ವಾಲಿಬಾಲ್ ತರಬೇತಿ ವೇಳೆ ಶಾಲೆ ಆವರಣದಲ್ಲಿ ಕುಸಿದು ಬಿದ್ದು ಶಿಕ್ಷಕ ಸಾವು
ವಿದ್ಯಾರ್ಥಿಗಳಿಗೆ ವಾಲಿಬಾಲ್ ತರಬೇತಿ ನೀಡುತ್ತಿದ್ದಾಗ ಶಾಲೆ ಆವರಣದಲ್ಲಿಯೇ ಕುಸಿದು ಬಿದ್ದು ಶಿಕ್ಷಕರೊಬ್ಬರು ಮೃತಪಟ್ಟಿದ್ದಾರೆ. ಮತ್ತೊಂದೆಡೆ ಟ್ಯೂಷನ್‌ಗೆ ಹೋಗುತ್ತಿದ್ದ ವಿದ್ಯಾರ್ಥಿ ಮೇಲೆ ನಾಯಿ ದಾಳಿ ಮಾಡಿವೆ. ಎಲ್ಲೊಂದರಲ್ಲಿ ಬಾಲಕನನ್ನು ಕಚ್ಚಿಗಾಯಗೊಳಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಮೃತಪಟ್ಟಿದ್ದಾನೆ. ಈ ಎರಡೂ ಪ್ರತ್ಯೇಕ ಘಟನೆ ಬಗ್ಗೆ ಇನ್ನಷ್ಟು ವಿವರ ಇಲ್ಲಿದೆ.
ಬೆಂಗಳೂರು, (ಅಕ್ಟೋಬರ್. 16): ವಿದ್ಯಾರ್ಥಿಗಳಿಗೆ ವಾಲಿಬಾಲ್ ತರಬೇತಿ ನೀಡುತ್ತಿದ್ದಾಗ ಶಾಲೆ ಆವರಣದಲ್ಲಿಯೇ ಕುಸಿದು ಬಿದ್ದು ಶಿಕ್ಷಕರೊಬ್ಬರು ಮೃತಪಟ್ಟಿರುವ ಘಟನೆ ಶಿವಮೊಗ್ಗ (Shivamogga) ಜಿಲ್ಲೆಯ ಸಾಗರದಲ್ಲಿ ನಡೆದಿದೆ. ಗಜಾನನ ಹಿರೇಮಠ್ (46)ಮೃತ ಶಿಕ್ಷಕ. ಇವರು ಸಾಗರ ಪಟ್ಟಣದ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಇಂದು (ಬುಧವಾರ) ಮಧ್ಯಾಹ್ನ ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳಿಗೆ ವಾಲಿಬಾಲ್ ತರಬೇತಿ ನೀಡುತ್ತಿದ್ದರು. ಈ ವೇಳೆ ಶಿಕ್ಷಕ ಕುಸಿದು ಬಿದ್ದಿದ್ದಾರೆ. ತಕ್ಷಣ ಸ್ಥಳದಲ್ಲಿದ್ದವರು ಸಾಗರ (Sagara) ಉಪ ವಿಭಾಗೀಯ ಆಸ್ಪತ್ರೆಗೆ ಅವರನ್ನು ಕರೆದೊಯ್ಯುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಬೀದಿ ನಾಯಿಗಳ ದಾಳಿಗೆ ಬಾಲಕ ಬಲಿ
ಚಿತ್ರದುರ್ಗ: ನಾಯಿಗಳ ಗುಂಪೊಂದು ಭೀಕರ ದಾಳಿ ನಡೆಸಿದ ಪರಿಣಾಮ ಚಿತ್ರದುರ್ಗದ ಮೊಳಕಾಲ್ಮುರು ತಾಲೂಕಿನ ರಾಂಪುರದಲ್ಲಿ ಟ್ಯೂಷನ್‌ಗೆ ತೆರಳುತ್ತಿದ್ದ ಬಾಲಕನೊಬ್ಬ ಮೃತಪಟ್ಟಿದ್ದಾನೆ. ರಾಂಪುರ ಗ್ರಾಮದ ಚನ್ನಮಲ್ಲಿಕಾರ್ಜುನಯ್ಯರ ಮಗ ಸಿ.ಮಿಥುನ್(11)ಮೃತ ಬಾಲಕ. ಈತ ಅರುಣೋದಯ ಶಾಲಾ ಕೊಠಡಿಯಲ್ಲಿ ನಡೆಯುತ್ತಿದ್ದ ಟ್ಯೂಷನ್‌ಗೆ ಎಂದಿನಂತೆ ಹೋಗುತ್ತಿದ್ದಾಗ ಶಾಲಾ ಆವರಣ ಸಮೀಪದಲ್ಲಿಯೇ ಬೀದಿ ನಾಯಿಗಳ ಗುಂಪು ಬಾಲಕನ ಮೇಲೆರಗಿವೆ.
ಬಾಲಕನ ತಲೆ, ಕೆನ್ನೆ, ಮೈಯೆಲ್ಲಾ ಕಚ್ಚಿ ಗಾಯಗೊಳಿಸಿದ್ದು, ಕೂಡಲೇ ಆಟೋ ಚಾಲಕ ರಾಜಪ್ಪ ಬಂದು ನಾಯಿಗಳನ್ನು ಓಡಿಸಿ ಬಾಲಕ ಮಿಥುನ್ಗೆ ರಾಂಪುರ ಆಸ್ಪತ್ರೆಗೆ ದಾಖಲಿಸಿದ್ದಾನೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಬಾಲಕ ಸಾವನ್ನಪ್ಪಿದ್ದಾನೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ