ವೈದ್ಯರಾಗುವ ಕನಸು ಕಾಣುತ್ತಿರುವ ವಿದ್ಯಾರ್ಥಿಗಳಿಗೆ ಗುಡ್​ನ್ಯೂಸ್​: ಕರ್ನಾಟಕದಲ್ಲಿ ತಲೆ ಎತ್ತಲಿವೆ ಹೊಸ 11 ವೈದ್ಯಕೀಯ ಕಾಲೇಜುಗಳು

|

Updated on: Mar 14, 2023 | 7:41 AM

ರಾಜ್ಯದ ಗ್ರಾಮಾಂತರ ಪ್ರದೇಶದ ಜನರಲ್ಲಿ ವೈದ್ಯಕೀಯ ಆರೋಗ್ಯ ಸೌಲಭ್ಯಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಹಾಗೂ ಹಳ್ಳಿಯಲ್ಲಿ ವಾಸಿಸುವವರಿಗೆ, ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣದ ಹೆಚ್ಚಿನ ಅವಕಾಶವನ್ನು ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ 11 ವೈದ್ಯಕೀಯ ಕಾಲೇಜುಗಳನ್ನು ತೆರೆಯಲು ನಿರ್ಧರಿಸಿದೆ.

ವೈದ್ಯರಾಗುವ ಕನಸು ಕಾಣುತ್ತಿರುವ ವಿದ್ಯಾರ್ಥಿಗಳಿಗೆ ಗುಡ್​ನ್ಯೂಸ್​:  ಕರ್ನಾಟಕದಲ್ಲಿ ತಲೆ ಎತ್ತಲಿವೆ ಹೊಸ 11 ವೈದ್ಯಕೀಯ ಕಾಲೇಜುಗಳು
ಮೈಸೂರು ವೈದ್ಯಕೀಯ ಕಾಲೇಜು
Follow us on

ಬೆಂಗಳೂರು: ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ (PPP) ರಾಜ್ಯದಲ್ಲಿ 11 ಮೆಡಿಕಲ್​ ಕಾಲೇಜುಗಳು (Medical Colleges) ಶ್ರೀಘ್ರದಲ್ಲೇ ತಲೆ ಎತ್ತಲಿವೆ. ತುಮಕೂರು, ದಾವಣಗೆರೆ, ಚಿತ್ರದುರ್ಗ, ಬಾಗಲಕೋಟೆ, ಕೋಲಾರ, ದಕ್ಷಿಣಕನ್ನಡ, ಉಡುಪಿ, ಬೆಂಗಳೂರು ಗ್ರಾಮಾಂತರ, ವಿಜಯಪುರ, ವಿಜಯನಗರ ಮತ್ತು ರಾಮನಗರದಲ್ಲಿ ಪ್ರಾರಂಭವಾಗಲಿವೆ. ರಾಜ್ಯ ಸರ್ಕಾರ (Karnataka Governmnet) ಈಗಾಗಲೆ ಎರಡು ವೈದ್ಯಕೀಯ ಕಾಲೇಜುಗಳಿಗಾಗಿ ನಿವೇಶನ ಹಂಚಿಕೆ ಮತ್ತು ಇತರೆ ಪ್ರಕ್ರಿಯೆಗಳನ್ನು ಮುಗಿಸಿದೆ. ಮೂಲಗಳ ಪ್ರಕಾರ ಈ ಎರಡು ವೈದ್ಯಕೀಯ ಕಾಲೇಜುಗಳು 2024-25ರ ವೇಳೆಗೆ ಬೆಂಗಳೂರು ಗ್ರಾಮಾಂತರ ಮತ್ತು ದಾವಣಗೆರೆಯಲ್ಲಿ ಕಾರ್ಯಾರಂಭ ಮಾಡಲಿವೆ.

ರಾಜ್ಯದ ಗ್ರಾಮಾಂತರ ಪ್ರದೇಶದ ಜನರಲ್ಲಿ ವೈದ್ಯಕೀಯ ಆರೋಗ್ಯ ಸೌಲಭ್ಯಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಹಾಗೂ ಹಳ್ಳಿಯಲ್ಲಿ ವಾಸಿಸುವವರಿಗೆ, ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣದ ಹೆಚ್ಚಿನ ಅವಕಾಶವನ್ನು ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ 11 ವೈದ್ಯಕೀಯ ಕಾಲೇಜುಗಳನ್ನು ತೆರೆಯಲು ನಿರ್ಧರಿಸಿದೆ ಎಂದು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕಿ ಸುಜಾತಾ ರಾಥೋಡ್ ತಿಳಿಸಿದ್ದಾರೆ.

ದಾವಣಗೆರೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ವೈದ್ಯಕೀಯ ಕಾಲೇಜುಗಳಿಗೆ ನಿವೇಶನ ಹಂಚಿಕೆ ಮತ್ತು ಇತರೆ ಅನುಮತಿಗಳು ಪೂರ್ಣಗೊಂಡಿವೆ. ಕಾಲೇಜುಗಳನ್ನು ಮುನ್ನಡೆಸಲು ಬಂಡವಾಳ ಹೂಡಿಕೆದಾರರನ್ನು ಎದುರು ನೋಡುತ್ತಿದ್ದೇವೆ. ಈ ಎರಡು ಜಿಲ್ಲೆಗಳಲ್ಲಿ 2024-25ನೇ ಸಾಲಿನ ಶೈಕ್ಷಣಿಕ ವರ್ಷದಿಂದ ವೈದ್ಯಕೀಯ ಕಾಲೇಜುಗಳು ಕಾರ್ಯನಿರ್ವಹಿಸಲಿವೆ ಎಂದರು.

ಇದನ್ನೂ ಓದಿ: ಪರೀಕ್ಷಾ ಸಮಯದಲ್ಲಿ ಮಕ್ಕಳ ಜ್ಞಾನವೃದ್ಧಿಗಾಗಿ ವಾಸ್ತು ಟಿಪ್ಸ್​​ ಫಾಲೋ ಮಾಡಿ

ಸದ್ಯ ರಾಜ್ಯದಲ್ಲಿ 57 ವೈದ್ಯಕೀಯ ಕಾಲೇಜುಗಳಿದ್ದು, ಇದರಲ್ಲಿ 23 ಕಾಲೇಜುಗಳನ್ನು ರಾಜ್ಯ ಸರ್ಕಾರ ನಡೆಸುತ್ತಿದೆ. 2014-15 ರಲ್ಲಿ, ರಾಜ್ಯ ಸರ್ಕಾರವು ಹಲವಾರು ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸುವುದಾಗಿ ಘೋಷಿಸಿತು. ಆದರೆ, ಕೆಲವು ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜುಗಳ ನಿರ್ಮಾಣವನ್ನು ಹಣಕಾಸಿನ ಅಡಚಣೆಯಿಂದ ಪ್ರಾರಂಭಿಸಲಾಗಲಿಲ್ಲ. ಹೊಸ ವೈದ್ಯಕೀಯ ಕಾಲೇಜು ಪ್ರಾರಂಭಿಸಲು ಮತ್ತು ಮುನ್ನಡೆಸಲು ಸರಿಸುಮಾರು 600 ಕೋಟಿ ರೂ. ಬೇಕಾಗಬಹುದು ಎಂದು ತಿಳಿಸಿದರು.

NITI ಆಯೋಗದ ಪ್ರಕಾರ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ಸೀಮಿತ ಸಂಪನ್ಮೂಲಗಳಿಂದ ವೈದ್ಯಕೀಯ ಶಿಕ್ಷಣವನ್ನು ಮುನ್ನಡೆಸಲು ಪ್ರಾಯೋಗಿಕವಾಗಿ ಅಸಾಧ್ಯ. ಆದ್ದರಿಂದ, 750 ಹಾಸಿಗೆಗಳ ಜಿಲ್ಲಾ ಆಸ್ಪತ್ರೆಗಳನ್ನು ಪಿಪಿಪಿ ಮಾದರಿಯಲ್ಲಿ ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಹಸ್ತಾಂತರಿಸಲು ಆಯೋಗವು ಪ್ರಸ್ತಾಪಿಸಿದೆ. ನಂತರ ರಾಜ್ಯ ಸರ್ಕಾರವು ಕರ್ನಾಟಕದ 11 ಜಿಲ್ಲೆಗಳಲ್ಲಿ ಪಿಪಿಪಿ ಮಾದರಿಯಲ್ಲಿ ಹೊಸ ವೈದ್ಯಕೀಯ ಕಾಲೇಜುಗಳನ್ನು ಪ್ರಾರಂಭಿಸಲು ನಿರ್ಧರಿಸಿತು.

ಕಾಲೇಜುಗಳ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರವು ಖಾಸಗಿ ಸಂಸ್ಥೆಗಳಿಗೆ ಭೂಮಿ ಮಂಜೂರು ಮಾಡುತ್ತದೆ. ಖಾಸಗಿ ಸಂಸ್ಥೆಗಳು ಕಾಲೇಜು ಕಟ್ಟಡ, ಮೂಲಸೌಕರ್ಯ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಹಣವನ್ನು ಹೂಡಿಕೆ ಮಾಡುತ್ತವೆ. ನಂತರ ಸರಕಾರವು ಜಿಲ್ಲಾ ಆಸ್ಪತ್ರೆಯನ್ನು ಕ್ಲಿನಿಕಲ್ ಪ್ರಾಕ್ಟೀಸ್‌ಗಾಗಿ ಖಾಸಗಿ ಸಂಸ್ಥೆಗೆ ಹಸ್ತಾಂತರಿಸಲಿದೆ. ಆದರೆ, ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿ ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಾರೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:36 am, Tue, 14 March 23