ಉಡುಪಿ: ಸದ್ಯ ಕರಾವಳಿಯಲ್ಲಿ ಉತ್ತಮ ಮುಂಗಾರು ಮಳೆಯಾಗುತ್ತಿದೆ. ರೈತರು ಖುಷಿ ಖುಷಿಯಾಗಿಯೇ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಭತ್ತದ ಕೃಷಿಗೆ ಬೇಕಾದ ಕೂಲಿಯಾಳುಗಳು ಸಿಗುತ್ತಿಲ್ಲ ಎನ್ನುವುದು ಸದ್ಯ ಈ ಭಾಗದ ಜನರ ಕೊರಗಾಗಿದೆ. ಹೀಗಾಗಿ ಭತ್ತ ಬೆಳೆಯುವ ರೈತರಿಗೆ ಕೆಲಸದ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ ಹೊಸ ಪ್ರಯೋಗ ಶುರುವಾಗಿದೆ. ಏನದು ಹೊಸ ಕೃಷಿ ಪ್ರಯೋಗ ಎಂದು ಹುಬ್ಬೇರಿಸುವವರಿಗೆ ಉತ್ತರ ಇಲ್ಲಿದೆ ನೋಡಿ.
ಕರಾವಳಿ ಕೃಷಿ ಭೂಮಿ ಇರುವ ಸಮೃದ್ಧ ನಾಡು. ಒಂದು ಕಾಲದಲ್ಲಿ ಭತ್ತದ ಬೆಳೆಯೇ ಹೆಚ್ಚಾಗಿ ಬೆಳೆಯುತ್ತಿದ್ದ ಕರಾವಳಿಯ ಮಣ್ಣಿನಲ್ಲಿ, ಈಗ ವಾಣಿಜ್ಯ ಬೆಳೆಗಳು ಹೆಚ್ಚಾಗಿ ಕಾಣಸಿಗುತ್ತಿದೆ. ಹೀಗೆ ಬದಲಾಗುವುದಕ್ಕೆ ಕೂಲಿಯಾಳುಗಳ ಸಮಸ್ಯೆ ಕೂಡ ಒಂದು ಕಾರಣ. ಹೀಗಾಗಿ ಕೂಲಿಯಾಳು ಕೊರತೆಯಿಂದ ಭತ್ತ ಬೆಳೆಯುವ ಭೂಮಿ ಹಡಿಲು ಬೀಳಬಾರದು, ಭತ್ತದ ಬೇಸಾಯದ ಕೆಲಸವನ್ನು ಸ್ವಲ್ಪ ಕಡಿಮೆ ಮಾಡಿ ಕೃಷಿಕರಿಗೆ ಪೂರಕ ವಾತಾವರಣ ನಿರ್ಮಾಣ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಉಡುಪಿಯ ಕುಂದಾಪುರದಲ್ಲಿ ಹೊಸ ಪ್ರಯೋಗವೊಂದು ನಡೆಯುತ್ತಿದೆ.
ಕುಂದಾಪುರದ ಕಾಳಾವರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ರಿ ಕೃಷಿ ವಿಭಾಗದ ಶ್ರೀ ಸಿದ್ಧವನ ನರ್ಸರಿ ಉಜಿರೆ ಇದರ ಸಂಯುಕ್ತ ಆಶ್ರಯದೊಂದಿಗೆ 50,000 ನರ್ಸರಿ ಟ್ರೇ ಭತ್ತದ ಸಸಿ ಮಾಡುವ ಸಾಮರ್ಥ್ಯದ ಶ್ರೀ ಸಿದ್ಧವನ ಉಪ ನರ್ಸರಿ ಆರಂಭವಾಗಿದೆ. ಭತ್ತ ಬೇಸಾಯದಲ್ಲಿ ಕೂಲಿಯಾಳುಗಳ ಸಮಸ್ಯೆ, ದುಬಾರಿ ನಿರ್ವಹಣಾ ವೆಚ್ಚಕ್ಕೆ ಕಡಿವಾಣ ಹಾಕಲು ಈ ನರ್ಸರಿ ಕಾರ್ಯನಿರ್ವಾಹಿಸುತ್ತಿದೆ ಎಂದು ಷಿ ಪ್ರಾದೇಶಿಕ ನಿರ್ದೇಶಕರಾದ ಮನೋಜ್ ಮಿನೇಜಸ್ ತಿಳಿಸಿದ್ದಾರೆ.
ಈಗಾಗಲೆ ಇಲ್ಲಿ 500 ಎಕರೆಗೆ ಆಗುವಷ್ಟು 50,000 ನರ್ಸರಿ ಟ್ರೇ ಸಸಿಮಡಿ ಸಿದ್ಧ ಪಡಿಸಲಾಗಿದ್ದು, ನಾಟಿಗೆ ಚಾಲನೆ ನೀಡಲಾಗುತ್ತಿದೆ. ಒಟ್ಟು ಮೂರು ಕಡೆಗಳಲ್ಲಿ ನರ್ಸರಿ ಸಿದ್ಧ ಮಾಡಿಕೊಳ್ಳಲಾಗಿದ್ದು, 22 ರೈತರು ಈಗಾಗಲೇ ಸಸಿಗಳನ್ನು ಖರೀದಿ ಮಾಡಿದ್ದಾರೆ. ಈ ವಿಧಾನದಿಂದಾಗಿ ಸಮಯವು ಕೂಡ ಉಳಿತಾಯವಾಗುತ್ತಿರುವುದರಿಂದ ಬಹುತೇಕ ರೈತರು ಈ ಯೋಜನೆಗೆ ಕೈ ಜೋಡಿಸಿದ್ದಾರೆ. ಇದರಿಂದ ರೈತರಿಗೆ ಕಷ್ಟಪಟ್ಟು ಭತ್ತದ ಸಸಿಗಳನ್ನು ಬೆಳೆಸುವುದು, ಮಳೆಯಿಂದ ಮತ್ತು ಕೀಟಗಳಿಂದ ಹಾನಿಯಾಗದಂತೆ ತಡೆಯುವ ಕೆಲಸ ಇಲ್ಲದಾಗುತ್ತದೆ ಎಂದು ರೈತ ನರಸಿಂಹ ಕುಲಾಲ್
ಒಟ್ಟಿನಲ್ಲಿ ತಯಾರಾದ ಒಳ್ಳೆಯ ಭತ್ತದ ಸಸಿ ಸಿಗುತ್ತದೆ ಮತ್ತು ಕೆಲಸ ಕೂಡ ಕಡಿಮೆ ಆಗುತ್ತದೆ. ಇನ್ನಾದರೂ ಕೂಲಿಗೆ ಜನ ಸಿಗಲ್ಲ ಎಂದು ಭತ್ತದ ಗದ್ದೆಯನ್ನು ಹಡೀಲು ಬಿಡದೇ ವ್ಯವಸಾಯ ಮಾಡಿದರೆ ತಮ್ಮ ಆಹಾರವನ್ನು ತಾವೇ ಬೆಳೆದಂತೆ ಆಗಿ, ಆರೋಗ್ಯ ವೃದ್ಧಿಯಾಗುತ್ತದೆ.
ಇದನ್ನೂ ಓದಿ:
ಭತ್ತ ಸೇರಿ ಬೇಸಿಗೆ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಶೇ 62ರಷ್ಟು ಹೆಚ್ಚಳ: ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ
ಹಡಿಲು ಭೂಮಿ ಕೃಷಿ ಪ್ರಕ್ರಿಯೆ ಉಡುಪಿಯಲ್ಲಿ ಮತ್ತೆ ಆರಂಭ; 2000 ಎಕರೆಯಲ್ಲಿ ಭತ್ತ ಭಿತ್ತನೆಗೆ ಸಿದ್ಧತೆ
Published On - 9:13 am, Mon, 21 June 21