ದಾವಣಗೆರೆ: ಕೌಟುಂಬಿಕ ಕಲಹಕ್ಕೆ ಮನನೊಂದು ಬಿಜೆಪಿ ಮುಖಂಡ ಆತ್ಮಹತ್ಯೆ
ದಾವಣಗೆರೆಯಲ್ಲಿ ಬಿಜೆಪಿ ಮುಖಂಡರೊಬ್ಬರು ಕೌಟುಂಬಿಕ ಕಲಹದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಕ್ಕಳ ಆತ್ಮಹತ್ಯೆ ಯತ್ನದ ನಂತರ ಮನನೊಂದಿದ್ದ ಇವರು ತಮ್ಮ ಕಾರಿನಲ್ಲಿಯೇ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ಇನ್ನೊಂದೆಡೆ, ಕಾರವಾರದಲ್ಲಿ ಜೆಡಿಎಸ್ ನಾಯಕಿಯ ಪುತ್ರ ಕಿರುಕುಳ ನೀಡಿದ ಕಾರಣ ಯುವತಿ ಆತ್ಮಹತ್ಯೆ ಶರಣಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪರಾರಿಯಾಗಿದ್ದಾನೆ.

ದಾವಣಗೆರೆ, ಜನವರಿ 11: ಜಿಲ್ಲೆಯಲ್ಲಿ ಕೌಟುಂಬಿಕ ಕಲಹ ಹಿನ್ನೆಲೆ ಬಿಜೆಪಿ ಮುಖಂಡ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಇತ್ತೀಚೆಗೆ ಅವರ ಮಕ್ಕಳಿಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದರು. ಇದರಿಂದ ಮನನೊಂದ ಮುಖಂಡ ತಮ್ಮ ಕಾರಿನಲ್ಲಿಯೇ ಬೆಂಕಿ ಹಚ್ಚಿಕೊಂಡು ಸಜೀವದಹನಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ದಾವಣಗೆರೆ ಪಾಲಿಕೆಯ ಮಾಜಿ ಸದಸ್ಯ ಚಂದ್ರಶೇಖರ್ ಸಂಕೋಲ್ ಕಾರಿನಲ್ಲೇ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ. ತಾಲೂಕಿನ ನಾಗನೂರು ಸಮೀಪದ ತೋಟದಲ್ಲಿ ಘಟನೆ ನಡೆದಿದೆ. ಇತ್ತೀಚೆಗೆ ಚಂದ್ರಶೇಖರ್ ಸಂಕೋಲ್ ಅವರ ಇಬ್ಬರು ಮಕ್ಕಳು ಆತ್ಮಹತ್ಯೆಗೆ ಯತ್ನಿಸಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವಿಚಾರದಿಂದ ಮನನೊಂದಿದ್ದ ಚಂದ್ರಶೇಖರ್ ಸಂಕೋಲ್ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಹದಡಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಯುವತಿ ಆತ್ಮಹತ್ಯೆ ಕೇಸ್, ಜೆಡಿಎಸ್ ಸ್ಥಳೀಯ ನಾಯಕಿಯ ಪುತ್ರ ಎಸ್ಕೇಪ್
ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕದ್ರಾದಲ್ಲಿ ಯುವತಿ ಆತ್ಮಹತ್ಯೆಗೆ ಶರಣಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪರಾರಿಯಾಗಿದ್ದಾನೆ. ಜೆಡಿಎಸ್ ಸ್ಥಳೀಯ ನಾಯಕಿ ಚೈತ್ರಾ ಕೊಠಾರಕರ್ ಅವರ ಪುತ್ರ ಚಿರಾಗ್ ಕೊಠಾರಕರ್ ವಿರುದ್ಧ ಆರೋಪ ಕೇಳಿಬಂದಿದ್ದು, ತನ್ನ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಆತ ಪರಾರಿಯಾಗಿದ್ದಾನೆ.
ಇದನ್ನೋ ಓದಿ ಪ್ರೀತಿಸುವಂತೆ ಕಾಟ: ಜೆಡಿಎಸ್ ಸ್ಥಳೀಯ ನಾಯಕಿಯ ಪುತ್ರನ ಕಿರುಕುಳಕ್ಕೆ ಯುವತಿ ಆತ್ಮಹತ್ಯೆ
ಕಳೆದ ಕೆಲ ದಿನಗಳಿಂದ ಕದ್ರಾ ಗ್ರಾಮದ ಕೆಪಿಸಿಎಲ್ ಕಾಲೋನಿಯ ನಿವಾಸಿ ರಿಶೇಲ್ ಡಿಸೋಜಾ (20) ಮನೆ ಬಳಿ ಬಂದು ಹೋಗುತ್ತಿದ್ದ ಚಿರಾಗ್, ತನ್ನ ಪ್ರೀತಿಸುವಂತೆ ರಿಶೇಲ್ಗೆ ಕಿರುಕುಳ ನೀಡುತ್ತಿದ್ದ. ಆದರೆ ರಿಶೇಲ್ ಮಾತ್ರ ಆತನ ಪ್ರೀತಿಯನ್ನು ಖಡಾ ಖಂಡಿತವಾಗಿ ನಿರಾಕರಿಸಿದ್ದಳು. ಆದರೂ ಬೆಂಬಿಡದ ಯುವಕ, ತನ್ನ ಪ್ರೀತಿ ನಿರಾಕರಿಸಿದ ನೀನು ಇದ್ರು ಸತ್ತ ಹಾಗೆ ಬೇಗ ಸತ್ತು ಹೋಗೆಂದು ಪಿಡಿಸುತ್ತಿದ್ದ. ಆತನ ಈ ದುರ್ವರ್ತನೆಯಿಂದ ಬೇಸತ್ತ ಯುವತಿ ತಮ್ಮ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಪ್ರೀತಿ ನಿರಾಕರಿಸಿದ್ದಕ್ಕೆ ಚಿರಾಗ್ ನಿರಂತರ ಕಿರುಕುಳ ನೀಡಿದ್ದೇ ಆತ್ಮಹತ್ಯೆಗೆ ಕಾರಣವೆಂದು ಮೃತಳ ತಂದೆ ಕ್ರಿಸ್ತೋದ್ ಡಿಸೋಜಾ ದೂರು ನೀಡಿದ್ದಾರೆ. ಕದ್ರಾ ಪೊಲೀಸರು ಆರೋಪಿಗಾಗಿ ತಂಡ ರಚಿಸಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
