ಬೆಂಗಳೂರು, ಜೂನ್ 01: ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ (BJP) ವಿರುದ್ಧ ಅಪಪ್ರಚಾರ ಕೇಸ್ ವಿಚಾರಣೆ ಮಾಡಿದ ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್, ಹಾಜರಾತಿಯಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ (Rahul Gandhi) ವಿನಾಯಿತಿ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿಗೆ ಇಂದು ಕೋರ್ಟ್‌ಗೆ ಹಾಜರಾಗುವಂತೆ ಆದೇಶಿಸಲಾಗಿತ್ತು. ಆದರೆ ಚುನಾವಣಾ ನಿಮಿತ್ತ ಕೋರ್ಟ್‌ಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕೆಲವು ಸಮಯ ವಿನಾಯಿತಿ ನೀಡಬೇಕು ಎಂದು ರಾಹುಲ್ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ಹೀಗಾಗಿ ವಾದ ಪ್ರತಿವಾದದ ಬಳಿಕ ಜೂ.7ರಂದು ತಪ್ಪದೇ ಕೋರ್ಟ್‌ಗೆ ಹಾಜರಾಗಲು ಸೂಚನೆ ನೀಡಿದೆ.
ರಾಹುಲ್ ಗಾಂಧಿ ವಕೀಲರ ಅರ್ಜಿಗೆ ಹಾಜರಾತಿಗೆ ವಿನಾಯಿತಿ ನೀಡದಂತೆ ಬಿಜೆಪಿ ಆಕ್ಷೇಪಣೆ ವ್ಯಕ್ತಪಡಿಸಿತ್ತು. ಒಮ್ಮೆ ಹಾಜರಾದ ನಂತರ ವಿನಾಯಿತಿ ನೀಡಬಹುದು ಆದರೆ ಹಾಜರಾತಿಗೆ ಮೊದಲೇ ಪದೇಪದೆ ವಿನಾಯಿತಿ ನೀಡುವಂತಿಲ್ಲ ಎಂದು ಬಿಜೆಪಿ ಪರ ವಕೀಲ ವಿನೋದ್ ಕುಮಾರ್ ವಾದ ಮಂಡನೆ ಮಾಡಿದ್ದಾರೆ. ಒಮ್ಮೆ ಹಾಜರಾಗುತ್ತಾರೆಂದು ಭರವಸೆ ನೀಡಿದ ನಂತರ ಉಲ್ಲಂಘಿಸುವಂತಿಲ್ಲ. ಹೀಗಾಗಿ ವಾರಂಟ್ ಹೊರಡಿಸಲು ಬಿಜೆಪಿ ಪರ ವಕೀಲರ ಮನವಿ ಮಾಡಿದ್ದರು.
ಇದನ್ನೂ ಓದಿ: ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ, ಸೋನಿಯಾ ಗಾಂಧಿಗೂ ಪಾಲು ಸಿಕ್ಕಿದೆ: ಅಶೋಕ್ ಗಂಭೀರ ಆರೋಪ
ರಾಹುಲ್ ಗಾಂಧಿ ಪಕ್ಷದ ಯಾವುದೇ ಹುದ್ದೆಯಲ್ಲಿಲ್ಲ. ಜಾಹೀರಾತಿನಲ್ಲಿ ಫೋಟೋ ಹಾಕಿರುವುದಕ್ಕೆ ಆರೋಪಿ ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ಪರ ವಕೀಲ ಎಸ್.ಎ.ಅಹ್ಮದ್ ವಾದ ಮಂಡಿಸಿದ್ದಾರೆ. ಸಮನ್ಸ್ ಜಾರಿ ನಂತರ ಇದನ್ನು ಚರ್ಚಿಸಿ ಉಪಯೋಗವಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಡಿಕೆ ಸಹೋದರರ ದೈತ್ಯಶಕ್ತಿ ಎದುರು ಸೆಣಸುವುದು ಕಷ್ಟ: ಸಿಪಿ ಯೋಗೇಶ್ವರ, ಬಿಜೆಪಿ ನಾಯಕ
2ನೇ ಬಾರಿಗೆ ಕೋರ್ಟ್‌ಗೆ ಗೈರಾದರೆ ವಿನಾಯಿತಿ ನೀಡಬಹುದೇ? ಈ ಬಗ್ಗೆ ಸ್ಷಷ್ಟ ಕಾನೂನು ಇಲ್ಲದಿರುವುದೇ ಸಮಸ್ಯೆ ಎಂದು ಜಡ್ಜ್ ಹೇಳಿದ್ದಾರೆ. ಬಳಿಕ ಕೆಲ ಸಮಯದ ನಂತರ ವಿನಾಯಿತಿ ನೀಡುವ ಮೂಲಕ ಜೂ.7ರಂದು ತಪ್ಪದೇ ಕೋರ್ಟ್‌ಗೆ ಹಾಜರಾಗಲು ಸೂಚಿಸಿದೆ.
ಕಳೆದ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ಭ್ರಷ್ಟಾಚಾರ ಮಾಡಿದೆ ಎಂದು ಕಾಂಗ್ರೆಸ್ ಜಾಹೀರಾತು ಪ್ರಕಟಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ನ್ಯಾಯಾಲಯದಲ್ಲಿ ದೂರು ದಾಖಲಿಸಿತ್ತು. ಕೆಪಿಸಿಸಿ ಹಾಗೂ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ಸುಳ್ಳು ಆರೋಪಗಳ ಜಾಹೀರಾತು ನೀಡಿ ಪಕ್ಷದ ಗೌರವಕ್ಕೆ ಧಕ್ಕೆ ತಂದಿದ್ದಾರೆ. ಇದರಿಂದ ಪಕ್ಷಕ್ಕೆ ಹಾನಿಯಾಗಿದೆ. ಈ ನಿಟ್ಟಿನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಕೋರಿ ನ್ಯಾಯಾಲಯದಲ್ಲಿ ರಾಜ್ಯ ಕಾರ್ಯದರ್ಶಿ ಎಸ್. ಶಿವಪ್ರಸಾದ್ ಖಾಸಗಿ ದೂರು ಸಲ್ಲಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:43 pm, Sat, 1 June 24