IIP: ಭಾರತದ ಕೈಗಾರಿಕೆ ಬೆಳವಣಿಗೆ 2021ರ ಡಿಸೆಂಬರ್ನಲ್ಲಿ 10 ತಿಂಗಳ ಕನಿಷ್ಠ ಮಟ್ಟವಾದ ಶೇ 0.4ಕ್ಕೆ ಕುಸಿತ
2021ನೇ ಇಸವಿಯ ಡಿಸೆಂಬರ್ ತಿಂಗಳ ಕೈಗಾರಿಕೆ ಉತ್ಪಾದನೆ ಸೂಚ್ಯಂಕವು ಶೇ 0.4ಕ್ಕೆ ಇಳಿಕೆ ಆಗಿದೆ. ಆ ಬಗ್ಗೆ ಇನ್ನಷ್ಟು ವಿವರ ಈ ಲೇಖನದಲ್ಲಿದೆ.
ಇಂಡೆಕ್ಸ್ ಆಫ್ ಇಂಡಸ್ಟ್ರಿಯಲ್ ಪ್ರೊಡಕ್ಷನ್ (IIP) ಪ್ರಕಾರ ಭಾರತದ ಕೈಗಾರಿಕೆ ಬೆಳವಣಿಗೆಯು 2021ನೇ ಇಸವಿಯ ಡಿಸೆಂಬರ್ನಲ್ಲಿ ಶೇ 0.4ಕ್ಕೆ ಕುಸಿದಿದೆ. ಅದಕ್ಕೂ ಒಂದು ತಿಂಗಳ ಹಿಂದೆ ನವೆಂಬರ್ನಲ್ಲಿ ಶೇ 1.3ರಷ್ಟಿತ್ತು. ಫೆಬ್ರವರಿ 11ರಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ ಬಿಡುಗಡೆ ಮಾಡಿದ ದತ್ತಾಂಶದಿಂದ ತಿಳಿದುಬಂದಿದೆ. ಡಿಸೆಂಬರ್ ತಿಂಗಳಲ್ಲಿನ ಶೇ 0.4ರ ಐಐಪಿ ಬೆಳವಣಿಗೆ ಹತ್ತು ತಿಂಗಳಲ್ಲೇ ನಿಧಾನ ಗತಿಯದ್ದಾಗಿದೆ. ಕೈಗಾರಿಕೆ ಬೆಳವಣಿಗೆಯಲ್ಲಿನ ನಿಧಾನಗತಿಯು ಅನಿರೀಕ್ಷಿತವೇನಲ್ಲ. ಕಳೆದ ತಿಂಗಳ ಡೇಟಾ ಪ್ರಕಾರ, ಭಾರತದ ಪ್ರಮುಖ ಎಂಟು ವಲಯಗಳು 2021ರ ಡಿಸೆಂಬರ್ನಲ್ಲಿ ವರ್ಷದಿಂದ ವರ್ಷಕ್ಕೆ ಶೇ 3.8ರ ಬೆಳವಣಿಗೆ ಕಂಡಿದೆ. 2021ರ ನವೆಂಬರ್ನಲ್ಲಿ ಶೇ 3.4ರ ಬೆಳವಣಿಗೆ ಆಗಿತ್ತು. ಎಂಟು ಪ್ರಮುಖ ಕೈಗಾರಿಕೆಗಳು ಸೇರಿ, 40.3ರಷ್ಟಾಗಿತ್ತು. 2021ರ ಡಿಸೆಂಬರ್ನಲ್ಲಿ ಕೈಗಾರಿಕೆ ಬೆಳವಣಿಗೆ ಇಳಿಕೆ ಆಗಿದೆ.
ಐಐಪಿಯ ನಾಲ್ಕನೇ ಮೂರು ಭಾಗದಷ್ಟನ್ನು (ಶೇ 75ರಷ್ಟು) ಉತ್ಪಾದನೆ ವಲಯ ಇದೆ. 2021ರ ಡಿಸೆಂಬರ್ನಲ್ಲಿ ವರ್ಷದಿಂದ ವರ್ಷಕ್ಕೆ ಶೇ 0.1ರಷ್ಟು ಕುಗ್ಗಿದೆ. 2021ರ ಫೆಬ್ರವರಿಯಿಂದ ಈಚೆಗೆ ಈ ವಲಯದಲ್ಲಿ ಸಂಕುಚಿತತೆ ಕಂಡಿದೆ. 2021ರ ನವೆಂಬರ್ನಲ್ಲಿ ತಯಾರಿಕೆಯ ಉತ್ಪಾದನೆ ಕೇವಲ ಶೇ 0.8ರಷ್ಟು ಹೆಚ್ಚಳವಾಗಿದೆ. ಬಳಕೆ ಆಧಾರಿತ ವರ್ಗೀಕರಣದ ಪ್ರಕಾರ, ಆರರಲ್ಲಿ ಮೂರು ಸರಕುಗಳು- ಬಂಡವಾಳ, ಗ್ರಾಹಕರ ಬಳಕೆ ಮತ್ತು ಗ್ರಾಹಕ ಬಳಕೆಯೇತರ ಸರಕುಗಳ ಉತ್ಪಾದನೆ 2021ರ ಡಿಸೆಂಬರ್ನಲ್ಲಿ ಇಳಿಕೆ ಆಗಿದೆ. ಬಾಕಿ ಮೂರು- ಪ್ರಾಥಮಿಕ, ಇಂಟರ್ಮೀಡಿಯರಿ ಹಾಗೂ ಮೂಲಸೌಕರ್ಯ ಸರಕುಗಳು ಅಲ್ಪಪ್ರಮಾಣದ ಏರಿಕೆ ಕಂಡಿವೆ.
2021ರ ಡಿಸೆಂಬರ್ನಲ್ಲಿ ಐಐಪಿ ಬೆಳವಣಿಗೆ ಹೀಗಿದೆ: ಗಣಿಗಾರಿಕೆ- ಶೇ 2.6, ಉತ್ಪಾದನೆ- ಶೇ -0.1, ವಿದ್ಯುಚ್ಛಕ್ತಿ- ಶೇ 2.8.
ಬಳಕೆ ಆಧಾರಿತ ವರ್ಗೀಕರಣ ಹೀಗಿದೆ: ಪ್ರಾಥಮಿಕ ಸರಕು- ಶೇ 2.8, ಬಂಡವಾಳ ಸರಕು- ಶೇ -4.6, ಇಂಟರ್ಮೀಡಿಯೆಟ್ ಸರಕು- ಶೇ 0.3, ಮೂಲಸೌಕರ್ಯ/ನಿರ್ಮಾಣ ಸರಕು- ಶೇ 1.7, ಗ್ರಾಹಕ ಬಳಕೆ ವಸ್ತುಗಳು- ಶೇ -2.7, ಗ್ರಾಹಕ ಬಳಕೆಯೇತರ – ಶೇ -0.6.
2021ರ ಏಪ್ರಿಲ್ನಿಂದ ಡಿಸೆಂಬರ್ನಲ್ಲಿ ಕೈಗಾರಿಕೆ ಉತ್ಪಾದನೆ ಶೇ 15.2ರಷ್ಟು ದಾಖಲು ಮಾಡಿದ್ದು, 2020ರ ಏಪ್ರಿಲ್- ಡಿಸೆಂಬರ್ ಮಧ್ಯೆ ಶೇ 13.3ರಷ್ಟು ಕುಗ್ಗಿತ್ತು.
ಇದನ್ನೂ ಓದಿ: India GDP: ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಶೇ 9.2ಕ್ಕೆ ರೂ. 147.5 ಲಕ್ಷ ಕೋಟಿಗೆ ಬೆಳವಣಿಗೆ ನಿರೀಕ್ಷೆ
Published On - 7:13 pm, Fri, 11 February 22