
ಅಕ್ಟೋಬರ್ 04ರಿಂದ ಅಕ್ಟೋಬರ್ 19ರವರೆಗಿನ ಅವಧಿಯಲ್ಲಿ ಉದ್ಯೋಗದಲ್ಲಿ ಯೋಚನೆ, ತಾಳ್ಮೆಯ ಪರೀಕ್ಷೆ, ವೃತ್ತಿಪರತೆ, ಶ್ರಮದ ಫಲಕ್ಕೆ ನಿರೀಕ್ಷೆ, ಕಾರ್ಯ ಹೆಚ್ಚಾಗುವ ತಲೆಬಿಸಿ, ಉತ್ಪನ್ನದ ಪರಿಷ್ಕಾರ ಇವೆಲ್ಲ ವಾರದ ಉದ್ಯೋಗ ವಿಶೇಷ.
ಮೇಷ ರಾಶಿ:
ಈ ವಾರ ಉದ್ಯೋಗ ಕ್ಷೇತ್ರದಲ್ಲಿ ಹೊಸ ಅವಕಾಶಗಳ ಬಾಗಿಲು ತೆರೆಯಬಹುದು. ಬಹುಕಾಲದಿಂದ ನಿರೀಕ್ಷಿಸುತ್ತಿದ್ದ ಸಂದರ್ಶನ ಅಥವಾ ಮಾತುಕತೆ ಮುಂದುವರಿಯುವ ಸಾಧ್ಯತೆ ಇದೆ. ಕೆಲಸದ ಒತ್ತಡ ಹೆಚ್ಚಾದರೂ ನಿಮ್ಮ ಸಾಮರ್ಥ್ಯವನ್ನು ತೋರಿಸಲು ಅವಕಾಶ ದೊರೆಯುತ್ತದೆ. ಮೇಲಧಿಕಾರಿಗಳೊಂದಿಗೆ ಮಾತನಾಡುವಾಗ ಆತುರ ಬೇಡ. ಉದ್ಯೋಗ ಬದಲಾವಣೆಯ ಯೋಚನೆ ಇದ್ದರೆ ನಿರ್ಧಾರಕ್ಕೂ ಮುನ್ನ ಎಲ್ಲ ಅಂಶಗಳನ್ನು ಪರಿಶೀಲಿಸಿ.
ವೃಷಭ ರಾಶಿ:
ಕೆಲಸದಲ್ಲಿ ಸ್ಥಿರತೆ ಕಂಡುಬರುತ್ತದೆ. ಹಿಂದೆ ಮಾಡಿದ ಪರಿಶ್ರಮಕ್ಕೆ ಮೆಚ್ಚುಗೆ ಅಥವಾ ಜವಾಬ್ದಾರಿ ಹೆಚ್ಚಾಗುವ ಸಾಧ್ಯತೆ ಇದೆ. ಹೊಸ ಕಾರ್ಯವೊಂದನ್ನು ವಹಿಸಿಕೊಳ್ಳಬೇಕಾಗಬಹುದು. ಸಹೋದ್ಯೋಗಿಗಳ ಸಹಕಾರ ದೊರೆಯುತ್ತದೆ. ಆದರೆ ಸಣ್ಣ ವಿಷಯಗಳನ್ನು ದೊಡ್ಡದಾಗಿ ಮಾಡಿಕೊಳ್ಳುವುದರಿಂದ ಕೆಲಸದ ವಾತಾವರಣದಲ್ಲಿ ಅಸಮಾಧಾನ ಉಂಟಾಗಬಹುದು. ತಾಳ್ಮೆಯಿಂದ ನಡೆದುಕೊಂಡರೆ ವಾರ ಅನುಕೂಲಕರವಾಗಿರುತ್ತದೆ.
ಮಿಥುನ ರಾಶಿ:
ಉದ್ಯೋಗ ಹುಡುಕುತ್ತಿರುವವರಿಗೆ ಹೊಸ ಸಂಪರ್ಕಗಳಿಂದ ಅವಕಾಶ ದೊರೆಯಬಹುದು. ದೂರದ ಸ್ಥಳ ಅಥವಾ ಬೇರೆ ಸಂಸ್ಥೆಯಿಂದ ಬಂದ ಮಾಹಿತಿಯು ಗಮನ ಸೆಳೆಯಬಹುದು. ಈಗಾಗಲೇ ಉದ್ಯೋಗದಲ್ಲಿರುವವರು ಹೊಸ ಯೋಜನೆಯಲ್ಲಿ ತಮ್ಮ ಬುದ್ಧಿವಂತಿಕೆಯನ್ನು ಬಳಸಬೇಕಾಗುತ್ತದೆ. ದಾಖಲೆ, ಒಪ್ಪಂದ ಅಥವಾ ಕಚೇರಿ ವ್ಯವಹಾರಗಳಲ್ಲಿ ಎಚ್ಚರಿಕೆ ಅಗತ್ಯ. ಮಾತಿನ ಚಾತುರ್ಯ ನಿಮ್ಮ ಕೆಲಸಕ್ಕೆ ನೆರವಾಗಲಿದೆ.
ಕರ್ಕಾಟಕ ರಾಶಿ:
ಕೆಲಸದ ಸ್ಥಳದಲ್ಲಿ ಜವಾಬ್ದಾರಿಗಳು ಹೆಚ್ಚಾಗಬಹುದು. ಆರಂಭದಲ್ಲಿ ಅದು ಒತ್ತಡವೆನಿಸಿದರೂ ಮುಂದಿನ ಬೆಳವಣಿಗೆಗೆ ಇದು ಸಹಾಯಕವಾಗಬಹುದು. ಮೇಲಧಿಕಾರಿಗಳ ಗಮನ ನಿಮ್ಮ ಕೆಲಸದತ್ತ ಬೀಳುವ ಸಾಧ್ಯತೆ ಇದೆ. ಉದ್ಯೋಗ ಬದಲಾವಣೆಗೆ ಪ್ರಯತ್ನಿಸುವವರು ಹಳೆಯ ಪರಿಚಯಗಳಿಂದ ಮಾಹಿತಿ ಪಡೆಯಬಹುದು. ಭಾವನಾತ್ಮಕವಾಗಿ ಪ್ರತಿಕ್ರಿಯಿಸುವ ಬದಲು ವೃತ್ತಿಪರತೆಯನ್ನು ಕಾಪಾಡಿಕೊಳ್ಳುವುದು ಒಳಿತು.
ಸಿಂಹ ರಾಶಿ:
ಅಧಿಕಾರ ಮತ್ತು ನಾಯಕತ್ವದ ಗುಣಗಳು ಈ ವಾರ ಸ್ಪಷ್ಟವಾಗಿ ಹೊರಹೊಮ್ಮುತ್ತವೆ. ಪ್ರಮುಖ ಕೆಲಸವೊಂದನ್ನು ಮುನ್ನಡೆಸುವ ಅವಕಾಶ ಸಿಗಬಹುದು. ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ ನಿರೀಕ್ಷಿತ ಉತ್ತರ ದೊರೆಯುವ ಸಾಧ್ಯತೆ ಇದೆ. ಆದರೆ ಸಹೋದ್ಯೋಗಿಗಳೊಂದಿಗೆ ಅಧಿಕಾರದ ವಿಚಾರದಲ್ಲಿ ಅನಗತ್ಯ ಘರ್ಷಣೆ ಬೇಡ. ನಿಮ್ಮ ಸಾಧನೆಗಳನ್ನು ಸ್ಪಷ್ಟವಾಗಿ ದಾಖಲಿಸಿಕೊಂಡರೆ ಮುಂದಿನ ಅವಕಾಶಗಳಲ್ಲಿ ಪ್ರಯೋಜನವಾಗುತ್ತದೆ.
ಕನ್ಯಾ ರಾಶಿ:
ಕೆಲಸದಲ್ಲಿ ಸೂಕ್ಷ್ಮತೆ ಮತ್ತು ಯೋಜನೆ ಮುಖ್ಯವಾಗುವ ವಾರ. ತಪ್ಪುಗಳನ್ನು ಸರಿಪಡಿಸುವ ಅವಕಾಶ ಸಿಗುತ್ತದೆ. ಹೊಸ ಕೌಶಲ್ಯ ಕಲಿಯುವ ಅಥವಾ ತರಬೇತಿಗೆ ಸೇರುವ ಸಂದರ್ಭ ಬರಬಹುದು. ಉದ್ಯೋಗ ಬದಲಾವಣೆಯ ಪ್ರಯತ್ನದಲ್ಲಿ ನಿಧಾನಗತಿಯ ಬೆಳವಣಿಗೆ ಕಂಡರೂ ಸಂಪೂರ್ಣ ನಿರಾಶರಾಗಬೇಕಿಲ್ಲ. ಕಚೇರಿ ದಾಖಲೆಗಳು ಮತ್ತು ಸಮಯಮಿತಿಯ ಕೆಲಸಗಳಲ್ಲಿ ವಿಶೇಷ ಗಮನ ಅಗತ್ಯ.
ತುಲಾ ರಾಶಿ:
ವೃತ್ತಿಜೀವನದಲ್ಲಿ ಹೊಸ ಸಂಪರ್ಕಗಳು ಮಹತ್ವ ಪಡೆಯಬಹುದು. ಸಹೋದ್ಯೋಗಿ ಅಥವಾ ಪರಿಚಿತ ವ್ಯಕ್ತಿಯ ಮೂಲಕ ಉದ್ಯೋಗದ ಮಾಹಿತಿ ದೊರೆಯುವ ಸಾಧ್ಯತೆ ಇದೆ. ಸಂದರ್ಶನ ಎದುರಿಸುವವರು ಆತ್ಮವಿಶ್ವಾಸದಿಂದ ಮಾತನಾಡಬೇಕು. ಈಗಿರುವ ಕೆಲಸದಲ್ಲಿ ಹೊಸ ಜವಾಬ್ದಾರಿ ಬರಬಹುದು. ಕೆಲಸ ಮತ್ತು ವೈಯಕ್ತಿಕ ವಿಚಾರಗಳನ್ನು ಬೆರೆಸಿಕೊಳ್ಳದೆ ಸಮತೋಲನದಿಂದ ನಡೆದುಕೊಂಡರೆ ಉತ್ತಮ ಫಲಿತಾಂಶ ಪಡೆಯಬಹುದು.
ವೃಶ್ಚಿಕ ರಾಶಿ:
ಹಿಂದೆ ನಿಂತಿದ್ದ ಕೆಲಸಗಳು ಮತ್ತೆ ಚಲನೆ ಪಡೆಯಬಹುದು. ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ನಿರೀಕ್ಷಿಸದ ಸ್ಥಳದಿಂದ ಕರೆ ಅಥವಾ ಮಾಹಿತಿ ಬರಬಹುದು. ಕಚೇರಿಯಲ್ಲಿ ನಿಮ್ಮ ನಿರ್ಧಾರಗಳನ್ನು ಕೆಲವರು ಪ್ರಶ್ನಿಸಬಹುದು; ಆದ್ದರಿಂದ ದಾಖಲೆ ಮತ್ತು ಸಾಕ್ಷ್ಯಾಧಾರಗಳೊಂದಿಗೆ ಕೆಲಸ ಮಾಡುವುದು ಒಳಿತು. ತಾಳ್ಮೆ ಮತ್ತು ರಹಸ್ಯ ಕಾಪಾಡುವ ಗುಣ ಈ ವಾರ ನಿಮ್ಮ ವೃತ್ತಿಗೆ ಬಲ ನೀಡುತ್ತದೆ.
ಧನು ರಾಶಿ:
ವೃತ್ತಿಜೀವನದಲ್ಲಿ ಚುರುಕು ಹೆಚ್ಚಾಗಲಿದೆ. ಹೊಸ ಕೆಲಸ, ಹೆಚ್ಚುವರಿ ಜವಾಬ್ದಾರಿ ಅಥವಾ ಬೇರೆ ವಿಭಾಗಕ್ಕೆ ಸಂಬಂಧಿಸಿದ ಅವಕಾಶ ಎದುರಾಗಬಹುದು. ದೂರ ಪ್ರಯಾಣ ಅಥವಾ ಸ್ಥಳಾಂತರದ ವಿಚಾರವೂ ಚರ್ಚೆಗೆ ಬರಬಹುದು. ಉದ್ಯೋಗ ಬದಲಾವಣೆ ಬಯಸುವವರು ಆತುರದ ನಿರ್ಧಾರ ಮಾಡದೆ ಭವಿಷ್ಯದ ಸ್ಥಿರತೆಯನ್ನು ಪರಿಗಣಿಸಬೇಕು. ಪ್ರಯತ್ನ ಮುಂದುವರಿಸಿದರೆ ಫಲ ದೊರೆಯುವ ಸೂಚನೆ ಇದೆ.
ಮಕರ ರಾಶಿ:
ಪರಿಶ್ರಮಕ್ಕೆ ತಕ್ಕ ಗುರುತಿನ ನಿರೀಕ್ಷೆ ಮೂಡಬಹುದು. ಹಿರಿಯರೊಂದಿಗೆ ನಡೆಯುವ ಚರ್ಚೆ ವೃತ್ತಿಜೀವನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಕೆಲಸದ ಹೊರೆ ಹೆಚ್ಚಾದರೂ ಅದರಿಂದ ನಿಮ್ಮ ಸಾಮರ್ಥ್ಯ ಸಾಬೀತುಪಡಿಸಲು ಅವಕಾಶ ದೊರೆಯುತ್ತದೆ. ಹೊಸ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುವವರು ಹಳೆಯ ಅನುಭವವನ್ನು ಸಮರ್ಥವಾಗಿ ಮಂಡಿಸಬೇಕು. ನಿಧಾನವಾದರೂ ಸ್ಥಿರವಾದ ಪ್ರಗತಿಯ ವಾರ.
ಇದನ್ನೂ ಓದಿ: ಲಕ್ಷ್ಮಿ ನಾರಾಯಣ ಯೋಗ: 40 ದಿನಗಳ ಕಾಲ ಈ 6 ರಾಶಿಯವರಿಗೆ ಅದೃಷ್ಟದ ಸುರಿಮಳೆ
ಕುಂಭ ರಾಶಿ:
ಹೊಸ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರುವ ಅವಕಾಶ ಸಿಗಬಹುದು. ತಂತ್ರಜ್ಞಾನ, ಸಂವಹನ ಅಥವಾ ಸೃಜನಾತ್ಮಕ ಕ್ಷೇತ್ರದಲ್ಲಿರುವವರಿಗೆ ಹೊಸ ಕೆಲಸದ ಸಂಪರ್ಕಗಳು ದೊರೆಯಬಹುದು. ಕಚೇರಿಯಲ್ಲಿ ಕೆಲವರ ಭಿನ್ನಾಭಿಪ್ರಾಯ ಎದುರಾದರೂ ಅದನ್ನು ವಾದವಾಗಿ ಬೆಳೆಸಬೇಡಿ. ಉದ್ಯೋಗ ಹುಡುಕುತ್ತಿರುವವರು ಒಂದೇ ಅವಕಾಶದ ಮೇಲೆ ಅವಲಂಬಿತರಾಗದೆ ಹಲವು ದಾರಿಗಳನ್ನು ಪ್ರಯತ್ನಿಸುವುದು ಒಳಿತು.
ಮೀನ ರಾಶಿ:
ಈ ವಾರ ಉದ್ಯೋಗ ಕ್ಷೇತ್ರದಲ್ಲಿ ಆತ್ಮವಿಶ್ವಾಸ ನಿಧಾನವಾಗಿ ಹೆಚ್ಚಾಗುತ್ತದೆ. ಹಿಂದೆ ವಿಳಂಬವಾದ ನೇಮಕಾತಿ ಅಥವಾ ಕೆಲಸದ ಮಾತುಕತೆ ಮತ್ತೆ ಮುಂದುವರಿಯಬಹುದು. ಹಿರಿಯರಿಂದ ಮಾರ್ಗದರ್ಶನ ದೊರೆಯುವ ಸಾಧ್ಯತೆ ಇದೆ. ಕೆಲಸದಲ್ಲಿ ಒತ್ತಡ ಕಂಡುಬಂದರೂ ಸಹನೆಯಿಂದ ನಿರ್ವಹಿಸಿದರೆ ಪರಿಸ್ಥಿತಿ ಸುಧಾರಿಸಬಹುದು. ಉದ್ಯೋಗ ಬದಲಾವಣೆಯ ಯೋಚನೆಯಿದ್ದರೆ ಅನುಭವಿಗಳ ಸಲಹೆ ಪಡೆದು ಮುಂದುವರಿಯುವುದು ಉತ್ತಮ.
– ಲೋಹಿತ್ ಹೆಬ್ಬಾರ್
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ