ಭಾರತೀಯ ಮೂಲದ ಅಮೆರಿಕ ಕ್ರಿಕೆಟಿಗ ಜಸ್ಕರನ್ ಮಲ್ಹೋತ್ರಾ (Jaskaran Malhotra) ಏಕದಿನ ಕ್ರಿಕೆಟ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಪಪುವಾ ನ್ಯೂ ಗಿನಿಯಾ (Papua New Guinea) ವಿರುದ್ದ ನಡೆದ ಅಂತಾರಾಷ್ಟ್ರೀಯ ಪಂದ್ಯದಲ್ಲಿ 6 ಎಸೆತಗಳಲ್ಲಿ 6 ಸಿಕ್ಸರ್ ಬಾರಿಸಿ ವಿಶ್ವ ದಾಖಲೆ ಬರೆದಿದ್ದಾರೆ. ಈ ಮೂಲಕ ಹರ್ಷಲ್ ಗಿಬ್ಸ್ ನಂತರ ಏಕದಿನ ಕ್ರಿಕೆಟ್ನಲ್ಲಿ ಒಂದು ಓವರ್ ನಲ್ಲಿ 6 ಸಿಕ್ಸರ್ ಬಾರಿಸಿದ ವಿಶ್ವದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ.
ಅಮೆರಿಕ-ಪಪುವಾ ನ್ಯೂ ಗಿನಿಯಾ ನಡುವಣ 2ನೇ ಏಕದಿನ ಪಂದ್ಯದಲ್ಲಿ ಜಸ್ಕರನ್ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು. ಮೊದಲ ಇನಿಂಗ್ಸ್ನ 50ನೇ ಓವರ್ ಎಸೆದ ಗೌಡಿ ಟೋಕಾರ ಪ್ರತಿಯೊಂದು ಎಸೆತಗಳನ್ನು ಸಿಕ್ಸರ್ಗೆ ಅಟ್ಟಿ ಸಿಕ್ಸರ್ ಸರದಾರ ಎನಿಸಿಕೊಂಡರು. ಒಟ್ಟು 124 ಎಸೆತಗಳನ್ನು ಎದುರಿಸಿ ಸ್ಪೋಟಕ ಇನಿಂಗ್ಸ್ ಆಡಿದ ಜಸ್ಕರನ್ 16 ಸಿಕ್ಸರ್ ಮತ್ತು 4 ಬೌಂಡರಿಗಳೊಂದಿಗೆ ಅಜೇಯ 173 ರನ್ ಬಾರಿಸಿದರು. ಅಂದರೆ ಫೋರ್-ಸಿಕ್ಸ್ಗಳ ಮೂಲಕ 20 ಎಸೆತಗಳಲ್ಲಿ ಅವರು 112 ರನ್ ಚಚ್ಚಿದ್ದರು.
ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾದ ಹರ್ಷಲ್ ಗಿಬ್ಸ್ ಏಕದಿನ ಕ್ರಿಕೆಟ್ ನಲ್ಲಿ ಈ ಸಾಧನೆ ಮಾಡಿದ್ದರು. 2007 ರಲ್ಲಿ ನೆದರ್‌ಲ್ಯಾಂಡ್ಸ್ ವಿರುದ್ಧ ನಡೆದ ಏಕದಿನ ವಿಶ್ವಕಪ್‌ನಲ್ಲಿ ಗಿಬ್ಸ್ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿದ್ದರು. ಹಾಗೆಯೇ ಟೀಮ್ ಇಂಡಿಯಾದ ಮಾಜಿ ಸ್ಪೋಟಕ ಬ್ಯಾಟ್ಸ್ಮನ್ ಯುವರಾಜ್ ಸಿಂಗ್ 2007ರ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಓವರ್ನಲ್ಲಿ 6 ಸಿಕ್ಸರ್ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು. ಹಾಗೆಯೇ ವೆಸ್ಟ್ ಇಂಡೀಸ್ ನ ಕೀರನ್ ಪೊಲಾರ್ಡ್ ಶ್ರೀಲಂಕಾ ವಿರುದ್ಧದ ಟಿ20 ಒಂದೇ ಓವರ್ ನಲ್ಲಿ 6 ಸಿಕ್ಸರ್ ಬಾರಿಸಿದ್ದರು. ಇದೀಗ ಸಿಕ್ಸರ್ ಸರದಾರರ ಪಟ್ಟಿಗೆ ಜಸ್ಕರನ್ ಮಲ್ಹೋತ್ರಾ ಸೇರ್ಪಡೆಯಾಗಿದ್ದಾರೆ.
ಅಷ್ಟೇ ಅಲ್ಲದೆ ಯುಎಸ್ಎ (ಅಮೆರಿಕ) ಪರ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಮೂಡಿಬಂದ ಮೊದಲ ಶತಕ ಕೂಡ ಇದಾಗಿದೆ. ಈ ಮೂಲಕ ಅಮೆರಿಕ ಪರ ಚೊಚ್ಚಲ ಒನ್ಡೆ ಸೆಂಚುರಿ ಬಾರಿಸಿದ ದಾಖಲೆ ಕೂಡ ಜಸ್ಕರನ್ ಮಲ್ಹೋತ್ರಾ ಪಾಲಾಗಿದೆ. ಹಾಗೆಯೇ ಏಕದಿನ ಕ್ರಿಕೆಟ್ನಲ್ಲಿ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಅತಿ ಹೆಚ್ಚು ರನ್ ಬಾರಿಸಿದ ವಿಶ್ವ ದಾಖಲೆಯನ್ನು ಮಲ್ಹೋತ್ರಾ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಈ ಹಿಂದೆ ಈ ದಾಖಲೆ ಎಬಿ ಡಿವಿಲಿಯರ್ಸ್ ಹೆಸರಿನಲ್ಲಿತ್ತು. ಇದೀಗ 5ನೇ ಕ್ರಮಾಂಕದಲ್ಲಿ 173 ರನ್ ಬಾರಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ ಜಸ್ಕರನ್ ಮಲ್ಹೋತ್ರಾ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಮೆರಿಕ ತಂಡ 271 ರನ್ ಕಲೆಹಾಕಿತು. ಈ ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನತ್ತಿದ ಪಪುವಾ ತಂಡ 137 ರನ್ಗೆ ಆಲೌಟ್ ಆಗುವ ಮೂಲಕ 134 ರನ್ಗಳಿಂದ ಸೋಲನುಭವಿಸಿತು.
Published On - 3:02 pm, Fri, 10 September 21