ಬೆಂಗಳೂರು, ಏಪ್ರಿಲ್ 27: ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ನೀಡಿ ಕರ್ನಾಟಕಕ್ಕೆ ಸ್ವಲ್ಪವಾದರೂ ಬರ ಪರಿಹಾರ (Karnataka Drought Relief Fund) ಕೊಡಿಸಿದ ಸುಪ್ರೀಂ ಕೋರ್ಟ್ಗೆ ಧನ್ಯವಾದಗಳು. ಎನ್ಡಿಆರ್ಎಫ್ ನಿಯಮವಾಳಿ ಪ್ರಕಾರ ರಾಜ್ಯಕ್ಕೆ ರೂ.18,171 ಕೋಟಿ ನೀಡಬೇಕಾಗಿದ್ದರೂ ಕೇಂದ್ರ ಸರ್ಕಾರ ಕೇವಲ ರೂ. 3498.98 ಕೋಟಿಗೆ ಅನುಮೋದನೆ ನೀಡಿ, ರೂ. 3,454 ಕೋಟಿ ಬಿಡುಗಡೆ ಮಾಡಿದೆ. ಬರಪರಿಹಾರಕ್ಕಾಗಿ ಈ ಹಣ ಸಾಲದು. ಬಾಕಿ ಪರಿಹಾರಕ್ಕಾಗಿ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದರು.
ಕೇಂದ್ರ ಸರ್ಕಾರ ಕರ್ನಾಟಕದ ಮೇಲೆ ಕಾಳಜಿಯಿಂದ ಈ ಬರ ಪರಿಹಾರ ನೀಡಿಲ್ಲ. ನಾವು ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿ ನಮ್ಮಲ್ಲಿನ ಬರಸ್ಥಿತಿಯನ್ನು ಮನವರಿಕೆ ಮಾಡಿ ಕೊಟ್ಟಿದ್ದೆವು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಗೆ ಕೇಂದ್ರ ಸರ್ಕಾರವು ರಾಜಕೀಯ ದುರುದ್ದೇಶದಿಂದ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಮನವರಿಕೆಯಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ನ್ಯಾಯಾಲಯ ವಿಚಾರಣೆ ವೇಳೆ ಚಾಟಿ ಬೀಸಿದ ನಂತರ ವಾರದ ಅವಧಿಯೊಳಗೆ ಬರ ಪರಿಹಾರ ನೀಡಲಾಗುವುದು ಎಂದು ನರೇಂದ್ರ ಮೋದಿ ಸರ್ಕಾರ ಸುಪ್ರೀಂ ಕೋರ್ಟ್ಗೆ ವಚನ ನೀಡಿತ್ತು. ಅದನ್ನು ಪಾಲಿಸಲಿಕ್ಕಾಗಿ ಒಲ್ಲದ ಮನಸ್ಸಿನಿಂದ ಈ ಪರಿಹಾರ ನೀಡಿದೆ. ಬರಪರಿಹಾರ ಬಿಡುಗಡೆಯಲ್ಲಿ ರಾಜ್ಯ ಬಿಜೆಪಿ ನಾಯಕರದ್ದಾಗಲಿ, ಕೇಂದ್ರ ಬಿಜೆಪಿ ಸರ್ಕಾರದ್ದಾಗಲಿ ಯಾವ ಪಾತ್ರವೂ ಇಲ್ಲ. ಇದು ಕೃಷಿ ಕ್ಷೇತ್ರ ಮತ್ತು ರಾಜ್ಯದ ರೈತರ ಮೇಲೆ ಸುಪ್ರೀಂಕೋರ್ಟ್ ಇಟ್ಟುಕೊಂಡಿರುವ ಕಾಳಜಿಯ ಫಲ ಎಂದರು.
ಸ್ವಲ್ಪವಾದರೂ ಪರಿಹಾರವನ್ನು ನೀಡದೆ ಇದ್ದರೆ ರೊಚ್ಚೆದ್ದಿರುವ ಕರ್ನಾಟಕದ ಜನ ಚುನಾವಣಾ ಪ್ರಚಾರಕ್ಕಾಗಿ ತಮ್ಮನ್ನು ರಾಜ್ಯಕ್ಕೆ ಕಾಲಿಡಲು ಬಿಡಲಾರರು ಎಂಬ ಭಯವೂ ಈ ಪರಿಹಾರ ಘೋಷಿಸಲು ಕಾರಣವಾಗಿದೆ. ಈ ಅಲ್ಪ ಪರಿಹಾರವನ್ನು ತಮ್ಮ ಸಾಧನೆ ಎಂದು ರಾಜ್ಯದ ಬಿಜೆಪಿ ನಾಯಕರು ಬಿಂಬಿಸಲು ಹೊರಟರೆ ರಾಜ್ಯದ ಜನೆ ಅವರಿಗೆ ತಕ್ಕ ಉತ್ತರ ನೀಡಬೇಕೆಂದು ಮನವಿ ಮಾಡುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: ಕೇಂದ್ರದಿಂದ ಕರ್ನಾಟಕಕ್ಕೆ 3,454 ಕೋಟಿ ರೂ. ಬರ ಪರಿಹಾರ
ಈ ಬರ ಪರಿಹಾರ ಬಿಡುಗಡೆಯ ಹಿಂದಿನ ಕಾರಣಗಳೇನೇ ಇರಲಿ, ನೀಡಿರುವ ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಸಾಧ್ಯವಾದಷ್ಟು ಶೀಘ್ರ ಬಾಕಿ ಪರಿಹಾರದ ಹಣವನ್ನು ಬಿಡುಗಡೆಗೊಳಿಸಬೇಕೆಂದು ಪ್ರಧಾನಮಂತ್ರಿ ಅವರನ್ನು ಒತ್ತಾಯಿಸುತ್ತಿದ್ದೇನೆ. ಇದೇ ರೀತಿ ತೆರಿಗೆ ಹಂಚಿಕೆಯಲ್ಲಿನ ಅನ್ಯಾಯವನ್ನು ಕೂಡ ಕೇಂದ್ರ ಸರ್ಕಾರ ಸರಿಪಡಿಸಬೇಕೆಂದು ಆಗ್ರಹಿಸುತ್ತೇನೆ ಎಂದು ಒತ್ತಾಯಿಸಿದರು.
ರಾಜ್ಯದ 223 ತಾಲ್ಲೂಕುಗಳನ್ನು ಬರಪೀಡಿತ ಎಂದು ನಾವು 13-9-2023ರಂದು ಘೋಷಿಸಿದ್ದೆವು. ಈಗ ಏಳು ತಿಂಗಳುಗಳಾಗುತ್ತಾ ಬಂತು. 48 ಲಕ್ಷ ಹೆಕ್ಟೇರ್ ನಲ್ಲಿ ಬೆಳೆ ಹಾನಿಯಾಗಿದೆ. ಇದರಿಂದಾಗಿ 35,162 ಕೋಟಿ ರೂಪಾಯಿಗಳಷ್ಟು ನಷ್ಟವಾಗಿದೆ. ಕೇಂದ್ರ ಸರ್ಕಾರದಿಂದ ನಾವು ಪರಿಹಾರ ಕೇಳಿರುವುದು ಹೆಚ್ಚು ಕಡಿಮೆ ಅದರ ಅರ್ಧದಷ್ಟು. ಅಂದರೆ ರೂ.18,171 ಕೋಟಿ. ಉಳಿದ ಹಣವನ್ನು ರಾಜ್ಯ ಸರ್ಕಾರ ತನ್ನ ಸಂಪನ್ಮೂಲದಿಂದಲೆ ಭರಿಸುತ್ತಿದೆ. ಈಗ ಬಿಡುಗಡೆಯಾಗಿರುವುದು ರೂ.3,454 ಕೋಟಿ ಮಾತ್ರ. ಉಳಿದ ಪರಿಹಾರಕ್ಕಾಗಿ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು.
ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಕೊಟ್ಟಿದ್ದಾರೆ. ಈಗ ಘೋಷಣೆ ಮಾಡಿರುವ ಪರಿಹಾರ ನಮಗೆ ಸಾಲದು. 15 ಸಾವಿರ ಕೋಟಿಯಾದರೂ ಬಿಡುಗಡೆ ಮಾಡಬೇಕಿತ್ತು. ಕೊಡಬೇಕಾದ ಪಾಲು ಸರಿಯಾಗಿ ಕೊಟ್ಟಿಲ್ಲ. ಹೋರಾಟವನ್ನು ನಾವು ಮುಂದುವರೆಸುತ್ತೇವೆ. ಬರಗಾಲದಲ್ಲಿ ರಾಜಕೀಯ ಮಾಡೋದು ಬೇಡ. ನಮ್ಮ ಹಕ್ಕಿಗಾಗಿ ನಾವು ಹೋರಾಟ ಮಾಡ್ತಾ ಇದ್ದೇವೆ. ನ್ಯಾಯ ನಮಗೆ ಸಿಗಬೇಕು. ಬಿಜೆಪಿ ನಾಯಕರಿಗೆ ರಾಜ್ಯದ ಬಗ್ಗೆ ಅಭಿಮಾನ ಇದ್ದರೇ ಒಕ್ಕೊರಲಿನಿಂದ ನೀವೂ ಮನವಿ ಮಾಡಿ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.
ಬರ ಪರಿಹಾರ ನೀಡಿರುವ ವಿಚಾರವಾಗಿ ಅಧಿಕೃತವಾಗಿ ನಮಗೆ ಯಾವುದೇ ಪತ್ರ ಬಂದಿಲ್ಲ. ಸಾಮಾಜಿಕ ಜಾಲತಾಣದ ಮೂಲಕ ನಮಗೆ ಗೊತ್ತಾಗಿದೆ. ಅತಿ ಕಡಿಮೆ ಹಣವನ್ನ ಕೇಂದ್ರ ಕರ್ನಾಟಕಕ್ಕೆ ಕೊಟ್ಟು ಅನ್ಯಾಯ ಮಾಡಿದೆ. ಮತ್ತೊಮ್ಮೆ ಪತ್ರ ಬರೆದು ಬಾಕಿ ಹಣ ಬಿಡುಗಡೆಗೆ ಮನವಿ ಕೊಡುತ್ತೇವೆ. ಪರಿಹಾರ ಕಾನೂನಿನ ಅಡಿಯಲ್ಲಿ ಬರಬೇಕಿತ್ತು. ಅವರ ಸಮಜಾಯಿಷಿ ನೋಡಿಕೊಂಡು ಕಾನೂನು ತಜ್ಞರ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ಮಾಡುತ್ತೇವೆ. ಕೋರ್ಟ್ ಮೊರೆ ಹೋಗದಿದ್ದರೆ ಈ ಹಣವೂ ಬರುತ್ತಿರಲಿಲ್ಲ ಎಂದು ಸಚಿವ ಕೃಷ್ಣಬೈರೇಗೌಡ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ