Will: ನೆಮ್ಮದಿಯ ಬದುಕಿಗೆ ವಿಲ್ ಬೇಕು: ವಿಲ್ ಮಾಡುವುದು ಹೇಗೆ?

|

Updated on: Aug 03, 2021 | 10:37 PM

ಹಲವು ಗೊಂದಲಗಳು, ಹಕ್ಕುದಾರರು ತಮ್ಮನ್ನು ತಾವು ನೈಜ ವಾರಸುದಾರರು ಎಂದು ಹಣಕಾಸು ಸಂಸ್ಥೆಗಳ ಎದುರು, ಕಂದಾಯ ಅಧಿಕಾರಿಗಳ ಎದುರು ಸಾಬೀತುಪಡಿಸಿಕೊಳ್ಳಬೇಕಾದ ಮುಜುಗರ ಮತ್ತು ಅಲೆದಾಟಗಳನ್ನು ಇದು ತಪ್ಪಿಸುತ್ತದೆ.

Will: ನೆಮ್ಮದಿಯ ಬದುಕಿಗೆ ವಿಲ್ ಬೇಕು: ವಿಲ್ ಮಾಡುವುದು ಹೇಗೆ?
ಪ್ರಾತಿನಿಧಿಕ ಚಿತ್ರ
Follow us on

ಆಸ್ತಿ ವರ್ಗಾವಣೆಯಲ್ಲಿ ವಿಲ್ ಅಥವಾ ಉಯಿಲು ಅತಿಮುಖ್ಯ ಪಾತ್ರ ನಿರ್ವಹಿಸುತ್ತದೆ. ವ್ಯಕ್ತಿಯೊಬ್ಬರ ನಿಧನದ ನಂತರ ಅವರ ಆಪ್ತರಿಗೆ ಸುಸೂತ್ರವಾಗಿ ಆಸ್ತಿ ಸಿಗುವಂತೆ ಆಗಲು ಇದು ಅತ್ಯಗತ್ಯ. ಹಲವು ಗೊಂದಲಗಳು, ಹಕ್ಕುದಾರರು ತಮ್ಮನ್ನು ತಾವು ನೈಜ ವಾರಸುದಾರರು ಎಂದು ಹಣಕಾಸು ಸಂಸ್ಥೆಗಳ ಎದುರು, ಕಂದಾಯ ಅಧಿಕಾರಿಗಳ ಎದುರು ಸಾಬೀತುಪಡಿಸಿಕೊಳ್ಳಬೇಕಾದ ಮುಜುಗರ ಮತ್ತು ಅಲೆದಾಟಗಳನ್ನು ಇದು ತಪ್ಪಿಸುತ್ತದೆ.

ವಿಲ್ ಮಾಡಲು ಇಚ್ಛಿಸುವವರು ವಕೀಲರ ನೆರವು ಪಡೆಯಬಹುದು. ಆದರೆ ಅದು ಕಡ್ಡಾಯವೇನೂ ಅಲ್ಲ. ಈಚಿನ ದಿನಗಳಲ್ಲಿ ವಿಲ್​ ಮಾಡುವುದನ್ನು ಸಾಕಷ್ಟು ಸರಳ ಮತ್ತು ಸುಲಭಗೊಳಿಸಲಾಗಿದೆ. ವಿಲ್​ ವಿಧಿವಿಧಾನಗಳ ಬಗ್ಗೆ ನೀವು ತಿಳಿಯಬೇಕಾದ ಅತಿಮುಖ್ಯ ಮಾಹಿತಿ ಇಲ್ಲಿದೆ. ಈ ಲೇಖನಕ್ಕೆ ಆಧಾರವಾಗಿ ‘ಮ್ಯೂಚುವಲ್ ಫಂಡ್ ಇನ್​ಸೈಟ್​’ ನಿಯತಕಾಲಿಕೆಯ ಆಗಸ್ಟ್​ ಸಂಚಿಕೆಯಲ್ಲಿ ಉಲ್ಲೇಖವಾಗಿರುವ ಹಲವು ಅಂಶಗಳನ್ನು ಆಧಾರವಾಗ ಬಳಸಿಕೊಳ್ಳಲಾಗಿದೆ.

1) ಸ್ವಯಂಘೋಷಣೆ: ವಿಲ್ ದಾಖಲೆಗಳು ಸಾಮಾನ್ಯವಾಗಿ ವೈಯಕ್ತಿಕ ವಿವರಗಳೊಂದಿಗೆ ಆರಂಭವಾಗುತ್ತವೆ. ಹೆಸರು, ವಯಸ್ಸು, ವಿಳಾಸ ಮತ್ತು ತಂದೆಯ ಹೆಸರಿನೊಂದಿಗೆ ನಿಮ್ಮ ಆರೋಗ್ಯ ಘೋಷಣೆಯು ಸೇರಿರುತ್ತದೆ. ಯಾರೊಬ್ಬರ ಒತ್ತಾಯದಿಂದಲೂ ನಾನು ಈ ಉಯಿಲು ಪತ್ರ ಮಾಡುತ್ತಿಲ್ಲ ಎಂಬುದನ್ನು ನೀವು ಘೋಷಿಸಿಕೊಳ್ಳಬೇಕಾಗುತ್ತದೆ. ಇದು ನನ್ನ ಹೊಸ ಉಯಿಲು ಪತ್ರವಾಗಿದ್ದು, ಈ ಹಿಂದಿನ ಉಯಿಲು ಅಪ್ರಸ್ತುತ ಎಂದು ಹೇಳಬೇಕಾಗುತ್ತದೆ. ಆಧಾರ್, ಪ್ಯಾನ್ ಸಂಖ್ಯೆ, ಅಥವಾ ಇತರ ಗುರುತು ಪುರಾವೆಗಳನ್ನು ನಮೂದಿಸುವುದು ನಿಮ್ಮ ದಾಖಲೆಯ ಮೌಲ್ಯ ಹೆಚ್ಚಾಗುವಂತೆ ಮಾಡುತ್ತದೆ.

2) ಕಾರ್ಯರೂಪಕ್ಕೆ ತರುವವರು ಯಾರು  ನಿರ್ಧರಿಸಿ: ನಿಮ್ಮ ಅನುಪಸ್ಥಿತಿಯಲ್ಲಿ ನಿಮ್ಮ ಪರವಾಗಿ ನಿಮ್ಮ ಜೀವಮಾನದ ಸಂಪಾದನೆಯನ್ನು ಸೇರಬೇಕಾದವರಿಗೆ ಸೇರಿಸುವ ಹೊಣೆಯನ್ನು (ಎಕ್ಸಿಕ್ಯೂಟರ್) ಯಾರಿಗೆ ವಹಿಸಿಕೊಡುತ್ತೀರಿ ಎಂಬುದನ್ನೂ ನೀವೇ ನಿರ್ಧರಿಸಬಹುದು. ಆತ ಅಥವಾ ಆಕೆ ಫಲಾನುಭವಿ ಆಗಿರಬಹುದು ಅಥವಾ ನಿಮ್ಮ ಕುಟುಂಬಕ್ಕೆ ಸಂಬಂಧಪಡದ ಮೂರನೇ ವ್ಯಕ್ತಿಯಾಗಿರಬಹುದು. ಈ ಪ್ರಕ್ರಿಯೆಯ ಮುಖ್ಯ ಉದ್ದೇಶವೆಂದರೆ ನಿಮ್ಮ ವಿಶ್ವಾಸಾರ್ಹ ವ್ಯಕ್ತಿಗೆ ನೀವು ವಿಲ್ ಮಾಡಿದ್ದೀರಿ ಎಂಬುದು ಮತ್ತು ಎಲ್ಲ ಮುಖ್ಯ ದಾಖಲೆಗಳು ಎಲ್ಲಿ ಸಿಗುತ್ತವೆ ಎಂಬ ಮಾಹಿತಿ ತಲುಪಿಸಬೇಕು. ನಿಮ್ಮ ಅನುಪಸ್ಥಿತಿಯಲ್ಲಿ ನಿಮ್ಮಿಚ್ಛೆಯಂತೆ ಆಸ್ತಿಯನ್ನು ಆತ ನಿಮ್ಮ ಪರವಾಗಿ ಹಂಚಿಕೆ ಮಾಡಿಕೊಳ್ಳಲು ನೆರವಾಗುತ್ತಾನೆ. ಅಂಥ ವ್ಯಕ್ತಿಯ ಹೆಸರನ್ನೂ ನೀವು ವಿಲ್ ಪತ್ರದಲ್ಲಿ ನಮೂದಿಸಬಹುದು.

3) ವಿಸ್ತೃತ ಪಟ್ಟಿ ಸಿದ್ಧಪಡಿಸಿ: ನಿಮ್ಮ ಯಾವ ಆಸ್ತಿಯನ್ನು ಯಾರು ಅನುಭವಿಸಬೇಕು ಎಂಬ ಪಟ್ಟಿಯನ್ನು ನಿಖರವಾಗಿ ಬರೆಯಿರಿ. ಯಾವುದಾದರೂ ನಿರ್ದಿಷ್ಟ ಉದ್ದೇಶಕ್ಕಾಗಿಯೇ ನಿರ್ದಿಷ್ಟ ವ್ಯಕ್ತಿ ಆ ಸಂಪತ್ತು ಬಳಸಬೇಕು ಎನ್ನುವುದು ನಿಮ್ಮ ಇಚ್ಛೆಯಾಗಿದ್ದರೆ ಅದನ್ನೂ ನೀವು ಬರೆಯಬಹುದು. ಉದಾಹರಣೆಗೆ ಉದಾಹರಣೆಗೆ ಇಂಥ ಬ್ಯಾಂಕ್​ನಲ್ಲಿರುವ ಇಂಥ ನಂಬರ್​ನ ಎಫ್​ಡಿಯ ಇಂತಿಷ್ಟು ಭಾಗವನ್ನು ಇಂಥ ಸಂಸ್ಥೆಗೆ ಇಂಥವರು ಕೊಡಬೇಕು ಎಂದು ನಮೂದಿಸಬಹುದು. ನೀವು ಯಾರಿಂದಲಾದರೂ ಕೈಸಾಲ ಪಡೆದಿದ್ದರೆ ಅದರ ವಿವರಗಳನ್ನೂ ವಿಲ್​ನಲ್ಲಿ ನಮೂದಿಸಿ, ಇಂಥ ಮೂಲದಿಂದ ಅದನ್ನು ಇಂಥವರು ತೀರಿಸಬೇಕು ಎಂದು ಹೇಳಬಹುದು.

4) ಇಬ್ಬರು ಸಾಕ್ಷಿಗಳ ಸಮ್ಮುಖದಲ್ಲಿ ಸಹಿ ಮಾಡಿ: ಉಯಿಲು ದಾಖಲೆಯ ಪ್ರತಿ ಹಾಳೆಗೂ ಇಬ್ಬರು ಸಾಕ್ಷಿಗಳ ಸಮ್ಮುಖದಲ್ಲಿ ದಿನಾಂಕ ಮತ್ತು ಸ್ಥಳವನ್ನು ನಮೂದಿಸಿ ಸಹಿ ಹಾಕಿ. ಆಗ ಮಾತ್ರ ಈ ಉಯಿಲು ಕಾನೂನು ಪ್ರಕಾರ ಊರ್ಜಿತವಾಗುತ್ತದೆ. ಈ ಸಾಕ್ಷಿಗಳು ನಿಮ್ಮ ಗೆಳೆಯರು ಅಥವಾ ನೆರೆಹೊರೆಯವರು ಆಗಬಹುದು. ಆದರೆ ಫಲಾನುಭವಿಗಳನ್ನು ಸಾಕ್ಷಿ ಎಂದು ಪರಿಗಣಿಸಲು ಅವಕಾಶವಿಲ್ಲ. ಈ ಉಯಿಲು ಪತ್ರವನ್ನು ಹೊರಗಿನ ಯಾವುದೇ ಒತ್ತಡವಿಲ್ಲದೆ ನೀವು ಬರೆದಿದ್ದೀರಿ ಎಂಬುದನ್ನು ಅವರು ದೃಢಪಡಿಸಬೇಕಾಗುತ್ತದೆ.

5) ವಿಲ್ ಪತ್ರದ ನೋಂದಣಿ ಕಡ್ಡಾಯವೇ: ವಿಲ್ ಪತ್ರದ ನೋಂದಣಿ ಕಡ್ಡಾಯವಲ್ಲ. ಆದರೆ ಹೀಗೆ ಮಾಡುವುದರಿಂದ ನಿಮ್ಮ ಪತ್ರದ ಕಾನೂನು ಮಾನ್ಯತೆ ಹೆಚ್ಚಾಗುತ್ತದೆ. ಅದರಲ್ಲಿಯೂ ನಿಮ್ಮ ಮಕ್ಕಳು ಅಥವಾ ಯಾರಾದರೂ ಆಕಾಂಕ್ಷಿಗಳಿಗೆ ಅವರಿಷ್ಟದ ಆಸ್ತಿಯನ್ನು ಕೊಡದಿರಲು ನಿರ್ಧರಿಸಿದ್ದ ಪಕ್ಷದಲ್ಲಿ ವಿಲ್ ಪತ್ರವನ್ನು ನೋಂದಣಿ ಮಾಡುವುದು ಒಳ್ಳೆಯದು. ಆದರೆ ಒಂದು ವಿಷಯ ಸ್ಪಷ್ಟವಾಗಿ ತಿಳಿದುಕೊಳ್ಳಿ. ವಿಲ್ ಪತ್ರ ನೋಂದಣಿಯಾಗಿದ್ದರೂ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶವಿದೆ.

6) ಕೊನೆಯ ಹೆಜ್ಜೆ: ವಿಲ್ ಪತ್ರದ ವಿಧಿವಿಧಾನಗಳು ಮುಗಿದ ಮೇಲೆ ಅದರ ಪ್ರತಿಯನ್ನು ಸುರಕ್ಷಿತ ಸ್ಥಳದಲ್ಲಿ ಇರಿಸಿ, ಅದನ್ನು ಎಲ್ಲಿಟ್ಟಿದ್ದೀರಿ ಎನ್ನುವುದನ್ನು ಎಕ್ಸಿಕ್ಯೂಟರ್​ಗೆ ತಿಳಿಸಲು ಮರೆಯದಿರಿ. ನಿಮ್ಮ ಆಸ್ತಿ ಮೌಲ್ಯದಲ್ಲಿ ಬದಲಾವಣೆ (ಹೆಚ್ಚಳ ಅಥವಾ ಇಳಿಕೆ) ಆದಾಗ ನಿಮ್ಮ ವಿಲ್​ ಸಹ ಬದಲಾಗಬೇಕಾಗಬಹುದು. ಕಾಲಕ್ಕೆ ತಕ್ಕಂತೆ ವಿಲ್ ದಾಖಲೆಯನ್ನು ಮರೆಯದೇ ಪರಿಷ್ಕರಿಸಿ.

(What is will and how to write register will according law)

ಇದನ್ನೂ ಓದಿ: Personal Finance: ಕೊರೊನಾ ಕಲಿಸಿದ ಪಾಠ: ಮುಂದಿನ ತಲೆಮಾರಿಗೆ ಆಸ್ತಿಯ ಸುಗಮ ವರ್ಗಾವಣೆಗೆ ಹಲವು ಮಾರ್ಗಗಳು

ಇದನ್ನೂ ಓದಿ: Mutual Funds CAS: ಮ್ಯೂಚುವಲ್​ ಫಂಡ್​ ಹೂಡಿಕೆದಾರರೆ? ಕನ್ಸಾಲಿಡೇಟೆಡ್ ಅಕೌಂಟ್ ಸ್ಟೇಟ್​ಮೆಂಟ್ ಬಗ್ಗೆ ಗೊತ್ತೆ?