Cars Price Hike: ಈ ವರ್ಷದಲ್ಲಿ ಮೂರನೇ ಬಾರಿಗೆ ಟಾಟಾ ಕಂಪೆನಿ ಪ್ರಯಾಣಿಕರ ವಾಹನ ಬೆಲೆ ಹೆಚ್ಚಳ; ಇಂದಿನಿಂದಲೇ ಅನ್ವಯ

| Updated By: Srinivas Mata

Updated on: Aug 03, 2021 | 2:11 PM

ಈ ವರ್ಷದಲ್ಲಿ ಮೂರನೇ ಬಾರಿಗೆ ಟಾಟಾ ಮೋಟಾರ್ಸ್​ನಿಂದ ಬೆಲೆ ಏರಿಕೆ ಘೋಷಣೆ ಮಾಡಲಾಗಿದ್ದು, ಪರಿಷ್ಕೃತ ದರಗಳು ಇಂದಿನಿಂದಲೇ ಜಾರಿಗೆ ಬರಲಿವೆ.

Cars Price Hike: ಈ ವರ್ಷದಲ್ಲಿ ಮೂರನೇ ಬಾರಿಗೆ ಟಾಟಾ ಕಂಪೆನಿ ಪ್ರಯಾಣಿಕರ ವಾಹನ ಬೆಲೆ ಹೆಚ್ಚಳ; ಇಂದಿನಿಂದಲೇ ಅನ್ವಯ
ಸಾಂದರ್ಭಿಕ ಚಿತ್ರ
Follow us on

2021ನೇ ಇಸವಿಯಲ್ಲಿ ಕಾರುಗಳ ಬೆಲೆ ಏರಿಕೆ ಪರ್ವ ಇನ್ನೆಷ್ಟು ಕಾಲ ಮುಂದುವರಿಯುತ್ತದೋ ಗೊತ್ತಿಲ್ಲ. ಕಾರು ಉತ್ಪಾದನೆಗಾಗಿ ಬಳಸುವ ಲೋಹಗಳ ದರದಲ್ಲಿ ಭಾರೀ ಏರಿಕೆಯಾಗಿ, ಅದನ್ನು ಹಂತಹಂತವಾಗಿ ಗ್ರಾಹಕರ ಮೇಲೆ ವರ್ಗಾಯಿಸಲಾಗುತ್ತಿದೆ. ಇದೀಗ ಟಾಟಾ ಮೋಟಾರ್ಸ್​ನಿಂದ (Tata Motors) ಭಾರತದಲ್ಲಿ ಪ್ರಯಾಣಿಕ ವಾಹನಗಳ ಮೇಲೆ ಬೆಲೆ ಹೆಚ್ಚಳವನ್ನು ಮತ್ತೊಮ್ಮೆ ಘೋಷಣೆ ಮಾಡಲಾಗಿದೆ. ಆದರೆ ಇಲ್ಲಿ ಗಮನಿಸಬೇಕಾದ ಅಂಶ ಏನೆಂದರೆ, ಈ ವರ್ಷ ಹಲವು ಬಾರಿ ಬೆಲೆ ಏರಿಕೆ ಮಾಡಿರುವುದು ಟಾಟಾ ಕಂಪೆನಿಯೊಂದು ಮಾತ್ರವಲ್ಲ, ಮಾರುತಿ ಸುಜುಕಿ ಸೇರಿದಂತೆ ಇತರ ಕಂಪೆನಿಗಳು ಸಹ ದರ ಪರಿಷ್ಕರಣೆ ಮಾಡಿವೆ. ಆದರೆ ಈಗ ಈ ಲೇಖನದಲ್ಲಿ ಟಾಟಾ ಕಾರುಗಳ ಬೆಲೆ ಏರಿಕೆ ಬಗ್ಗೆ ತಿಳಿಸಲಾಗುವುದು. ದೇಶೀಯ ಕಾರು ತಯಾರಿಕೆ ಕಂಪೆನಿಯಾದ ಟಾಟಾದಿಂದ ಪ್ರಯಾಣಿಕರ ವಾಹನಗಳು ಸರಾಸರಿ ಶೇ 0.8ರಷ್ಟು ಹೆಚ್ಚಳ ಆಗಲಿದೆ. ಯಾವ ವೇರಿಯಂಟ್ ಹಾಗೂ ಮಾಡೆಲ್ ಎಂಬುದರ ಆಧಾರದಲ್ಲಿ ಇಂದಿನಿಂದ, ಅಂದರೆ ಆಗಸ್ಟ್​ 3ನೇ ತಾರೀಕಿನ ಮಂಗಳವಾರದಿಂದ ಹೆಚ್ಚಳ ಆಗಲಿದೆ.

ಈ ಸಲ ಟಾಟಾ ಕಾರುಗಳ ಬೆಲೆಯಲ್ಲಿ ಏರಿಕೆ ಮಾಡುವುದಕ್ಕೆ ಕಾರಣ ಏನು ಎಂಬುದನ್ನು ಗಮನಿಸುವುದಾದರೆ, ಮತ್ತೆ ಅದೇ ಹಳೆ ಕಾರಣ. ಕಾರು ಉತ್ಪಾದನೆಗೆ ಬಳಸುವಂಥ ಕಚ್ಚಾ ವಸ್ತುಗಳ ಬೆಲೆಯಲ್ಲಿ ಹೆಚ್ಚಳ ಆಗಿರುವುದರಿಂದ ಈ ಬೆಳವಣಿಗೆ ಆಗಿದೆ. ಈ ವರ್ಷದಲ್ಲಿ ಹೊಸ ಟಾಟಾ ಕಾರುಗಳ ಬೆಲೆಯಲ್ಲಿ ಮೂರನೇ ಬಾರಿಗೆ ಭಾರತದಲ್ಲಿ ಬೆಲೆ ಏರಿಕೆ ಮಾಡಲಾಗಿದೆ. ಕೊನೆಯದಾಗಿ 2021ರ ಮೇ ತಿಂಗಳಲ್ಲಿ ಶೇ 1.8ರ ತನಕ ಏರಿಕೆ ಮಾಡಲಾಗಿತ್ತು. ಈ ವರ್ಷದ ಆರಂಭದ ಜನವರಿಯಲ್ಲಿ 26,000 ರೂಪಾಯಿ ತನಕ ಹೆಚ್ಚಳ ಮಾಡಲಾಗಿತ್ತು.

ಟಾಟಾ ಮೋಟಾರ್ಸ್ ಸ್ಪಷ್ಟಪಡಿಸಿದಂತೆ, ಭಾರತದಲ್ಲಿ ಆಗಸ್ಟ್​ 31, 2021ರೊಳಗೆ ಮಾರಾಟ ಅಥವಾ ಬಿಲ್ ಆಗುವ ಟಾಟಾ ಕಾರುಗಳಿಗೆ ಈ ಬೆಲೆ ಏರಿಕೆಯಿಂದ ರಕ್ಷಣೆ ದೊರೆಯಲಿದೆ. ಈ ತೀರ್ಮಾನದ ಬಗ್ಗೆ ಕಂಪೆನಿ ಘೋಷಣೆ ಮಾಡಿರುವಂತೆ, ಗ್ರಾಹಕರಿಗೆ ನಮ್ಮ ಬದ್ಧತೆ ಮುಂದುವರಿಯಲಿದೆ. ಟಾಟಾ ಮೋಟಾರ್ಸ್​ ಮೇಲೆ ಅವರು ಇಟ್ಟಿರುವಂಥ ನಂಬಿಕೆ ಉಳಿಸಿಕೊಳ್ಳುತ್ತೇವೆ. ಯಾರು ಆಗಸ್ಟ್​ 31, 2021ರೊಳಗೆ ಅಥವಾ ಆ ದಿನದಂದು ಟಾಟಾ ಕಾರುಗಳ ಖರೀದಿ ಮಾಡುತ್ತಾರೋ ಅಂಥವರಿಗೆ ಈ ಬೆಲೆ ಏರಿಕೆಯಿಂದ ರಕ್ಷಣೆ ದೊರೆಯಲಿದೆ. ಇನ್ನು ಟಾಟಾ ಮೋಟಾರ್ಸ್​ ಗ್ರಾಹಕರು, ಡೀಲರ್​ಗಳು ಮತ್ತು ಸರಬರಾಜುದಾರರ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ಸಮಗ್ರವಾಗಿ “Business Agility Plan” ಸಿದ್ಧ ಮಾಡಿಟ್ಟುಕೊಂಡಿದೆ ಎಂದು ಕಂಪೆನಿಯಿಂದ ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ: Maruti Cars: ಮಾರುತಿ ಸ್ವಿಫ್ಟ್​, ಸಿಎನ್​ಜಿ ಕಾರುಗಳ ಬೆಲೆಯಲ್ಲಿ ಇಂದಿನಿಂದ ಏರಿಕೆ

(This Is The 3rd Time In Current Year Tata Motors Passenger Vehicle Price Increased From August 3rd Here Is The Details)