
ಅಕ್ಟೋಬರ್ 11ರಿಂದ ಅಕ್ಟೋಬರ್ 17ರವರೆಗಿನ ಈ ವಾರದಲ್ಲಿ ಪ್ರೇಮದಲ್ಲಿ ಸ್ವಾತಂತ್ರ್ಯ, ವಿವಾಹಿತರ ನಡುವೆ ಅಶಮಾಧಾನ, ವಿವಾಹಕ್ಕೆ ಬಂಧುಗಳಿಂದ ಒತ್ತಡ, ವಿವಾಹಕ್ಕೆ ಉದ್ಯೋಗದಿಂದ ತಡೆ, ಅಸ್ಥಾನದಲ್ಲಿ ಭಾವ ಜಾಗರಣ ಮೊದಲಾದ ವಿಶೇಷಗಳು ಈ ವಾರ ಇರಲಿವೆ.
ನಿಮ್ಮ ಉತ್ಸಾಹ ಈ ವಾರ ಎಲ್ಲರ ಹೃದಯವನ್ನು ಗೆಲ್ಲುತ್ತದೆ. ಮನದ ಮಾತನ್ನು ಧೈರ್ಯವಾಗಿ ಹೇಳಿ, ಹಿಂಜರಿಕೆ ಬೇಡ. ಒಂದು ಸಣ್ಣ ಉಡುಗೊರೆ ಸಂಗಾತಿಯ ಮುಖದಲ್ಲಿ ನಗು ಅರಳಿಸುತ್ತದೆ. ಅವಸರದ ಮಾತುಗಳಿಂದ ಮನಸ್ತಾಪ ಆಗದಂತೆ ಎಚ್ಚರ ವಹಿಸಿ. ಒಂಟಿಯಾಗಿರುವವರಿಗೆ ಸ್ನೇಹಿತರ ಕೂಟದಲ್ಲಿ ಆಕರ್ಷಕ ಪರಿಚಯದ ಯೋಗ.
ಶಾಂತವಾದ, ಸಿಹಿಯಾದ ಪ್ರೀತಿಯ ವಾರ. ಜೊತೆಯಲ್ಲಿ ಕುಳಿತು ಮಾಡುವ ಊಟ, ಮೃದುವಾದ ಮಾತುಗಳು ಬಂಧವನ್ನು ಗಟ್ಟಿಗೊಳಿಸುತ್ತವೆ. ಹಠದ ಸ್ವಭಾವವನ್ನು ಸ್ವಲ್ಪ ಸಡಿಲಿಸಿದರೆ ಸಂಗಾತಿ ಇನ್ನಷ್ಟು ಹತ್ತಿರವಾಗುತ್ತಾರೆ. ಒಂಟಿಯಾಗಿರುವವರಿಗೆ ಹಳೆಯ ಪರಿಚಯದಿಂದ ಹೊಸ ಆರಂಭದ ಸೂಚನೆ.
ಮಾತಿನ ಮೋಡಿ ನಿಮ್ಮ ಶಕ್ತಿ. ಹೊಸ ಭೇಟಿಯೊಂದು ಕುತೂಹಲ ಮೂಡಿಸಬಹುದು. ಆದರೆ ತಮಾಷೆಯ ನಡುವೆ ಭಾವನೆಗಳನ್ನು ಮರೆಮಾಚಬೇಡಿ, ಪ್ರಾಮಾಣಿಕತೆ ಹೃದಯ ತಲುಪುತ್ತದೆ. ದೂರವಾಣಿಯನ್ನು ಬದಿಗಿಟ್ಟು ಸಂಗಾತಿಯ ಕಣ್ಣುಗಳನ್ನು ನೋಡಿ ಮಾತಾಡಿ, ಅದು ಅಪೂರ್ವ ಕ್ಷಣವಾಗುತ್ತದೆ.
ಭಾವನೆಗಳ ಅಲೆ ಎದ್ದೇಳುವ ವಾರ. ಸಂಗಾತಿಯ ಸಾಂತ್ವನ ನಿಮಗೆ ಆಸರೆಯಾಗುತ್ತದೆ. ಹಳೆಯ ನೋವನ್ನು ಬಿಟ್ಟು, ಹೊಸ ಮಧುರ ನೆನಪುಗಳನ್ನು ಕಟ್ಟಿಕೊಳ್ಳಿ. ಮನೆಯಲ್ಲೇ ಮಾಡುವ ಸಣ್ಣ ಆಚರಣೆ ಇಬ್ಬರ ಹೃದಯ ಬೆಸೆಯುತ್ತದೆ. ಸೂಕ್ಷ್ಮತೆಯನ್ನು ಅನುಮಾನವಾಗಿ ಬದಲಾಗಲು ಬಿಡಬೇಡಿ.
ನೀವು ಸಭೆಯ ಕೇಂದ್ರಬಿಂದು, ಆಕರ್ಷಣೆ ತುಂಬಿ ತುಳುಕುತ್ತದೆ. ಸಂಗಾತಿಗೆ ಸಮಯ ಕೊಟ್ಟರೆ ಪ್ರೀತಿ ದ್ವಿಗುಣ. ಹೆಮ್ಮೆಗಿಂತ ಮೃದುತ್ವಕ್ಕೆ ಈ ವಾರ ಗೆಲುವು. ಹೊಗಳಿಕೆಯನ್ನು ನಿರೀಕ್ಷಿಸುವ ಬದಲು ನೀವೇ ಮೊದಲು ಹೊಗಳಿ, ಪ್ರೀತಿ ಹೂವಂತೆ ಅರಳುತ್ತದೆ.
ಸಣ್ಣ ಕಾಳಜಿಗಳೇ ದೊಡ್ಡ ಪ್ರೇಮ ಕಥೆ ಹೆಣೆಯುತ್ತವೆ. ಪರಿಪೂರ್ಣತೆಯ ನಿರೀಕ್ಷೆ ಬಿಟ್ಟು ಸಂಗಾತಿಯನ್ನು ಇದ್ದಂತೆಯೇ ಒಪ್ಪಿಕೊಳ್ಳಿ. ತಪ್ಪು ಹುಡುಕುವ ಕಣ್ಣಿಗಿಂತ ಮೆಚ್ಚುವ ಮನಸ್ಸು ಇಂದು ಹೆಚ್ಚು ಬೆಲೆಯುಳ್ಳದ್ದು. ವಾರಾಂತ್ಯ ಸುಂದರವಾಗಿರುತ್ತದೆ.
ಸಮತೋಲನ ಮತ್ತು ಸೌಂದರ್ಯದ ವಾರ. ರೋಮ್ಯಾಂಟಿಕ್ ಭೋಜನ ಅಥವಾ ಸಂಜೆಯ ನಡಿಗೆ ಮನಸ್ಸುಗಳನ್ನು ಹತ್ತಿರ ತರುತ್ತದೆ. ನಿರ್ಧಾರ ಮುಂದೂಡುತ್ತಿದ್ದರೆ, ಹೃದಯದ ಮಾತು ಕೇಳಿ. ಶುಕ್ರನ ಕೃಪೆಯಿಂದ ಸಂಬಂಧದಲ್ಲಿ ಸಾಮರಸ್ಯ ನೆಲೆಸುತ್ತದೆ.
ಆಳವಾದ, ತೀವ್ರವಾದ ಪ್ರೀತಿಯ ಸೆಳೆತ. ಮನಬಿಚ್ಚಿ ಮಾತಾಡಿದರೆ ಸಂಬಂಧಕ್ಕೆ ಹೊಸ ಆಳ ಸಿಗುತ್ತದೆ. ಅನುಮಾನದ ನೆರಳನ್ನು ವಿಶ್ವಾಸದ ಬೆಳಕಿನಿಂದ ಓಡಿಸಿ. ಮೌನದಲ್ಲಿ ಅಡಗಿದ ಭಾವನೆಗಳು ಸಂಗಾತಿಗೆ ತಿಳಿಯುವಂತೆ ಹೇಳಿ, ವಾರದ ಮಧ್ಯಾವಧಿಯ ಅನಂತರ ಮನಸ್ಸು ಹಗುರವಾಗುತ್ತದೆ.
ಸ್ವತಂತ್ರ್ಯ ಪ್ರೇಮಿಯಾದ ನಿಮಗೆ ಜೊತೆಯಲ್ಲಿ ಮಾಡುವ ಸಣ್ಣ ಪ್ರವಾಸ ಅದ್ಭುತ ಸಂತೋಷ ತರುತ್ತದೆ. ಹೊಸ ಪ್ರೀತಿಯ ಸಾಧ್ಯತೆಯೊಂದು ಅನಿರೀಕ್ಷಿತವಾಗಿ ಎದುರಾಗಬಹುದು. ಮಾತಿನಲ್ಲಿ ನೇರವಾಗಿರಿ, ಆದರೆ ಮೃದುತ್ವ ಬಿಡಬೇಡಿ. ಸಂಗಾತಿಯ ಕನಸುಗಳಿಗೂ ಕಿವಿಗೊಡಿ.
ನಿಧಾನವಾದರೂ ಭದ್ರವಾದ ಹೆಜ್ಜೆ. ಕೆಲಸದ ನಡುವೆಯೂ ಪ್ರೀತಿಗೆ ಜಾಗ ಕೊಡಿ. ಒಂದು ಸಿಹಿ ಸಂದೇಶ ಇಡೀ ದಿನವನ್ನು ಬೆಳಗಿಸುತ್ತದೆ. ಕುಟುಂಬದ ಆಶೀರ್ವಾದದ ಸೂಚನೆಯಿದೆ. ಗಂಭೀರತೆಯ ಹಿಂದೆ ಅಡಗಿರುವ ನಿಮ್ಮ ಕೋಮಲ ಹೃದಯವನ್ನು ಈ ವಾರ ತೋರಿಸಿ.
ವಿಭಿನ್ನ ಆಲೋಚನೆಗಳು ಸಂಗಾತಿಯನ್ನು ಬೆರಗುಗೊಳಿಸುತ್ತವೆ. ಸ್ನೇಹದಿಂದ ಪ್ರೇಮಕ್ಕೆ ತಿರುಗುವ ಸಂಬಂಧವೊಂದು ಅರಳಬಹುದು. ಹೃದಯದ ಬಾಗಿಲು ತೆರೆದಿಡಿ. ದೂರದಲ್ಲಿರುವ ಪ್ರೀತಿಪಾತ್ರರೊಂದಿಗೆ ವಿಡಿಯೋ ಕರೆ ಮನಸ್ಸಿಗೆ ಹಿತ ನೀಡುತ್ತದೆ.
ಕನಸಿನಂತಹ ಮನೋಹರವಾದ ವಾರ. ಸಂಗೀತ, ಕವಿತೆ, ಚಂದ್ರನ ಬೆಳಕು ನಿಮ್ಮ ಪ್ರೀತಿಗೆ ಮೆರುಗು ನೀಡುತ್ತವೆ. ಕಲ್ಪನೆಯ ಜೊತೆಗೆ ವಾಸ್ತವವನ್ನೂ ನೆನಪಿಡಿ. ಭಾನುವಾರ ಹೃದಯಸ್ಪರ್ಶಿ ಸುದ್ದಿಯೊಂದು ಮನಸ್ಸನ್ನು ಸಂತೋಷದಲ್ಲಿ ತೇಲಿಸುತ್ತದೆ.
– ಲೋಹಿತ್ ಹೆಬ್ಬಾರ್
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ