ – 8762924271