ದೀಪಾವಳಿಯಂದು.. ದಿವಾಳಿ ಎದ್ದ ಚೀನಾ: ಡ್ರ್ಯಾಗನ್ಗೆ 40,000 ಕೋಟಿ ನಷ್ಟ!, ಹೇಗೆ?
ದೆಹಲಿ: ಕೊರೊನಾದಿಂದ ಕುಸಿದಿದ್ದ ದೇಶದ ವ್ಯಾಪಾರ ವಹಿವಾಟು ಇದೀಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಅದರಲ್ಲೂ, ಈ ಬಾರಿ ದೀಪಾವಳಿ ನಿಜಕ್ಕೂ ಭರವಸೆಯ ಬೆಳಕನ್ನು ಮೂಡಿಸಿದೆ. ದೀಪಾವಳಿ ಹಬ್ಬಕ್ಕೆ ದೇಶದ ಪ್ರಮುಖ ಮಾರುಕಟ್ಟೆಗಳಲ್ಲಿ ಸುಮಾರು 72,000 ಕೋಟಿ ರೂ.ಗಳ ವಹಿವಾಟು ದಾಖಲಾಗಿದೆ ಎಂದು ಭಾರತೀಯ ವರ್ತಕರ ಒಕ್ಕೂಟ (CAIT) ಮಾಹಿತಿ ನೀಡಿದೆ. CAIT ಪ್ರಕಾರ, ಈ ವರ್ಷ ದೀಪಾವಳಿ ಸಂದರ್ಭದಲ್ಲಿ ಚೀನಾದ ಸರಕುಗಳನ್ನು ಬಹಿಷ್ಕರಿಸುವ CAIT ಕರೆಗೆ ಉತ್ತಮ ಸ್ಪಂದನೆ ಸಿಕ್ಕಿದ್ದು, ಯಾವುದೇ ಚೀನಿ ಸರಕುಗಳು ಮಾರಾಟವಾಗಿಲ್ಲ. ಭಾರತದ ಪ್ರಮುಖ […]
ದೆಹಲಿ: ಕೊರೊನಾದಿಂದ ಕುಸಿದಿದ್ದ ದೇಶದ ವ್ಯಾಪಾರ ವಹಿವಾಟು ಇದೀಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಅದರಲ್ಲೂ, ಈ ಬಾರಿ ದೀಪಾವಳಿ ನಿಜಕ್ಕೂ ಭರವಸೆಯ ಬೆಳಕನ್ನು ಮೂಡಿಸಿದೆ. ದೀಪಾವಳಿ ಹಬ್ಬಕ್ಕೆ ದೇಶದ ಪ್ರಮುಖ ಮಾರುಕಟ್ಟೆಗಳಲ್ಲಿ ಸುಮಾರು 72,000 ಕೋಟಿ ರೂ.ಗಳ ವಹಿವಾಟು ದಾಖಲಾಗಿದೆ ಎಂದು ಭಾರತೀಯ ವರ್ತಕರ ಒಕ್ಕೂಟ (CAIT) ಮಾಹಿತಿ ನೀಡಿದೆ.
CAIT ಪ್ರಕಾರ, ಈ ವರ್ಷ ದೀಪಾವಳಿ ಸಂದರ್ಭದಲ್ಲಿ ಚೀನಾದ ಸರಕುಗಳನ್ನು ಬಹಿಷ್ಕರಿಸುವ CAIT ಕರೆಗೆ ಉತ್ತಮ ಸ್ಪಂದನೆ ಸಿಕ್ಕಿದ್ದು, ಯಾವುದೇ ಚೀನಿ ಸರಕುಗಳು ಮಾರಾಟವಾಗಿಲ್ಲ. ಭಾರತದ ಪ್ರಮುಖ ವಿತರಣಾ ಕೇಂದ್ರಗಳೆಂದು ಪರಿಗಣಿಸಲ್ಪಟ್ಟ 20 ವಿವಿಧ ನಗರಗಳಿಂದ ಸಂಗ್ರಹಿಸಲಾದ ವರದಿಗಳ ಪ್ರಕಾರ, ದೀಪಾವಳಿ ಹಬ್ಬದ ಪ್ರಯುಕ್ತ ನಡೆದ ವಹಿವಾಟಿನಲ್ಲಿ ಸುಮಾರು 72,000 ಕೋಟಿ ರೂ.ಗಳ ಆದಾಯ ಬಂದಿದ್ದು ಚೀನಾಕ್ಕೆ 40,000 ಕೋಟಿ ರೂ.ಗಳ ನಷ್ಟವಾಗಿದೆ ಎಂದು ತಿಳಿಸಿದೆ.
ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಹೈದರಾಬಾದ್, ಕೋಲ್ಕತಾ, ನಾಗ್ಪುರ, ರಾಯ್‌ಪುರ, ಭುವನೇಶ್ವರ, ರಾಂಚಿ, ಭೋಪಾಲ್, ಲಕ್ನೋ, ಕಾನ್ಪುರ್, ನೋಯ್ಡಾ, ಜಮ್ಮು, ಅಹ್ಮದಾಬಾದ್, ಸೂರತ್, ಕೊಚ್ಚಿನ್, ಜೈಪುರ, ಚಂಡೀಗಢ ಸೇರಿದಂತೆ 20 ನಗರಗಳಲ್ಲಿ CAIT ತನ್ನ ಸಮೀಕ್ಷೆ ನಡೆಸಿ ವರದಿಯನ್ನು ನೀಡಿದೆ.
ಇನ್ನು, ದೀಪಾವಳಿ ಹಬ್ಬದ ಅವಧಿಯಲ್ಲಿ ವಾಣಿಜ್ಯ ಮಾರುಕಟ್ಟೆಗಳಲ್ಲಿ ನಡೆದ ಮಾರಾಟವು ಭವಿಷ್ಯದಲ್ಲಿ ಉತ್ತಮ ವ್ಯಾಪಾರ ಭವಿಷ್ಯವನ್ನು ಸೂಚಿಸುತ್ತದೆ. ಜೊತೆಗೆ, ವ್ಯಾಪಾರಿಗಳ ಮುಖದಲ್ಲಿ ಸ್ವಲ್ಪ ಮಂದಹಾಸವನ್ನು ತಂದಿದೆ ಎಂದು ಹೇಳಲಾಗುತ್ತಿದೆ. ದಿನ ಬಳಕೆಯ ವಸ್ತುಗಳು (FMCG), ಆಟಿಕೆಗಳು, ವಿದ್ಯುತ್ ಉಪಕರಣಗಳು, ಗೃಹ ಬಳಕೆ ವಸ್ತುಗಳು, ಉಡುಗೊರೆಗಳು, ಸಿಹಿ ತಿಂಡಿ, ಚಿನ್ನ ಮತ್ತು ಆಭರಣಗಳು, ಪಾದರಕ್ಷೆ, ಕೈಗಡಿಯಾರ, ಪೀಠೋಪಕರಣಗಳು ಸೇರಿದಂತೆ ಫ್ಯಾಷನ್ ಉಡುಪುಗಳು, ಮನೆ ಅಲಂಕಾರಕ್ಕೆ ಬಳಸುವ ವಸ್ತುಗಳನ್ನು ಹೆಚ್ಚಾಗಿ ಈ ದೀಪಾವಳಿಯಲ್ಲಿ ಜನ ಖರೀದಿಸಿದ್ದಾರೆ ಎಂದು ಹೇಳಲಾಗಿದೆ.
CAIT ದೇಶದಲ್ಲಿ ಚೀನಾದ ಸರಕುಗಳನ್ನು ಬಹಿಷ್ಕರಿಸುವ ಅಭಿಯಾನವನ್ನು ನಡೆಸುತ್ತಿದೆ. ಕಳೆದ ಜೂನ್‌ನಲ್ಲಿ ಲಡಾಖ್ನ ಗಾಲ್ವಾನ್ ಕಣಿವೆಯಲ್ಲಿ ನಡೆದ ಭಾರತ ಮತ್ತು ಚೀನಾ ಸೈನಿಕರ ನಡುವಿನ ಘರ್ಷಣೆಯಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಇದಾದ ಕೆಲವೇ ದಿನಗಳ ನಂತರ, CAIT ಸಾರ್ವಜನಿಕರಿಗೆ ಎಲ್ಲಾ ಚೀನಾ ಕಂಪನಿಗಳನ್ನು ಬಹಿಷ್ಕರಿಸುವಂತೆ ಒತ್ತಾಯಿಸಿತ್ತು. ಹೀಗಾಗಿ ಒಕ್ಕೂಟ, ಈ ವರದಿಯನ್ನು ಕೈಗೊಂಡಿತ್ತು.
Published On - 3:37 pm, Mon, 16 November 20