Sagittarius Ugadi Horoscope 2025: ಧನುಸ್ಸು ರಾಶಿಯವರ ವಿಶ್ವಾವಸು ಸಂವತ್ಸರ ಯುಗಾದಿ ವರ್ಷ ಭವಿಷ್ಯದ ಫಲಾಫಲ ಇಲ್ಲಿದೆ
2025ರ ಮಾರ್ಚ್ 30ರ ಭಾನುವಾರದ ದಿನ ಚಾಂದ್ರಮಾನ ಯುಗಾದಿ. ವಿಶ್ವಾವಸು ಸಂವತ್ಸರ ಶುರುವಾಗುವ ದಿನ ಇದಾಗಿರುತ್ತದೆ. ಈ ಸಂವತ್ಸರದಲ್ಲಿ ಮೇಷದಿಂದ ಮೀನದ ತನಕ ಹನ್ನೆರಡು ರಾಶಿಗಳವರಿಗೆ ಶುಭಾಶುಭ ಫಲಗಳು ಏನಿವೆ ಎಂಬುದರ ವಿವರ ನೀಡಲಾಗಿದೆ. ಇದಕ್ಕಾಗಿ ಶನಿ, ಗುರು, ರಾಹು- ಕೇತು ಗ್ರಹಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಇದು ಗ್ರಹ ಗೋಚಾರದಲ್ಲಿ ತಿಳಿಸುವ ಭವಿಷ್ಯ. ವೈಯಕ್ತಿಕ ಜಾತಕದಲ್ಲಿನ ಗ್ರಹ ಸ್ಥಿತಿ ಹಾಗೂ ದಶಾಭುಕ್ತಿ ಇತ್ಯಾದಿ ವಿಚಾರಗಳನ್ನು ಸಹ ಪರಾಂಬರಿಸಬೇಕು. ಆದರೆ ಗೋಚಾರ ರೀತಿಯಾಗಿ ಗ್ರಹಗಳು ಬೀರುವಂಥ ಪ್ರಭಾವವು ಇದ್ದೇ ಇರುತ್ತದೆ.

ಮಾರ್ಚ್ ಇಪ್ಪತ್ತೊಂಬತ್ತನೇ ತಾರೀಕಿನಂದು ಶನಿ ಗ್ರಹ ಮೀನ ರಾಶಿಗೆ ಪ್ರವೇಶ ಮಾಡಿದೆ. ಮೇ 14ಕ್ಕೆ ಗುರು ಗ್ರಹವು ಮಿಥುನ ರಾಶಿಯನ್ನು ಪ್ರವೇಶಿಸುತ್ತದೆ. ಇನ್ನು ಮೇ ಹದಿನೆಂಟನೇ ತಾರೀಕಿನಂದು ರಾಹು ಗ್ರಹವು ಕುಂಭ ರಾಶಿಯಲ್ಲೂ ಹಾಗೂ ಕೇತು ಗ್ರಹವು ಸಿಂಹ ರಾಶಿಯಲ್ಲೂ ಸಂಚರಿಸುತ್ತದೆ. ಗುರು ಗ್ರಹ ಅಕ್ಟೋಬರ್ 18ನೇ ತಾರೀಕಿನಂದು ಕರ್ಕಾಟಕ ರಾಶಿಯನ್ನು ಪ್ರವೇಶಿಸಿ, ಡಿಸೆಂಬರ್ 5ನೇ ತಾರೀಕಿನಂದು ಮತ್ತೆ ಮಿಥುನ ರಾಶಿಯಲ್ಲಿ ಸಂಚರಿಸುತ್ತಾ ಸಂವತ್ಸರ ಪರ್ಯಂತವಾಗಿ ಅದೇ ರಾಶಿಯಲ್ಲಿ ಇರುತ್ತದೆ.
ಧನುಸ್ಸು ರಾಶಿಯವರ ಯುಗಾದಿ ವರ್ಷ ಭವಿಷ್ಯ:
ಶನಿ (ನಾಲ್ಕನೇ ಮನೆ ಸಂಚಾರ):
ತಾಯಿ ಅಥವಾ ಮಾತೃ ಸಮಾನರಾದವರ ಅನಾರೋಗ್ಯ ತೀವ್ರ ಆತಂಕವನ್ನು ಉಂಟು ಮಾಡಲಿದೆ. ಮನೆ ಅಥವಾ ಫ್ಲ್ಯಾಟ್/ಸೈಟು ಮಾರಾಟಕ್ಕೆ ಇಡುವಂಥ ಸನ್ನಿವೇಶ ಸೃಷ್ಟಿ ಆಗುತ್ತದೆ. ಗೊಂದಲದ ಕಾರಣಕ್ಕೋ ಅಥವಾ ಮದುವೆ ಮೊದಲಾದ ಶುಭ ಕಾರ್ಯಗಳಿಗೆ ಹಣ ಹೊಂದಿಸುವ ಕಾರಣಕ್ಕೆ ಅಥವಾ ಹೊಸದಾದ ವ್ಯಾಪಾರ- ವ್ಯವಹಾರವನ್ನು ಮಾಡುವುದಕ್ಕೆ ಅಥವಾ ಈಗಿರುವ ವ್ಯವಹಾರದ ವಿಸ್ತರಣೆ ಸಲುವಾಗಿ ಆಸ್ತಿಯನ್ನು ಮಾರಾಟಕ್ಕೆ ಇಡಲಿದ್ದೀರಿ. ನಿಮ್ಮಲ್ಲಿ ಕೆಲವರಿಗೆ ಬಾಯಿಗೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆ ತೀವ್ರವಾಗಲಿದೆ. ಇದು ಅರ್ಧಾಷ್ಟಮ ಶನಿಯಾದ್ದರಿಂದ ಅಷ್ಟಮ ಶನಿಯ ಪ್ರಭಾವ ಎಷ್ಟು ತೀಕ್ಷ್ಣವಾಗಿರುತ್ತದೋ ಅದರ ಅರ್ಧದಷ್ಟು ಸಮಸ್ಯೆಯನ್ನಾದರೂ ಅನುಭವಿಸುವಂತಾಗುತ್ತದೆ.
ಗುರು (ಏಳನೇ ಮನೆ- ಎಂಟನೇ ಮನೆ):
ನಿಮ್ಮಲ್ಲಿ ಯಾರು ವಿವಾಹ ವಯಸ್ಕರೋ ಅಂಥವರಿಗೆ ಸೂಕ್ತ ಸಂಬಂಧ ದೊರೆಯಲಿದೆ. ಪಾರ್ಟನರ್ ಷಿಪ್ ನಲ್ಲಿ ವ್ಯವಹಾರ- ವ್ಯಾಪಾರ ಮಾಡಬೇಕು ಎಂದೇನಾದರೂ ಅಂದುಕೊಂಡಲ್ಲಿ ಅದರಿಂದ ಲಾಭವಾಗಲಿದೆ. ನಿಮ್ಮಲ್ಲಿ ಕೆಲವರು ಈ ಅವಧಿಯಲ್ಲಿ ವಿಲಾಸಿ ಕಾರು- ಮನೆ ಖರೀದಿ ಮಾಡುವ ಯೋಗ ಇದೆ. ತಾಯಿಯ ಮನೆ ಕಡೆಯಿಂದ ಆಸ್ತಿ, ಹಣಕಾಸು ಬರುವಂಥ ಅವಕಾಶಗಳು ಇರುತ್ತವೆ. ಸಂತಾನಕ್ಕೆ ಪ್ರಯತ್ನ ಮಾಡುತ್ತಿರುವ ದಂಪತಿಗೆ ಮನಸ್ಸಿಗೆ ಸಂತೋಷ ಆಗುವಂಥ ಬೆಳವಣಿಗೆ ಆಗಲಿದೆ. ಅಕ್ಟೋಬರ್ ಹಾಗೂ ಡಿಸೆಂಬರ್ ಮಧ್ಯೆ ವಾಹನ ಚಾಲನೆಯಲ್ಲಿ ಎಚ್ಚರಿಕೆ ವಹಿಸಿ. ಅನಗತ್ಯ ಖರ್ಚುಗಳು ಮಾಡುವುದಕ್ಕೆ ಹೋಗಬೇಡಿ.
ಇದನ್ನೂ ಓದಿ: ವೃಶ್ಚಿಕ ರಾಶಿಯವರ ವಿಶ್ವಾವಸು ಸಂವತ್ಸರ ಯುಗಾದಿ ವರ್ಷ ಭವಿಷ್ಯದ ಫಲಾಫಲ ಇಲ್ಲಿದೆ
ರಾಹು (ಮೂರನೇ ಮನೆ), ಕೇತು (ಒಂಬತ್ತನೇ ಮನೆ):
ಸಹೋದರ- ಸಹೋದರಿ ಮಧ್ಯೆ ಆಸ್ತಿ ವ್ಯಾಜ್ಯಗಳು ಇದ್ದಲ್ಲಿ ಈ ಅವಧಿಯಲ್ಲಿ ಬಗೆಹರಿಯಲಿದೆ. ನಿಮ್ಮಲ್ಲಿ ಕೆಲವರಿಗೆ ದಿಢೀರ್ ಜನಪ್ರಿಯತೆ ದೊರೆಯಲಿದೆ. ಸಣ್ಣ ಮಟ್ಟದ್ದಾದರೂ ಭೂಮಿ ಖರೀದಿಯನ್ನು ಮಾಡುವ ಯೋಗ ಕಂಡುಬರಲಿದೆ. ಯಾರು ರಿಯಲ್ ಎಸ್ಟೇಟ್ ವ್ಯವಹಾರವನ್ನು ಮಾಡುತ್ತೀರಿ ಅಂಥವರಿಗೆ ಆದಾಯದ ಮೂಲ ಹಾಗೂ ಆದಾಯ ಎರಡೂ ಹೆಚ್ಚಳ ಆಗಲಿದೆ. ಇನ್ನು ನಿಮ್ಮಲ್ಲಿ ಯಾರು ಚಿನ್ನ, ಮನೆ ಪತ್ರ ಅಥವಾ ಸೈಟು ಪತ್ರ ಅಂತ ಅಡವಿಟ್ಟಿದ್ದೀರಿ ಅಂಥವರು ಸಾಲವನ್ನು ತೀರಿಸುವುದಕ್ಕೆ ಪ್ರಯತ್ನಿಸಿ. ಅಥವಾ ಬಡ್ಡಿಯನ್ನಾದರೂ ಪಾವತಿಸಿದರೆ ಉತ್ತಮ. ಇಲ್ಲದಿದ್ದರೆ ಅವು ಹರಾಜಿಗೆ ಬರುವಂಥ ಸಾಧ್ಯತೆ ಇದೆ.
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ