ದೆಹಲಿ: ಬಹುನಿರೀಕ್ಷಿತ ಐಪಿಒ ಎನಿಸಿದ್ದ ಪೇಟಿಎಂ ಗುರುವಾರ ಷೇರುಪೇಟೆಯಲ್ಲಿ ಲಿಸ್ಟ್ ಆಯಿತು. ಆದರೆ ಮೊದಲ ದಿನವೇ ಷೇರುಗಳು ಮೌಲ್ಯ ಕಳೆದುಕೊಂಡು ಶೇ 28ರಷ್ಟು ಕುಸಿತ ಕಂಡವು. ಕಂಪನಿಯ ಬೆಲೆಯನ್ನು 20 ಶತಕೋಟಿ ರೂಪಾಯಿ ಎಂದು ಹಣಕಾಸು ಕಂಪನಿಗಳು ತಪ್ಪಾಗಿ ಅಂದಾಜಿಸಿದ್ದವು ಎಂದು ಹೂಡಿಕೆದಾರರು ಮತ್ತು ವಿಶ್ಲೇಷಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಷೇರುಪೇಟೆಯಲ್ಲಿ ಕಂಪನಿ ಲಿಸ್ಟ್ ಆದ ಮೊದಲ ದಿನ ಆನಂದಬಾಷ್ಪ ಹರಿಸಿದ್ದ ಸಿಇಒ ವಿಜಯ್ ಶೇಖರ್ ಶರ್ಮಾ, ಷೇರುಪೇಟೆಯಲ್ಲಿ ಕಂಪನಿಯ ಷೇರುಮೌಲ್ಯವು ಮೊದಲ ದಿನವೇ ಕುಸಿತ ಕಂಡಿದ್ದಕ್ಕೆ ವಿಚಲಿತರೇನೂ ಆಗಲಿಲ್ಲ. ಬದಲಿಗೆ, ‘ಒಂದೇ ದಿನಕ್ಕೆ ಹೂಡಿಕೆದಾರರು ಬರುವುದಿಲ್ಲ’ ಎಂದು ಆತ್ಮವಿಶ್ವಾಸದ ಮಾತುಗಳನ್ನು ಆಡಿದರು.
‘ಒಂದು ದಿನದ ನಷ್ಟ ಇಡೀ ಭವಿಷ್ಯವನ್ನು ಹೇಳಲಾರದು. ಪೇಟಿಎಂನ ವ್ಯಾಪಾರದ ಮಾದರಿ ವಿವರಿಸಲು ನಾವು ಇನ್ನಷ್ಟು ಉತ್ತಮ ಕೆಲಸ ಮಾಡಬೇಕು. ಇದು ಕೇವಲ ಮೊದಲ ದಿನವಷ್ಟೇ. ನಮ್ಮ ವಹಿವಾಟು ಮತ್ತು ಲಾಭ ಗಳಿಕೆಯು ದಿನದಿಂದ ದಿನಕ್ಕೆ ಹೆಚ್ಚಾಗಲಿದೆ. ನಾವು ನಮ್ಮ ವಹಿವಾಟಿನ ಗಾತ್ರವನ್ನು ಸತತವಾಗಿ ವಿಸ್ತರಿಸುತ್ತಲೇ ಇರುತ್ತೇವೆ’ ಎಂದು ಶರ್ಮಾ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ವ್ಯಾಪಾರ ಎನ್ನುವುದು ಟೆಸ್ಟ್ ಮ್ಯಾಚ್ಗಳ ಹಲವು ಸರಣಿಗಳಿದ್ದಂತೆ. ಒಂದು ಅಥವಾ ಎರಡು ವಿಕೆಟ್ ಕಳೆದುಕೊಂಡ ತಕ್ಷಣ ಎಲ್ಲವೂ ಮುಗಿದಂತೆ ಅಲ್ಲ ಎಂದು ಹೇಳಿದರು.
ಹೂಡಿಕೆಯ ಪಯಣಕ್ಕೆ ಷೇರುಪೇಟೆಗೆ ಉತ್ತಮ ಆದಾಯ ತಂದುಕೊಡುವ ಗುಣಮಟ್ಟದ ಕಂಪನಿ ಬೇಕು. ಪೇಟಿಎಂ ನೀಡುವ ಸೇವೆಗಳನ್ನು ಅರ್ಥ ಮಾಡಿಕೊಳ್ಳಲು ಹೂಡಿಕೆದಾರರಿಗೆ ನಾವು ಕಾಲಾವಕಾಶ ನೀಡಬೇಕಿದೆ. ವಿಮೆ, ಚಿನ್ನದ ಮಾರಾಟ, ಸಿನಿಮಾ ಮತ್ತು ವಿಮಾನಗಳ ಟಿಕೆಟ್ ಮಾರಾಟ, ಬ್ಯಾಂಕ್ ಠೇವಣಿಗಳು ಮತ್ತು ಹಣ ವರ್ಗಾವಣೆ ಸೇರಿದಂತೆ ಹತ್ತಾರು ಬಗೆಯ ಸೇವೆಗಳನ್ನು ನಾವು ಒದಗಿಸುತ್ತಿದ್ದೇವೆ ಎಂದು ಹೇಳಿದರು. ಪೇಮೆಂಟ್ಸ್ ಕಂಪೆನಿಯು ವಿಮೆ ಮತ್ತು ಹೂಡಿಕೆಗಳಿಗೆ ವಹಿವಾಟು ವಿಸ್ತರಿಸಬಹುದು ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ನಮ್ಮ ಕಂಪನಿಯ ವ್ಯಾಪಾರದ ರೀತಿಯನ್ನು ವಿವರಿಸುವುದು ಮತ್ತು ಅದನ್ನು ಅನುಷ್ಠಾನಕ್ಕೆ ತರುವುದು ಅತ್ಯಗತ್ಯವಾಗಿದೆ ಎಂದು ಶರ್ಮಾ ತಿಳಿಸಿದರು.
ಕಳೆದ ಜೂನ್ ತಿಂಗಳಿಗೆ ಅಂತ್ಯಗೊಂಡ ತ್ರೈಮಾಸಿಕದ ಫಲಿತಾಂಶದಲ್ಲಿ ಪೇಟಿಎಂ ₹ 3.82 ಶತಕೋಟಿ ನಷ್ಟ ಅನುಭವಿಸಿತ್ತು. ₹ 2,150ಕ್ಕೆ ಐಪಿಒ ನೀಡಿದ್ದ ಕಂಪನಿಯು ₹ 1,950ರಲ್ಲಿ ಲಿಸ್ಟ್ ಆಗಿ, ₹ 1,560ಕ್ಕೆ ಕುಸಿಯಿತು. ಪೇಟಿಎಂ ಕಂಪನಿಯ ಮೌಲ್ಯವನ್ನು ಸರಿಯಾಗಿ ಮಾಡಿಲ್ಲ ಎಂಬ ವರದಿಗಳನ್ನು ನಿರಾಕರಿಸಿದ ಅವರು, ನಾವು ಎಂಜಿನಿಯರಿಂಗ್ ಮತ್ತು ಮಾರಾಟ ಪ್ರತಿನಿಧಿಗಳ ಮೇಲೆ ಹೂಡಿಕೆ ಮಾಡುತ್ತಿದ್ದೇವೆ. ಹೊಸ ಗ್ರಾಹಕರನ್ನು ನಮ್ಮತ್ತ ಸೆಳೆದುಕೊಳ್ಳುವ ಆಕಾಂಕ್ಷೆ ಮೀರಿದರೆ ನಾವು ಹೆಚ್ಚಿನ ಲಾಭವನ್ನು ಈಗಲೇ ತೋರಿಸಬಹುದಿತ್ತು. ಆದರೆ ನಾವು ಭವಿಷ್ಯಕ್ಕಾಗಿ ಹೂಡಿಕೆ ಮುಂದುವರಿಸುತ್ತಿದ್ದೇವೆ ಎಂದು ಮಾಧ್ಯಮಗಳ ಎದುರು ತಮ್ಮ ಕಾರ್ಯತಂತ್ರ ವಿವರಿಸಿದರು.
ಇದನ್ನೂ ಓದಿ: Closing Bell: ಸೆನ್ಸೆಕ್ಸ್, ನಿಫ್ಟಿ ಇಳಿಕೆ; ಪೇಟಿಎಂ ಲಿಸ್ಟಿಂಗ್ ದಿನ 589 ರೂ. ಅಥವಾ ಶೇ 27ರಷ್ಟು ಕುಸಿತ
ಇದನ್ನೂ ಓದಿ: Paytm Listing: ಪೇಟಿಎಂ ಷೇರು ವಿತರಣೆಗಿಂತ 200 ರೂಪಾಯಿ ಕಡಿಮೆಗೆ ಲಿಸ್ಟಿಂಗ್; ದಿನದ ಕನಿಷ್ಠ 1586 ರೂ.