Tesla: ಸುಂಕ ಕಡಿತ ಇಲ್ಲ, ಮೇಕ್ ಇನ್ ಇಂಡಿಯಾ ‘ಟೆಸ್ಲಾ’ ಮಾಡಿ ಎಂದ ಕೇಂದ್ರ ಸರ್ಕಾರ

| Updated By: ಝಾಹಿರ್ ಯೂಸುಫ್

Updated on: Sep 11, 2021 | 3:29 PM

Elon Musk's Tesla: ಈ ಹಿಂದೆ ಆಮದು ಸುಂಕವನ್ನು ಕಡಿತಗೊಳಿಸುವಂತೆ ಟೆಸ್ಲಾ ಕಂಪೆನಿ ಸರಕಾರಕ್ಕೆ ಮನವಿ ಸಲ್ಲಿಸಿತ್ತು. ಅಲ್ಲದೆ ಸುಂಕ ಕಡಿತಗೊಳಿಸಿದ್ದಲ್ಲಿ ಮುಂದಿನ ದಿನಗಳಲ್ಲಿ ಭಾರತದಲ್ಲಿಯೇ ಫ್ಯಾಕ್ಟರಿ ಆರಂಭಿಸುವ ಬಗ್ಗೆಯೂ ಯೋಚಿಸುವುದಾಗಿ ಟೆಸ್ಲಾ ಮುಖ್ಯಸ್ಥ ಎಲಾನ್‌ ಮಸ್ಕ್‌ ತಿಳಿಸಿದ್ದರು.

Tesla: ಸುಂಕ ಕಡಿತ ಇಲ್ಲ, ಮೇಕ್ ಇನ್ ಇಂಡಿಯಾ ಟೆಸ್ಲಾ ಮಾಡಿ ಎಂದ ಕೇಂದ್ರ ಸರ್ಕಾರ
Elon Musk's Tesla
Follow us on

ಎಲೆಕ್ಟ್ರಿಕ್ ವಾಹನಗಳ (Electric Vehicles) ಆಮದು ಸುಂಕವನ್ನು ತಗ್ಗಿಸುವ ಯಾವುದೇ ಯೋಜನೆ ಸರ್ಕಾರ ಮುಂದಿಲ್ಲ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ. ಇದರೊಂದಿಗೆ ಭಾರತದಲ್ಲಿ ತೆರಿಗೆ ಕಡಿತದ ನಿರೀಕ್ಷೆಯಲ್ಲಿದ್ದ ಟೆಸ್ಲಾ (Tesla) ಕಂಪೆನಿಗೆ ನಿರಾಸೆಯಾಗಿದೆ. ಅಷ್ಟೇ ಅಲ್ಲದೆ ಯಾವುದೇ ತೆರಿಗೆ ರಿಯಾಯಿತಿಗಳನ್ನು ಪರಿಗಣಿಸುವ ಮೊದಲು ಮೆಕ್ ಇನ್ ಇಂಡಿಯಾ (Make In India) ಅಡಿಯಲ್ಲಿ ಟೆಸ್ಲಾ ಕಂಪೆನಿಯು ತನ್ನ ಐಕಾನಿಕ್ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯನ್ನು ಭಾರತದಲ್ಲಿ ಆರಂಭಿಸುವಂತೆ ತಿಳಿಸಲಾಗಿದೆ. ಈ ಹಿಂದೆ ಆಮದು ಸುಂಕವನ್ನು ಕಡಿತಗೊಳಿಸುವಂತೆ ಟೆಸ್ಲಾ ಕಂಪೆನಿ ಸರಕಾರಕ್ಕೆ ಮನವಿ ಸಲ್ಲಿಸಿತ್ತು. ಅಲ್ಲದೆ ಸುಂಕ ಕಡಿತಗೊಳಿಸಿದ್ದಲ್ಲಿ ಮುಂದಿನ ದಿನಗಳಲ್ಲಿ ಭಾರತದಲ್ಲಿಯೇ ಫ್ಯಾಕ್ಟರಿ ಆರಂಭಿಸುವ ಬಗ್ಗೆಯೂ ಯೋಚಿಸುವುದಾಗಿ ಟೆಸ್ಲಾ ಮುಖ್ಯಸ್ಥ ಎಲಾನ್‌ ಮಸ್ಕ್‌ ತಿಳಿಸಿದ್ದರು. ಆದರೀಗ ಟೆಸ್ಲಾ ವಾಹನಗಳ ಮೇಲಿನ ಸುಂಕ ಕಡಿತವಿಲ್ಲ ಎಂದಿರುವ ಸರ್ಕಾರ, ಭಾರತದಲ್ಲೇ ಮೇಕ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ ವಾಹನ ಉತ್ಪಾದನೆ ಮಾಡುವಂತೆ ತಿಳಿಸಿದೆ.

ಸರ್ಕಾರವು ಯಾವುದೇ ಆಟೋ ಸಂಸ್ಥೆಗೆ ಆಮದು ಸುಂಕ ವಿನಾಯಿತಿ ಅಥವಾ ತೆರಿಗೆ ಕಡಿತ ರಿಯಾಯಿತಿಗಳನ್ನು ನೀಡುತ್ತಿಲ್ಲ. ಟೆಸ್ಲಾ ಕಂಪೆನಿಗೆ ಆಮದು ಸುಂಕದ ವಿನಾಯಿತಿ ನೀಡುವುದರಿಂದ ಭಾರತದಲ್ಲಿ ಶತಕೋಟಿ ಡಾಲರ್ ಹೂಡಿಕೆ ಮಾಡಿದ ಇತರ ಕಂಪನಿಗಳ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಅಂತಹ ಯಾವುದೇ ಯೋಜನೆ ಸರ್ಕಾರ ಮುಂದಿಲ್ಲ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಿಳಿಸಿದೆ.

ಪ್ರಸ್ತುತ, ಆಮದು ಮಾಡಿಕೊಳ್ಳುವ ಕಾರುಗಳು ಇಂಜಿನ್ ಗಾತ್ರ ಮತ್ತು ವೆಚ್ಚ, ವಿಮೆ ಮತ್ತು ಸರಕು (ಸಿಐಎಫ್) ಮೌಲ್ಯವನ್ನು ಅವಲಂಬಿಸಿ 60% ರಿಂದ 100% ವರೆಗಿನ ಕಸ್ಟಮ್ಸ್ ಸುಂಕ ನೀಡಬೇಕಾಗಿ ಬರಬಹುದು. ಹೀಗಾಗಿ ಭಾರತೀಯ ರಸ್ತೆ ಸಚಿವಾಲಯಕ್ಕೆ ಪತ್ರ ಬರೆದಿದ್ದ ಟೆಸ್ಲಾ ಕಂಪೆನಿ, USD 40,000 ಕ್ಕಿಂತ ಹೆಚ್ಚಿನ ಕಸ್ಟಮ್ಸ್ ಮೌಲ್ಯ ಹೊಂದಿರುವ ವಾಹನಗಳ ಮೇಲೆ ಸುಂಕ ವಿನಾಯಿತಿ ನೀಡುವಂತೆ ಮನವಿ ಮಾಡಿತ್ತು.

ಈ ಪ್ರಸ್ತಾಪದಿಂದ ಭಾರತೀಯ ವಾಹನ ಮಾರುಕಟ್ಟೆಯ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ. ಏಕೆಂದರೆ ಯಾವುದೇ ಭಾರತೀಯ ಕಂಪೆನಿಗಳು ದುಬಾರಿ EV ಅಥವಾ ICE ಕಾರ್ ಅನ್ನು ಉತ್ಪಾದಿಸುತ್ತಿಲ್ಲ. ಹೀಗಾಗಿ 40,000 ಯುಎಸ್​ ಡಾಲರ್​ಗಿಂತ ಕ್ಕಿಂತ ಹೆಚ್ಚಿನ ಮೌಲ್ಯ  ಹೊಂದಿರುವ ಟೆಸ್ಲಾ ಕಾರುಗಳ ಮೇಲೆ ಆಮದು ಸುಂಕ ವಿನಾಯಿತಿ ನೀಡಬಹುದು ಎಂಬ ವಾದವನ್ನು ಅಮೆರಿಕನ್ ಕಂಪೆನಿ ಟೆಸ್ಲಾ ಮುಂದಿಟ್ಟಿತ್ತು.

ಇದಾಗ್ಯೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಇ-ವಾಹನಗಳ ಬೇಡಿಕೆ ಹಾಗೂ ಬಳಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಟೆಸ್ಲಾ ಭಾರತದಲ್ಲಿ ತನ್ನ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಸುವರ್ಣಾವಕಾಶವಿದೆ ಎಂದು ಹೇಳಿದ್ದರು. ಟೆಸ್ಲಾ ಈಗಾಗಲೇ ಭಾರತೀಯ ವಾಹನ ತಯಾರಕರಿಂದ ವಿವಿಧ ಆಟೋ ಪಾರ್ಟ್ಸ್​​ಗಳನ್ನು ಪಡೆಯುತ್ತಿದೆ. ಕಂಪೆನಿಯು ಇಲ್ಲೇ ಅದರ ಬೇಸ್ ಸ್ಥಾಪಿಸುವುದರಿಂದ ಆರ್ಥಿಕವಾಗಿ ಲಾಭದಾಯಕವಾಗಲಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ಗಡ್ಕರಿ ತಿಳಿಸಿದ್ದರು. ಇದೀಗ ಅದನ್ನೇ ಪುನರಾವರ್ತಿಸಿರುವ ಕೇಂದ್ರ ಸರ್ಕಾರ ಆಮದು ಸುಂಕದ ವಿನಾಯಿತಿಯನ್ನು ನೀಡಲಾಗುವುದಿಲ್ಲ ಎಂದು ತಿಳಿಸಿದೆ. ಅಷ್ಟೇ ಅಲ್ಲದೆ ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಭಾರತದಲ್ಲೇ ವಾಹನೋತ್ಪಾದನೆ ಮಾಡುವಂತೆ ಟೆಸ್ಲಾಗೆ ಮನವಿ ಮಾಡಿದೆ.

ಇದನ್ನೂ ಓದಿ: 16 ಸಿಕ್ಸರ್, 4 ಫೋರ್: ಒಂದೇ ಓವರ್​ನಲ್ಲಿ 6 ಸಿಕ್ಸ್ ಸಿಡಿಸಿ ವಿಶ್ವ ದಾಖಲೆ ಬರೆದ ಜಸ್ಕರನ್

ಇದನ್ನೂ ಓದಿ: Rashid Khan: ಟಿ20 ವಿಶ್ವಕಪ್​ಗೆ ಅಫ್ಘಾನ್ ತಂಡ ಪ್ರಕಟ: ನಾಯಕತ್ವಕ್ಕೆ ರಶೀದ್ ಖಾನ್ ರಾಜೀನಾಮೆ

ಇದನ್ನೂ ಓದಿ: BMW CE 02: 90 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಬೈಕ್ ಪರಿಚಯಿಸಿದ BMW

ಇದನ್ನೂ ಓದಿ: Crime News: ತಾಯಿಗೆ ಅನೈತಿಕ ಸಂಬಂಧ: ಅದನ್ನೇ ಬಂಡವಾಳ ಮಾಡಿಕೊಂಡ ಮಗಳು

(Modi govt wants Elon Musk’s Tesla to first ‘Make in India’)