ಭಾರತದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಯೇರಿಕೆಯ ಬೆನ್ನಲ್ಲೇ ಎಲೆಕ್ಟ್ರಿಕ್ ವಾಹನಗಳು ಸಂಚಲನ ಸೃಷ್ಟಿಸಲು ಆರಂಭಿಸಿದೆ. ಈಗಾಗಲೇ ಬಹುತೇಕ ಕಂಪೆನಿಗಳು ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸಲು ಮುಂದಾಗಿದೆ. ಆದರೆ ಇತ್ತ ಪ್ರಸ್ತುತ ರಸ್ತೆಗಿಳಿದಿರುವ ವಾಹನಗಳನ್ನು ಚಾರ್ಜ್ ಮಾಡಿಕೊಳ್ಳಲು ಸೂಪರ್ ಫಾಸ್ಟ್ ಚಾರ್ಜಿಂಗ್ ಸ್ಟೇಷನ್ಗಳಿಲ್ಲ ಎಂಬ ಕೊರಗು ಗ್ರಾಹಕರಲ್ಲಿದೆ. ಈ ಎಲ್ಲಾ ಕುಂದು-ಕೊರತೆಗಳನ್ನು ಮನಗಂಡಿರುವ ಮಾರುತಿ ಸುಜುಕಿ ಕಂಪೆನಿ ಹೊಸ ಮಾದರಿಯ ಕಾರನ್ನು ಪರಿಚಯಿಸಲು ಮುಂದಾಗಿದೆ.
ಹೌದು, ಟಾಟಾ ಮೋಟಾರ್ಸ್, ಮಹೀಂದ್ರಾ ಮತ್ತು ಹ್ಯುಂಡೈ ಹಾಗೂ ಇತರ ಕಂಪನಿಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್ ವಾಹನಗಳ ವಿಷಯದಲ್ಲಿ ಮಾರುತಿ ಕಂಪೆನಿ ಹಿಂದೆ ಉಳಿದಿದೆ ಎಂದೇ ಹೇಳಬಹುದು. ಆದರೆ ಈ ಹಿಂದೆ ಉಳಿಯುವಿಕೆಗೂ ಒಂದು ಕಾರಣವಿದೆ ಎಂದಿದ್ದಾರೆ ಮಾರುತಿ-ಸುಜುಕಿ. ಕಂಪೆನಿಯು ಹೊಸ ಮಾದರಿಯ ಹೈಬ್ರಿಡ್ ಎಲೆಕ್ಟ್ರಿಕ್ ಕಾರನ್ನು (ಎಚ್‌ಇವಿ) ನಿರ್ಮಿಸುತ್ತಿದೆ. ಈ ಕಾರಿನ ವಿಶೇಷತೆ ಎಂದರೆ ಇದಕ್ಕೆ ಪೆಟ್ರೋಲ್-ಡೀಸೆಲ್ ಬೇಕಿಲ್ಲ. ಹಾಗೆಯೇ ಚಾರ್ಜ್ ಕೂಡ ಮಾಡಬೇಕಿಲ್ಲ. ಮತ್ತೇಗೆ ಚಲಿಸಲಿದೆ ಎಂಬ ಪ್ರಶ್ನೆಗೆ ಕಂಪೆನಿ ನೀಡುವ ಉತ್ತರ ಈ ಕಾರಿನ ಬ್ಯಾಟರಿಗಳು ಸ್ವಯಂ ಚಾಲಿತವಾಗಿ ಚಾರ್ಜ್ ಆಗಲಿದೆ.
ಅಂದರೆ ವಾಹನವನ್ನು ಓಡಿಸುವಾಗ ಬ್ಯಾಟರಿಗಳು ಆಟೋಮ್ಯಾಟಿಕ್ ಚಾರ್ಜ್ ಆಗಲಿದ್ದು, ಅದರಂತೆ ಇಂಧನ ತುಂಬಿಸದೇ ಅಥವಾ ಚಾರ್ಜ್ ಸ್ಟೇಷನ್ಗೆ ಹೋಗದೇ ಕಾರನ್ನು ಓಡಿಸುತ್ತಲೇ ಇರಬಹುದು. ಇದರಿಂದ ಇಂಧನದ ಖರ್ಚು-ವೆಚ್ಚ ಕೂಡ ವಾಹನ ಬಳಕೆದಾರರಿಗೆ ಉಳಿತಾಯವಾಗಲಿದೆ.
ಈ ಕಾರುಗಳಲ್ಲಿ, ಎಲೆಕ್ಟ್ರಿಕ್ ಚಾರ್ಜಿಂಗ್ಗಾಗಿ ರಚಿಸಲಾದ ವಿಶೇಷ ಇಂಟರ್ನಲ್ ಕಂಬುಷ್ಟನ್ ಎಂಜಿನ್ (ICE-electrified vehicles) ನೀಡಲಾಗುತ್ತಿದ್ದು, ಇದು ಬ್ಯಾಟರಿಗಳಿಗೆ ಪವರ್ ನೀಡುತ್ತದೆ. ಅಂದರೆ ವಾಹನದ ಚಕ್ರದ ತಿರುಗುವಿಕೆಯ ಜೊತೆಗೆ ಕಾರಿನಲ್ಲಿ ನೀಡಲಾಗಿರುವ ಬ್ಯಾಟರಿಗಳು ಆಟೋಮ್ಯಾಟಿಕ್ ಆಗಿ ಚಾರ್ಜ್ ಆಗುತ್ತದೆ. ಇದರಿಂದ ಬ್ಯಾಟರಿ ಚಾರ್ಜ್ಗಾಗಿ ಬೇರೆ ಪಾವತಿಸಬೇಕಾಗಿಲ್ಲ.
ಜಪಾನಿನ ಟೊಯೋಟಾ ಕಂಪೆನಿಯ ಜೊತೆಗೂಡಿ ಮಾರುತಿ ಸುಜುಕಿ ಈ ಹೈಬ್ರಿಡ್ ಎಲೆಕ್ಟ್ರಿಕ್ ಕಾರನ್ನು ನಿರ್ಮಿಸುತ್ತಿದ್ದು, ಮುಂದಿನ ತಿಂಗಳಿನಿಂದ ಕೆಲವು ಎಲೆಕ್ಟ್ರಿಕ್ ವಾಹನಗಳ ಜಂಟಿ ಪರೀಕ್ಷೆ ನಡೆಸಲಿದ್ದೇವೆ ಎಂದು ಮಾರುತಿ ಸುಜುಕಿ ಕಂಪೆನಿಯ ಕಾರ್ಪೊರೇಟ್ ಕಾರ್ಯನಿರ್ವಾಹಕ ನಿರ್ದೇಶಕ ರಾಹುಲ್ ಭಾರತಿ ತಿಳಿಸಿದ್ದಾರೆ.
ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಮೂಲಸೌಕರ್ಯವು ದೇಶದಲ್ಲಿ ಉತ್ತಮವಾಗಿ ಅಭಿವೃದ್ಧಿ ಹೊಂದಿಲ್ಲದಿದ್ದರೆ, ಸ್ವಯಂ-ಚಾರ್ಜಿಂಗ್ ತಂತ್ರಜ್ಞಾನವು ಉತ್ತಮ ಆಯ್ಕೆಯಾಗಿದೆ. ಅದನ್ನು ಗಮನದಲ್ಲಿಟ್ಟುಕೊಂಡು, ನಾವು ಹೈಬ್ರಿಡ್ ಎಲೆಕ್ಟ್ರಿಕ್ ಕಾರಿನ ಅಭಿವೃದ್ಧಿಯತ್ತ ಗಮನ ಹರಿಸುತ್ತಿದ್ದೇವೆ ಎಂದು ರಾಹುಲ್ ತಿಳಿಸಿದ್ದಾರೆ.
Published On - 8:54 pm, Mon, 23 August 21