Venus- Ketu Conjunction: ಸಿಂಹ ರಾಶಿಯಲ್ಲಿ ಕೇತು- ಶುಕ್ರ ಸಂಯೋಗ, ಯಾವ ರಾಶಿಯ ಮೇಲೆ ಏನು ಪ್ರಭಾವ?
ಇದೇ ಸೆಪ್ಟೆಂಬರ್ 14ನೇ ತಾರೀಕು ಶುಕ್ರ ಗ್ರಹ ಸಿಂಹ ರಾಶಿಯನ್ನು ಪ್ರವೇಶಿಸುತ್ತಿದ್ದು, ಅಕ್ಟೋಬರ್ 9ನೇ ತಾರೀಕಿನ ತನಕ ಅದೇ ರಾಶಿಯಲ್ಲಿ ಇರಲಿದೆ. ಇನ್ನು ಈಗಾಗಲೇ ಸಿಂಹ ರಾಶಿಯಲ್ಲಿ ಇರುವಂಥ ಕೇತು ಗ್ರಹದ ಜೊತೆಗೆ ಶುಕ್ರ ಯುತಿಯಲ್ಲಿ ಇರುತ್ತದೆ. ಕೇತು ಗ್ರಹ ಅಂದರೆ ಭ್ರಮೆ, ಅಧ್ಯಾತ್ಮ ಇತ್ಯಾದಿ. ಇನ್ನು ಶುಕ್ರ ಸೌಂದರ್ಯ, ಲೌಕಿಕ ಸುಖಗಳ ಪ್ರತೀಕ. ಹೀಗೆ ಎರಡು ವಿರುದ್ಧ ಆಲೋಚನೆಗಳು ರವಿ ಗ್ರಹದ ಆಧಿಪತ್ಯ ಇರುವಂಥ ಸಿಂಹ ರಾಶಿಯಲ್ಲಿ ಇರುವಾಗ ಯಾವ ರಾಶಿಯವರಿಗೆ ಏನು ಫಲ ನೀಡುತ್ತವೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

ಸಿಂಹ ರಾಶಿಯಲ್ಲಿ ಶುಕ್ರ- ಕೇತು (Venus- Ketu) ಗ್ರಹಗಳ ಯುತಿ ಆಗುತ್ತದೆ. ಹೀಗೆ ಆಗುವಾಗ ‘ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೆಯುತ್ತದೆ’ ಎಂಬ ಗಾದೆ ಸರಿಯಾಗಿ ಹೊಂದುವಂಥ ಸನ್ನಿವೇಶ ಇದಾಗಿರುತ್ತದೆ. ಏಕೆಂದರೆ, ಕೇತು ಭ್ರಮೆಯನ್ನು ಸೃಷ್ಟಿ ಮಾಡುವಂಥ ಗ್ರಹ, ಶುಕ್ರ ಪ್ರಾಪಂಚಿಕ ಸುಖಗಳನ್ನು ಮತ್ತು ಸೌಂದರ್ಯವನ್ನು ಪ್ರತಿನಿಧಿಸುವ ಗ್ರಹ. ಹೀಗೆ ಎರಡು ವಿರುದ್ಧ ಆಲೋಚನೆಗಳು ಒಂದು ಸಮಯಕ್ಕೆ ನಿಂತು ಎಳೆದಾಡಿದರೆ ಎಂಥ ಸನ್ನಿವೇಶ ಸೃಷ್ಟಿಯಾಗುತ್ತದೆಯೋ ಊಹಿಸಿಕೊಳ್ಳಬಹುದು. ಪ್ರಬಲವಾದ ಶುಕ್ರನು ಕೇತುವಿನ ನಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಅದೇ ರೀತಿ ಸ್ವಲ್ಪ ಮಟ್ಟಿಗೆ ಕೇತು ನೆಗೆಟಿವ್ ಆದ ಫಲಿತ ನೀಡುವಂತೆ ಇದ್ದರೂ ದುರ್ಬಲ ಶುಕ್ರನಿಂದ ನಕಾರಾತ್ಮಕ ಪರಿಣಾಮ ಇರುತ್ತದೆ. ಈ ಗ್ರಹ ಸ್ಥಿತಿಯು ಮೇಷದಿಂದ ಮೀನದ ತನಕ ಯಾವ ರಾಶಿಯವರ ಮೇಲೆ ಏನು ಪ್ರಭಾವ ಬೀರುತ್ತದೆ ಎಂಬುದರ ಕಡೆಗೆ ನೋಡೋಣ.
ಮೇಷ:
ಈ ಸ್ಥಾನದಲ್ಲಿ ಶುಕ್ರ- ಕೇತು ಯುತಿ ಆಗುವುದರಿಂದ ನಿಮ್ಮ ರಾಶಿಯವರಿಗೆ ಸಾಮಾನ್ಯವಾಗಿ ಶುಕ್ರ ನೀಡುವ ಫಲಗಳಿಗೆ ಹೆಚ್ಚು ಅಡ್ಡಿಯಾಗುವುದಿಲ್ಲ. ಇನ್ನು ಕೇತು ಗ್ರಹವು ಶುಕ್ರ ನೀಡುವ ಫಲಗಳನ್ನು ಬೆಂಬಲಿಸುತ್ತದೆ ಮತ್ತು ಪೂರಕವಾಗಿರುತ್ತದೆ. ಬರವಣಿಗೆ ಕೌಶಲ, ಸಾರ್ವಜನಿಕ ಭಾಷಣ, ಉಪನ್ಯಾಸ ಮತ್ತು ಬೋಧನಾ ವೃತ್ತಿಯಲ್ಲಿ ಇರುವವರ ಪ್ರತಿಭೆಗೆ ಮನ್ನಣೆ ಸಿಗುತ್ತದೆ ಮತ್ತು ಅವುಗಳ ಬೆಳವಣಿಗೆಗೆ ಉತ್ತಮ ಅವಕಾಶಗಳನ್ನು ಒದಗಿಸುತ್ತದೆ. ಪ್ರಣಯ ವಿಚಾರಗಳು ಸಂತುಷ್ಟವಾಗಿರುತ್ತವೆ. ವೈದ್ಯಕೀಯ/ಸಂಗೀತ/ಲಲಿತಕಲೆಗಳ ಅಧ್ಯಯನ ಕೋರ್ಸ್‌ಗಳನ್ನು ತೆಗೆದುಕೊಂಡಿರುವವರಿಗೆ ಕೇತುವಿನಿಂದ ಸಂಪೂರ್ಣ ಬೆಂಬಲ ಸಿಗುತ್ತದೆ. ಸಂಗೀತ, ನೃತ್ಯ, ಚಿತ್ರಕಲೆ, ನಟನೆ, ಶಿಲ್ಪಕಲೆ, ವಾಸ್ತುಶಿಲ್ಪ, ಛಾಯಾಗ್ರಹಣದಂತಹ ವೃತ್ತಿ- ಉದ್ಯೋಗದಲ್ಲಿ ಇರುವವರಿಗೆ ಸಹ ಇದು ಉತ್ತಮ ಸಮಯ. ಗರ್ಭ ಧರಿಸಿದ ಸ್ತ್ರೀಯರು ಎಚ್ಚರಿಕೆಯಿಂದ ಇರಬೇಕು. ಒಂದು ವೇಳೆ ಸಂಗಾತಿ ಗರ್ಭ ಧರಿಸಿದ್ದಾರೆ ಎಂದಾದಲ್ಲಿ ಆಗ ಸಹ ಅವರ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಬೇಕು.
ವೃಷಭ:
ಈ ಯುತಿಯು ತಾಯಿ ಜೊತೆಗಿನ ಬಾಂಧವ್ಯವನ್ನು ಇನ್ನೂ ಹೆಚ್ಚು ಮಾಡುತ್ತದೆ. ಪಕ್ಕೆಲುಬುಗಳಲ್ಲಿ ಅಥವಾ ಹೊಟ್ಟೆಯ ಮೇಲ್ಭಾಗದಲ್ಲಿ ನೋವು ಕಾಣಿಸಿಕೊಳ್ಳಬಹುದು ಅಥವಾ ಜೀರ್ಣಾಂಗದ ಸಮಸ್ಯೆ, ಹೃದಯಕ್ಕೆ ಸಂಬಂಧಿಸಿದ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಆಗಬಹುದು. ಈ ಅವಧಿಯಲ್ಲಿ ಮನೆ ಅಥವಾ ಸ್ವಂತ ಕಚೇರಿಗೆ ಅಲಂಕಾರಿಕ ವಸ್ತುಗಳನ್ನು ಖರೀದಿಸಿ ತರುವುದಕ್ಕೆ ಹೆಚ್ಚು ಖರ್ಚಾಗಲಿದೆ. ಇನ್ನು ಹೊಸ ಬಟ್ಟೆಗಳನ್ನು, ಪರ್ ಫ್ಯೂಮ್ ಖರೀದಿಸಲು ಹೆಚ್ಚಿನ ವೆಚ್ಚ ಆಗಲಿದೆ. ಇನ್ನು ನಿಮ್ಮಲ್ಲಿ ಕೆಲವರು ನೃತ್ಯ ಮತ್ತು ಸಂಗೀತ ಅಥವಾ ಚಿತ್ರಕಲೆ ಅಥವಾ ನಟನಾ ತರಗತಿಗಳಿಗೆ ಸೇರುವ ಯೋಗ ಇದೆ.
ಮಿಥುನ:
ನಿಮ್ಮ ಸ್ವಭಾವದಲ್ಲಿ ಏನಾದರೂ ಕಠೋರತೆ, ಕಠಿಣ ವರ್ತನೆ, ಎಲ್ಲ ಕೆಲಸವನ್ನು ಸ್ವತಃ ಪರೀಕ್ಷಿಸುವಂತೆ ಇದ್ದವರು ಈ ಅವಧಿಯಲ್ಲಿ ಬದಲಾಗುತ್ತಾರೆ. ಇತರರ ಮೇಲೆ ನಂಬಿಕೆ ಇಡುವುದಕ್ಕೆ ಆರಂಭಿಸುತ್ತಾರೆ. ಆದರೆ ಮಕ್ಕಳ ಉದ್ಯೋಗ, ಮದುವೆ, ಶಿಕ್ಷಣದ ವಿಚಾರದಲ್ಲಿ ಚಿಂತೆ- ಆತಂಕಗಳು ಕಾಡುತ್ತವೆ. ಈ ಅವಧಿಯಲ್ಲಿ ನಿಮಗೇನಾದರೂ ಅನಾರೋಗ್ಯ ಕಾಡುತ್ತಿದ್ದಲ್ಲಿ ಆ ಸಮಸ್ಯೆಯನ್ನು ವಿಪರೀತ ದೊಡ್ಡದಾಗಿ, ಅತಿಯಾಗಿ ಊಹಿಸಲು ಆರಂಭಿಸುತ್ತೀರಿ. ತುಂಬ ಹೆದರುತ್ತೀರಿ.
ಕರ್ಕಾಟಕ:
ಈ ಯುತಿಯಿಂದಾಗಿ ಆರ್ಥಿಕ ಲಾಭಗಳು ದೊರೆಯುತ್ತವೆ. ಆದರೆ ಅದರ ಪ್ರಮಾಣ ಸ್ವಲ್ಪ ಮಟ್ಟಿಗೆ ಕಡಿಮೆ. ದಾಂಪತ್ಯ ಜೀವನ ಉತ್ತಮವಾಗಿರುತ್ತದೆ. ಪ್ರೇಮಿಗಳಿಗೂ ಸಂತಸದ ಸಮಯ. ನಿಮಗೆ ದೊರೆಯಬೇಕಾದ ಲಾಭದಲ್ಲಿ ಯಾವುದೇ ಅಡೆತಡೆ ಆಗುವುದಿಲ್ಲ. ಆದರೆ ಸಂಗಾತಿಯ ಆರೋಗ್ಯ ವಿಚಾರದಲ್ಲಿ ಜಾಗ್ರತೆ ಅಗತ್ಯ. ಖಾರ ಇರುವಂಥ ಪದಾರ್ಥಗಳ ಸೇವನೆ ಕಡಿಮೆ ಮಾಡಬೇಕು. ಮನೆ ಅಥವಾ ಸ್ವಂತ ಕಚೇರಿ ಇರುವವರು ರೆನೊವೇಷನ್ ಗೆ ಮುಂದಾಗುವ ಸಾಧ್ಯತೆ ಇದೆ. ಪೀಠೋಪಕರಣಗಳು, ಕರ್ಟನ್ಸ್, ವಿವಿಧ ಅಲಂಕಾರಿಕ ವಸ್ತುಗಳನ್ನು ಕೊಳ್ಳುವ ಯೋಗ ಇದೆ.
ಸಿಂಹ:
ಸ್ವಚ್ಛತೆ ಬಗ್ಗೆ ವಿಪರೀತ ಕಾಳಜಿ, ಫ್ಯಾಷನ್, ಅಲಂಕಾರಕ್ಕೆ ಆದ್ಯತೆ ಜಾಸ್ತಿಯಾಗುತ್ತದೆ. ಇವತ್ತಿನ ಟ್ರೆಂಡ್ ಗೆ ತಕ್ಕಂತೆ ಇರಬೇಕು ಎಂಬ ಆಲೋಚನೆ ಹರಳುಗಟ್ಟುತ್ತದೆ. ನಿಮ್ಮ ಬುದ್ಧಿವಂತಿಕೆ ಇತರರಿಗೆ ಮನದಟ್ಟಾಗುತ್ತದೆ. ಇಲ್ಲಿಯವರೆಗೆ ಆಲೋಚನೆ ಮತ್ತು ಕೆಲಸ- ಕಾರ್ಯಗಳಲ್ಲಿ ಗೊಂದಲ ಇದ್ದಲ್ಲಿ ಸ್ಪಷ್ಟತೆ ದೊರೆಯುತ್ತದೆ. ನೃತ್ಯ, ನಾಟಕ, ಸಂಗೀತ, ಚಿತ್ರಕಲೆ, ಛಾಯಾಗ್ರಹಣ, ಲ್ಯಾಂಡ್ ಸ್ಕೇಪಿಂಗ್, ಚಲನಚಿತ್ರ ನಿರ್ಮಾಣ, ಧಾರಾವಾಹಿಗಳು ಇಂಥ ವೃತ್ತಿಯಲ್ಲಿ ಇರುವವರಿಗೆ ಉತ್ತಮ ಸಮಯವಾಗಿರುತ್ತದೆ.
ಕನ್ಯಾ:
ಮೇಲಿಂದ ಮೇಲೆ ಅನಾರೋಗ್ಯ ಉಂಟಾಗುತ್ತದೆ. ಗಂಟಲು ನೋವು, ಹೊಟ್ಟೆ ನೋವು, ಎದೆ ನೋವು ಇತ್ಯಾದಿಗಳು ಕಾಣಿಸಿಕೊಳ್ಳಬಹುದು. ಸಾಲದ ಹೊರೆ ಹೆಚ್ಚಾಗಲಿದೆ, ಆದರೆ ಅದು ನಿಭಾಯಿಸುವ ಮಟ್ಟದಲ್ಲಿಯೇ ಇರಲಿದೆ.
ತುಲಾ:
ನೀವು ಮಾಡಬೇಕಾದ ಕೆಲಸ- ಕಾರ್ಯಗಳ ಬಗ್ಗೆ ಪದೇಪದೇ ನೆನಪುಗಳು ಕಾಡುತ್ತವೆ. ಈ ಹಿಂದೆ ನೀವು ಮಾಡಿದ ಕೆಲಸ- ಕಾರ್ಯಗಳು ಸಹ ವಿಪರೀತ ನೆನಪಾಗುತ್ತವೆ. ಇನ್ನು ಮಕ್ಕಳಿದ್ದಲ್ಲಿ ಅವರ ಅಧ್ಯಯನ- ವ್ಯಾಸಂಗಕ್ಕೆ ಅನುಕೂಲಗಳು ಆಗುತ್ತವೆ. ಒಂದು ವೇಳೆ ತಾಯಿ ಅಥವಾ ಮಲತಾಯಿ ಜೊತೆಗೆ ಅಭಿಪ್ರಾಯ ಭೇದ, ಸಮಸ್ಯೆಗಳು ಇದ್ದಲ್ಲಿ ಅದನ್ನು ಬಗೆಹರಿಸಿಕೊಳ್ಳಲು ಸಾಧ್ಯವಾಗುತ್ತದೆ. ಅಂದ ಹಾಗೆ ಈ ಸ್ಥಾನದಲ್ಲಿ ವಿಪರೀತ ನೆಗೆಟಿವ್ ಫಲಿತಾಂಶಗಳು ಇರುವುದಿಲ್ಲ. ಆದರೆ ಕೆಲವು ಕೆಲಸಗಳ ಆರಂಭಿಕ ಹಂತದಲ್ಲಿ ಮಾತ್ರ ಒತ್ತಡ ಇರುತ್ತದೆ.
ವೃಶ್ಚಿಕ:
ನಿಮ್ಮ ಪಾಲಿಗೆ ಶುಕ್ರ- ಕೇತು ಯುತಿ ಸಹಾಯಕವಾಗಿರುತ್ತದೆ. ಲಲಿತಕಲೆ, ನಟನೆ, ಸಂಗೀತ, ಚಿತ್ರಕಲೆ, ಛಾಯಾಗ್ರಹಣ, ಪೌರೋಹಿತ್ಯ, ವಾಸ್ತುಶಿಲ್ಪ, ಶಿಲ್ಪಕಲೆ, ವೈದ್ಯಕೀಯ, ಮ್ಯಾನುಫ್ಯಾಕ್ಚರಿಂಗ್ ಉದ್ಯಮ, ಫಾರ್ಮಸಿ ಇಂಥ ವೃತ್ತಿಯಲ್ಲಿ ಇರುವವರಿಗೆ ಅಮೋಘ ಯಶಸ್ಸು ದೊರೆಯುತ್ತದೆ. ಇದರ ಜೊತೆಗೆ ಪ್ರಚಾರ ಮತ್ತು ಜನಪ್ರಿಯತೆಯೂ ಸಿಗುತ್ತದೆ. ಕೌಟುಂಬಿಕ ಸಂತೋಷ ಹೆಚ್ಚಾಗುತ್ತದೆ. ವಿವಾದಗಳಲ್ಲಿ ಸಿಲುಕದಂತೆ ವಿವೇಕ- ವಿವೇಚನೆ ಇರುತ್ತದೆ. ಆಸ್ತಿ ಖರೀದಿ ಮಾಡಬೇಕು ಎಂದಿರುವವರಿಗೆ ಈ ತನಕ ಅಡೆತಡೆಗಳು ಇದ್ದಲ್ಲಿ ಅದು ನಿವಾರಣೆ ಆಗುತ್ತದೆ. ಸಾರ್ವಜನಿಕ ಜೀವನದಲ್ಲಿ ಈಗಾಗಲೇ ಇರುವವರು ದಾನ- ಪರೋಪಕಾರ ಕೆಲಸಗಳನ್ನು ಹೆಚ್ಚು ಮಾಡುತ್ತಾರೆ.
ಧನುಸ್ಸು:
ನಿಮಗೆ ಇರುವಂಥ ಬಾಹ್ಯ ತೊಂದರೆಗಳಿಂದ ರಕ್ಷಣೆ ದೊರೆಯುತ್ತದೆ. ಆದರೆ ಕುಟುಂಬದ ಒಳಗೆ ಅಥವಾ ಸ್ನೇಹಿತರ ವಲಯದಿಂದ ಇರುವ ಆತಂಕಗಳಿಂದ ಎಚ್ಚರಿಕೆ ವಹಿಸಬೇಕು. ಇನ್ನು ನಿಮ್ಮ ವರ್ತನೆಯಲ್ಲಿ ವಿಪರೀತ ಏರುಪೇರುಗಳು ಇರುತ್ತವೆ. ಮಾಧ್ಯಮಗಳು, ಕಲೆಗೆ ಸಂಬಂಧಿಸಿದ ವೃತ್ತಿಗೆ ಸಂಬಂಧಿಸಿದಂತೆ ಅನುಕೂಲಗಳು ಆಗುತ್ತವೆ. ಆದರೆ ಹಣಕಾಸಿನ ವಿಚಾರಗಳಲ್ಲಿ ನಿರ್ಲಕ್ಷ್ಯ ಬೇಡ. ನೀವೇನಾದರೂ ಸಾಹಿತಿಗಳು- ಲೇಖಕರು ಆಗಿದ್ದಲ್ಲಿ ನಿಮ್ಮ ಶ್ರಮದ ಪಾಲು ಇತರರು ಹೊಡೆದುಕೊಳ್ಳುವ ಸಾಧ್ಯತೆ ಇರುತ್ತದೆ. ನಿಮ್ಮಿಂದಲೇ ತಪ್ಪಾಗಿದ್ದಲ್ಲಿ ಸೋದರ ಸಂಬಂಧಿಗಳು ಅದನ್ನು ಕ್ಷಮಿಸಲಿದ್ದಾರೆ. ಮಹಿಳೆಯರಿಗೆ ಕತ್ತಿನಿಂದ ಕೆಳಭಾಗಕ್ಕೆ ಹೊಟ್ಟೆಯ ತನಕ ನಾನಾ ಬಗೆಯ ನೋವುಗಳು ಕಾಡುತ್ತವೆ. ನೀವು ಈಗಾಗಲೇ ಸಾಲ ನೀಡಿದ್ದಲ್ಲಿ ಅದನ್ನು ವಸೂಲಿ ಮಾಡುವುದಕ್ಕೆ ಪ್ರಯತ್ನಿಸಿದಲ್ಲಿ ಸಾಧ್ಯವಾಗುತ್ತದೆ. ಯಾರೇ ಬ್ಲ್ಯಾಕ್ ಮೇಲ್ ಮಾಡಿದಲ್ಲಿ ಧೈರ್ಯವಾಗಿ ಎದುರಿಸಿ.
ಇದನ್ನೂ ಓದಿ: ಸೆ.15ರಿಂದ 21ರವರೆಗೆ ಈ ರಾಶಿಗಳಲ್ಲಿ ಮಹತ್ವದ ಬದಲಾವಣೆ
ಮಕರ:
ನಿಮ್ಮ ದಾಖಲೆ, ಪತ್ರಗಳು ಅಥವಾ ನಿಮ್ಮದೇ ಬರಹಗಳು ಇದ್ದಲ್ಲಿ ಅವುಗಳನ್ನು ಜೋಪಾನವಾಗಿ ನೋಡಿಕೊಳ್ಳಿ. ನಿಮ್ಮ ಪ್ರೇಮ ಜೀವನದ ಬಗ್ಗೆ ಪುಕಾರು ಅಥವಾ ಅಪಪ್ರಚಾರ ಆಗುವ ಸಾಧ್ಯತೆ ಇರುತ್ತದೆ. ಗುಪ್ತರೋಗಗಳು ಇದ್ದಲ್ಲಿ ಅದರ ಚಿಕಿತ್ಸೆಗೆ ಆದ್ಯತೆ ನೀಡುವುದು ಮುಖ್ಯ. ಇನ್ನು ನೈತಿಕ ಮೌಲ್ಯದ ಬಗೆಗೆ ನೀವು ಇನ್ನಷ್ಟು ಗಟ್ಟಿ ಆಗಲಿದ್ದಾರೆ. ದಂಪತಿ ಮಧ್ಯೆ ಲೈಂಗಿಕ ವಿಚಾರದಲ್ಲಿ ಅಸಮಾಧಾನ- ಮನಸ್ತಾಪ ಆಗಬಹುದು. ಇನ್ನು ಪ್ರಾಣಿಗಳ ಕಡಿತದಿಂದ ತೊಂದರೆ ಆಗುವ ಸಾಧ್ಯತೆ ಇದೆ.
ಕುಂಭ:
ವಿವಾಹಿತ ದಂಪತಿ ಮಧ್ಯೆ ಸಾಮರಸ್ಯ, ಸಂತೋಷ ಹೆಚ್ಚಾಗುತ್ತದೆ. ಭಿನ್ನಾಭಿಪ್ರಾಯಗಳು ಇದ್ದಲ್ಲಿ ಅನುಭವ ಮತ್ತು ತಾಳ್ಮೆಯಿಂದ ಬಗೆಹರಿಸಿಕೊಳ್ಳುತ್ತಾರೆ. ಪ್ರೇಮಿಗಳ ಮಧ್ಯೆ ಬಂಧ ಮತ್ತಷ್ಟು ಗಟ್ಟಿಯಾಗುತ್ತದೆ. ವಿವಾಹ ವಯಸ್ಕರಾಗಿದ್ದು, ಸೂಕ್ತ ವೈವಾಹಿಕ ಸಂಬಂಧದ ಹುಡುಕಾಟದಲ್ಲಿ ಇದ್ದರೆ ಮನಸ್ಸಿಗೆ ಒಪ್ಪುವಂಥವರು ದೊರೆಯುತ್ತಾರೆ. ಮಹಿಳೆಯರಿಗೆ ಉದ್ಯೋಗ ಸ್ಥಳದಲ್ಲಿ ಅತ್ಯುತ್ತಮ ಪ್ರಗತಿ ಇರುತ್ತದೆ.
ಮೀನ:
ಸೋಷಿಯಲ್ ಮೀಡಿಯಾದಲ್ಲಿಯೋ ಅಥವಾ ನಿಮ್ಮದೇ ಬ್ಲಾಗ್ ಅಥವಾ ವೆಬ್ ಸೈಟ್ ಗಳು ಇದ್ದಲ್ಲಿ ಅಲ್ಲಿ ಏನನ್ನು ಪೋಸ್ಟ್ ಮಾಡುತ್ತೀರಿ ಎಂಬ ವಿಷಯದಲ್ಲಿ ಜಾಗ್ರತೆಯಿಂದ ಇರಬೇಕು. ಹಣಕಾಸಿನ ವಿಷಯದಲ್ಲಿ ಕೋರ್ಟ್-ಕಚೇರಿ, ಪೊಲೀಸ್ ಸ್ಟೇಷನ್ ಅಲೆದಾಡುವ ಸನ್ನಿವೇಶ ಎದುರಾಗಬಹುದು. ಮಕ್ಕಳು ಕೇಳುವಂಥ ವಸ್ತುಗಳನ್ನು ಕೊಡಿಸುವುದು ಕಷ್ಟವಾಗುತ್ತದೆ. ದಂಪತಿ ಮಧ್ಯೆ ಅನುಮಾನ ಮೂಡುವ ಸನ್ನಿವೇಶಗಳು ಸೃಷ್ಟಿಯಾಗಬಹುದು, ಈ ಬಗ್ಗೆ ಜಾಗ್ರತೆಯಿಂದ ಇರಬೇಕು. ಮೂರನೇ ವ್ಯಕ್ತಿ ನಿಮ್ಮ ಸಂಸಾರದಲ್ಲಿ ಮೂಗು ತೂರಿಸದಂತೆ ನೋಡಿಕೊಳ್ಳಿ. ಇನ್ನು ಮೆಟ್ಟಿಲು ಹತ್ತುವಾಗ- ಇಳಿಯುವಾಗ, ತೇವ ಇರುವಂಥ ಸ್ಥಳಗಳಲ್ಲಿ ಓಡಾಡುವಾಗ ಎಚ್ಚರಿಕೆಯನ್ನು ವಹಿಸಿ. ಬಿದ್ದು ಗಾಯವಾಗುವ ಸಾಧ್ಯತೆ ಇರುತ್ತದೆ.
-ಸ್ವಾತಿ ಎನ್.ಕೆ.
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




