ಸಾವು ಯಾವಾಗ, ಯಾರಿಗೆ, ಹೇಗೆ ಬರುತ್ತೆ ಅನ್ನೋದು ಗೊತ್ತಾಗುವುದಿಲ್ಲ. ಅನೇಕರಿಗೆ ಸಾವು ಬರಸಿಡಿಲಿನಂತೆ ಬಡಿಯುತ್ತದೆ. ದಿಢೀರ್ ಸಾವು ಅನೇಕ ಕುಟುಂಬಗಳನ್ನು ಹೈರಾಣು ಮಾಡಿಬಿಡುತ್ತದೆ. ಕೆಲವರು ಜೀವಂತ ಇದ್ದಾಗ ಯಾರಿಗೂ ಭಾರವಾಗದಂತೆ ಬದುಕುತ್ತಾರೆ. ಕೆಲವರು ಸತ್ತ ಮೇಲೆ ಕೂಡಾ ತಾವು ಯಾರಿಗೂ ಭಾರವಾಗಬಾರದು ಅನ್ನೋ ಉದ್ದೇಶ ಹೊಂದಿರುತ್ತಾರೆ. ಇದೇ ಉದ್ದೇಶ ಹೊಂದಿದ್ದ ವೃದ್ಧನೋರ್ವ, ಹದಿನೈದು ವರ್ಷದ ಮೊದಲೇ ತನ್ನ ಸಾವು ಯಾವುದೇ ಸಮಯದಲ್ಲಿ, ಹೇಗೆ ಬಂದರೂ, ಯಾರಿಗೂ ತೊಂದರೆಯಾಗಬಾರದು ಅಂತ, ತನ್ನ ಸಮಾಧಿಯನ್ನು ತಾನೇ ಸಿದ್ದಮಾಡಿಟ್ಟುಕೊಂಡಿದ್ದ. ಹಾಗೆ ಸಮಾಧಿ ತೋಡಿದ (cremation) 15 ವರ್ಷದ ನಂತರ ವೃದ್ದ ಮೃತಪಟ್ಟಿದ್ದು, ವೃದ್ದ ತೋಡಿದ್ದ ಸಮಾಧಿಯಲ್ಲಿಯೇ (grave) ಕುಟುಂಬದವರು ಅಂತ್ಯಸಂಸ್ಕಾರ ಮಾಡಿದ್ದಾರೆ. ವೃದ್ದ ಸಿದ್ದಪ್ಪ ತಮಗೊಬ್ಬರಿಗೇ ಅಲ್ಲ; ತಮ್ಮ ಪತ್ನಿಗೂ ಸಮಾಧಿ ತೋಡಿಟ್ಟಿದ್ದರು. ಆರು ವರ್ಷದ ಹಿಂದೆ ಸಿದ್ದಪ್ಪನ ಪತ್ನಿ (wife) ಮೃತಪಟ್ಟಾಗ, ಒಂದು ಸಮಾಧಿಯಲ್ಲಿ ಪತ್ನಿಯ ಅಂತ್ಯಸಂಸ್ಕಾರ ಮಾಡಿದ್ದರು.
ಇಂತಹದ್ದೊಂದು ಅಚ್ಚರಿಯ ಘಟನೆ ನಡೆದಿರುವುದು ಕಲಬುರಗಿ (kalaburagi) ಜಿಲ್ಲೆಯ ಜೇವರ್ಗಿ ತಾಲೂಕಿನ ಹಿಪ್ಪರಗಾ ಎಸ್ ಎನ್ ಗ್ರಾಮದಲ್ಲಿ. ಗ್ರಾಮದ ಸಿದ್ದಪ್ಪ ದೇವರನಾವದಗಿ ಅನ್ನೋ 96 ವರ್ಷದ ವೃದ್ಧ ವಯೋಸಹಜದಿಂದ ನಿನ್ನೆ ಮುಂಜಾನೆ ಮೃತಪಟ್ಟಿದ್ದಾರೆ. ವೃದ್ಧ ಮೃತಪಟ್ಟನಂತರ, ಅವರ ಸ್ವಂತ ಜಮೀನಿನಲ್ಲಿಯೇ ಸಿದ್ದಪ್ಪನ ಅಂತ್ಯಸಂಸ್ಕಾರವನ್ನು ಕುಟುಂಬದವರು, ಗ್ರಾಮದ ಜನರು ಸೇರಿ ಮಾಡಿದ್ದಾರೆ. ವಿಶೇಷವೆಂದರೆ, 15 ವರ್ಷದ ಹಿಂದೆಯೇ ಮೃತ ಸಿದ್ದಪ್ಪ, ತನ್ನ ಮೃತ ದೇಹವನ್ನು ಎಲ್ಲಿ ಹೂಳಬೇಕು ಅನ್ನೋ ಜಾಗವನ್ನು ನಿರ್ಧಾರ ಮಾಡಿದ್ದಲ್ಲದೆ, ಸಮಾಧಿಯನ್ನು ಕೂಡಾ ಸಿದ್ದಮಾಡಿಕೊಂಡಿದ್ದರು.
ಹೌದು ಹದಿನೈದು ವರ್ಷದ ಹಿಂದೆಯೇ ತನ್ನ ಏಳು ಎಕರೆ ಭೂಮಿಯಲ್ಲಿನ ಸ್ವಲ್ಪ ಜಾಗದಲ್ಲಿ ಸಿದ್ದಪ್ಪ, ಎರಡು ಸಮಾಧಿ ಸ್ಥಳಗಳನ್ನು ಗುರುತಿಸಿ, ಗುಣಿ ತೋಡಿ, ಅವುಗಳಿಗೆ ಕಲ್ಲು ಜೋಡಿಸಿ, ಸಿಮೆಂಟ್ ಹೊಡೆಸಿ, ಸುಣ್ಣ ಬಳಿದು ಇಟ್ಟಿದ್ದರು. ಯಾವುದೇ ಆಳುಗಳನ್ನು ಕೂಡಾ ಹಚ್ಚದೆ, ಪ್ರತಿನಿತ್ಯ ಕೃಷಿ ಕೆಲಸಕ್ಕೆ ಜಮೀನಿಗೆ ಹೋದಾಗ, ಸ್ವಲ್ಪ ಸಮಯವನ್ನು ತನ್ನ ಸಮಾಧಿ ಸ್ಥಳದ ಗುಣಿ ತೋಡಲು ಬಳಸಿ, ಎರಡು ಗುಣಿಗಳನ್ನು ತೋಡಿದ್ದ.
ಜೊತೆಗೆ ಹದಿನೈದು ವರ್ಷಗಳಿಂದ ಅದನ್ನು ಕಾಪಾಡಿಕೊಂಡು ಬಂದಿದ್ದ. ಇನ್ನು ಜಮೀನಿಗೆ ಹೋದಾಗ ಸಮಾಧಿ ಸ್ಥಳವನ್ನು ಸ್ವಚ್ಛಗೊಳಿಸಿ ಇಡುತ್ತಿದ್ದನಂತೆ ವೃದ್ದ ಸಿದ್ದಪ್ಪ. ಆರು ವರ್ಷದ ಹಿಂದೆ ಸಿದ್ದಪ್ಪನ ಪತ್ನಿ ಮೃತಪಟ್ಟಾಗ, ಒಂದು ಸಮಾಧಿಯಲ್ಲಿ ಪತ್ನಿಯ ಅಂತ್ಯಸಂಸ್ಕಾರ ಮಾಡಿದ್ದ. ಇನ್ನು ತಾನು ಮೃತಪಟ್ಟಾಗ, ತಾನು ತೋಡಿರುವ ಗುಂಡಿಯಲ್ಲಿಯೇ ತನ್ನ ಅಂತ್ಯಸಂಸ್ಕಾರವನ್ನು ಮಾಡಬೇಕು ಅಂತ ಮಕ್ಕಳಿಗೆ ಹೇಳಿದ್ದನಂತೆ.
ತನ್ನ ಸಮಾಧಿ ಸ್ಥಳವನ್ನು ತಾನೇ ಸಿದ್ದಮಾಡಿಕೊಂಡಿದ್ದು ಯಾಕೆ?
ಇನ್ನು ಹೆತ್ತವರು, ಕುಟುಂಬದಲ್ಲಿ ಯಾರೇ ಮೃತಪಟ್ಟಾಗ, ಇನ್ನುಳಿದ ಕುಟುಂಬದವರು, ಮೃತರ ಅಂತ್ಯಸಂಸ್ಕಾರ ಮಾಡ್ತಾರೆ. ಲಿಂಗಾಯತ ಸಮಾಜದಲ್ಲಿ ಮೃತರನ್ನು ಹೂಳುವ ಸಂಪ್ರದಾಯವಿದೆ. ಹೀಗಾಗಿ ಸಿದ್ದಪ್ಪ, ತಾನು ಮೃತಪಟ್ಟಾಗ, ಕುಟುಂಬದವರಿಗೆ ಯಾವುದೇ ಹೊರೆಯಾಗಬಾರದು ಅನ್ನೋ ಉದ್ದೇಶವನ್ನು ಹೊಂದಿದ್ದನಂತೆ.
ಅದಕ್ಕಾಗಿಯೇ ಹದಿನೈದು ವರ್ಷದ ಹಿಂದೆಯೇ ತನ್ನ ಸಮಾಧಿ ಸ್ಥಳವನ್ನು ಸಿದ್ದಮಾಡಿಟ್ಟುಕೊಂಡಿದ್ದನಂತೆ. ಸತ್ತ ಮೇಲೆ ಕೂಡಾ ಯಾರಿಗೂ ಹೊರೆಯಾಗಬಾರದು ಅನ್ನೋ ಉದ್ದೇಶವನ್ನು ಹೊಂದಿದ್ದ ಸಿದ್ದಪ್ಪ, ಸತ್ತ ಮೇಲೆ ಕೂಡಾ ಎಲ್ಲರಿಗೂ ಮಾದರಿಯಾಗಿದ್ದಾನೆ.
ಇನ್ನು ಸಿದ್ದಪ್ಪ ಬದುಕಿದ್ದಾಗ ಕೂಡಾ ಯಾರಿಗೂ ಭಾರವಾಗಿರಲಿಲ್ಲವಂತೆ. ಸತ್ತ ಮೇಲೆ ಕೂಡಾ ಯಾರಿಗೂ ಭಾರವಾಗಿಲ್ಲಾ. ಆ ಮೂಲಕ ಸಿದ್ದಪ್ಪ ಅನೇಕರಿಗೆ ಆದರ್ಶವಾಗಿದ್ದಾರೆ ಅಂತಿದ್ದಾರೆ ಗ್ರಾಮದ ಜನರು ಮತ್ತು ಕುಟುಂಬದವರು.
ಕಲಬುರಗಿ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ