ನಾಟಿ ಕೋಳಿ ಮೊಟ್ಟೆ ಮಾರಿ ಜೀವನ ಸಾಗಿಸುತ್ತಿರುವ ವೃದ್ಧೆ; ಯುವಕರನ್ನು ನಾಚಿಸುವಂತಿದೆ 90 ವರ್ಷದ ಅಜ್ಜಿಯ ಉತ್ಸಾಹ

ನಾಟಿ ಕೋಳಿ ಮೊಟ್ಟೆಗೆ ಎಲ್ಲಿಲ್ಲದ ಬೇಡಿಕೆಯಿದ್ದು, ಒಂದು ಮೊಟ್ಟೆ 10-15 ರೂಪಾಯಿವರೆಗೂ ಮಾರಾಟವಾಗುತ್ತದೆ. ಇದರಿಂದ ಬರುವ ಹಣದಿಂದ ಜೀವನ ಸಾಗಿಸುತ್ತಿದ್ದೇನೆ. ಇದರ ಜತೆಗೆ ಸ್ವಲ್ಪ ಭೂಮಿ ಇದ್ದು, ಅದರಲ್ಲಿ ಬಂದ ಬೆಳೆಯನ್ನು ಕೂಡ ಮಾರುತ್ತೇನೆ ಎಂದು ವೃದ್ಧೆ ನಿಂಗಮ್ಮ ಹೇಳಿದ್ದಾರೆ.

ನಾಟಿ ಕೋಳಿ ಮೊಟ್ಟೆ ಮಾರಿ ಜೀವನ ಸಾಗಿಸುತ್ತಿರುವ ವೃದ್ಧೆ; ಯುವಕರನ್ನು ನಾಚಿಸುವಂತಿದೆ 90 ವರ್ಷದ ಅಜ್ಜಿಯ ಉತ್ಸಾಹ
ವೃದ್ಧೆ ನಿಂಗಮ್ಮ

ತುಮಕೂರು: ಇಂದಿನ ಆಧುನಿಕ ಜಗತ್ತಿನಲ್ಲಿ 60 ವರ್ಷವಾಗುವ ಕಾಲಕ್ಕೆ ಜೀವನವೇ ಮುಗಿದು ಹೋಯಿತು ಎನ್ನುವಂತೆ ವರ್ತಿಸುತ್ತಾರೆ. ಆದರೆ ಇಲ್ಲೊಬ್ಬರು ವೃದ್ಧೆ 90 ವರ್ಷ ವಯಸ್ಸಾದರೂ, ಯಾರ ಮೇಲೂ ಅವಲಂಬೀತರಾಗದೇ ಸ್ವತಂತ್ರವಾಗಿ ಜೀವನ ನಡೆಸುತ್ತಿದ್ದಾರೆ. ಒಂದಷ್ಟು ಕೋಳಿಗಳನ್ನು ಸಾಕಿಕೊಂಡಿದ್ದು, ಆ ಕೋಳಿ ಇಡುವ ಮೊಟ್ಟೆಗಳನ್ನು ಮಾರಿ ಪ್ರತ್ಯೇಕವಾಗಿ ಜೀವನ ಸಾಗಿಸುತ್ತಿದ್ದಾರೆ.

ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಬಿದರಗುಟ್ಟೆ ಗ್ರಾಮದ ನಿವಾಸಿ ನಿಂಗಮ್ಮನಿಗೆ 90 ವಯಸ್ಸು, ಕಿವಿಗಳು ಕೇಳಿಸಲ್ಲ. ಆದರೆ ಇಷ್ಟು ವಯಸ್ಸಾದರೂ ಯಾರಿಗೂ ಕಮ್ಮಿ ಇಲ್ಲದಂತೆ, ಇರುವ ಸ್ವಲ್ಪ ಜಮೀನಿನಲ್ಲಿ ಶೇಂಗಾ ಬೆಳೆದುಕೊಂಡು ಹತ್ತು ಕೋಳಿಗಳನ್ನು ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ಅದರಲ್ಲೂ ಪ್ರಮುಖವಾಗಿ ನಾಟಿ ಕೋಳಿಗಳು ಇಡುವ ಮೊಟ್ಟೆಯನ್ನು ಪ್ರತಿದಿನ ಮಾರಾಟ ಮಾಡುತ್ತಾರೆ.

ನಾಟಿ ಕೋಳಿ ಮೊಟ್ಟೆಗೆ ಎಲ್ಲಿಲ್ಲದ ಬೇಡಿಕೆಯಿದ್ದು, ಒಂದು ಮೊಟ್ಟೆ 10-15 ರೂಪಾಯಿವರೆಗೂ ಮಾರಾಟವಾಗುತ್ತದೆ. ಇದರಿಂದ ಬರುವ ಹಣದಿಂದ ಜೀವನ ಸಾಗಿಸುತ್ತಿದ್ದೇನೆ. ಇದರ ಜತೆಗೆ ಸ್ವಲ್ಪ ಭೂಮಿ ಇದ್ದು, ಅದರಲ್ಲಿ ಬಂದ ಬೆಳೆಯನ್ನು ಕೂಡ ಮಾರುತ್ತೇನೆ ಎಂದು ವೃದ್ಧೆ ನಿಂಗಮ್ಮ ಹೇಳಿದ್ದಾರೆ.

ನಿಂಗಮ್ಮ ಅವರಿಗೆ ಒಟ್ಟು ನಾಲ್ಕು ಮಕ್ಕಳು ಇಬ್ಬರು ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳು. ಗಂಡು ಮಕ್ಕಳು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದು, ಅವರವರ ಕುಟುಂಬದ ಜತೆ ಇದ್ದಾರೆ. ಆದರೆ ಯಾರು ಕೂಡ ತನ್ನ ತಾಯಿಯನ್ನು ನೋಡಿಕೊಂಡಿಲ್ಲ. ಅಜ್ಜಿ ಒಬ್ಬರೆ ಅಡುಗೆ ಮಾಡಿಕೊಂಡು ಹಳೆ ರೂಮ್​ನಲ್ಲಿ ಇದ್ದಾರೆ. ಅಲ್ಲದೆ ವೃದ್ಧಾಪ್ಯ ವೇತನ ಕೂಡ ಅಜ್ಜಿ ತೆಗೆದುಕೊಳ್ಳುವುದಿಲ್ಲ ಎಂದು ಸ್ಥಳೀಯರಾದ ಲಕ್ಕಣ್ಣ ತಿಳಿಸಿದ್ದಾರೆ.

ಒಟ್ಟಾರೆ ಇಬ್ಬರು ಗಂಡು ಮಕ್ಕಳಿದ್ದರೂ ಕೂಡ ಈ ಅಜ್ಜಿ ಅವರ ಮೇಲೆ ಭಾರವಾಗದೇ ಸ್ವಾವಲಂಬನೆಯಾಗಿ ಜೀವಿಸುತ್ತಿರುವುದು ವಿಶೇಷ. ವಯಸ್ಸಾದರೇ ಹೇಗಪ್ಪಾ ಎನ್ನುವ ಈಗಿನ ಕಾಲದಲ್ಲಿ, ಮೊಟ್ಟೆಗಳನ್ನು ಮಾರಿ ಏಕಾಂಗಿಯಾಗಿ ಜೀವಿಸುತ್ತಿರುವ ಅಜ್ಜಿ ಇತರರಿಗೆ ನಿಜಕ್ಕೂ ಮಾದರಿ.

ವರದಿ: ಮಹೇಶ್

ಇದನ್ನೂ ಓದಿ:
39 ವರ್ಷದ ಪ್ರೇಮಿಯೊಂದಿಗೆ ಬ್ರೇಕಪ್ ಮಾಡಿಕೊಂಡ 85ರ ಅಜ್ಜಿಗೆ ಹೊಸ ಬಾಯ್​ಫ್ರೆಂಡ್ ಬೇಕಂತೆ!

ಕೊವಿಶೀಲ್ಡ್​ ಲಸಿಕೆ ಪಡೆದ ವೃದ್ಧೆಗೆ ಮರಳಿ ಬಂತು ದೃಷ್ಟಿ; 9 ವರ್ಷ ಕಾಡಿದ ದೃಷ್ಟಿದೋಷ ನಿವಾರಣೆ ಆಯ್ತು ಎಂದ ಮಹಿಳೆ!