Harley-Davidson: ಭಾರತದಲ್ಲಿ ನಂಬರ್ 1 ಸ್ಥಾನಕ್ಕೇರಿದ ಹಾರ್ಲೆ-ಡೇವಿಡ್‌ಸನ್
Harley-Davidson: FY2022 ರಲ್ಲಿ ಹಾರ್ಲೆ 601 ಮೋಟಾರ್‌ಸೈಕಲ್‌ಗಳನ್ನು ಮಾರಾಟ ಮಾಡಿದೆ. ಅದರಲ್ಲಿ 531 ಯುನಿಟ್‌ಗಳು 1,000 ಸಿಸಿ ಮತ್ತು ಅದಕ್ಕಿಂತ ಹೆಚ್ಚಿನ ದ್ವಿಚಕ್ರ ವಾಹನ ವಿಭಾಗದಲ್ಲಿ ಮಾರಾಟವಾಗಿವೆ.
ಹೈ-ಎಂಡ್ ಬೈಕ್ ಪ್ರಿಯರ ನೆಚ್ಚಿನ ಕಂಪೆನಿಗಳಲ್ಲಿ ಒಂದಾದ ಹಾರ್ಲೆ-ಡೇವಿಡ್ಸನ್ ಭಾರತದಲ್ಲಿ ಮತ್ತೊಮ್ಮೆ ನಂಬರ್ 1 ಸ್ಥಾನಕ್ಕೇರಿದೆ. ದೇಶದಲ್ಲಿನ ಉನ್ನತ-ಮಟ್ಟದ ಮೋಟಾರ್‌ಸೈಕಲ್ ವಿಭಾಗದಲ್ಲಿ ಈ ಹಿಂದೆ ಅಗ್ರಸ್ಥಾನ ಅಲಂಕರಿಸಿದ್ದ ಹಾರ್ಲೆ-ಡೇವಿಡ್ಸನ್ ಆ ಬಳಿಕ ಮಾರುಕಟ್ಟೆ ಕಳೆದುಕೊಂಡಿತ್ತು. ಇದೀಗ ಮೊದಲ ಸ್ಥಾನವನ್ನು ಮರಳಿ ಪಡೆಯುವಲ್ಲಿ ಅಮೆರಿಕನ್ ಕಂಪೆನಿ ಯಶಸ್ವಿಯಾಗಿದೆ. 2020 ರಲ್ಲಿ ಭಾರತೀಯ ಮಾರುಕಟ್ಟೆಯಿಂದ ನಿರ್ಗಮಿಸಿದ್ದ ಕಂಪೆನಿ, ಆ ಬಳಿಕ ಹೀರೋ ಮೋಟೋಕಾರ್ಪ್ನ ಸಹಭಾಗಿತ್ವದಲ್ಲಿ ಮರಳಿತ್ತು. ಇದೀಗ ಎರಡು ವರ್ಷಗಳಲ್ಲೇ ಮತ್ತೊಮ್ಮೆ ಭಾರತದ ಹೈ-ಎಂಡ್ ಮೋಟಾರ್‌ಸೈಕಲ್ ವಿಭಾಗದಲ್ಲಿ ನಂಬರ್ 1 ಸ್ಥಾನ ಅಲಂಕರಿಸುವ ಮೂಲಕ ಹೊಸ ಸಂಚಲನ ಸೃಷ್ಟಿಸಿದೆ.
SIAM ಹಂಚಿಕೊಂಡ ಮಾಹಿತಿಯ ಪ್ರಕಾರ, FY2022 ರಲ್ಲಿ ಹಾರ್ಲೆ 601 ಮೋಟಾರ್‌ಸೈಕಲ್‌ಗಳನ್ನು ಮಾರಾಟ ಮಾಡಿದೆ. ಅದರಲ್ಲಿ 531 ಯುನಿಟ್‌ಗಳು 1,000 ಸಿಸಿ ಮತ್ತು ಅದಕ್ಕಿಂತ ಹೆಚ್ಚಿನ ದ್ವಿಚಕ್ರ ವಾಹನ ವಿಭಾಗದಲ್ಲಿ ಮಾರಾಟವಾಗಿವೆ. ಕಂಪನಿಯು ವರ್ಷದಿಂದ ವರ್ಷಕ್ಕೆ ಶೇ. 37 ರಷ್ಟು ಬೆಳವಣಿಗೆಯನ್ನು ಕಂಡಿದೆ. ಅಂದರೆ FY2021 ರಲ್ಲಿ ಕೇವಲ 206 ಹಾರ್ಲೆ-ಡೇವಿಡ್ಸನ್ ಮೋಟಾರ್ಸೈಕಲ್ ಮಾರಾಟ ಮಾಡಲಾಗಿತ್ತು. ಇದೀಗ 601 ಮೋಟಾರ್ ಸೈಕಲ್ಗಳನ್ನು ಮಾರಾಟ ಮಾಡುವ ಮೂಲಕ ಭಾರತದ ಉನ್ನತ-ಮಟ್ಟದ ಮೋಟಾರ್‌ಸೈಕಲ್ ವಿಭಾಗದಲ್ಲಿ ಹಾರ್ಲೆ-ಡೇವಿಡ್ಸನ್ ಅಗ್ರಸ್ಥಾನಕ್ಕೇರಿದೆ.
ಹಾರ್ಲೆ ಡೇವಿಡ್ಸನ್ ಹೊರತಾಗಿ ಪ್ರೀಮಿಯಂ ಬೈಕ್ ವಿಭಾಗದಲ್ಲಿ ಟ್ರಯಂಪ್ ಮೋಟಾರ್‌ಸೈಕಲ್ಸ್ ಇಂಡಿಯಾ 336 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಹಾಗೆಯೇ ಕವಾಸಕಿ 283 ಯುನಿಟ್‌ಗಳನ್ನು ಮಾರಾಟ ಮಾಡಿದ್ರೆ, ಸುಜುಕಿ 233 ಮೋಟಾರ್ ಸೈಕಲ್ ಸೇಲ್ ಮಾಡಿದೆ. ಇನ್ನು ಹೋಂಡಾ 1,000 ಸಿಸಿ ಮತ್ತು ಅದಕ್ಕಿಂತ ಹೆಚ್ಚಿನ ಮೋಟಾರ್‌ಸೈಕಲ್ ವಿಭಾಗದಲ್ಲಿ 71 ಯುನಿಟ್‌ಗಳನ್ನು ಮಾರಾಟ ಮಾಡಿದೆ.
ಭಾರತದಲ್ಲಿ ಹಾರ್ಲೆಯ ಹಿಂದಿನ ಮಾರಾಟದ ಬಹುಪಾಲು ಸ್ಟ್ರೀಟ್ 750, ಐರನ್ 883 ಮತ್ತು ಫೋರ್ಟಿ-ಎಂನಂತಹ ಬೈಕ್ಗಳಿಗೆ ಸಲ್ಲುತ್ತದೆ. ಇದಲ್ಲದೆ ಪ್ಯಾನ್ ಅಮೇರಿಕ 1250, ಸ್ಪೋರ್ಟ್‌ಸ್ಟರ್ ಎಸ್, ಫ್ಯಾಬ್ ಬಾಬ್, ಫ್ಯಾಟ್ ಬಾಯ್, ಹೆರಿಟೇಜ್ ಕ್ಲಾಸಿಕ್, ರೋಡ್ ಕಿಂಗ್, ರೋಡ್ ಗ್ಲೈಡ್ ಮತ್ತು ಸ್ಟ್ರೀಟ್ ಗ್ಲೈಡ್‌ಗಳನ್ನು ಒಳಗೊಂಡಿರುವ ಬೈಕ್ಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಇದೀಗ ಭಾರತದಲ್ಲಿ ಹೈಎಂಡ್ ಬೈಕ್ ವಿಭಾಗದಲ್ಲಿ ನಂಬರ್ 1 ಅಗ್ರಸ್ಥಾನದಲ್ಲಿರುವ ಹಾರ್ಲೆ-ಡೇವಿಡ್ಸನ್ ಕಂಪೆನಿಯು ಈ ವರ್ಷದ ಕೊನೆಯಲ್ಲಿ ನೈಟ್‌ಸ್ಟರ್ ಎಸ್ ಅನ್ನು ಪರಿಚಯಿಸಲಿದೆ.
ಉದ್ಯಮದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ,
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.