ಬೆಂಗಳೂರು, ಅಕ್ಟೋಬರ್ 18: ಪಂಚಮಸಾಲಿ ಸಮುದಾಯದ ಮೀಸಲಾತಿ ಕುರಿತು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ಗೃಹಕಚೇರಿ ಕೃಷ್ಣಾದಲ್ಲಿ ಸಭೆ ನಡೆಯಲಿದ್ದು, ಡಿಸಿಎಂ ಡಿಕೆ ಶಿವಕುಮಾರ್, ಕೂಡಲ ಸಂಗಮ ಪೀಠಾಧ್ಯಕ್ಷ ಜಯ ಮೃತ್ಯುಂಜಯ ಸ್ವಾಮೀಜಿ ಮತ್ತು ಮುಖಂಡರು ಭಾಗಿಯಾಗಲಿದ್ದಾರೆ. ಇದಕ್ಕೂ ಮುನ್ನ ಜಯಮೃತ್ಯುಂಜಯ ಸ್ವಾಮೀಜಿ, ಶಿವಾನಂದ್ ಸರ್ಕಲ್ನಿಂದ ಗೃಹ ಕಚೇರಿ ಕೃಷ್ಣಾವರೆಗೂ ಕಾಲ್ನಡಿಗೆ ಮಾಡುವ ಸಾಧ್ಯತೆ ಇದೆ.
ಸಿಎಂ ನೇತೃತ್ವದಲ್ಲಿ ಸಭೆ ಒಂದೆಡೆಯಾದರೆ, ಅತ್ತ ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಬಿಜೆಪಿ ನಾಯಕರನ್ನು ಭೇಟಿಯಾಗಿದ್ದಾರೆ. ಇದೇ ಅಕ್ಟೋಬರ್ 22 ರಂದು ಬೆಂಗಳೂರಲ್ಲಿ ಜಾತಿ ಗಣತಿ ವರದಿಯ ಸಾಧಕ-ಬಾಧಕ ಕುರಿತು ಚರ್ಚಿಸಲು ಸಭೆ ಆಯೋಸಜಿಲಾಗಿದೆ. ಈ ಸಭೆಗೆ ಬರುವಂತೆ ಮಾಜಿ ಸಿಎಂಗಳಾದ ಬಿಎಸ್ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರನ್ನು ಆಹ್ವಾನಿಸಲಾಗಿದೆ. ಇವರ ಜತೆಗೆ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ್ ಬಿದರಿ ನಿಯೋಗಕ್ಕೂ ಸಭೆಗೆ ಬರುವಂತೆ ಆಹ್ವಾನಿಸಿದ್ದಾರೆ.
ಜಾತಿ ಗಣತಿ ಕುರಿತು ಸರ್ಕಾರದೊಳಗೆ ಅಪಸ್ವರ ಕೇಳಿ ಬಂದಿತ್ತು. ಆದರೆ, ಇನ್ನೊಂದು ಬಣ ಜಾತಿ ಗಣತಿ ಜಾರಿ ಮಾಡುವಂತೆ ಪಟ್ಟು ಹಿಡಿದಿದೆ. ಇದರ ನಡುವೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಕರೆದಿರುವ ಸಭೆ ಮಹತ್ವದ ಪಡೆದಿದೆ.
ಜಾತಿಗೆ ಗಣತಿಗೆ ಕಾಂಗ್ರೆಸ್ ಪಕ್ಷದ ಒಳಗೆಯೇ ವಿರೋಧ ವ್ಯಕ್ತವಾಗಿತ್ತು. ಡಿಸಿಎಂ ಡಿಕೆ ಶಿವಕುಮಾರ್, ಶಾಮನೂರು ಶಿವಶಂಕರಪ್ಪ ಮತ್ತಿತರ ಮುಖಂಡರಿಂದ ವಿರೋಧ ವ್ಯಕ್ತವಾಗಿತ್ತು. ಸದ್ಯ ಮುಡಾ ಹಗರಣದ ಕಾವು ತೀವ್ರಗೊಂಡ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಮತ್ತೆ ಜಾತಿ ಗಣತಿಯ ದಾಳ ಉರುಳಿಸಲು ಮುಂದಾಗಿದ್ದಾರೆ.
ಜಾತಿಗಣತಿ ವರದಿ ಜಾರಿ ಮಾಡಿಯೇ ಮಾಡುತ್ತೇನೆ ಎಂದು ಕೆಲವು ದಿನಗಳ ಹಿಂದಷ್ಟೇ ಸಿಎಂ ಸಿದ್ದರಾಮಯ್ಯ ಪುನರುಚ್ಚರಿಸಿದ್ದರು. ಜಾತಿಗಣತಿ ವರದಿ ನನ್ನ ಕೈ ಸೇರಿದೆ. ನಾನು ಇನ್ನೂ ಅದನ್ನು ಪರಿಪೂರ್ಣವಾಗಿ ನೋಡಿಲ್ಲ. ಮುಂದಿನ ದಿನಗಳಲ್ಲಿ ಅದನ್ನು ಸಚಿವ ಸಂಪುಟದ ಮುಂದಿಟ್ಟು ಜಾರಿ ಮಾಡಿಯೇ ಮಾಡುತ್ತೇನೆ ಎಂದು ಅವರು ಹೇಳಿದ್ದರು.
ಇದನ್ನೂ ಓದಿ: ಜಾತಿಗಣತಿ ವರದಿ ಜಾರಿ ಮಾಡೇ ಮಾಡುತ್ತೇನೆ: ಸಿದ್ದರಾಮಯ್ಯ ಘೋಷಣೆ
ಈ ಎಲ್ಲ ಬೆಳವಣಿಗೆಗಳ ಮಧ್ಯೆ ಇದೀಗ ಪಂಚಮಸಾಲಿ 2ಎ ಮೀಸಲಾತಿ ಹೋರಾಟದ ಕಿಚ್ಚು ಮುನ್ನೆಲೆಗೆ ಬರುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ