Ugadi Varsha Bhavishya: ತುಲಾ ರಾಶಿಯವರ ವಿಶ್ವಾವಸು ಸಂವತ್ಸರ ಯುಗಾದಿ ವರ್ಷ ಭವಿಷ್ಯದ ಫಲಾಫಲ ಇಲ್ಲಿದೆ
ತುಲಾ ಯುಗಾದಿ ವರ್ಷ ಭವಿಷ್ಯ2025: ಮಾರ್ಚ್ 30ರಿಂದ ವಿಶ್ವಾವಸು ಸಂವತ್ಸರ ಶುರುವಾಗಿದೆ. ಈ ಸಂವತ್ಸರದಲ್ಲಿ ಮೇಷದಿಂದ ಮೀನದ ತನಕ ಹನ್ನೆರಡು ರಾಶಿಗಳವರಿಗೆ ಶುಭಾಶುಭ ಫಲಗಳು ಏನಿವೆ ಎಂಬುದರ ವಿವರ ನೀಡಲಾಗಿದೆ. ಇದಕ್ಕಾಗಿ ಶನಿ, ಗುರು, ರಾಹು- ಕೇತು ಗ್ರಹಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಇದು ಗ್ರಹ ಗೋಚಾರದಲ್ಲಿ ತಿಳಿಸುವ ಭವಿಷ್ಯ. ವೈಯಕ್ತಿಕ ಜಾತಕದಲ್ಲಿನ ಗ್ರಹ ಸ್ಥಿತಿ ಹಾಗೂ ದಶಾಭುಕ್ತಿ ಇತ್ಯಾದಿ ವಿಚಾರಗಳನ್ನು ಸಹ ಪರಾಂಬರಿಸಬೇಕು. ಆದರೆ ಗೋಚಾರ ರೀತಿಯಾಗಿ ಗ್ರಹಗಳು ಬೀರುವಂಥ ಪ್ರಭಾವವು ಇದ್ದೇ ಇರುತ್ತದೆ.

ಮಾರ್ಚ್ ಇಪ್ಪತ್ತೊಂಬತ್ತನೇ ತಾರೀಕಿನಂದು ಶನಿ ಗ್ರಹ ಮೀನ ರಾಶಿ ಪ್ರವೇಶ ಮಾಡಿದೆ. ಮೇ 14ಕ್ಕೆ ಗುರು ಗ್ರಹವು ಮಿಥುನ ರಾಶಿಯನ್ನು ಪ್ರವೇಶಿಸುತ್ತದೆ. ಇನ್ನು ಮೇ ಹದಿನೆಂಟನೇ ತಾರೀಕಿನಂದು ರಾಹು ಗ್ರಹವು ಕುಂಭ ರಾಶಿಯಲ್ಲೂ ಹಾಗೂ ಕೇತು ಗ್ರಹವು ಸಿಂಹ ರಾಶಿಯಲ್ಲೂ ಸಂಚರಿಸುತ್ತದೆ. ಗುರು ಗ್ರಹ ಅಕ್ಟೋಬರ್ 18ನೇ ತಾರೀಕಿನಂದು ಕರ್ಕಾಟಕ ರಾಶಿಯನ್ನು ಪ್ರವೇಶಿಸಿ, ಡಿಸೆಂಬರ್ 5ನೇ ತಾರೀಕಿನಂದು ಮತ್ತೆ ಮಿಥುನ ರಾಶಿಯಲ್ಲಿ ಸಂಚರಿಸುತ್ತಾ ಸಂವತ್ಸರ ಪರ್ಯಂತವಾಗಿ ಅದೇ ರಾಶಿಯಲ್ಲಿ ಇರುತ್ತದೆ.
ತುಲಾ ರಾಶಿಯವರ ಯುಗಾದಿ ವರ್ಷ ಭವಿಷ್ಯ:
ಶನಿ (ಆರನೇ ಮನೆ ಸಂಚಾರ):
ಇಷ್ಟು ಸಮಯ ಅಡೆತಡೆ ಆಗಿ ನಿಂತಿದ್ದ ಕೆಲಸ- ಕಾರ್ಯಗಳನ್ನು ಪೂರ್ಣಗೊಳಿಸಲಿದ್ದೀರಿ. ಮನೆ ಅಥವಾ ಕಚೇರಿ ನವೀಕರಣ ಮಾಡಿಸಬೇಕು ಎಂದುಕೊಳ್ಳುವವರು ಅದನ್ನು ಮಾಡಿಸಲಿದ್ದೀರಿ. ಈ ಹಿಂದೆ ನೀವು ನೀಡಿದ್ದ ಸಾಲ ಅಥವಾ ಮಾಡಿದ್ದ ಕೆಲಸದಿಂದ ಬರಬೇಕಾದ ಬಾಕಿ ಇದ್ದಲ್ಲಿ ಬರಲಿದೆ. ಆರೋಗ್ಯ ಸಮಸ್ಯೆಗಳು ಇದ್ದದ್ದು ಸೂಕ್ತ ವೈದ್ಯೋಪಚಾರದ ಮೂಲಕ ಚೇತರಿಕೆ ಕಾಣಿಸಿಕೊಳ್ಳಲಿದೆ. ಮಕ್ಕಳ ಸಲುವಾಗಿ ಉಳಿತಾಯ, ಹೂಡಿಕೆ ಅಥವಾ ಆಸ್ತಿ ಖರೀದಿಯನ್ನು ಮಾಡಲಿದ್ದೀರಿ. ಇನ್ನು ನಿಮ್ಮಲ್ಲಿ ಕೆಲವರಿಗೆ ಹಳೇ ಮನೆಯನ್ನು ಖರೀದಿ ಮಾಡುವಂಥ ಯೋಗ ಇದೆ. ಈಗ ನಿಮ್ಮ ಬಳಿ ಇರುವಂಥ ದೊಡ್ಡ ಅಥವಾ ವಿಲಾಸಿ ಕಾರನ್ನು ಮಾರಾಟ ಮಾಡಿ, ಹೊಸತನ್ನು ಕೊಳ್ಳಲಿದ್ದೀರಿ. ಕಬ್ಬಿಣ, ಸಿಮೆಂಟ್, ಇಟ್ಟಿಗೆಯ ವ್ಯವಹಾರಗಳನ್ನು ಮಾಡುತ್ತಿರುವವರಿಗೆ ಆದಾಯದಲ್ಲಿ ವೃದ್ಧಿ ಆಗಲಿದೆ.
ಗುರು (ಒಂಬತ್ತನೇ ಮನೆ- ಹತ್ತನೇ ಮನೆ):
ಕೌಟುಂಬಿಕ ವ್ಯವಹಾರಗಳನ್ನು ಮಾಡುತ್ತಾ ಬರುತ್ತಿರುವವರು ಅದರ ವಿಸ್ತರಣೆ ಮಾಡಲಿದ್ದೀರಿ. ಇನ್ನಷ್ಟು ಹೊಸ ಉತ್ಪನ್ನಗಳನ್ನು ಸೇರ್ಪಡೆ ಮಾಡಿಕೊಂಡು, ಈ ಹಿಂದೆ ನೀವೇ ಮಾಡಿಕೊಂಡಿದ್ದ ಯೋಜನೆಗಳನ್ನು ಜಾರಿಗೆ ತರಲಿದ್ದೀರಿ. ತಂದೆಯಿಂದ ಬರಬೇಕಾದ ಹಣ, ಆಸ್ತಿ, ಇನ್ಯಾವುದೇ ಸಂಪತ್ತು ಬರಲಿದೆ. ಸಂತಾನಕ್ಕಾಗಿ ಪ್ರಯತ್ನ ಮಾಡುತ್ತಿರುವವರಿಗೆ ಯತ್ನವು ಫಲ ನೀಡಲಿದೆ. ಹೌಸಿಂಗ್ ಸೊಸೈಟಿಗಳಲ್ಲಿ ಬಹಳ ವರ್ಷದ ಹಿಂದೆಯೇ ಹಣ ಕಟ್ಟಿದ್ದವರಿಗೆ ಸೈಟು ಅಲಾಟ್ ಆಗಲಿದೆ. ಇನ್ನು ಫ್ಲ್ಯಾಟ್ ಖರೀದಿಗೆ ವರ್ಷಗಳ ಹಿಂದೆಯೇ ಹಣ ನೀಡಿ, ಅದಕ್ಕಾಗಿ ಕಾಯುತ್ತಿದ್ದೀರಿ ಅಂತಾದಲ್ಲಿ ಅದರ ಪೊಸಿಷನ್ ಸಿಗಲಿದೆ. ನಿಮ್ಮ ಸೋಷಿಯಲ್ ಕಾಂಟ್ಯಾಕ್ಟ್ ಹೆಚ್ಚಾಗಲಿದ್ದು, ಇದರಿಂದ ನಾನಾ ಅನುಕೂಲಗಳು ಆಗಲಿವೆ.
ಇದನ್ನೂ ಓದಿ: ಕನ್ಯಾ ರಾಶಿಯವರ ವಿಶ್ವಾವಸು ಸಂವತ್ಸರ ಯುಗಾದಿ ವರ್ಷ ಭವಿಷ್ಯದ ಫಲಾಫಲ ಇಲ್ಲಿದೆ
ರಾಹು (ಐದನೇ ಮನೆ), ಕೇತು (ಹನ್ನೊಂದನೇ ಮನೆ):
ಮಕ್ಕಳ ವಿಚಾರಕ್ಕೆ ಚಿಂತೆ ಕಾಡಲಿದೆ. ಕೆಲವು ವಿಚಾರಗಳಲ್ಲಿ ನೀವು ವಿಪರೀತ ಆತುರ ತೋರಿಸುವುದರಿಂದ ಗೌರವಕ್ಕೆ ಕುಂದು ತಂದುಕೊಳ್ಳುತ್ತೀರಿ. ಸರ್ಕಾರಕ್ಕೆ ಕೆಲವು ದಂಡ ಪಾವತಿ ಮಾಡಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ಇನ್ನು ದೇವತಾ ಕಾರ್ಯಗಳಿಗೆ ಹೆಚ್ಚಿನ ಖರ್ಚು ಮಾಡುವುದರಿಂದ ಮನಸ್ಸಿಗೆ ಸಂತೋಷ ಉಂಟಾಗುತ್ತದೆ. ದೇವಾಲಯ ನಿರ್ಮಾಣ, ಅನ್ನದಾನ, ಶಾಶ್ವತ ಸೇವೆಗಳಿಗಾಗಿ ನಿಮ್ಮ ಹಣದ ವಿನಿಯೋಗ ಆಗಲಿದ್ದು, ಅದರಿಂದ ಮಾನಸಿಕವಾಗಿ ನೆಮ್ಮದಿ ದೊರೆಯಲಿದೆ.
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ