ಜನಾಕ್ರೋಶ ಬೆನ್ನಲ್ಲೇ ಉಲ್ಟಾ ಹೊಡೆದ ಪರಮೇಶ್ವರ್: ತುಮಕೂರು ಹೆಸರು ಬದಲಾವಣೆ ಬಗ್ಗೆ ಹೇಳಿದ್ದಿಷ್ಟು..!
ತುಮಕೂರಿನ ಹೆಸರನ್ನು ಬೆಂಗಳೂರು ಉತ್ತರ ಎಂದು ಬದಲಾಯಿಸುವ ಚರ್ಚೆ ಇತ್ತೀಚೆಗೆ ತೀವ್ರಗೊಂಡಿತ್ತು. ಜಿಲ್ಲಾ ಉಸ್ತುವಾರಿ ಸಚಿವರ ಹೇಳಿಕೆಯಿಂದ ಈ ಚರ್ಚೆ ಹುಟ್ಟಿಕೊಂಡಿತ್ತು. ಆದರೆ, ಸಚಿವ ಜಿ. ಪರಮೇಶ್ವರ್ ಅವರು ತುಮಕೂರಿನ ಹೆಸರು ಬದಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತುಮಕೂರು ತನ್ನದೇ ಆದ ಇತಿಹಾಸ ಮತ್ತು ಸಂಸ್ಕೃತಿಯನ್ನು ಹೊಂದಿದೆ ಮತ್ತು ಅದನ್ನು ಉಳಿಸಿ ಬೆಳೆಸುವುದು ಅವಶ್ಯಕ ಎಂದು ಅವರು ಹೇಳಿದ್ದಾರೆ.

ತುಮಕೂರು, ಜೂನ್ 22: ರಾಮನಗರ (Ramnagar) ಜಿಲ್ಲೆಗೆ ಬೆಂಗಳೂರು ದಕ್ಷಿಣ (Bengaluru South) ಅಂತ ಮರುನಾಮಕರಣ ಮಾಡುತ್ತಿದ್ದಂತೆ ತುಮಕೂರಿನ (Tumakuru) ಹೆಸರು ಮುನ್ನೆಲೆಗೆ ಬಂದಿತ್ತು. ತಮಕೂರಿಗೆ ಬೆಂಗಳೂರು ಉತ್ತರ (Bengaluru North) ಅಂತ ಮರುನಾಮಕರಣ ಮಾಡಲಾಗುತ್ತದೆ ಎಂಬ ಮಾತು ಕೇಳಿ ಬಂದಿತ್ತು. ಇದಕ್ಕೆ ಪುಷ್ಟಿಕೊಡುವಂತೆ ಜಿಲ್ಲಾ ಉಸ್ತುವಾರಿ ಸಚಿವರ ಹೇಳಿಕೆ ತೀವ್ರ ಆಕ್ರೋಶಕ್ಕೂ ಕಾರಣವಾಗಿತ್ತು. ಆದರೆ, ಅಂತಿಮವಾಗಿ ಈ ಚರ್ಚೆಗೆ ತೆರೆ ಬಿದಿದ್ದು, ಖುದ್ದು ಜಿಲ್ಲಾ ಉಸ್ತುವಾರಿ ಸಚಿವ ಜಿ. ಪರಮೇಶ್ವರ್ (G Parameshwara) ತುಮಕೂರಿನ ಹೆಸರು ಬದಲಾಗುವುದಿಲ್ಲ ಎಂದಿದ್ದಾರೆ.
ಕಲ್ಪತರು ನಾಡು ತುಮಕೂರು, ಶಿಕ್ಷಣ, ಕೃಷಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತನ್ನದೇ ಆದ ಇತಿಹಾಸ ಹೊಂದಿದೆ. ಈ ಜಿಲ್ಲೆಯ ಹೆಸರು ಬದಲಾವಣೆಯ ಚರ್ಚೆ ಇತ್ತೀಚಿನ ದಿನಗಳಲ್ಲಿ ಮುನ್ನೆಲೆಗೆ ಬಂದಿತ್ತು. ಇದಕ್ಕೆ ಕಾರಣ ಕಳೆದ 10 ದಿನಗಳ ಹಿಂದೆ ತುಮಕೂರು ಜಿಲ್ಲ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವ ಜಿ. ಪರಮೇಶ್ವರ್ ಆಡಿದ ಮಾತು. ತುಮಕೂರಿನ ಕಾಲೇಜುವೊಂದಕ್ಕೆ ಭೇಟಿ ನೀಡಿದ್ದ ವೇಳೆ ಮಾಧ್ಯಮ ಪ್ರತಿನಿಧಿಗಳಗೆ ಪ್ರತಿಕ್ರಿಯೆ ನೀಡುವಾಗ, ತುಮಕೂರಿಗೆ ಬೆಂಗಳೂರು ಉತ್ತರ ಅಂತ ಮರುನಾಮಕರಣ ಮಾಡುವ ಬಗ್ಗೆ ಪ್ರಾಸ್ತಪ ಮಾಡಲಾಗಿದೆ ಎಂದಿದ್ದರು. ಆದರೆ, ಗೃಹ ಸಚಿವರ ಹೇಳಿಕೆಗೆ ತುಮಕೂರಿನಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿತ್ತು.
ಈ ಎಲ್ಲ ಬೆಳವಣಿಗೆ ಬಳಿಕ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ. ಪರಮೇಶ್ವರ್ ಯೂ ಟೂರ್ನ್ ತೆಗೆದುಕೊಂಡಿದ್ದಾರೆ. ಶನಿವಾರ (ಜೂ.21) ರಂದು ನಡೆದ ರಾಜ್ಯ ಸಹಕಾರಿ ಸಚಿವ ರಾಜಣ್ಣರ 75ನೇ ಹುಟ್ಟು ಹಬ್ಬದ ಅದ್ದೂರಿ ಕಾರ್ಯಕ್ರಮದ ವೇದಿಕೆ ಭಾಷಣದಲ್ಲಿ ತುಮಕೂರಿಗೆ ಬೆಂಗಳೂರು ಉತ್ತರ ಎಂದು ಮರುನಾಮಕರಣ ಮಾಡಲ್ಲ. ತುಮಕೂರಿಗೆ ತನ್ನದೇ ಆದ ಇತಿಹಾಸವಿದೆ. ಅದನ್ನು ನಾವೆಲ್ಲರೂ ಸೇರಿ ಉಳಿಸಬೇಕು. ಜೊತೆಗೆ ಬೆಳೆಸಬೇಕು. ಬೆಂಗಳೂರಿಗೆ ತುಮಕೂರು ಹತ್ತಿರವಿದೆ. ನಾವು ತುಮಕೂರಿನ ಅಸ್ಮಿಯತೆ ಉಳಿಸಬೇಕು. ತುಮಕೂರು ಹೆಸರು ಬದಲಾಯಿಸುತ್ತೇನೆ ಎಂದು ಹೇಳಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ತುಮಕೂರಿಗೆ ಬೆಂಗಳೂರು ಉತ್ತರ ಅಂತ ಮರುನಾಮಕರಣಕ್ಕೆ ಭಾರಿ ವಿರೋಧ
ಒಟ್ಟಾರೆಯಾಗಿ ಕಲ್ಪತರು ನಾಡು ತುಮಕೂರಿನ ಹೆಸರು ಬದಲಾಗುತ್ತೇ ಎಂಬ ಮಾತು ಕಳೆದ 10 ದಿನಗಳಿಂದ ಭಾರಿ ಚರ್ಚೆ ಸೃಷ್ಟಿಸಿತ್ತು. ತುಮಕೂರಿನ ಹೆಸರು ಬದಲಾಗುವ ವಿಚಾರಕ್ಕೆ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಈ ಹಿಂದೆ ಬದಲಾವಣೆಯ ಮಾತುಗಳನ್ನಾಡಿದ್ದ ಗೃಹ ಸಚಿವರೇ ಈಗ ಯೂಟರ್ನ್ ತೆಗೆದುಕೊಂಡಿದ್ದು, ತುಮಕೂರಿನ ಹೆಸರು ತುಮಕೂರಾಗೆ ಇರತ್ತೆ ಎಂಬ ಸ್ಪಷ್ಟನೆ ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:09 pm, Sun, 22 June 25







