BookMyShow Lays off: ಕೊವಿಡ್​ ಹೊಡೆತಕ್ಕೆ ಸಿಲುಕಿ 200 ಸಿಬ್ಬಂದಿಯನ್ನು ಕೆಲಸದಿಂದ ತೆಗೆದ ಬುಕ್​ಮೈಶೋ

| Updated By: Srinivas Mata

Updated on: Jun 11, 2021 | 12:34 AM

ಕೊರೊನಾ ಹೊಡೆತಕ್ಕೆ ಸಿಲುಕಿ ಹೊರಾಂಗಣ ಮನರಂಜನಾ ವಲಯಕ್ಕೆ ಭರ್ತಿ ಪೆಟ್ಟು ಬಿದ್ದಿದೆ. ಇದರದೇ ಪರಿಣಾಮದ ಭಾಗವಾಗಿ ಬುಕ್​ಮೈಶೋನಿಂದ 200 ಮಂದಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲಾಗಿದೆ.

BookMyShow Lays off: ಕೊವಿಡ್​ ಹೊಡೆತಕ್ಕೆ ಸಿಲುಕಿ 200 ಸಿಬ್ಬಂದಿಯನ್ನು ಕೆಲಸದಿಂದ ತೆಗೆದ ಬುಕ್​ಮೈಶೋ
ಸಾಂದರ್ಭಿಕ ಚಿತ್ರ
Follow us on

ಕೊವಿಡ್- 19 ಬಿಕ್ಕಟ್ಟು ಹಾಗೂ ಹೊರಾಂಗಣ ಮನರಂಜನೆ ಆಯ್ಕೆಗಳ ಮೇಲಿನ ನಿರ್ಬಂಧದ ಕಾರಣಕ್ಕೆ ಆನ್​ಲೈನ್ ಟಿಕೆಟಿಂಗ್ ಸೈಟ್ ಬುಕ್​ಮೈಶೋದಿಂದ 200 ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲಾಗುತ್ತಿದೆ. ಭಾರತ ಮತ್ತು ಜಾಗತಿಕವಾಗಿ ಸೇರಿ ಒಟ್ಟು 270 ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವುದಾಗಿ ಹಾಗೂ ರಜೆ ಮೇಲೆ ಕಳುಹಿಸುವುದಾಗಿ ಕಳೆದ ಮೇ ತಿಂಗಳಲ್ಲಿ ಹೇಳಿತ್ತು. 270 ಮಂದಿ ಅಂದರೆ ಬುಕ್​ಮೈಶೋ ಸಂಸ್ಥೆಯ ಒಟ್ಟಾರೆ ಉದ್ಯೋಗಿಗಳ ಪೈಕಿ ಶೇ 18.6ರಷ್ಟಾಗುತ್ತದೆ. 200 ಮಂದಿ ತುಂಬ ವಿಶಿಷ್ಟ ಪ್ರತಿಭೆಯುಳ್ಳ, ಅತ್ಯುತ್ತಮ ಪರ್ಫಾರ್ಮೆನ್ಸ್ ನೀಡುತ್ತಿದ್ದ ವ್ಯಕ್ತಿಗಳನ್ನು ನಾವು ಕಳುಹಿಸಿಕೊಡುತ್ತಿದ್ದೇವೆ. ಪ್ರತಿಯೊಬ್ಬರೂ ಸಂದೇಶ ಕಳುಹಿಸಿ, ಅವಕಾಶ ನೀಡಿದ್ದಕ್ಕಾಗಿ ನನಗೆ ಧನ್ಯವಾದ ಹೇಳುತ್ತಿದ್ದಾರೆ ಎಂದು ಕಂಪೆನಿ ಸಿಇಒ ಹಾಗೂ ಬುಕ್​ಮೈಶೋ ಅನ್ನು ನಡೆಸುವಂಥ ಬಿಗ್​ಟ್ರೀ ಎಂಟರ್​ಟೇನ್​ಮೆಂಟ್ ಪ್ರೈ. ಲಿಮಿಟೆಡ್​ನ ಸಹ ಸಂಸ್ಥಾಪಕ ಆಶೀಶ್ ಹೇಮ್​ರಾಜಾನಿ ಟ್ವೀಟ್ ಮಾಡಿದ್ದಾರೆ.

ಬುಕ್​ಮೈಶೋ 2007ರಲ್ಲಿ ಭಾರತದಲ್ಲಿ ಆರಂಭವಾಯಿತು. 2021ರಲ್ಲಿ ಸಿನಿಮಾ ಉದ್ಯಮ ಒಂದು ಅಂದಾಜಿನ ಪ್ರಕಾರ 5000 ಕೋಟಿ ನಷ್ಟ ಅನುಭವಿಸಿದೆ. ಲೈವ್ ಈವೆಂಟ್​ಗಳು, ಪ್ರದರ್ಶನಗಳು ಭವಿಷ್ಯದಲ್ಲಿ ಕೂಡ ಚೇತರಿಸಿಕೊಳ್ಳುವಂತೆ ಕಾಣುತ್ತಿಲ್ಲ. ಹೀಗೆ ಮಾಧ್ಯಮ ಹಾಗೂ ಮನರಂಜನೆ ವಲಯದ ಮೇಲೆ ಬಿದ್ದಿರುವ ಹೊಡೆತವು ಬುಕ್​ಮೈಶೋ ಬಿಸಿ ಅನುಭವಿಸುವಂತೆ ಮಾಡಿದೆ. ಸದ್ಯಕ್ಕಂತೂ ಹಲವು ರಾಜ್ಯಗಳು ಮತ್ತು ಜನರು ಹೊರಾಂಗಣ ಮನರಂಜನೆಗೆ ತೆರೆದುಕೊಳ್ಳುವಂತೆ ಕಾಣುತ್ತಿಲ್ಲ. ಈ ವರ್ಷದ ಫೆಬ್ರವರಿಯಲ್ಲಿ ಬುಕ್​ಮೈಶೋದಿಂದ ಪೇ-ಪರ್-ವ್ಯೂ ಎಂಬ ಸ್ಟ್ರೀಮಿಂಗ್ ಸೇವೆ ಬುಕ್​ಮೈಶೋ ಸ್ಟ್ರೀಮ್ ಆರಂಭಿಸಲಾಯಿತು. ಕಿಕ್ಕಿರಿದಿರುವ ಒಟಿಟಿ ಮಾರ್ಕೆಟ್​ನಲ್ಲಿ ಇದೊಂದು ಪ್ರಯತ್ನವಾಯಿತು.

ಆರಂಭದಲ್ಲಿ 600 ಸಿನಿಮಾದೊಂದಿಗೆ ಶುರುವಾಯಿತು. TVoD (ಟ್ರಾನ್ಸಾಕ್ಷನ್ ವಿಡಿಯೋ-ಆನ್-ಡಿಮ್ಯಾಂಡ್) ಸೇವೆಯ ಮೂಲಕ ಮುಂದಿನ 9ರಿಂದ 12 ತಿಂಗಳಲ್ಲಿ 2000 ಸಿನಿಮಾ ಆಫರ್ ಮಾಡುವ ಭರವಸೆ ಇದೆ. ಅಮೆರಿಕನ್ ಸ್ಟುಡಿಯೋಗಳ ಜತೆಗೆ ಸಹಭಾಗಿತ್ವ ವಹಿಸಿ ಹಾಲಿವುಡ್​ ಸಿನಿಮಾಗಳೂ ಸೇರಿದಂತೆ ಹಿಂದಿ ಮತ್ತು ಸ್ವತಂತ್ರ ಸಿನಿಮಾಗಳನ್ನೂ ತರುವ ಆಲೋಚನೆಯನ್ನು ಹೊಂದಿದೆ. ಅದರಲ್ಲೂ ದೇಶ- ವಿದೇಶದ ಹೆಸರಾಂತ ನಿರ್ಮಾಣ ಸಂಸ್ಥೆಗಳ ಜತೆಗೆ ಒಪ್ಪಂದು ಮಾಡಿಕೊಳ್ಳುವ ಇರಾದೆ ಇದೆ.

ಹಲವು ಸಿನಿಮಾಗಳು ಬಾಡಿಗೆಗೆ ಹಾಗೂ ಖರೀದಿಗೆ ಲಭ್ಯವಿವೆ. ರೂ. 40ರಿಂದ ಆರಂಭವಾಗಿ, ರೂ. 600ರ ತನಕ ಇದೆ. ಸಿನಿಮಾದ ಮೇಲೆ ಇದು ಅವಲಂಬನೆ ಆಗಲಿದೆ. ಒಂದು ಸಲ ಆರಂಭವಾದ ಮೇಲೆ 30 ದಿನಗಳ ಅವಧಿಗೆ ಸಿನಿಮಾ ಬಾಡಿಗೆಗೆ ಸಿಗುತ್ತದೆ. ಒಂದು ಸಲ ಆರಂಭಿಸಿದ ಮೇಲೆ 48 ಗಂಟೆಯೊಳಗೆ ನೋಡಬೇಕು. ಇನ್ನು ಖರೀದಿಗಾದರೆ 6 ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಕೊಳ್ಳಬಹುದು.

ಬಿಗ್​ಟ್ರೀ ಎಂಟರ್​ಟೇನ್​ಮೆಂಟ್ ಪ್ರೈವೇಟ್ ಲಿಮಿಟೆಡ್​ಗೆ ಸೇರಿದ್ದು ಬುಕ್​ಮೈಶೋ. ಇದರಲ್ಲಿ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್​ಗೆ ಸೇರಿದ ನೆಟ್​ವರ್ಕ್18 ಹೂಡಿಕೆ ಮಾಡಿ. ಜತೆಗೆ ಈ ಹಿಂದೆ ಆಕ್ಸೆಲ್ ಪಾರ್ಟನರ್ಸ್ ಮತ್ತು SAIF ಪಾರ್ಟನರ್ಸ್ ಇತ್ತು. ಸದ್ಯಕ್ಕೆ ನೆಟ್​ವರ್ಕ್18 ಶೇ 39ರಷ್ಟು ಪಾಲನ್ನು ಬುಕ್​ಮೈಶೋನಲ್ಲಿ ಹೊಂದಿದೆ. ಒಂದು ಅಂದಾಜಿನ ಪ್ರಕಾರ ಜೂನ್ 2021ಕ್ಕೆ ಈ ಟಿಕೆಟಿಂಗ್​ ಸೈಟ್​ನಲ್ಲಿ 1068 ಉದ್ಯೋಗಿಗಳಿದ್ದಾರೆ.

ಇದನ್ನೂ ಓದಿ: Rural unemployment: ಗ್ರಾಮೀಣ ಪ್ರದೇಶದ ನಿರುದ್ಯೋಗ ಪ್ರಮಾಣ ಶೇ 14.3ಕ್ಕೆ ತಲುಪಿ ಒಂದು ವಾರದಲ್ಲೇ ಡಬಲ್

(Online ticketing site lay offs 200 employees due to covid-19 impact on outdoor entertainment sector)