ಬೆಂಗಳೂರು: ಭಾರತದಾದ್ಯಂತ ಕೊರೊನಾ ವೈರಸ್ ವಿರುದ್ಧದ ಮತ್ತೊಂದು ಹಂತದ ಲಸಿಕೆ ಅಭಿಯಾನ ಸೋಮವಾರ (ಮಾರ್ಚ್ 1) ಆರಂಭವಾಗಿದೆ. ಈ ಮೊದಲ ಹಂತದಲ್ಲಿ ವೈದ್ಯರಿಗೆ, ಆರೋಗ್ಯ ಕಾರ್ಯಕರ್ತರಿಗೆ ಹಾಗೂ ಮುಂಚೂಣಿಯ ಕೊವಿಡ್ ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿತ್ತು. ಈಗಿನ ಹಂತದಲ್ಲಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮತ್ತು 45 ವರ್ಷ ದಾಟಿದ ನಿಗದಿತ ಆರೋಗ್ಯ ಸಮಸ್ಯೆ ಹೊಂದಿರುವವರಿಗೆ ಲಸಿಕೆ ನೀಡಲಾಗುತ್ತಿದೆ.
ಕೊರೊನಾ ಸಾಂಕ್ರಾಮಿಕ ರೋಗದ ಪರಿಣಾಮ ಸುಮಾರು 1.1 ಕೋಟಿ ಜನರು ರೋಗಕ್ಕೆ ತುತ್ತಾಗಿದ್ದಾರೆ. ಜಗತ್ತಿನೆಲ್ಲೆಡೆ ಕೊರೊನಾ ವಿರುದ್ಧದ ಲಸಿಕೆ ಅಭಿಯಾನ ನಡೆಯುತ್ತಿದ್ದು, ಕೊವಿಡ್ ಇಳಿಕೆಯಾಗುವ ಬಗ್ಗೆ ಎಲ್ಲೆಡೆ ಆಶಾಭಾವನೆ ವ್ಯಕ್ತವಾಗಿದೆ. ಕೊರೊನಾ ವಿರುದ್ಧದ ಲಸಿಕೆಯನ್ನು ವಿವಿಧ ನಾಯಕರೂ ಪಡೆದುಕೊಂಡಿದ್ದಾರೆ. ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ನಿನ್ನೆ ಲಸಿಕೆ ಹಾಕಿಸಿಕೊಂಡಿದ್ದರು.
ಬೆಂಗಳೂರಿನಲ್ಲಿ 102 ವರ್ಷದ ನಿವೃತ್ತ ಯೋಧರೊಬ್ಬರು ನಿನ್ನೆ (ಮಾರ್ಚ್ 1) ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದಾರೆ. ಹಿರಿಯ ಯೋಧರು ಲಸಿಕೆ ಪಡೆದು ಮಾತನಾಡಿರುವ ವಿಡಿಯೊವನ್ನು ರಾಜ್ಯದ ಆರೋಗ್ಯ ಸಚಿವರು ಹಂಚಿಕೊಂಡಿದ್ದಾರೆ. ಹಿರಿಯ ವ್ಯಕ್ತಿ ರಾಜ್ಯದ ಇತರರಿಗೂ ಮಾದರಿ ಆಗಬೇಕು ಎಂದು ಡಾ.ಕೆ. ಸುಧಾಕರ್ ಆಶಯ ವ್ಯಕ್ತಪಡಿಸಿದ್ದಾರೆ.
‘102 ವರ್ಷದ ಹಿರಿಯ ಸೈನಿಕರೊಬ್ಬರು ಆಡಿರುವ ಮಾತುಗಳನ್ನು ಕೇಳಿ. ಬೆಂಗಳೂರಿನಲ್ಲಿ ಕೊವಿಡ್-19 ಲಸಿಕೆಯನ್ನು ಅವರು ನಿನ್ನೆ ಪಡೆದುಕೊಂಡಿದ್ದಾರೆ. ನಿಮ್ಮ ಸ್ಫೂರ್ತಿದಾಯಕ ವ್ಯಕ್ತಿತ್ವಕ್ಕೆ ಕೈಜೋಡಿಸಿ ನಮಸ್ಕರಿಸುತ್ತೇನೆ. ದೇಶದ ಪ್ರತಿಯೊಬ್ಬ ನಾಗರಿಕ ಕೂಡ ಕೊವಿಡ್ ಲಸಿಕೆ ಪಡೆದುಕೊಂಡಾಗ ಮಾತ್ರ ಭಾರತವು ಕೊವಿಡ್ನಿಂದ ಮುಕ್ತವಾಗಲು ಸಾಧ್ಯ’ ಎಂದು ಡಾ. ಕೆ. ಸುಧಾಕರ್ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
Do listen to these inspiring words from the 102 year old veteran retired Army officer who took Covid-19 vaccination in Bengaluru yesterday.
Hats off to your spirit Sir ??.
India can become Covid-19 free only when each one of us become Covid-19 free.@DHFWKA pic.twitter.com/l359AZJSKY
— Dr Sudhakar K (@mla_sudhakar) March 2, 2021
ತಾವು ಮಾತನಾಡಿರುವ ವಿಡಿಯೊದಲ್ಲಿ ಹಿರಿಯರು, ‘ಲಸಿಕೆ ಪಡೆಯಲು ಭಯಪಡಬೇಡಿ. ನಾನು ನಿವೃತ್ತಿ ಹೊಂದಿದ ಸೇನಾಧಿಕಾರಿಯಾಗಿದ್ದೇನೆ. ನನಗೀಗ 102 ವರ್ಷ ವಯಸ್ಸು. ನಾನು ಆರೋಗ್ಯದಿಂದ ಇದ್ದೇನೆ. ಗುಂಡುಗಳನ್ನು ಎದುರಿಸಲು ಸಿದ್ಧವಾಗಿದ್ದ ನಾನು, ಸಣ್ಣ ಲಸಿಕೆಯನ್ನು ಪಡೆಯಲು ಹೆದರಿಕೆ ಪಡುತ್ತಿಲ್ಲ’ ಎಂದು ಹೇಳಿದ್ದಾರೆ.
ಕೊವಿಡ್-19 ಲಸಿಕೆ ಪಡೆಯಲು ಎರಡು ಕಾರಣಗಳನ್ನು ಸೇನಾಧಿಕಾರಿ ತಿಳಿಸಿದ್ದಾರೆ. ಮೊದಲನೆಯದಾಗಿ, ಕೊವಿಡ್ ಲಸಿಕೆ ಪಡೆಯದೆ ಕೊರೊನಾ ರೋಗಕ್ಕೆ ತುತ್ತಾಗಬಾರದು ಮತ್ತು ಎರಡನೆಯದಾಗಿ ಕೊರೊನಾ ಹರಡುವುದನ್ನು ನಾವು ತಡೆಯಬೇಕು. ಜಗತ್ತಿನ ಒಳಿತಿಗಾಗಿ ನಾವು ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ಸೋಮವಾರ (ಮಾರ್ಚ್ 1) ರಾತ್ರಿ 8.30 ವೇಳೆಗೆ ಸುಮಾರು 29 ಲಕ್ಷ ಜನರು ಲಸಿಕೆ ಪಡೆಯಲು ನೋಂದಣಿ ಮಾಡಿಕೊಂಡಿದ್ದಾರೆ. ಆನ್ಲೈನ್ ಪೋರ್ಟಲ್ ಅಥವಾ ಆರೋಗ್ಯ ಸೇತು ಮೂಲಕ ರಿಜಿಸ್ಟ್ರೇಷನ್ ಮಾಡಿದ್ದಾರೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Covid-19 Vaccine Cowin Registration: ಕೊರೊನಾ ಲಸಿಕೆ ಪಡೆಯಲು ರಿಜಿಸ್ಟ್ರೇಷನ್ ಮಾಡಿಕೊಳ್ಳುವುದು ಹೇಗೆ?
Published On - 3:36 pm, Tue, 2 March 21